ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಬಿಕ್ಕಟ್ಟು ತೀವ್ರ‌: ರಾನಿಲ್‌ ರಾಜೀನಾಮೆಗೆ ಒತ್ತಡ

ಪ್ರಧಾನಿ ಪದಚ್ಯುತಿಗೆ ವಿಪಕ್ಷಗಳ ಆಗ್ರಹ
Last Updated 13 ಜುಲೈ 2022, 19:31 IST
ಅಕ್ಷರ ಗಾತ್ರ

ಕೊಲಂಬೊ:ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ತಕ್ಷಣವೇ ವಜಾ ಮಾಡಬೇಕು ಎಂದು ಶ್ರೀಲಂಕಾದ ವಿರೋಧ ಪಕ್ಷಗಳು ಸ್ಪೀಕರ್ ಅವರನ್ನು ಒತ್ತಾಯಿಸಿವೆ. ಅಧ್ಯಕ್ಷ ಗೊಟಬಯ ಅವರು, ರಾನಿಲ್ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರು ವುದನ್ನು ವಿರೋಧ ಪಕ್ಷಗಳು ಖಂಡಿಸಿವೆ.

‘ಗೊಟಬಯ ಅವರು ಅಧ್ಯಕ್ಷ ಹುದ್ದೆಗೆ ಬುಧವಾರ ಸಂಜೆ ರಾಜೀನಾಮೆ ನೀಡಬೇಕು ಎಂದು ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನವಾಗಿತ್ತು. ಆದರೆ ಅವರು ದೇಶದಿಂದ ಪರಾರಿಯಾಗಿದ್ದು, ಸರ್ವಪಕ್ಷ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯಗಳನ್ನು ಮೀರಿದ್ದಾರೆ’ ಎಂದು ಪ್ರಮುಖ ವಿರೋಧ ಪಕ್ಷ ಟಿಎನ್‌ಎ ಆರೋಪಿಸಿದೆ.

‘ರಾನಿಲ್ ಅವರ ಬೆಂಬಲಕ್ಕಿರುವುದು ಒಬ್ಬ ಸಂಸದ ಮಾತ್ರ. ಹೀಗಿದ್ದೂ ಅವರು ಪ್ರಧಾನಿಯಾಗಿದ್ದಾರೆ. ಬೆಂಬಲವೇ ಇಲ್ಲದ ರಾನಿಲ್ ಅವರನ್ನೇ ಗೊಟಬಯ ಅವರು ಪ್ರಭಾರಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕ’ ಎಂದು ಟಿಎನ್‌ಎ ಆರೋಪಿಸಿದೆ.

ಸಿಂಗಪುರಕ್ಕೆ ಗೊಟಬಯ?:‘ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಮಾಲ್ಡೀವ್ಸ್‌ನಿಂದ ಸಿಂಗಪುರಕ್ಕೆ ಹೋಗಿ ದ್ದಾರೆ’ ಎಂದು ಶ್ರೀಲಂಕಾ ಸರ್ಕಾರದ ಉನ್ನತ ಮೂಲಗಳು ಹೇಳಿವೆ ಎಂದು ಶ್ರೀಲಂಕಾದ ಡೈಲಿ ಮೇಲ್ ವರದಿ ಮಾಡಿದೆ. ‘ಗೊಟಬಯ ಬುಧವಾರ ತಡರಾತ್ರಿ ಸಿಂಗಪುರಕ್ಕೆ ಹೋಗಲಿದ್ದಾರೆ. ಆ ನಂತರ ರಾಜೀನಾಮೆ ಸಲ್ಲಿಸಲಿದ್ದಾರೆ’ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಪರಾರಿ ದೃಢಪಡಿಸಿದ ವಾಯುಪಡೆ: ‘ಅಧ್ಯಕ್ಷ ಗೊಟಬಯ, ಅವರ ಪತ್ನಿ ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಅವರನ್ನು ವಾಯುಪಡೆಯ ವಿಮಾನದ ಮೂಲಕ ಮಾಲ್ಡೀವ್ಸ್‌ನ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿಸಲಾಗಿದೆ’ ಎಂದು ಶ್ರೀಲಂಕಾ ವಾಯುಪಡೆಯು ಬುಧವಾರ ಬೆಳಿಗ್ಗೆ ಹೇಳಿದೆ.

ದೇಶದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸದೆ, ದಿವಾಳಿಯಾಗಲು ಕಾರಣವಾಗಿರುವ ಕಾರಣ ಗೊಟಬಯ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಮತ್ತು ದೇಶದ ನಾಗರಿಕರು ಆಗ್ರಹಿಸುತ್ತಿದ್ದಾರೆ. ಗೊಟಬಯ ಅವರು ರಾಜೀನಾಮೆ ನೀಡದೇ ಇದ್ದ ಕಾರಣ, ನಾಗರಿಕರು ಕಳೆದ ವಾರ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಅದಕ್ಕೂ ಮುನ್ನವೇ ಗೊಟಬಯ ತಮ್ಮ ಕುಟುಂಬದವರೊಂದಿಗೆ ಅಲ್ಲಿಂದ ಪರಾರಿಯಾಗಿದ್ದರು.

ಕೊಲಂಬೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪರಾರಿ ಯಾಗಲು ಗೊಟಬಯ ಕುಟುಂಬ ಪ್ರಯತ್ನಿಸಿತ್ತು. ಆದರೆ ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಾರಣ, ಗೊಟಬಯ ಕುಟುಂಬ ರಹಸ್ಯ ಸ್ಥಳಕ್ಕೆ ಪರಾರಿಯಾಗಿತ್ತು.

ಗೊಟಬಯ ಅವರು ಮಾಲ್ಡೀವ್ಸ್‌ಗೆ ತೆರಳಲು ಅಲ್ಲಿಯ ಸಂಸತ್ತಿನ ಸ್ಪೀಕರ್ ಹಾಗೂ ಮಾಜಿ ಅಧ್ಯಕ್ಷ ಮೊಹಮ್ಮದ್ ನಷೀದ್ ನೆರವು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗೊಟಬಯ ಹಾಗೂ ಅವರ ಪತ್ನಿ ಇದ್ದ ಶ್ರೀಲಂಕಾ ವಾಯುಪಡೆಯ ಎಎನ್‌32 ವಿಮಾನವು ಮಾಲ್ಡೀವ್ಸ್‌ನಲ್ಲಿ ಇಳಿಯಲು ಮೊದಲಿಗೆ ಅವಕಾಶ ನಿರಾಕರಿಸಲಾಗಿತ್ತು. ಆದರೆ ನಷೀದ್ ಅನುಮೋದನೆ ಮೇರೆಗೆ ಮಾಲೆಯಲ್ಲಿ ವಿಮಾನ ಇಳಿಯಲು ಮಾಲ್ಡೀವ್ಸ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ.ಗೊಟಬಯ ಅವರು ಮಾಲ್ಡೀವ್ಸ್‌ಗೆ ಬಂದಿದ್ದಾರೆ ಎಂಬುದನ್ನು ಖಚಿತಪಡಿಸಲು ಅಲ್ಲಿನ ಅಧಿಕಾರಿಗಳು ಆರಂಭದಲ್ಲಿ ನಿರಾಕರಿಸಿದ್ದರು.

ಗೊಟಬಯ ಅವರು ಈಗಲೂ ಶ್ರೀಲಂಕಾ ಅಧ್ಯಕ್ಷ ಹುದ್ದೆಯಲ್ಲಿದ್ದು, ಅವರು ಮಾಲ್ಡೀವ್ಸ್‌ಗೆ ಬರಲು ಇಚ್ಛಿಸಿದರೆ ಅದನ್ನು ನಿರಾಕರಿಸಲಾಗದು ಎಂದು ಮಾಲ್ಡೀವ್ಸ್ ಸರ್ಕಾರ ಹೇಳಿದೆ. ಆದರೆ, ಮಾಲ್ಡೀವ್ಸ್‌ಗೆ ಬರಲು ಗೊಟಬಯ ಅವರಿಗೆ ಅವಕಾಶ ನೀಡಿದ್ದಕ್ಕೆ ಅಲ್ಲಿನ ವಿರೋಧಪಕ್ಷ ಎಂಎನ್‌ಪಿ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಸರ್ಕಾರದ ವಿವರಣೆ ಕೇಳಿ ಸಂಸತ್ತಿನಲ್ಲಿಗೊತ್ತುವಳಿ ಮಂಡಿಸುವುದಾಗಿ ತಿಳಿಸಿದೆ. ಗೊಟಬಯ ಅವರು ಮಾಲ್ಡೀವ್ಸ್‌ಗೆ ಬಂದಿದ್ದನ್ನು ವಿರೋಧಿಸಿ ಅಲ್ಲಿರುವ ಶ್ರೀಲಂಕಾದ ನಾಗರಿಕರು ಪ್ರತಿಭಟನೆ ನಡೆಸಿದರು. ‘ಸಂಕಷ್ಟದಲ್ಲಿರುವ ದೇಶದ ಜನರನ್ನು ಕೈಬಿಟ್ಟು ಪಲಾಯನ ಮಾಡಿ ಇಲ್ಲಿಗೆ ಬಂದಿರುವ ಅಧ್ಯಕ್ಷರನ್ನು ರಕ್ಷಿಸಬಾರದು’ ಎಂದು ಪ್ರತಿಭಟನಕಾರರು ಸರ್ಕಾರವನ್ನು ಆಗ್ರಹಿಸಿದರು.

ಒಮ್ಮತದ ಪ್ರಧಾನಿ ನಾಮನಿರ್ದೇಶನ ಮಾಡಿ: ರಾನಿಲ್‌

ಪ್ರಭಾರಿ ಅಧ್ಯಕ್ಷ ಮತ್ತು ಪ್ರಧಾನಿ ರಾನಿಲ್ ಅವರು, ‘ಆಡಳಿತ ಮತ್ತು ವಿರೋಧ ಪಕ್ಷಗಳು ಒಪ್ಪುವ ಒಮ್ಮತದ ವ್ಯಕ್ತಿಯನ್ನು ದೇಶದ
ಪ್ರಧಾನಿಯನ್ನಾಗಿ ನಾಮನಿರ್ದೇಶನ ಮಾಡಿ’ ಎಂದು ಸಂಸತ್ತಿನ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.ಪ್ರತಿಭಟನಕಾರರು ಪ್ರಧಾನಿ ಕಚೇರಿಯನ್ನು ವಶಕ್ಕೆ ಪಡೆದ ಬೆನ್ನಲ್ಲೇ ಅವರು ಈ ಮನವಿ ಸಲ್ಲಿಸಿದ್ದಾರೆ.

ಜಯಸೂರ್ಯ ಮನವಿ

‘ರಾನಿಲ್ ವಿಕ್ರಮಸಿಂಘೆ ಅವರು ಸ್ಪೀಕರ್ ಮಹಿಂದಾ ಯಾಪ ಅಬೇವರ್ದನ ಹಾಗೂ ಪ್ರತಿಪಕ್ಷದ ಮುಖಂಡ ಸಜಿತ್ ಪ್ರೇಮದಾಸ ಅವರ ಸಲಹೆಗಳನ್ನು ಕೇಳಬೇಕು’ ಎಂದು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಸಲಹೆ ನೀಡಿದ್ದಾರೆ. ನಿಗದಿಯಂತೆ ಲಂಕಾದಲ್ಲೇ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ನಿರಾಕರಣೆ

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಮಾಲ್ಡೀವ್ಸ್‌ಗೆ ಪ್ರಯಾಣಿಸಲು ಭಾರತ ನೆರವು ನೀಡಿದೆ ಎಂಬ ಆರೋಪವನ್ನುಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಸ್ಪಷ್ಟವಾಗಿ ತಳ್ಳಿಹಾಕಿದೆ. ಈ ಕುರಿತ ಮಾಧ್ಯಮಗಳ ವರದಿಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ಟ್ವೀಟ್ ಮಾಡಿದೆ.

ಶ್ರೀಲಂಕಾ: ದಿನದ ಬೆಳವಣಿಗೆಗಳು

lಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ತೆರಳಬೇಕಿದ್ದ 120ಕ್ಕೂ ಹೆಚ್ಚು ವಿಮಾನಗಳು ಕೇರಳದ ಕೊಚ್ಚಿ ಹಾಗೂ ತಿರುವನಂತರಪುರ ವಿಮಾನ ನಿಲ್ದಾಣಗಳಲ್ಲಿ ಇಳಿದಿವೆ

lಶ್ರೀಲಂಕಾದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿರುವ ಕಾರಣ, ಕಾನ್ಸುಲ್ ಸಲಹೆ–ಸೂಚನೆ ಸೇವೆಯನ್ನು ಶ್ರೀಲಂಕಾದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ರದ್ದುಗೊಳಿಸಿದೆ. ಬುಧವಾರ ಹಾಗೂ ಗುರುವಾರ ಈ ಸೇವೆಗಳು ಇರುವುದಿಲ್ಲ ಎಂದು ಟ್ವೀಟ್ ಮಾಡಿದೆ

lತುರ್ತು ಸೇವೆ ಒದಗಿಸುವ ಆಂಬುಲೆನ್ಸ್‌ಗಳಿಗೆ ಇಂಧನವನ್ನು ಪ್ರತ್ಯೇಕ ತೆಗೆದಿರಿಸುವಂತೆಶ್ರೀಲಂಕಾದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ (ಐಒಸಿ) ಸೂಚಿಸಿದೆ

lಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದು, ಔಷಧಗಳ ತೀವ್ರ ಕೊರತೆಯಿದೆ. ಹೀಗಾಗಿ ಅನಾರೋಗ್ಯಕ್ಕೆ ಈಡಾಗದಂತೆ ನೋಡಿಕೊಳ್ಳಿ ಎಂದು ಅಲ್ಲಿನ ವೈದ್ಯರು ನಾಗರಿಕರಿಗೆ ಸಲಹೆ ನೀಡಿದ್ದಾರೆ

lಭಾರತ ಹಾಗೂ ಶ್ರೀಲಂಕಾ ನಡುವಿನ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ ಎಂದು ಭಾರತದ ರಫ್ತು ಸಂಘಟನೆಗಳ ಒಕ್ಕೂಟ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT