ಭಾನುವಾರ, ಜೂನ್ 13, 2021
25 °C
ಶಾಲೆಗಳನ್ನು ಮುಚ್ಚಲು ನಿರ್ಧಾರ

ಮಕ್ಕಳಲ್ಲಿ ಸೋಂಕು ಹರಡುತ್ತಿದೆ ರೂಪಾಂತರಗೊಂಡ ಕೊರೊನಾ ವೈರಸ್‌: ಸಿಂಗಪುರ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ರೂಪಾಂತರಗೊಂಡ ಕೊರೊನಾ ವೈರಸ್‌ ಮಾದರಿಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದಾಗಿ ಸಿಂಗಪುರ ಆಡಳಿತ ವ್ಯವಸ್ಥೆಯು ಎಚ್ಚರಿಕೆ ನೀಡಿದ್ದು, ಬುಧವಾರದಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

ಕೆಲವು ತಿಂಗಳಿಂದ ಕೋವಿಡ್‌ನಿಂದ ಬಹುತೇಕ ಮುಕ್ತವಾಗಿದ್ದ ಸಿಂಗಪುರದಲ್ಲಿ ಇತ್ತೀಚೆಗೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅದರ ಬೆನ್ನಲ್ಲೇ ಸರ್ಕಾವು ನಿರ್ಬಂಧಗಳನ್ನು ಬಿಗಿಗೊಳಿಸಿದೆ.

ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜೂನಿಯರ್‌ ಕಾಲೇಜುಗಳನ್ನು ಬುಧವಾರದಿಂದ ಮುಚ್ಚಲು ನಿರ್ಧರಿಸಲಾಗಿದೆ. ಮೇ 28ಕ್ಕೆ ಶಾಲೆಯ ದಿನಗಳು ಕೊನೆಯಾಗಲಿದ್ದು, ಆ ವರೆಗೂ ಮನೆಗಳಿಂದಲೇ ಶಿಕ್ಷಣ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಂದೇ ದಿನದ ಅಂತರದಲ್ಲಿ ಭಾನುವಾರ ಸಿಂಗಪುರದಲ್ಲಿ 38 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಕಳೆದ ಎಂಟು ತಿಂಗಳಲ್ಲಿ ಇದೇ ಮೊದಲ ಬಾರಿಗೆ 24 ಗಂಟೆಗಳ ಅಂತರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಮವಾರ 21 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಆರೋಗ್ಯ ಸಚಿವ ಆನ್‌ ಯೆ ಕಂಗ್‌ ಅವರು ಆರೋಗ್ಯ ಸೇವೆಗಳ ನಿರ್ದೇಶಕ ಕೆನೆಥ್‌ ಮಾಕ್‌ ಜೊತೆಗೆ ನಡೆಸಿರುವ ಮಾತುಕತೆಯನ್ನು ಪ್ರಸ್ತಾಪಿಸಿ, 'ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಬಿ.1.617 ವೈರಸ್‌ ಮಾದರಿಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವಂತೆ ತೋರುತ್ತಿದೆ' ಎಂದಿದ್ದಾರೆ.

ಇದನ್ನೂ ಓದಿ– ಕೊರೊನಾ ಸೋಂಕಿತರನ್ನು ಸದ್ದಿಲ್ಲದೇ ಬಲಿಪಡೆಯುತ್ತಿದೆ 'ಹ್ಯಾಪಿ ಹೈಪೋಕ್ಸಿಯಾ'

'ಕೊರೊನಾ ವೈರಸ್‌ನ ರೂಪಾಂತರಗೊಂಡ ಮಾದರಿಗಳಲ್ಲಿ ಕೆಲವು ಅತ್ಯಂತ ವೇಗವಾಗಿ ಹರಡುತ್ತಿದೆ ಹಾಗೂ ಮಕ್ಕಳ ಮೇಲೆ ಬಹುಬೇಗ ಪರಿಣಾಮ ಬೀರುತ್ತಿರುವಂತೆ ಕಂಡು ಬಂದಿದೆ. ಸೋಂಕಿಗೆ ಒಳಗಾಗಿರುವ ಮಕ್ಕಳಲ್ಲಿ ಯಾರೊಬ್ಬರ ಸ್ಥಿತಿಯು ಗಂಭೀರವಾಗಿಲ್ಲ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ' ಎಂದು ಶಿಕ್ಷಣ ಸಚಿವ ಚಾನ್‌ ಚುನ್‌ ಸಿಂಗ್‌ ಹೇಳಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕಾಗಿ ತೈವಾನ್‌ ಮಂಗಳವಾರದಿಂದಲೇ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ.

ಸಿಂಗಪುರದಲ್ಲಿ ಒಟ್ಟು 61 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಹಾಗೂ ಈವರೆಗೂ ಸೋಂಕಿನಿಂದ 31 ಮಂದಿ ಸಾವಿಗೀಡಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು