ಶುಕ್ರವಾರ, ಆಗಸ್ಟ್ 12, 2022
20 °C

ಬ್ರಿಟನ್‌: ರಾಜೀನಾಮೆ ಪರ್ವ, ಇಕ್ಕಟ್ಟಿನಲ್ಲಿ ಬೋರಿಸ್‌ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಬ್ರಿಟನ್‌ನಲ್ಲಿ ಸಚಿವರ ರಾಜೀನಾಮೆ ಪರ್ವ ಮುಂದುವರಿದಿದ್ದು, ಕೇವಲ 24 ಗಂಟೆಯೊಳಗೆ ರಿಷಿ ಸುನಕ್‌ ಸೇರಿ 13 ಸಚಿವರು ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಮೇಲೆ ವಿಶ್ವಾಸ ಕಳೆದುಕೊಂಡು ಸರ್ಕಾರದಿಂದ ಹೊರ ನಡೆದಿದ್ದಾರೆ. ಜಾನ್ಸನ್‌ ಅವರ ನಾಯಕತ್ವಕ್ಕೆ ಈಗ ಹೊಸ ಸವಾಲು ಎದುರಾಗಿದೆ. 

ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ಸಾಜಿದ್‌ ಜಾವಿದ್‌ ಅವರು ಮಂಗಳವಾರ ರಾಜೀನಾಮೆ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಹಣಕಾಸು ಸಚಿವ ರಿಷಿ ಸುನಕ್‌ ಕೂಡ ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದರು. ಸುನಕ್‌ ಹಾದಿಯನ್ನೇ ಅನುಸರಿಸಿ ಮತ್ತೆ 11 ಸಚಿವರು ತಮ್ಮ ಸ್ಥಾನಗಳಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಈ ಮಧ್ಯೆ, ರಿಷಿ ಸುನಕ್‌ ಸ್ಥಾನಕ್ಕೆ ಇರಾಕ್‌ ಸಂಜಾತ ನಧೀಂ ಜಹಾವಿ ಅವರನ್ನು ನೇಮಿಸಲಾಗಿದೆ. 

ರಾಜೀನಾಮೆ ನೀಡಲ್ಲ: ಹಲವು ಸಚಿವರು ರಾಜೀನಾಮೆ ಸಲ್ಲಿಸಿದ್ದರೂ, ಪ್ರಧಾನಿ ಹುದ್ದೆ ತೊರೆಯುವುದಿಲ್ಲ ಎಂದು ಜಾನ್ಸನ್‌ ಅವರು ಸ್ಪಷ್ಟಪಡಿಸಿದ್ದಾರೆ.

ಅಕ್ರಮಗಳು ಮತ್ತು ಕೋವಿಡ್‌ ಸಂಬಂಧಿತ ನಿಯಮಾವಳಿ ಉಲ್ಲಂಘಿಸಿ ನಡೆಸಿದ ಔತಣ ಕೂಟದಿಂದಾಗಿ ಬೋರಿಸ್‌ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಬೋರಿಸ್‌ ಅವರು ಪ್ರತಿನಿಧಿಸುವ ಕನ್ಸರ್ವೇಟಿವ್‌ ಪಕ್ಷದ ಸಂಸದರೇ ಬೋರಿಸ್‌ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದರು. ಇದರಿಂದಾಗಿ ಕಳೆದ ತಿಂಗಳು ಎದುರಾದ ಅವಿಶ್ವಾಸ ನಿಲುವಳಿ ಸಂದರ್ಭ ಜಾನ್ಸನ್‌ ಅವರು ಪ್ರಯಾಸದಿಂದ ವಿಶ್ವಾಸಮತ ಗಳಿಸಿ, ಅಧಿಕಾರ ಉಳಿಸಿಕೊಂಡಿದ್ದರು.

ವಿಶ್ವಾಸ ಮತದ ಕುರಿತ ಪ್ರಸ್ತುತ ನಿಯಮಾವಳಿ ಪ್ರಕಾರ ಮುಂದಿನ ಬೇಸಿಗೆಯವರೆಗೆ ಜಾನ್ಸನ್‌ ಅವರ ನಾಯಕತ್ವಕ್ಕೆ ಯಾವುದೇ ಧಕ್ಕೆ ಇಲ್ಲ. ಆದರೆ, ಬ್ರಿಟಿಷ್‌ ಮಾಧ್ಯಮಗಳು ನಿಯಮಾವಳಿಗೆ ತಿದ್ದುಪಡಿಯಾದರಷ್ಟೇ ಜಾನ್ಸನ್‌ ನಾಯಕತ್ವಕ್ಕೆ ಕುತ್ತು ಬರಲಿದೆ ಎಂದು ವರದಿ ಮಾಡಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು