ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ರಕ್ಷಿಸಲು ಬಯಸುವ ಎಲ್ಲರಿಗೂ ಶಸ್ತ್ರಾಸ್ತ್ರ ನೀಡುತ್ತೇವೆ: ಉಕ್ರೇನ್‌ ಅಧ್ಯಕ್ಷ

Last Updated 24 ಫೆಬ್ರುವರಿ 2022, 11:19 IST
ಅಕ್ಷರ ಗಾತ್ರ

ಕೀವ್: ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.

ಈ ಕುರಿತು ಗುರುವಾರ ಟ್ವೀಟ್‌ ಮಾಡಿರುವ ಅವರು, ‘ನಮ್ಮ ನಗರಗಳ ರಸ್ತೆಗಳಲ್ಲಿ ಉಕ್ರೇನ್ ಪರ ನಿಲ್ಲಲು ಸಿದ್ಧವಾಗಿರಿ. ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

‘ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ದೇಶವನ್ನು ರಕ್ಷಿಸಲು ಸಿದ್ಧವಾಗಿರುವ ನಾಗರಿಕರ ಮೇಲಿನ ಎಲ್ಲಾ ನಿರ್ಬಂಧಗಳನ್ನು ನಾವು ತೆಗೆದುಹಾಕುತ್ತೇವೆ’ ಎಂದೂ ಝೆಲೆನ್‌ಸ್ಕಿ ಹೇಳಿದ್ದಾರೆ.

‘ನಾವು ರಷ್ಯಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದ್ದೇವೆ. ಆತ್ಮಸಾಕ್ಷಿಯನ್ನು ಕಳೆದುಕೊಳ್ಳದ ರಷ್ಯಾದ ಎಲ್ಲ ನಾಗರಿಕರೂ ಈ ಯುದ್ಧದ ವಿರುದ್ಧ ಹೊರ ಬಂದು ಪ್ರತಿಭಟಿಸುವ ಸಮಯವಿದು’ ಎಂದೂ ಉಕ್ರೇನ್‌ ಅಧ್ಯಕ್ಷರು ಟ್ವೀಟಿಸಿದ್ದಾರೆ.

‘ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ, ನಾಜಿ ಜರ್ಮನಿಯ ರೀತಿಯಲ್ಲಿಯೇ ರಷ್ಯಾ ನಮ್ಮ ಮೇಲೆ ದಾಳಿ ನಡೆಸಿದೆ. ದುಷ್ಟ ಮಾರ್ಗವನ್ನು ರಷ್ಯಾ ಅನುಸರಿಸಿದೆ. ಆದರೆ, ಉಕ್ರೇನ್‌ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಮಾಸ್ಕೋ ಯಾವ ಕ್ರಮ ಕೈಗೊಂಡರೂ, ಉಕ್ರೇನ್‌ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ’ ಎಂದೂ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಉಕ್ರೇನ್ ಸೈನಿಕರಿಗೆ ಅವರು ಕರೆ ನೀಡಿದ್ದಾರೆ.

ರಷ್ಯಾ ಕ್ರಮವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT