ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ವಿರೋಧಿಸಿ ಪ್ರತಿಭಟನೆ: ರಷ್ಯಾದ ಮಾಜಿ ಪತ್ರಕರ್ತೆ ಬಂಧನ

Last Updated 11 ಆಗಸ್ಟ್ 2022, 11:33 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾ ಸೈನ್ಯದ ಕುರಿತು ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಸರ್ಕಾರಿ ವಾಹಿನಿಯೊಂದರ ಮಾಜಿ ಪತ್ರಕರ್ತೆ, ನಿರೂಪಕಿ ಮಾರಿನಾ ಒಸಾನಿಕೊವಾ ಅವರನ್ನು ಬಂಧಿಸಲಾಗಿದೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ್ದನ್ನು ಸುದ್ದಿ ವಾಚನದ ವೇಳೆಯೇ, ನೇರಪ್ರಸಾರದಲ್ಲಿ ಪ್ರತಿಭಟಿಸಿದ್ದರು.

‘ಬುಧವಾರ ಮಾರಿನಾ ಅವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ಬಂಧಿಸಿದ್ದಾರೆ’ ಎಂದು ಮಾರಿನಾ ಪರ ವಕೀಲರು ಪತ್ರಕರ್ತರಿಗೆ ಮಾಹಿತಿ ನೀಡಿದರು.

‘ವ್ಲಾಡಿಮಿರ್‌ ಪುಟಿನ್‌ ಒಬ್ಬ ಕೊಲೆಗಡುಕ. ಆತನ ಸೈನಿಕರು ಫ್ಯಾಸಿಸ್ಟ್‌ಗಳು. 352 ಮಕ್ಕಳನ್ನು ಕೊಲ್ಲಲಾಗಿದೆ. ಯುದ್ಧ ನಿಲ್ಲಿಸಲು ಇನ್ನೆಷ್ಟು ಮಕ್ಕಳು ಸಾಯಬೇಕು ನಿಮಗೆ?’ ಎಂದು ಬರೆದಿದ್ದ ಬ್ಯಾನರ್‌ ಹಿಡಿದು ಮಾರಿನಾ ಅವರು ಕಳೆದ ತಿಂಗಳು ರಸ್ತೆಗಿಳಿದು ಪ್ರತಿಭಟಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ’ ಎಂದರು.

‘ಪ್ರಕರಣದ ವಿಚಾರಣೆ ನಡೆದು, ಮಾರಿನಾ ಅವರು ಅಪರಾಧಿ ಎಂದಾದರೆ, ಅವರಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ಆಗಲಿದೆ. ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿದ ಬಳಿಕ ಸರ್ಕಾರವು ಹೊಸ ಕಾನೂನೊಂದನ್ನು ಜಾರಿಗೆ ತಂದಿದೆ. ಇದರ ಅನ್ವಯ ಸೇನೆಯ ವಿರುದ್ಧ ಹೇಳಿಕೆ ನೀಡಿದರೆ ಶಿಕ್ಷೆ ಆಗಲಿದೆ. ಈ ಕಾನೂನಿನ ಅಡಿ ಮಾರಿನಾ ಅವರ ಬಂಧನವಾಗಿದೆ’ ಎಂದರು.

ನೇರಪ್ರಸಾರದಲ್ಲಿ ರಷ್ಯಾ ಸೇನೆಯ ವಿರುದ್ಧ ಪ್ರತಿಭಟಿಸಿದ ಬಳಿಕ ಮಾರಿನಾ ಅವರು ಕೆಲಸ ತೊರೆದಿದ್ದರು. ಅದಾದ ಬಳಿಕ ಸಾಮಾಜಿಕ ಕಾರ್ಯಕರ್ತೆಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯುದ್ಧದ ವಿರುದ್ಧ ಸಾರ್ವಜನಿಕವಾಗಿಯೇ ಮಾತನಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT