ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀವ್‌: 900ಕ್ಕೂ ಅಧಿಕ ನಾಗರಿಕರ ಶವ ಪತ್ತೆ

Last Updated 16 ಏಪ್ರಿಲ್ 2022, 4:34 IST
ಅಕ್ಷರ ಗಾತ್ರ

ಕೀವ್‌: ‘ಉಕ್ರೇನ್‌ನ ರಾಜಧಾನಿ ಕೀವ್‌ನ ಆಸುಪಾಸಿನಲ್ಲಿ 900ಕ್ಕೂ ಅಧಿಕ ನಾಗರಿಕರ ಶವಗಳು ಪತ್ತೆ ಯಾಗಿವೆ. ಬಹುತೇಕ ಶವಗಳ ಮೇಲೆ ಗುಂಡಿನೇಟಿನ ಗುರುತುಗಳಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.ಕೀವ್‌ನಲ್ಲಿ ರಷ್ಯಾದ ಪಡೆಗಳನ್ನು ಹಿಂಪಡೆದ ಬಳಿಕ ಅಲ್ಲಿನ ಪ್ರಾದಾಶಿಕ ಪೊಲೀಸ್‌ ಪಡೆ ಕಾರ್ಯಾಚರಣೆ ನಡೆಸುತ್ತಿದೆ.

ಕೀವ್ ಪ್ರಾದೇಶಿಕ ಪೊಲೀಸ್‌ ಪಡೆಯ ಮುಖ್ಯಸ್ಥ ಆಂಡ್ರಿ ನೆಬಿಟೋವ್‌ ಅವರು, ‘ಬಹುತೇಕ ಶವಗಳು ರಸ್ತೆಗಳಲ್ಲಿ ಅನಾಥವಾಗಿದ್ದವು ಅಥವಾ ಭಾಗಶಃ ಹೂಳಲಾಗಿತ್ತು. ಮಾಹಿತಿ ಪ್ರಕಾರ, ಶೇ 95ರಷ್ಟು ಮಂದಿ ಗುಂಡಿನೇಟಿನಿಂದಲೇ ಸತ್ತಿದ್ದಾರೆ’ ಎಂದು ತಿಳಿಸಿದರು.

ರಷ್ಯಾದ ಸೇನೆಯು ಅತಿಕ್ರಮಣದ ಅವಧಿಯಲ್ಲಿ ಜನರನ್ನು ಸಹಜವಾಗಿ ಹತ್ಯೆ ಮಾಡಲಾಗಿದೆ ಎಂಬಂತೆ ಕಾಣಿಸುತ್ತಿದೆ. ನಿತ್ಯ ಹೆಚ್ಚು ಶವಗಳು ಪತ್ತೆಯಾಗುತ್ತಿವೆ. ಬುಕಾದಲ್ಲಿ ಹೆಚ್ಚಿನ ಶವಗಳು ಕಂಡುಬಂದಿವೆ ಎಂದು ತಿಳಿಸಿದರು.

ಸ್ಫೋಟ–7 ಸಾವು: ಉಕ್ರೇನ್‌ ನಗರ ಕ್ರಾಮಟೋಸ್ಕ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು ಏಳು ಮಂದಿ ಮೃತ ಪಟ್ಟಿದ್ದಾರೆ. ವಿವರ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 ಸಾವು: ‘ರಷ್ಯಾದ ಸೇನೆಯ ದಾಳಿಯಿಂದ ಶುಕ್ರವಾರ ಐವರು ಮೃತ ಪಟ್ಟಿದ್ದಾರೆ. ರಷ್ಯಾ ಪಡೆಗಳು ಉಕ್ರೇನ್‌ ನಾಶಪಡಿಸುವ ಗುರಿ ಹೊಂದಿವೆ. ಡೊನ್‌ಬಾಸ್ ರಷ್ಯಾದ ಮುಖ್ಯ ಗುರಿಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಆರೋಪಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿದ್ದು, ಪೂರ್ವದ ಲುಗಾನ್ಸ್ಕ್‌ ವಲಯದಲ್ಲಿ ಇಬ್ಬರು , ಡೊನೆಟ್ಸ್ಕ್ ವಲಯದಲ್ಲಿ ಮೂವರು ಮೃತಪಟ್ಟಿದ್ದಾರೆ. ಡೊನೆಟ್ಸ್‌ ವಲಯದಲ್ಲಿ ಸಂಘರ್ಷ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ರಷ್ಯಾ ಎಚ್ಚರಿಕೆ: ಈ ಮಧ್ಯೆ, ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್ ಮೇಲೆ ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ. ರಷ್ಯಾದ ಗಡಿಯನ್ನು ಉಕ್ರೇನ್ ಪಡೆಗಳು ಅತಿಕ್ರಮಿಸುತ್ತಿವೆ. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಲಿದ್ದೇವೆ ಎಂದು ಹೇಳಿದೆ.

ರಷ್ಯಾಗೆ ಸೇರಿದ ಬ್ರಿಯಾನ್ಸ್ಕ್‌ನಲ್ಲಿ ಉಕ್ರೇನ್‌ ನಡೆಸಿದ ವಾಯುದಾಳಿಯಿಂದಾಗಿ 100 ವಸತಿ ಕಟ್ಟಡಗಳಿಗೆ ಹಾನಿಯಾಗಿದೆ. ಏಳು ಮಂದಿ ಗಾಯಗೊಂಡಿದ್ದಾರೆ. ಉಕ್ರೇನ್‌ ಶೆಲ್‌ ದಾಳಿ ನಡೆಸಿದೆ ಎಂದು ಇನ್ನೊಂದು ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT