ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ರಷ್ಯಾ ನರಮೇಧ ನಡೆಸುತ್ತಿದೆ: ವೊಲೊಡಿಮಿರ್ ಝೆಲೆನ್‌ಸ್ಕಿ

Last Updated 4 ಏಪ್ರಿಲ್ 2022, 2:45 IST
ಅಕ್ಷರ ಗಾತ್ರ

ಕೀವ್: ರಷ್ಯಾ ತನ್ನ ದೇಶದಲ್ಲಿ ನರಮೇಧ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಆರೋಪಿಸಿದ್ದಾರೆ. ರಾಜಧಾನಿ ಕೀವ್‌ನ ಹೊರಗೆ ರಷ್ಯಾದ ಪಡೆಗಳು ಕಾರ್ಯಾಚರಣೆಯನ್ನು ಹಿಂಪಡೆದ ಪಟ್ಟಣಗಳಲ್ಲಿ ನಾಗರಿಕರ ಹತ್ಯೆಯಾಗಿರುವುದು ಗೋಚರಿಸುತ್ತಿದ್ದಂತೆ ಪಾಶ್ಚಿಮಾತ್ಯ ನಾಯಕರು ಖಂಡಿಸಿದ್ದಾರೆ.

'ಖಂಡಿತವಾಗಿಯೂ ಇದು ನರಮೇಧ. ಇಡೀ ರಾಷ್ಟ್ರ ಮತ್ತು ಜನರ ನಿರ್ಮೂಲನೆ ಮಾಡುವುದಾಗಿದೆ'. 'ನಾವು ಉಕ್ರೇನ್‌ನ ಪ್ರಜೆಗಳು ಮತ್ತು ರಷ್ಯಾದ ನೀತಿಗೆ ನಾವು ಅಧೀನರಾಗಲು ಬಯಸುವುದಿಲ್ಲ. ಈ ಕಾರಣದಿಂದಾಗಿ ನಾವು ನಾಶವಾಗುತ್ತಿದ್ದೇವೆ' ಎಂದು ಝೆಲೆನ್‌ಸ್ಕಿ ಸಿಬಿಎಸ್‌ನ 'ಫೇಸ್ ದಿ ನೇಷನ್' ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಆದರೆ, ರಷ್ಯಾದ ರಕ್ಷಣಾ ಸಚಿವಾಲಯ ಈ ಆರೋಪಗಳನ್ನು ನಿರಾಕರಿಸಿದೆ. ಬುಕಾದಲ್ಲಿ ಮೃತ ದೇಹಗಳನ್ನು ತೋರಿಸುವ ದೃಶ್ಯಗಳು ಮತ್ತು ಫೋಟೊಗಳು ಕೀವ್‌ನಿಂದ ಆಗುತ್ತಿರುವ 'ಮತ್ತೊಂದು ಪ್ರಚೋದನೆ' ಎಂದು ಹೇಳಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಝೆಲೆನ್‌ಸ್ಕಿ, 'ಸೂಚನೆಗಳು ಮತ್ತು ಆದೇಶಗಳನ್ನು ನೀಡಿದ ಎಲ್ಲಾ ಮಿಲಿಟರಿ ಕಮಾಂಡರ್‌ಗಳು ಸೇರಿ ಪ್ರತಿಯೊಬ್ಬರಿಗೂ ಸಮರ್ಪಕ ಶಿಕ್ಷೆ ನೀಡಬೇಕು' ಎಂದು ಹೇಳಿದ್ದಾರೆ.

ಸೂಕ್ತ ಶಿಕ್ಷೆ ಏನೆಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, 'ಕೈಗಳನ್ನು ಹಿಂದಕ್ಕೆ ಕಟ್ಟಿದ ಮತ್ತು ಗುಂಡಿಟ್ಟು ಕ್ರೂರವಾಗಿ ಹತ್ಯೆ ಮಾಡಿದ ಅವರಿಗೆ ಯಾವ ಕಾನೂನು ಅಥವಾ ಯಾವ ಜೈಲು ಶಿಕ್ಷೆಯು ಸಾಕಾಗುತ್ತದೆ ಎಂಬುದು ನನಗೆ ತಿಳಿಯುತ್ತಿಲ್ಲ'. ರಷ್ಯಾದ ಪಡೆಗಳು ಫೆಬ್ರುವರಿ 24ರ ಮೊದಲು ಅಸ್ತಿತ್ವದಲ್ಲಿದ್ದಂತೆ ಗಡಿಗಳಿಂದ ಶೇ 100 ರಷ್ಟು ಪಡೆಗಳನ್ನು ಹಿಂತೆಗೆದುಕೊಳ್ಳಬೇಕು. ಇದು ಕನಿಷ್ಠ ಪಕ್ಷ ಇತರ ಪ್ರಶ್ನೆಗಳ ಕುರಿತು ಚರ್ಚಿಸಲು ನೆರವಾಗುತ್ತದೆ' ಎಂದು ಅವರು ಹೇಳಿದರು.

ಬುಕಾದಲ್ಲಿ ಪತ್ತೆಯಾದ ಉಕ್ರೇನ್ ನಾಗರಿಕರ ಮೃತದೇಹದ ಚಿತ್ರಗಳನ್ನು ನೋಡಿದರೆ 'ಕರುಳಿನಲ್ಲಿ ಕಿವುಚಿದಂತಾಗುತ್ತದೆ' ಮತ್ತು ಇದಕ್ಕೆ ಯಾರು ಕಾರಣರೋ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ತಿಳಿಸಿದ್ದಾರೆ.

ನ್ಯಾಟೊ ಸೆಕ್ರೆಟರಿ-ಜನರಲ್ ಜೆನ್ಸ್ ಸ್ಟೋಲ್ಟೆನ್‌ಬರ್ಗ್, ಬುಕಾದಲ್ಲಿನ ಹತ್ಯೆಗಳು ಯುರೋಪ್‌ನಲ್ಲಿ ದಶಕಗಳಿಂದ ಕಾಣದ 'ಕ್ರೂರತೆ'ಯಾಗಿದೆ ಎಂದು ಕರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT