ಮಂಗಳವಾರ, ಆಗಸ್ಟ್ 16, 2022
29 °C

3 ಹಂತದಲ್ಲಿ ಕೋವಿಡ್–19 ಲಸಿಕೆ ಅಭಿಯಾನ ಘೋಷಿಸಿದ ಸೌದಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ರಿಯಾದ್: ಫೈಜರ್–ಬಯೋ ಅಂಡ್ ಟೆಕ್ ಸಂಸ್ಥೆಯ ಲಸಿಕೆಗೆ ಅನುಮೋದನೆ ನೀಡಿದ ಬಳಿಕ ದೇಶದ ನಾಗರಿಕರು ಮತ್ತು ವಿದೇಶಿಯರ ನೋಂದಣಿ ಆರಂಭಿಸಿರುವ ಸೌದಿ ಅರೇಬಿಯಾ, ಮೂರು ಹಂತಗಳಲ್ಲಿ ಕೋವಿಡ್–19 ಲಸಿಕೆ ಅಭಿಯಾನ ನಡೆಸಲು ಮುಂದಾಗಿದೆ.

65 ವರ್ಷ ಮೇಲ್ಪಟ್ಟ, ದೀರ್ಘಕಾಲೀನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಥವಾ ಕೊರೊನಾ ಸೋಂಕಿನ ಹೈ ರಿಸ್ಕ್‌ನಲ್ಲಿರುವವವರಿಗೆ ಆದ್ಯತೆ ಮೇರೆಗೆ ಮೊದಲ ಹಂತದಲ್ಲಿ ಲಸಿಕೆ ಹಾಕಲಾಗುತ್ತದೆ. 50 ವರ್ಷ ಮೇಲ್ಪಟ್ಟವರಿಗೆ ಎರಡನೇ ಹಂತದಲ್ಲಿ ಮತ್ತು ಮೂರನೇ ಹಂತದಲ್ಲಿ ಎಲ್ಲ ನಾಗರಿಕರಿಗೆ ಲಸಿಕೆ ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮೂರು ಹಂತದ ಅಸಿಕೆ ಅಭಿಯಾನಕ್ಕೆ ಎಷ್ಟು ಸಮಯ ಹಿಡಿಯಲಿದೆ ಎಂದು ಎಲ್ಲಿಯೂ ನಿರ್ದಿಷ್ಟವಾಗಿ ಹೇಳಿಲ್ಲ.

ಅಧಿಕೃತ ಮಾಹಿತಿ ಪ್ರಕಾರ, ಇಲ್ಲಿ 3.4 ಕೋಟಿ ಜನಸಂಖ್ಯೆ ಇದೆ. ದೇಶದ ಎಲ್ಲ ನಾಗರಿಕರು ಮತ್ತು ನಿವಾಸಿಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಇಲಾಖೆ ಘೋಷಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ತುಂಬಿಸಲು ಆರಂಭ ಮಾಡಿದೆ.

ಕಳೆದ ವಾರವೇ ಗಲ್ಫ್ ಕಿಂಗ್‌ಡಮ್‌ನಲ್ಲಿ ಅಮೆರಿಕದ ಫಾರ್ಮಾಸಿಟಿಕಲ್ ಕಂಪನಿ ಫೈಜರ್ ತನ್ನ ಪಾರ್ಟ್ನರ್ ಜರ್ಮನಿ ಮೂಲದ ಬಯೋ ಅಂಡ್ ಟೆಕ್ ಜೊತೆ ಸೇರಿ ಅಭಿವೃದ್ಧಿಪಡಿಸಿರುವ ಲಸಿಕೆಗೆ ಅನುಮೋದನೆ ನೀಡಿತ್ತು. ಇದೀಗ, ಸೌದಿ ಅರೇಬಿಯಾ, ಬಹ್ರೇನ್ ಬಳಿಕ ಫೈಜರ್ ಲಸಿಕೆಗೆ ಹಸಿರು ನಿಶಾನೆ ತೋರಿದ ಎರಡನೇ ಗಲ್ಫ್ ರಾಷ್ಟ್ರವಾಗಿದೆ.

ಬ್ರಿಟನ್, ಕೆನಡಾ ಮತ್ತು ಅಮೆರಿಕ ಸಹ ಫೈಜರ್–ಬಯೋ ಅಂಡ್ ಟೆಕ್ ಲಸಿಕೆಗೆ ಅನುಮೋದನೆ ನೀಡಿದ್ದು, ಈಗಾಗಲೇ ಸಾಮೂಹಿಕ ಲಸಿಕೆ ಅಭಿಯಾನ ಆರಂಭಿಸಿವೆ.

ಸೌದಿ ಅರೇಬಿಯಾದಲ್ಲಿ ಈವರೆಗೆ 3,60,000 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಲ್ಲಿ 6,000 ಮಂದಿ ಅಸುನೀಗಿದ್ದಾರೆ. ಆದರೆ, ಇಲ್ಲಿ ಚೇತರಿಕೆ ಪ್ರಮಾಣವು ಅಧಿಕ ಪ್ರಮಾಣದಲ್ಲಿರುವ ಬಗ್ಗೆ ವರದಿಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು