ಸೋಮವಾರ, ಮಾರ್ಚ್ 1, 2021
19 °C

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಮುಖ್ಯಸ್ಥ ಜೇ ವೈ ಲೀಗೆ 30 ತಿಂಗಳು ಜೈಲು ಶಿಕ್ಷೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಜೇ ವೈ.ಲೀ (ಲೀ ಜೇ ಯಂಗ್‌) ಸೋಲ್ ಕೋರ್ಟ್‌ಗೆ ಪ್ರವೇಶಿಸುತ್ತಿದ್ದ ಸಂದರ್ಭ

ಸೋಲ್‌: ದಕ್ಷಿಣ ಕೊರಿಯಾ ಮೂಲದ 'ಸ್ಯಾಮ್‌ಸಂಗ್‌' ಉದ್ಯಮ ಸಾಮ್ರಾಜ್ಯದ ಉಪಾಧ್ಯಕ್ಷ ಜೇ ವೈ.ಲೀ (ಲೀ ಜೇ ಯಾಂಗ್) ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎರಡೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಸ್ಮಾರ್ಟ್‌ಫೋನ್‌ ಹಾಗೂ ಮೆಮೊರಿ ಚಿಪ್‌ ತಯಾರಿಸುವ  ಜಗತ್ತಿನ ಅತಿ ದೊಡ್ಡ ಸಂಸ್ಥೆಯಾಗಿರುವ ಸ್ಯಾಮ್‌ಸಂಗ್‌ನ ಮುಖ್ಯಸ್ಥ ಸ್ಥಾನದಲ್ಲಿರುವ ಜೇ ವೈ.ಲೀಗೆ (52) ದಕ್ಷಿಣ ಕೊರಿಯಾ ಕೋರ್ಟ್‌ ಸೋಮವಾರ 30 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸ್ಯಾಮ್‌ಸಂಗ್‌ ಮುಖ್ಯಸ್ಥರಾಗಿದ್ದ ಲೀ ಕುನ್‌ ಹೀ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಧನರಾದರು. ಅನಂತರದಲ್ಲಿ ಸಂಸ್ಥೆಯ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಹೊಣೆಯನ್ನು ಅವರ ಪುತ್ರ ಜೇ ವೈ.ಲೀ ತೆಗೆದುಕೊಳ್ಳಬೇಕಿತ್ತು. ಆದರೆ, ಲಂಚ ನೀಡಿರುವ ಆರೋಪದಲ್ಲಿ ಈಗ ಲೀ ಮತ್ತೆ ಶಿಕ್ಷೆಗೆ ಒಳಗಾಗಿದ್ದಾರೆ.

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷೆ ಪಾರ್ಕ್‌ ಗುನ್‌ ಹೇ ಅವರ ಸಹಚರರಿಗೆ ಲಂಚ ನೀಡಿದ ಪ್ರಕರಣದಲ್ಲಿ 2017ರಲ್ಲಿ ಲೀಗೆ ಐದು ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಲೀ ಆರೋಪವನ್ನು ಒಪ್ಪಿಕೊಂಡಿರಲಿಲ್ಲ ಹಾಗೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಿ, ಒಂದು ವರ್ಷದ ಜೈಲು ಶಿಕ್ಷೆಯ ಬಳಿಕ ಬಿಡುಗಡೆಯಾಗಿದ್ದರು.

ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಸೋಲ್‌ ಹೈಕೋರ್ಟ್‌ಗೆ ವಾಪಸ್‌ ಕಳುಹಿಸಿತ್ತು. ಲಂಚ ನೀಡಿಕೆ, ಹಣ ದುರುಪಯೋಗ ಹಾಗೂ ಮರೆ ಮಾಚುವಿಕೆಗೆ ಸಂಬಂಧಿಸಿದ 7.8 ಮಿಲಿಯನ್‌ ಡಾಲರ್‌ (8.6 ಬಿಲಿಯನ್‌ ವೋನ್‌/ 57 ಕೋಟಿ ರೂಪಾಯಿ) ಪ್ರಕರಣದಲ್ಲಿ ಲೀ ತಪ್ಪಿತಸ್ತ ಎಂದು ಸೋಲ್‌ ಹೈ ಕೋರ್ಟ್‌ ತೀರ್ಪು ನೀಡಿದೆ.

ಈಗಾಗಲೇ ಒಂದು ವರ್ಷ ಶಿಕ್ಷೆ ಅನುಭವಿಸಿರುವುದರಿಂದ ಲೀ, ಇನ್ನು 18 ತಿಂಗಳು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಒಂದು ವಾರದೊಳಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ.

ಕೋರ್ಟ್‌ ತೀರ್ಪು ಹೊರ ಬರುತ್ತಿದ್ದಂತೆ ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ನ ಷೇರು ಬೆಲೆ ಶೇ 4ರಷ್ಟು ಕುಸಿಯಿತು. ಇದರೊಂದಿಗೆ ಸ್ಯಾಮ್‌ಸಂಗ್‌ ಅಂಗಸಂಸ್ಥೆಗಳಾದ ಸ್ಯಾಮ್‌ಸಂಗ್‌ ಸಿಆ್ಯಂಡ್‌ಟಿ, ಸ್ಯಾಮ್‌ಸಂಗ್‌ ಲೈಫ್‌ ಇನ್ಶುರೆನ್ಸ್‌ ಹಾಗೂ ಸ್ಯಾಮ್‌ಸಂಗ್‌ ಎಸ್‌ಡಿಐ ಕಂಪನಿಯ ಷೇರುಗಳೂ ಕುಸಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು