ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ಮೇಲೆ ಹೆಚ್ಚಿದ ನಿರ್ಬಂಧ; ಉಕ್ರೇನ್ ನೆರವಿಗೆ ಇಯು ರಾಷ್ಟ್ರಗಳ ಒಲವು

ಮೂರು ರಾಷ್ಟ್ರಗಳ ಪ್ರಮುಖರು ಕೀವ್‌ಗೆ ಪ್ರಯಾಣ
Last Updated 15 ಮಾರ್ಚ್ 2022, 21:47 IST
ಅಕ್ಷರ ಗಾತ್ರ

ವಾರ್ಸಾ: ರಷ್ಯಾದ ಸೇನೆ ಉಕ್ರೇನ್‌ನಲ್ಲಿ ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ, ಯುರೋಪ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಪೋಲೆಂಡ್‌, ಜೆಕ್‌ ರಿಪಬ್ಲಿಕ್‌, ಸ್ಲೋವೆನಿಯಾ ಮುಖಂಡರು ಉಕ್ರೇನ್‌ನ ಉನ್ನತ ಮುಖಂಡರ ಭೇಟಿಗೆ ಕೀವ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

ರಷ್ಯಾ ಸೇನೆಯು ಕೀವ್‌ನ ವಸತಿ ಪ್ರದೇಶಗಳನ್ನು ದಾಳಿಗೆ ಗುರಿಯಾಗಿಸಿರುವ ಹಿನ್ನೆಲೆಯಲ್ಲಿ ನ್ಯಾಟೊದ ಸದಸ್ಯ ರಾಷ್ಟ್ರಗಳು ಆಗಿರುವ ಈ ಮೂರು ದೇಶಗಳ ಮುಖಂಡರ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.

ಪೋಲೆಂಡ್‌ ಪ್ರಧಾನಿ ಮೇಟಸ್ಟ್‌ ಮೊರಾವಿಕಿ, ಜೆಕ್ ರಿಪ್ಲಬಿಕ್‌ ಪ್ರಧಾನಿ ಪೀಟ್‌ ಫಿಯಾಲಾ ಮತ್ತು ಸ್ಲೊವೆನಿಯಾದ ಜಾನೇಜ್ ಜನಸಾ ಭೇಟಿ ನೀಡುತ್ತಿದ್ದಾರೆ. ಈ ಮುಖಂಡರು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮತ್ತು ಪ್ರಧಾನಿ ಡೆನಿಸ್‌ ಶ್ಮಿಹಾಲ್‌ ಅವರನ್ನು ಭೇಟಿಯಾಗಿ ಪ್ರಸಕ್ತ ಬೆಳವಣಿಗೆ ಕುರಿತು ಚರ್ಚಿಸಲಿದ್ದಾರೆ.

ಭೇಟಿ ಕುರಿತು ವಿಶ್ವಸಂಸ್ಥೆಗೂ ಮಾಹಿತಿ ನೀಡಲಾಗಿದೆ. ಈಗಿನ ಸಂಕಷ್ಟ ಕಾಲದಲ್ಲಿ ಭೇಟಿ ಅಗತ್ಯವಾಗಿದೆ. ಇದು, ನಮಗಾಗಿ ಅಲ್ಲ. ಭವಿಷ್ಯದಲ್ಲಿ ದೌರ್ಜನ್ಯ ಮುಕ್ತವಾದ ವಾತಾವರಣದಲ್ಲಿ ಬದುಕಬೇಕಾದ ನಮ್ಮ ಮಕ್ಕಳ ಭವಿಷ್ಯಕ್ಕಾಗಿ’ ಎಂದು ಮೇಟಸ್ಟ್‌ ಮೊರಾವಿಕಿ ಅವರು ಹೇಳಿದರು.

ಉಕ್ರೇನ್‌ಗೆ ನೀಡಬಹುದಾದ ಸಮಗ್ರ, ದೃಢ ನೆರವು ಕುರಿತ ಪ್ರಸ್ತಾಪವನ್ನು ಉಕ್ರೇನ್‌ ಮುಖಂಡರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರಷ್ಯಾ ಮೇಲೆ ಇನ್ನಷ್ಟು ನಿರ್ಬಂಧ
ಈ ಮಧ್ಯೆ, ರಷ್ಯಾದ ಮೇಲೆ ಯುರೋಪ್‌ ಒಕ್ಕೂಟದ 27 ಸದಸ್ಯ ರಾಷ್ಟ್ರಗಳು ಇನ್ನಷ್ಟು ನಿರ್ಬಂಧವನ್ನು ಹೇರಿವೆ. ಇದು, ಯುರೋಪ್‌ ಒಕ್ಕೂಟ ಹೇರುತ್ತಿರುವ ನಾಲ್ಕನೇ ಹಂತದ ನಿರ್ಬಂಧವಾಗಿದೆ. ಯುರೋಪ್‌ ಒಕ್ಕೂಟದ ಅಧ್ಯಕ್ಷ ಸ್ಥಾನದಲ್ಲಿರುವ ಫ್ರಾನ್ಸ್‌ ಈ ಕುರಿತು ಹೇಳಿಕೆ ನೀಡಿದೆ.

ಸದಸ್ಯ ರಾಷ್ಟ್ರಗಳು ನಿರ್ಬಂಧಕ್ಕೆ ಸಮ್ಮತಿಸಿವೆ. ವಿಶ್ವ ವಾಣಿಜ್ಯ ಸಂಘಟನೆಯಿಂದ (ಡಬ್ಲ್ಯೂಟಿಒ) ರಷ್ಯಾ ಅಮಾನತುಪಡಿಸುವ ಘೋಷಣೆಗೂ ಯುರೋಪ್‌ ಒಕ್ಕೂಟದ 27 ಸದಸ್ಯ ರಾಷ್ಟ್ರಗಳು ಸಮ್ಮತಿಸಿವೆ. ಒಂದು ವೇಳೆ ಈ ಅಮಾನತು ಜಾರಿಗೊಂಡರೆ ರಷ್ಯಾದ ಎಲ್ಲ ಕಂಪನಿಗಳು, ಈ ಸದಸ್ಯ ರಾಷ್ಟ್ರಗಳಿಗೆ ವಿಶೇಷ ಮಾನ್ಯತೆ ಪಡೆಯುವ ಅವಕಾಶ ಕಳೆದುಕೊಳ್ಳಲಿವೆ ಎಂದು ತಿಳಿಸಿದೆ.

ಯುರೋಪ್‌ ಒಕ್ಕೂಟ ಸಮಿತಿ ಅಧ್ಯಕ್ಷ ಉರ್ಸುಲಾ ವೊನ್ ಡೆರ್‌ ಲೆಯೆನ್ ಅವರು, ‘ಅಲ್ಲದೆ, ಯುದ್ಧದ ವಿರುದ್ಧವಾಗಿ ರಷ್ಯಾದ ಮೇಲೆ ಒತ್ತಡ ಹೇರಲು ಯುರೋಪ್‌ ಒಕ್ಕೂಟವು ಜಿ7 ಸದಸ್ಯ ರಾಷ್ಟ್ರಗಳ ಜೊತೆಗೆ ಚರ್ಚೆ ನಡೆಸಲಿದೆ’ ಎಂದು ತಿಳಿಸಿದರು.

ನ್ಯಾಟೊ, ಜಿ7 ಹೊರತಾದ ಒಕ್ಕೂಟ ರಚನೆ? (ವಾಷಿಂಗ್ಟನ್‌ ವರದಿ): ಜಿ–7 ಶೃಂಗ ರಾಷ್ಟ್ರಗಳು, ನ್ಯಾಟೊಗೆ ಹೊರತಾದ ಜಾಗತಿಕ ಒಕ್ಕೂಟ ರಚನೆಗೆ ಅಮೆರಿಕ ಕಾರ್ಯತತ್ಪರವಾಗಿದೆ.

ರಷ್ಯಾ ವಿರುದ್ಧ ಅಮೆರಿಕ ಸಾರಿರುವ ಆರ್ಥಿಕ ಯುದ್ಧದಲ್ಲಿ ಚೀನಾ, ಭಾರತ,ಮೆಕ್ಸಿಕೊ, ಬ್ರೆಜಿಲ್‌ ಸೇರಿ ಹಲವು ದೊಡ್ಡ ರಾಷ್ಟ್ರಗಳು ಭಾಗಿಯಾಗಿಲ್ಲ. ಆದರೆ, ಇದರಿಂದ ಅಮೆರಿಕ ಯತ್ನಕ್ಕೆ ಹಿನ್ನಡೆಯಾಗಿಲ್ಲ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಪ್ಸಾಕಿ ಪ್ರತಿಕ್ರಿಯಿಸಿದರು.

‘ಈಗಿನ ಸನ್ನಿವೇಶದಲ್ಲಿ ಎಲ್ಲ ದೇಶಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು, ಇತಿಹಾಸ ನಮ್ಮನ್ನು ಹೇಗೆ ಗುರುತಿಸಬೇಕು ಎಂದು ಸ್ಪಷ್ಟತೆ ಇರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಮೇ ತಿಂಗಳಿಗೆ ಯುದ್ಧ ಅಂತ್ಯ?
ಕೀವ್ (ರಾಯಿಟರ್ಸ್‌): ಉಕ್ರೇನ್‌ ಮೇಲಿನ ರಷ್ಯಾ ಯುದ್ಧವು ಮೇ ವೇಳೆಗೆ ಅಂತ್ಯವಾಗುವ ಸಂಭವವಿದೆ. ಮೇ ವೇಳೆಗೆ ರಷ್ಯಾಗೆ ಸಂಪನ್ಮೂಲದ ಕೊರತೆ ಬಾಧಿಸಲಿದೆ ಎಂಬುದು ಈ ಲೆಕ್ಕಾಚಾರಕ್ಕೆ ಆಧಾರ.

ಉಕ್ರೇನ್‌ನ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೊ ಸಂದೇಶದಲ್ಲಿ, ಅಧ್ಯಕ್ಷರ ಸಲಹೆಗಾರ ಒಕೆಕ್ಸಿ ಅರೆಸ್ಟೋವಿಚ್‌ ಈ ಮಾತು ಹೇಳಿದ್ದಾರೆ.ರಷ್ಯಾದ ಸೇನಾ ಕಾರ್ಯಾಚರಣೆಯೊಂದಿಗೆ ಫೆಬ್ರುವರಿ 24ರಂದು ಯುದ್ಧ ಆರಂಭವಾಗಿತ್ತು.

‘ಯುದ್ಧ ಬಾಧಿತ ನಗರಗಳಲ್ಲಿ ಮಾನವೀಯ ಕಾರಿಡಾರ್‌ಗೆ ಅವಕಾಶ ಕಲ್ಪಿಸುವುದನ್ನು ಹೊರತುಪಡಿಸಿ, ಯುದ್ಧ ಅಂತ್ಯಗೊಳಿಸಲು ರಷ್ಯಾ– ಉಕ್ರೇನ್‌ ನಡುವೆ ಇದುವರೆಗಿನ ಚರ್ಚೆ ಆಶಾದಾಯಕ ಫಲ ನೀಡಿಲ್ಲ‘ ಎಂದು ಹೇಳಿದ್ದಾರೆ.

‘ಯುದ್ಧ ಮುಂದುವರಿಸಲು ರಷ್ಯಾ ಎಷ್ಟರವರೆಗೆ ಸಂಪನ್ಮೂಲ ಭರಿಸಲಿದೆ ಎಂಬುದನ್ನು ಯುದ್ಧದ ಅವಧಿ ಅವಲಂಬಿಸಿದೆ. ಬಹುಶಃ ಮೇ ವೇಳೆಗೆ ಶಾಂತಿ ಒಪ್ಪಂದ ಏರ್ಪಡಬಹುದು. ಅದಕ್ಕೂ ಮೊದಲೂ ಆಗಬಹುದು. ಕಾದು ನೋಡೊಣ. ನಾನು ಆದಷ್ಟು ಹತ್ತಿರದ ಸಮಯವನ್ನು ಅಂದಾಜಿಸಿ ಈ ಮಾತು ಹೇಳುತ್ತಿದ್ದೇನೆ’ ಎಂದಿದ್ದಾರೆ.

‘ನಾವು ಕವಲುದಾರಿಯಲ್ಲಿದ್ದೇವೆ. ತುರ್ತಾಗಿ ಅಂದರೆ ಒಂದೆರಡು ವಾರದಲ್ಲಿ ಶಾಂತಿ ಒಪ್ಪಂದ ಏರ್ಪಡಬಹುದು. ಇದರಲ್ಲಿ ಸೇನೆ ವಾಪಸಾತಿ ಸೇರಿ ಎಲ್ಲವೂ ಒಳಗೊಂಡಿರಬಹುದು. ಒಂದು ವೇಳೆ ಶಾಂತಿ ಒಪ್ಪಂದ ಏರ್ಪಟ್ಟರೂ, ಒಂದು ವರ್ಷ ಸಣ್ಣಪುಟ್ಟ ಸಂಘರ್ಷಗಳು ಮುಂದುವರಿಯುವ ಸಾಧ್ಯತೆ ತಳ್ಳಿಹಾಕಲಾಗದು. ರಷ್ಯಾ ತನ್ನ ಸೇನೆಯನ್ನು ಪೂರ್ಣವಾಗಿ ಹಿಂಪಡೆಯಬೇಕು ಎಂಬುದು ಉಕ್ರೇನ್‌ ಸದ್ಯದ ಬೇಡಿಕೆಯಾಗಿದೆ’ಎಂದರು.

ದಿನದ ಘಟನಾವಳಿಗಳು
*ಮೂವತ್ತು ಲಕ್ಷಕ್ಕೂ ಅಧಿಕ ಮಂದಿ ಉಕ್ರೇನ್ ತೊರೆದಿದ್ದಾರೆ. ಇವರಲ್ಲಿ 14 ಲಕ್ಷ ಮಕ್ಕಳಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಪಾಲ್ ದಿಲ್ಲೊನ್‌ ತಿಳಿಸಿದ್ದಾರೆ.ಕಳೆದ 20 ದಿನಗಳಲ್ಲಿ 70 ಸಾವಿರ ಮಕ್ಕಳು ವಲಸಿಗರಾಗಿವೆ. ಪ್ರತಿ ಕ್ಷಣಕ್ಕೆ ಒಂದು ಮಗು ವಲಸಿಗನಾಗಿ ಬದಲಾಗಿದೆ.ವಲಸಿಗರಲ್ಲಿ 1,57,000 ಜನ ವಿದೇಶಿಗರು ಎಂದು ಯುನಿಸೆಫ್‌ ಹೇಳಿದೆ.

* ಉಕ್ರೇನ್‌ನ ಚೆರ್ನೀವ್ ಪ್ರಾಂತ್ಯದಲ್ಲಿನ ವಾಯು ಮಾರ್ಗದಲ್ಲಿ ದಾಳಿ ನಡೆಯಬಹುದು. ನಾಗರಿಕರು ಸುರಕ್ಷಿತ ತಾಣದಲ್ಲಿ ಅಡಗಿಕೊಳ್ಳಬೇಕು ಎಂದು ಉಕ್ರೇನ್‌ನ ಸರ್ಕಾರ ಎಚ್ಚರಿಕೆ.

* ಪಶ್ಚಿಮ ಉಕ್ರೇನ್‌ನಲ್ಲಿ ಟಿ.ವಿ. ಟವರ್‌ ಮೇಲೆ ರಷ್ಯಾ ನಡೆಸಿದ ರಾಕೆಟ್‌ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿದೆ. ರಿವ್ನೆ ವಲಯದ ಸರ್ಕಾರ ತನ್ನ ಫೇಸ್‌ಬುಕ್‌ ಪುಟದಲ್ಲಿ ಈ ಮಾಹಿತಿ ಹಂಚಿಕೊಂಡಿದೆ.

* ಮುಂದುವರಿದಿದೆ. ಕೀವ್‌ನಲ್ಲಿರುವ 15 ಮಹಡಿಗಳ ಕಟ್ಟಡದ ಮೇಲೆ ಶೆಲ್‌ ದಾಳಿ ನಡೆದಿದ್ದು, ಕಟ್ಟಡವನ್ನು ಬೆಂಕಿ ಆವರಿಸಿತ್ತು. ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದಾರೆ. ಹಲವರು ಕಟ್ಟಡದಲ್ಲಿ ಸಿಲುಕಿದ್ದಾರೆ.

* ‘ಮೈಕೊಲಾವಿವ್‌ ನಗರ ವಶಕ್ಕೆ ಮುಂದಾಗಿದ್ದ ರಷ್ಯಾದ ಪಡೆಗಳ ಹಿಮ್ಮೆಟ್ಟಿಸಲಾಗಿದೆ. ದಾಳಿಯಿಂದ ಇಬ್ಬರು ಮಕ್ಕಳು ಸೇರಿ 80 ಜನ ಗಾಯಗೊಂಡಿದ್ದಾರೆ ಎಂದು ಈ ಪ್ರಾಂತ್ಯದ ಗವರ್ನರ್‌ ವಿಟಲಿ ಕಿಮ್‌ ತಿಳಿಸಿದ್ದಾರೆ.

* ಚೆರ್ನೋಬಿಲ್ ಅಣುಶಕ್ತಿ ವಿದ್ಯುತ್‌ ಸ್ಥಾವರದಲ್ಲಿ ವಿದ್ಯುತ್ ಪೂರೈಕೆ ಸರಿಪಡಿಸಲಾಗಿದೆ. ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಗೂ ಮಾಹಿತಿಯನ್ನು ಆಡಳಿತ ನೀಡಿದೆ ಎಂದು ಸ್ಥಳೀಯ ಟಿ.ವಿ. ವಾಹಿನಿ ವರದಿ ಮಾಡಿದೆ.

* ಉಕ್ರೇನ್‌ನಲ್ಲಿ ವಶಕ್ಕೆ ಪಡೆದಿರುವ ಕೇರ್ಸನ್‌ನಲ್ಲಿ ಮಾಸ್ಕೊ ಪರವಿರುವ ಸರ್ಕಾರ ರಚಿಸಲು ರಷ್ಯಾ ಮುಂದಾಗಬಹುದು ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ಡೊನೆಟ್ಸ್ಕ್, ಲುಹಾನ್ಸ್ಕ್‌ ಮಾದರಿಯಲ್ಲಿ ಪ್ರತ್ಯೇಕ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಜನಾಭಿಪ್ರಾಯ ಪಡೆಯಬಹುದು ಎಂದಿದೆ.

* ರಷ್ಯಾದ ಮೇಲಿನ ನಿರ್ಬಂಧ ಬಿಗಿಗೊಳಿಸಲು ಜಪಾನ್ ಸರ್ಕಾರರಷ್ಯಾದ 11 ಸಂಸದರು, ಬ್ಯಾಂಕ್‌ ನಿರ್ವಾಹಕ ಯುರಿ ಕೊವಲ್‌ಚುಕ್, ರೆನೊವೊ ಸಮೂಹದ ಅಧ್ಯಕ್ಷ,ಬಿಲಿಯನೇರ್‌ ವಿಕ್ಟೊರ್‌ ವೆಕ್ಸೆಲ್‌ಬರ್ಗ್‌ ಸೇರಿ 17 ಪ್ರಮುಖರ ಖಾತೆಗಳನ್ನು ಜಪ್ತಿ ಮಾಡಿದೆ ಎಂದಿದೆ.

* ನ್ಯಾಟೊ ಸದಸ್ಯತ್ವ ಪಡೆಯಲು ತನಗೆ ಮುಕ್ತ ಪ್ರವೇಶ ಇಲ್ಲ ಎಂಬುದನ್ನು ಉಕ್ರೇನ್ ಅರ್ಥಮಾಡಿಕೊಂಡಿದೆ. ಹೀಗಾಗಿ, ತನಗೆ ಭದ್ರತೆಯ ಖಾತರಿ ಬೇಕಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.ನಮಗೆ ಸದಸ್ಯತ್ವ ನೀಡಲಾಗದಿದ್ದರೆ, ಭದ್ರತೆ ಖಾತರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.

* ತಾತ್ಕಾಲಿಕ ಕದನವಿರಾಮ ನೀಡಿ ಘೋಷಿಸಲಾಗಿದ್ದ ಮಾನವೀಯ ಕಾರಿಡಾರ್ ಮೂಲಕ ಸುಮಾರು 2000 ಕಾರುಗಳು ಮರಿಯುಪೋಲ್‌ ನಗರದಿಂದ ನಿರ್ಗಮಿಸಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

* ಫಾಕ್ಸ್‌ ನ್ಯೂಸ್‌ ಛಾಯಾಗ್ರಾಹಕ ಪಿಯೆರೆ ಝಕ್ರ್ಜೆವ್ಸ್ಕಿ ಸತ್ತಿದ್ದಾರೆ. ವರದಿಗೆ ಹೋಗುವಾಗ ಅವರಿದ್ದ ವಾಹನ ಶೆಲ್‌ ದಾಳಿಯಿಂದಾದ ಬೆಂಕಿಗೆ ಸಿಲುಕಿದೆ. ಯುದ್ಧದ ಅವಧಿಯಲ್ಲಿ ಮೂವರು ಪತ್ರಕರ್ತರು ಸತ್ತಿದ್ದಾರೆ ಎಂದು ಉಕ್ರೇನ್ ಸಂಸತ್ತಿನ ಮಾನವ ಹಕ್ಕುಗಳ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.

* ಅಮೆರಿಕ ನೇತೃತ್ವದ ‘ನ್ಯಾಟೊ’ ಅನ್ನು ಉಕ್ರೇನ್‌ ಸೇರುವುದಿಲ್ಲ. ಇದು ಸತ್ಯ. ಉಕ್ರೇನ್‌ನ ಈ ನಿಲುವನ್ನು ಗೌರವಿಸಬೇಕು ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮಂಗಳವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT