ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ರಾಜಪಕ್ಸ ಬೆಂಬಲಿಗರ ಗೂಂಡಾಗಿರಿ; ಮಾಜಿ ಕ್ರಿಕೆಟಿಗರ ಆಕ್ರೋಶ

ಅಕ್ಷರ ಗಾತ್ರ

ಕೊಲಂಬೊ: ದ್ವೀಪ ರಾಷ್ಟ್ರದಲ್ಲಿ ನಡೆದಿರುವ ಹಿಂಸಾಚಾರವನ್ನು ಖಂಡಿಸಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗರು, ಗೂಂಡಾಗಿರಿಯ ವಿರುದ್ಧ ಕಿಡಿಕಾರಿದ್ದಾರೆ.

ಶ್ರೀಲಂಕಾದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಆಡಳಿತಾರೂಢ ಪಕ್ಷದ ಬೆಂಬಲಿಗರು ಹಲ್ಲೆ ನಡೆಸಿದ್ದು, ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆಯೂ ಘರ್ಷಣೆ ಉಂಟಾಗಿದೆ. ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಅದರ ಬೆನ್ನಲ್ಲೇ ದೇಶದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ ಹಾಗೂ ಕೊಲಂಬೊದಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನೆ ಕಾವೇರಿದ ಬೆನ್ನಲ್ಲೇ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ.

ಅಧ್ಯಕ್ಷರ ಕಚೇರಿಯ ಹೊರಭಾಗದಲ್ಲಿ ಪ್ರತಿಭಟನಾನಿರತರ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಆಡಳಿತಾರೂಢ ಪಕ್ಷದ ಬೆಂಬಲಿಗರು ಮಹಿಂದಾ ರಾಜಪಕ್ಸ ಅವರ ಅಧಿಕೃತ ನಿವಾಸದ ಹೊರಗೆ ಸೇರಿದ್ದರು.

ರಾಜಪಕ್ಸ ಸೋದರರನ್ನು ಟೀಕಿಸಿರುವ ಸನತ್‌ ಜಯಸೂರ್ಯ, 'ಹಾಡು ಹಗಲೇ ಮುಗ್ಧ ಪ್ರತಿಭಟನಾಕಾರರ ಮೇಲೆ ಈ ರೀತಿಯ ಆಕ್ರಮಣ ನಡೆಯುವುದಾಗಿ ಯೋಚಿಸಿಯೂ ಇರಲಿಲ್ಲ. ಪೊಲೀಸರು ಈ ದೇಶದ ಸಾರ್ವಜನಿಕರನ್ನು ರಕ್ಷಿಸಲು ಇರುವುದೇ ಹೊರತು, ಭ್ರಷ್ಟ ರಾಜಕಾರಣಿಗಳನ್ನು ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇದು ರಾಜಪಕ್ಸರ ಅಂತ್ಯ' ಎಂದು ಟ್ವೀಟಿಸಿದ್ದಾರೆ.

ಮಹೇಲ ಜಯವರ್ಧನೆ ಮತ್ತು ಕುಮಾರ್‌ ಸಂಗಾಕ್ಕರಾ ಸಹ ದಾಳಿ ನಡೆಸಿರುವವರನ್ನು 'ಘಾತುಕರು' ಎಂದು ಕರೆದಿದ್ದಾರೆ.

'ಈ ಘಾತುಕರು ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಬೆಳಿಗ್ಗೆ ಜೊತೆಗೂಡಿ, ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಅಮಾಯಕರ ಮೇಲೆ ದಾಳಿ ನಡೆಸಿದ್ದಾರೆ....ಇದೆಲ್ಲ ಹೇಗೆ ನಡೆಯಲು ಸಾಧ್ಯವಾಯಿತು? ಪೊಲೀಸರು ಮತ್ತು ಇತರರು ಇದನ್ನು ಕೇವಲ ನೋಡುತ್ತಿದ್ದರಷ್ಟೇ,' ಎಂದು ಜಯವರ್ಧನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತ ಪಕ್ಷದ ವಿರುದ್ಧ ನೇರ ಆರೋಪ ಮಾಡಿರುವ ಸಂಗಾಕ್ಕರಾ, 'ನಿಮ್ಮ ಬೆಂಬಲಿಗರಿಂದಲೇ ಹಿಂಸಾಚಾರ ನಡೆದಿದೆ–ಶಾಂತಿಯುತ ಪ್ರತಿಭಟನಾಕಾರರ ಮೇಲೆ ದಾಳಿ ಮಾಡುವುದಕ್ಕೂ ಮುನ್ನ ಗೂಂಡಾಗಳು ಮತ್ತು ಘಾತುಕರು ಮೊದಲು ನಿಮ್ಮ ಕಚೇರಿಗೆ ಬಂದಿದ್ದರು' ಎಂದು ಪ್ರಕಟಿಸಿದ್ದಾರೆ.

'ಜನರು ಸಂಯಮ ಕಾಯ್ದುಕೊಳ್ಳಬೇಕು, ಹಿಂಸೆಯಿಂದ ಹಿಂಸೆ ಮಾತ್ರವೇ ಸೃಷ್ಟಿಯಾಗುತ್ತದೆ' ಎಂದು ಮಹಿಂದಾ ರಾಜಪಕ್ಸ ಮಾಡಿದ್ದ ಟ್ವೀಟ್‌ಗೆ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ.

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಬೆಲೆ ಏರಿಕೆಯ ಬಿಸಿ ಜೊತೆಗೆ ಆಹಾರ, ಇಂಧನ ಹಾಗೂ ಔಷಧ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಇದರಿಂದ ತತ್ತರಿಸಿರುವ ಜನರು ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT