ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: ಯುದ್ಧವಿಮಾನ ದುರಸ್ತಿ ಘಟಕದ ಮೇಲೆ ಸರಣಿ ದಾಳಿ

ಲುವಿವ್‌: ಉಕ್ರೇನ್ ಜನಪ್ರಿಯ ನಟಿ ಒಕ್ಸಾನಾ ಶ್ವೆಟ್ಸ್ ಕ್ಷಿಪಣಿಗೆ ಬಲಿ
Last Updated 18 ಮಾರ್ಚ್ 2022, 21:21 IST
ಅಕ್ಷರ ಗಾತ್ರ

ಕೀವ್‌: ಶಾಂತಿ ಮಾತುಕತೆಗಳ ಪ್ರಕ್ರಿಯೆ ಚಾಲ್ತಿಯಲ್ಲಿರುವ ನಡುವೆಯೇ ರಷ್ಯಾ ಮತ್ತು ಉಕ್ರೇನ್‌ ಸಂಘರ್ಷ ದಿನೇದಿನೇ ತಾರಕ್ಕೇರುತ್ತಿದೆ. ರಷ್ಯಾ ಶುಕ್ರವಾರ ಮುಂಜಾನೆ ನ್ಯಾಟೊ ರಾಷ್ಟ್ರ ಪೋಲೆಂಡ್‌ ಗಡಿಯ ಉಕ್ರೇನ್‌ನ ಲುವಿವ್‌ ನಗರದಲ್ಲಿನ ಯುದ್ಧ ವಿಮಾನಗಳ ದುರಸ್ತಿ ಘಟಕದ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದೆ. ಘಟನೆಯಲ್ಲಿ ಸಂಭವಿಸಿರುವ ಸಾವು–ನೋವಿನ ಅಂದಾಜು ಇನ್ನೂ ಸಿಕ್ಕಿಲ್ಲ.

ಇದೇ ವೇಳೆ ಕೀವ್ ನಗರದ ವಸತಿ ಕಟ್ಟಡದ ಮೇಲೆ ರಷ್ಯಾದ ರಾಕೆಟ್ ಅಪ್ಪಳಿಸಿ, ಉಕ್ರೇನ್‌ನ ಜನಪ್ರಿಯ ನಟಿ ಒಕ್ಸಾನಾ ಶ್ವೆಟ್ಸ್ (67) ಮೃತಪಟ್ಟಿದ್ದಾರೆ. ಇವರು ದೇಶದ ‘ಅತ್ಯುನ್ನತ ಕಲಾವಿದೆ’ ಗೌರವಕ್ಕೆ ಪಾತ್ರರಾಗಿದ್ದರು.

ಲುವಿವ್‌ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರು ಕಿ.ಮೀ. ದೂರದಲ್ಲಿರುವ ಯುದ್ಧ ವಿಮಾನಗಳ ದುರಸ್ತಿ ಘಟಕದ ಮೇಲೆ ಕನಿಷ್ಠ 7 ಕ್ಷಿಪಣಿಗಳು ಅಪ್ಪಳಿಸಿವೆ. ಇದರಲ್ಲಿ ಎರಡು ಕ್ಷಿಪಣಿಗಳನ್ನು ಉಕ್ರೇನ್‌ ಹೊಡೆದುರುಳಿಸಿದೆ. ಘಟಕದ ಸುತ್ತಲಿನ ವಸತಿ ಕಟ್ಟಡಗಳಿಗೂ ಕ್ಷಿಪಣಿ ದಾಳಿಯಿಂದ ಬೆಂಕಿ ಹೊತ್ತಿದ್ದು, ದಟ್ಟ ಹೊಗೆ ಆವರಿಸಿದೆ. ಕಪ್ಪು ಸಮುದ್ರದ ಕಡೆಯಿಂದ ಕ್ಷಿಪಣಿಗಳ ದಾಳಿ ನಡೆದಿದೆ ಎಂದು ಲುವಿವ್‌ ನಗರದ ಮೇಯರ್‌ ಆಂಡ್ರಿ ಸಡೋವಿ ತಿಳಿಸಿದ್ದಾರೆ.

ಕ್ಷಿಪಣಿ ದಾಳಿಗೆ ಧ್ವಂಸವಾದ ಮರಿಯುಪೋಲ್‌ನ ರಂಗಮಂದಿರದಿಂದ ಈವರೆಗೆ 130 ಮಂದಿ ರಕ್ಷಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿ ಸಾವಿರಕ್ಕೂ ಹೆಚ್ಚು ಮಂದಿ ಇದರಲ್ಲಿ ಆಶ್ರಯ ಪಡೆದಿದ್ದರು. ಈ ರಂಗಮಂದಿರವನ್ನು ಪುನರ್‌ ನಿರ್ಮಿಸಿಕೊಡುವುದಾಗಿ ಇಟಲಿ ಸರ್ಕಾರ ಘೋಷಿಸಿದೆ.

‌ಭಾರತ ಕಳವಳ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿ, ‘ಯುದ್ಧದಿಂದಾಗಿ ತೊಂದರೆಯಲ್ಲಿರುವ ಜನರ ಅಗತ್ಯ ಪೂರೈಸಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಉಕ್ರೇನ್‌ನಲ್ಲಿ ಇನ್ನೂ 50 ಭಾರತೀಯರು ಇದ್ದಾರೆ. ಈ ಪೈಕಿ 15ರಿಂದ 20 ಮಂದಿ ತವರಿಗೆ ಮರಳಲು ಬಯಸಿದ್ದಾರೆ. ಅವರನ್ನು ಶೀಘ್ರವೇ ಕರೆತರಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಜನಾಂಗೀಯ ದ್ವೇಷ ಸಹಿಸಲ್ಲ: ಉಕ್ರೇನ್ ರಾಜಕಾರಣಿಗಳು ಜನಾಂಗೀಯ ದ್ವೇಷ ಸಾಧಿಸುತ್ತಿದ್ದು, ರಷ್ಯನ್ನರನ್ನು ದೇಶದಿಂದ ಹೊರಹಾಕಲು ಪ್ರಚೋದಿಸುತ್ತಿದ್ದಾರೆ. ಉಕ್ರೇನ್‌ನನ್ನು ನಾಜಿಮುಕ್ತಗೊಳಿಸುವುದು ಮತ್ತು ರಷ್ಯಾ ಭಾಷಿಗರ ವಿರುದ್ಧ ತಾರತಮ್ಯದ ಕಾನೂನುಗಳನ್ನು ರದ್ದುಗೊಳಿಸಲು ರಷ್ಯಾ ಆಗ್ರಹಿಸುತ್ತದೆ ಎಂದು ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್‌ ಹೇಳಿದ್ದಾರೆ.

‘ಪರಿಹಾರ ಹುಡುಕಲು ರಷ್ಯಾ ಸಿದ್ಧ’
ಮಾಸ್ಕೊ
: ‘ಉಕ್ರೇನ್‌ ಮಾತುಕತೆಯನ್ನು ಅನಗತ್ಯವಾಗಿ ಲಂಬಿಸಲು ಪ್ರಯತ್ನಿಸುತ್ತಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆರೋಪಿಸಿದ್ದಾರೆ.

ಜರ್ಮನಿಯ ಛಾನ್ಸಲರ್‌ ಒಲಾಫ್‌ ಸ್ಕೋಲ್ಜ್ ಅವರೊಂದಿಗೆ ಶುಕ್ರವಾರ ದೂರವಾಣಿಯಲ್ಲಿ ಮಾತನಾಡಿದ ಪುಟಿನ್‌, ಉಕ್ರೇನ್‌ ಅವಾಸ್ತವಿಕ ಪ್ರಸ್ತಾವಗಳನ್ನುಹೆಚ್ಚೆಚ್ಚು ಮುಂದಿಡುತ್ತಿದೆ. ಆದರೆ ರಷ್ಯಾ, ಪರಿಹಾರ ಹುಡುಕಲು ಸಿದ್ಧವಿದೆ ಎಂದು ತಿಳಿಸಿರುವುದಾಗಿ ರಷ್ಯಾದ ‘ಟಾಸ್‌’ಸುದ್ದಿ ಸಂಸ್ಥೆ ತಿಳಿಸಿದೆ.

ಪುಟಿನ್‌ ಬೇಸರ: ‘ಅವರು ಹೆಗಲಿಗೆ ಹೆಗಲು ಕೊಟ್ಟು, ಪರಸ್ಪರನ್ನು ಬೆಂಬಲಿಸುತ್ತಿದ್ದಾರೆ. ಅವಶ್ಯಕತೆ ಬಿದ್ದಾಗ ಒಬ್ಬರನ್ನು ರಕ್ಷಿಸಲು ಇನ್ನೊಬ್ಬರು ಯುದ್ಧಭೂಮಿಯಲ್ಲಿ ಗುಂಡಿಗೆ ಎದೆಕೊಡುತ್ತಿದ್ದಾರೆ. ಆದರೆ, ಬಹುಕಾಲದಿಂದನಮ್ಮಲ್ಲಿ ಇಂತಹ ಒಗ್ಗಟ್ಟು ಕಾಣಿಸುತ್ತಿಲ್ಲ’ ಎಂದು ಪುಟಿನ್‌ ಉಕ್ರೇನಿಗರ ಹೆಸರನ್ನು ಉಲ್ಲೇಖಿಸದೆ, ತಮ್ಮ ಟೀಕಾಕಾರರ ವಿರುದ್ಧ ಹರಿಹಾಯ್ದರು.

ಕ್ರಿಮಿಯಾ ಮತ್ತು ಸೆವೆಸ್ಟೊಪೋಲ್‌ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡ 8ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ‘ಯಾರೇ ಆಗಲಿ ತಮ್ಮ ಮಿತ್ರನೊಬ್ಬನಿಗೆ ಆತ್ಮಾರ್ಪಣೆ ಮಾಡುವುದಕ್ಕಿಂತಲೂದೊಡ್ಡ ಪ್ರೀತಿ ಮತ್ತೊಂದಿಲ್ಲ’ ಎಂದು ಧರ್ಮಗ್ರಂಥದ ಸಾಲನ್ನು ಉಲ್ಲೇಖಿಸಿದರು.

‘ರಷ್ಯಾ ವಿರುದ್ಧ ಧ್ವನಿ ಎತ್ತಿ’
ವಾಷಿಂಗ್ಟನ್‌: ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿರುವರಷ್ಯಾ ವಿರುದ್ಧ ಭಾರತ ಧ್ವನಿ ಎತ್ತಬೇಕು ಎಂದು ಅಮೆರಿಕದ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.

ಸಂಸದ ಜೋ ವಿಲ್ಸನ್‌ ಮತ್ತು ಇಂಡೋ–ಅಮೆರಿಕನ್‌ ಸಂಸದ ರೋ ಖನ್ನಾ ಅಮೆರಿಕದಲ್ಲಿನ ಭಾರತರಾಯಭಾರಿ ತರಣ್‌ಜಿತ್‌ ಸಿಂಗ್‌ ಸಂಧು ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದರು.

‘ಪುಟಿನ್‌ ಉಕ್ರೇನ್‌ ನಾಗರಿಕರನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿರುವುದರ ವಿರುದ್ಧ ಭಾರತ ಧ್ವನಿ ಎತ್ತಬೇಕು. ಉಭಯ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧ ಹೊಂದಿರುವ ಭಾರತ ಶಾಂತಿ ಸ್ಥಾಪನೆಗೆ ತನ್ನ ಪ್ರಭಾವ ಬಳಸಬೇಕು’ ಎಂದು ಖನ್ನಾ ಆಗ್ರಹಿಸಿದರು.

23ನೇ ದಿನದ ಬೆಳವಣಿಗೆಗಳು
* ಯುದ್ಧಪೀಡಿತ ನಗರಗಳಿಂದ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಶುಕ್ರವಾರದಿಂದಲೇ ಮರಿಯುಪೋಲ್‌, ಸುಮಿ, ಹಾರ್ಕಿವ್‌,ಕೊನೊಟೊಪ್ ಸೇರಿದಂತೆ 9 ಕಡೆ ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ರಷ್ಯಾ ಮತ್ತು ಉಕ್ರೇನ್‌ ಸಮ್ಮತಿಸಿದವು

* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ನಿರ್ಣಯದ ಮತದಾನವನ್ನು ರಷ್ಯಾ ಮಿತ್ರರಾಷ್ಟ್ರಗಳಾದ ಭಾರತ ಮತ್ತು ಚೀನಾದ ಬೆಂಬಲ ಸಿಗದೇ ಕೈಬಿಟ್ಟಿತು

* ರಷ್ಯಾವು ಯುರೋಪಿನಾದ್ಯಂತ ‘ಶೀತಲ ಸಮರದ ಹೊಸ ಗೋಡೆ’ ನಿರ್ಮಿಸುತ್ತಿದೆ–ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆಕ್ರೋಶ

* ಪಕ್ಷಪಾತದ ಸುದ್ದಿ ಪ್ರಸಾರಕ್ಕಾಗಿ ರಷ್ಯಾದ ಸರ್ಕಾರಿ ಸ್ವಾಮ್ಯದ ‘ಆರ್‌ಟಿ’ ವಾಹಿನಿಯ ಪರವಾನಗಿಯನ್ನು ಬ್ರಿಟನ್‌ ಸಂವಹನಗಳ ನಿಯಂತ್ರಕ ರದ್ದುಪಡಿಸಿದೆ.ಈ ಹಿಂದೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ‘ಆರ್‌ಟಿ’ಗೆ 2 ಲಕ್ಷ ಪೌಂಡ್‌ ದಂಡ ಕೂಡ ವಿಧಿಸಿದೆ

* ರಷ್ಯಾದ ಮೇಲೆ ಯುರೋಪ್‌ ಒಕ್ಕೂಟದ ನಿರ್ಬಂಧಗಳ 5ನೇ ಪ್ಯಾಕೇಜ್ ಹೇರುವ ಬಗ್ಗೆ ಯುರೋಪ್‌ ವಿದೇಶಾಂಗ ವ್ಯವಹಾರಗಳು ಮತ್ತು ಭದ್ರತಾ ನೀತಿಯ ಉನ್ನತ ಪ್ರತಿನಿಧಿ ಜೋಸೆಫ್‌ ಬೊರೆಲ್ ಫಾಂಟೆಲ್ಸ್‌ ಜತೆಗೆ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಚರ್ಚೆ ನಡೆಸಿದರು

* ರಷ್ಯಾ ಎಸಗುತ್ತಿರುವ ಯುದ್ಧಾಪರಾಧಗಳ ಮೌಲ್ಯಮಾಪನ ಮತ್ತು ಸೂಕ್ತ ದಾಖಲೆಗಳ ಕಲೆಹಾಕುವುದರಲ್ಲಿ ಅಮೆರಿಕದ ಅಧಿಕಾರಿಗಳು ನಿರತರಾಗಿದ್ದಾರೆ –ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್

* ‘ದುಷ್ಟ ಮತ್ತು ದೇಶದ್ರೋಹಿ’ಗಳ ನಿರ್ಮೂಲನೆಯೊಂದಿಗೆ ರಷ್ಯಾ ಶುದ್ಧೀಕರಣ ಮಾಡುವುದಾಗಿ ಪುಟಿನ್‌ ಹೇಳಿದ ಬೆನ್ನಲ್ಲೇ ರಷ್ಯಾ ಸೇನೆಯ ಅತ್ಯುನ್ನತ ಕಮಾಂಡರ್‌ ಒಬ್ಬರನ್ನು ದೇಶದ್ರೋಹಕ್ಕಾಗಿ ಬಂಧಿಸಲಾಗಿದೆ

* ರಷ್ಯಾವು ಉಕ್ರೇನ್‌ನ 43 ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ 12 ಜನ ಮೃತಪಟ್ಟಿದ್ದು, 34 ಮಂದಿಗೆ ಗಾಯಗಳಾಗಿವೆ– ವಿಶ್ವ ಆರೋಗ್ಯ ಸಂಸ್ಥೆ

* ನಾಗರಿಕರನ್ನೇ ಗುರಿಯಾಗಿಸಿಕೊಂಡು ಆಸ್ಪತ್ರೆಗಳು, ಶಾಲೆಗಳು ಮತ್ತು ಜನವಸತಿಗಳ ಮೇಲೆ ನಿರಂತರ ವಾಯು ದಾಳಿ ನಡೆಸುತ್ತಿರುವ ರಷ್ಯಾದ ವಿರುದ್ಧ ತನಿಖೆಗೆ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರ ಒತ್ತಾಯ

* ಅತ್ಯಾಧುನಿಕ ಕೆಎ–52 ಹೆಲಿಕಾಪ್ಟರ್‌ ನಿಖರ ದಾಳಿ ನಡೆಸುತ್ತಿರುವ ಮತ್ತು ಉಕ್ರೇನ್‌ನ ಸೇನಾ ವಾಯು ನೆಲೆಯ ಮೇಲೆ ಇಳಿಯುತ್ತಿರುವ ವಿಡಿಯೊ ತುಣುಕನ್ನು ರಷ್ಯಾ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದೆ

* ಚೆರ್ನಿವ್‌ ನಗರದಲ್ಲಿ ಆಹಾರ ಪಡೆಯಲು ಸರದಿಯಲ್ಲಿ ನಿಂತಿದ್ದ ನಾಗರಿಕರ ಮೇಲೆ ನಡೆದ ಶೆಲ್‌ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಅಮೆರಿಕದ ಪ್ರಜೆಯೊಬ್ಬರು ಸೇರಿದ್ದಾರೆ

* ಟರ್ಕಿಯ ಡ್ರೋನ್‌ಗಳು ಉಕ್ರೇನ್‌ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿವೆ

* ಮರಿಯುಪೋಲ್‌ ನಗರ ರಷ್ಯಾ ಸೇನೆಯ ದಾಳಿಯಿಂದ ಶೇ 90ರಷ್ಟು ಸರ್ವನಾಶವಾಗಿದೆ- ನಗರದ ಮೇಯರ್‌

* ಉಕ್ರೇನ್‌ನಲ್ಲಿ ರಷ್ಯಾದ ‘ಅಧಿಕಾರದ ವಿಕೃತ ದುರುಪಯೋಗ’ ನಡೆಯುತ್ತಿದೆ. ದಾಳಿಗೀಡಾಗಿರುವ ಉಕ್ರೇನಿಗರಿಗೆ ತಮ್ಮ ಅಸ್ತಿತ್ವ, ಇತಿಹಾಸ ಹಾಗೂ ಸಂಪ್ರದಾಯ ಹಾಗೂ ನೆಲ ರಕ್ಷಿಸಿಕೊಳ್ಳಲು ನೆರವಾಗುವಂತೆ ಪೋಪ್‌ ಫ್ರಾನ್ಸಿಸ್‌ ಕರೆ ನೀಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT