ಗುರುವಾರ , ಜುಲೈ 7, 2022
23 °C
400 ಮಂದಿಗೆ ಆಶ್ರಯ ನೀಡಿದ್ದ ಕಲಾ ಶಾಲೆ, ಇಂಧನ ಸಂಗ್ರಹಾಗಾರ, ವಿಶೇಷ ಪಡೆಗಳ ಸೇನಾ ನೆಲೆ ಧ್ವಂಸ

ಉಕ್ರೇನ್‌ ಮೇಲೆ ರಷ್ಯಾದಿಂದ ಮತ್ತೆ ಹೈಪರ್‌ಸಾನಿಕ್‌, ಕ್ರೂಸ್‌ ಕ್ಷಿಪಣಿ ದಾಳಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಮಾಸ್ಕೊ, ಲುವಿವ್‌: ಉಕ್ರೇನ್‌ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ಶನಿವಾರವಷ್ಟೇ ಉಕ್ರೇನ್‌ನ ಶಸ್ತ್ರಾಸ್ತ್ರಗಳ ಸಂಗ್ರಹದ ನೆಲಮಾಳಿಗೆ ಗೋದಾಮನ್ನು ಹೈಪರ್‌ ಸಾನಿಕ್‌ ‘ಕಿಂಜಾಲ್‌’ ಕ್ಷಿಪಣಿಯಿಂದ ಧ್ವಂಸ ಮಾಡಿತ್ತು. ಭಾನುವಾರ ಮತ್ತೆ ‘ಕಿಂಜಾಲ್‌’ ಮತ್ತು ಕ್ರೂಸ್‌ ಕ್ಷಿಪಣಿಗಳ ಸರಣಿ ದಾಳಿ ಮುಂದುವರಿಸಿರುವ ರಷ್ಯಾ, ಸುಮಾರು 400 ಜನರು ಆಶ್ರಯ ಪಡೆದಿದ್ದ ಉಕ್ರೇನಿನ ಮರಿಯುಪೊಲ್‌ ನಗರದ ಕಲಾ ಶಾಲೆಯ ಕಟ್ಟಡ, ಪ್ರಮುಖ ಇಂಧನ ಸಂಗ್ರಹಾಗಾರ ಹಾಗೂ ಸೇನಾ ನೆಲೆಯೊಂದನ್ನು ನಾಶಪಡಿಸಿದೆ.

ಉಕ್ರೇನಿನ ಸೇನಾ ಸೌಲಭ್ಯಗಳ ಮೇಲೆ ದೂರಗಾಮಿಯ ಹೈಪರ್‌ಸಾನಿಕ್‌ ಮತ್ತು ಕ್ರೂಸ್ ಕ್ಷಿಪಣಿಗಳಿಂದ ಹೊಸ ಸರಣಿ ದಾಳಿ ನಡೆಸಲಾಗಿದೆ ಎಂದು ರಷ್ಯಾ ಸೇನೆ ಹೇಳಿದೆ.

ಶಾಲಾ ಕಟ್ಟಡ ಸಂಪೂರ್ಣ ಧ್ವಂಸಗೊಂಡಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ತುರ್ತು ಸೇವೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಗಾಯಾಳು ಮತ್ತು ಮೃತಪಟ್ಟವರ ಅಂದಾಜು ಸಿಕ್ಕಿಲ್ಲ ಎಂದು ಉಕ್ರೇನ್‌ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. 

ರಷ್ಯಾದಿಂದ ಕಿಂಜಾಲ್‌ ಕ್ಷಿಪಣಿ ದಾಳಿ ಸತತ ಎರಡು ದಿನಗಳಿಂದ ನಡೆಯುತ್ತಿದೆ. ಈ ಕ್ಷಿಪಣಿ ಸುಮಾರು 2 ಸಾವಿರ ಕಿ.ಮೀ (1,250 ಮೈಲು) ದೂರದ ಗುರಿಗಳನ್ನು ಶಬ್ದದ 10 ಪಟ್ಟು ವೇಗದಲ್ಲಿ ತಲುಪುವ ಸಾಮರ್ಥ್ಯ ಹೊಂದಿದೆ. ಜತೆಗೆ ಅಣ್ವಸ್ತ್ರಗಳನ್ನು ಕೊಂಡೊಯ್ಯುವ ಸಾಮರ್ಥ್ಯವೂ ಇದಕ್ಕಿದೆ. ಈ ಕ್ಷಿಪಣಿಯನ್ನು ಮಿಗ್‌–31 ಯುದ್ಧ ವಿಮಾನದಿಂದ ಉಡಾಯಿಸಲಾಗಿದೆ ಎನ್ನಲಾಗಿದೆ.

ಮೈಕೊಲೈವ್‌ನ ಕಪ್ಪು ಸಮುದ್ರದ ಬಂದರು ಸಮೀಪದ ಕೋಸ್ಟಿಯಾಂಟಿನಿವ್‌ಕಾದಲ್ಲಿರುವ ಉಕ್ರೇನ್‌ನ ಬೃಹತ್‌ ಇಂಧನ ಸಂಗ್ರಹಾಗಾರವನ್ನು ಯುದ್ಧ ನೌಕೆಯಿಂದ ಉಡಾಯಿಸಿದ ‘ಕಲಿಬ್‌’ ಕ್ರೂಸ್‌ ಕ್ಷಿಪಣಿಗಳು ಧ್ವಂಸ ಮಾಡಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಐಗೊರ್ ಕೊನಶೆಂಕವ್‌ ಹೇಳಿದ್ದಾರೆ.

ಇನ್ನು ಕಪ್ಪು ಸಮುದ್ರದಿಂದ ಉಡಾವಣೆ ಮಾಡಿದ ಕಲಿಬ್‌ ಕ್ಷಿಪಣಿಗಳು ಉತ್ತರ ಉಕ್ರೇನ್‌ನ ಚೆರ್ನಿವ್ ಪ್ರದೇಶದ ನಿದಿನ್‌ನಲ್ಲಿರುವ ಶಸ್ತ್ರಾಸ್ತ್ರಗಳ ದುರಸ್ತಿ ಘಟಕವನ್ನು ನಾಶ ಮಾಡಿವೆ. ವಾಯು ಉಡಾವಣೆ ಕ್ಷಿಪಣಿಗಳ ಮತ್ತೊಂದು ದಾಳಿಯಲ್ಲಿ ವಿದೇಶಿ ಸೈನಿಕರು ಮತ್ತು ಉಕ್ರೇನಿನ ವಿಶೇಷ ಪಡೆಗಳು ನೆಲೆಗೊಂಡಿರುವ ಉತ್ತರ ಜೈಟೊಮಿರ್‌ ಪ್ರದೇಶದ ಔರುಕ್‌ನ ಸೇನಾ ನೆಲೆಯನ್ನು ಧ್ವಂಸಗೊಳಿಸಲಾಗಿದೆ ಎಂದಿದ್ದಾರೆ.

ಪಶ್ಚಿಮ ಉಕ್ರೇನ್‌ನ ಕಾರ್ಪಾಥಿಯನ್ ಪರ್ವತಗಳ ತಪ್ಪಲಿನ ಡಿಲ್ಯಾಟಿನ್‌ ಗ್ರಾಮದಲ್ಲಿದ್ದ ಉಕ್ರೇನ್‌ ಸೇನೆಯ ಶಶ್ತ್ರಾಸ್ತ್ರ ಮತ್ತು ಕ್ಷಿಪಣಿಗಳ ಸಂಗ್ರಹದ ನೆಲಮಾಳಿಗೆಯ ಗೋದಾಮು ನಾಶಪಡಿಸಲು ಕಿಂಜಾಲ್ ಕ್ಷಿಪಣಿಯನ್ನು ರಷ್ಯಾ ಪಡೆಗಳು ಮೊದಲ ಬಾರಿಗೆ ಬಳಸಿದ್ದವು.

ಝೆಲೆನ್‌ಸ್ಕಿ ಕಿಡಿ: ‘ಕಲಾ ಶಾಲೆಯ ಮೇಲೆ ರಷ್ಯಾದ ಸೇನೆ ಬಾಂಬ್ ದಾಳಿ ನಡೆಸಿದೆ. ರಷ್ಯಾದ ಪಡೆಗಳು ನಿರಂತರ ಆಕ್ರಮಣದಲ್ಲಿ ಯುದ್ಧಾಪರಾಧಗಳನ್ನು ಎಸಗುತ್ತಿದ್ದು, ರಷ್ಯಾವು ಇತಿಹಾಸದ ಪುಟದಲ್ಲಿ ಅಧೋಗತಿಗೆ ಇಳಿಯಲಿದೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆಕ್ರೋಶ ಹೊರಹಾಕಿದ್ದಾರೆ.  

ಅಮೆರಿಕದಿಂದಲೂ ಹೈಪರ್‌ಸಾನಿಕ್ ಕ್ಷಿಪಣಿ ಅಭಿವೃದ್ಧಿ
ಪೋರ್ಟ್‌ಲ್ಯಾಂಡ್ (ಎಪಿ):
ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ಈವರೆಗೆ ರಷ್ಯಾಕ್ಕಿಂತ ಹಿಂದೆ ಉಳಿದಿದ್ದ ಅಮೆರಿಕ ಇದೀಗ ತನ್ನ ಮೊದಲ ಹೈಪರ್‌ಸಾನಿಕ್ ಕ್ಷಿಪಣಿ ಅಭಿವೃದ್ಧಿಗೆ ಸಿದ್ಧತೆ ನಡೆಸಿದ್ದು, ಮುಂದಿನ ವರ್ಷದ ಒಳಗಾಗಿ ಯುದ್ದ ನೌಕೆಗೆ ಈ ಕ್ಷಿಪಣಿ ಅಳವಡಿಸುವ ಯೋಜನೆ ಹೊಂದಿದೆ ಎಂದು ಹೇಳಿದೆ. ಖಂಡಾಂತರ ಕ್ಷಿಪಣಿಗಳ ರೀತಿಯೇ ವೇಗವಾಗಿ ಚಲಿಸುವ ಹೈಪರ್ ಸಾನಿಕ್ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಚೀನಾ ಮತ್ತು ರಷ್ಯಾ ದೇಶಗಳ ಜತೆ ಅಮೆರಿಕ ಪೈಪೋಟಿಗೆ ಇಳಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು