ಸೋಮವಾರ, ನವೆಂಬರ್ 30, 2020
26 °C

ಮಯನ್ಮಾರ್‌ ಮತದಾನ: ಮತ್ತೆ ಸೂಕಿ ನೇತೃತ್ವದ ಎನ್‌ಎಲ್‌ಡಿ ಗೆಲುವಿನ ನಿರೀಕ್ಷೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಯಾಂಗೂನ್‌: ಮಯನ್ಮಾರ್‌ ರಾಷ್ಟ್ರೀಯ ಸಂಸತ್‌ನ ಮೇಲ್ಮನೆ ಮತ್ತು ಕೆಳಮನೆಯ ಸ್ಥಾನಗಳಿಗಾಗಿ ಭಾನುವಾರ ಮತದಾನ ನಡೆದಿದ್ದು ಆಂಗ್‌ ಸಾನ್‌ ಸೂಕಿ ನೇತೃತ್ವದ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವು ಮತ್ತೆ ಅಧಿಕಾರದ ಗದ್ದುಗೆಗೆ ಏರುವ ನಿರೀಕ್ಷೆ ಇದೆ.

ಸಂಸತ್‌ನ ಮೇಲ್ಮನೆ ಮತ್ತು ಕೆಳ ಮನೆಯ ಸ್ಥಾನಗಳಿಗಾಗಿ 90ಕ್ಕೂ ಹೆಚ್ಚು ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಸೂಕಿ ಅವರ ಎನ್‌ಎಲ್‌ಡಿ ಪಕ್ಷವು 2015ರ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದಿತ್ತು. ಮಿಲಿಟರಿ ಬೆಂಬಲ ಹೊಂದಿರುವ ಯೂನಿಯನ್‌ ಸಾಲಿಡಾರಿಟಿ ಅಂಡ್‌ ಡೆವಲಪ್‌ಮೆಂಟ್‌ ಪಕ್ಷವು ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿತ್ತು.

ಮಯನ್ಮಾರ್‌ನ ಪ್ರಮುಖ ನಗರವಾಗಿರುವ ಯಾಂಗೂನ್‌ನಲ್ಲಿ ಮತದಾರರು ಅತ್ಯುತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಮತಗಟ್ಟೆಗೆ ಬರುವವರು ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಕೆಲವರು ಕೈಗವಸು ಹಾಗೂ ಫೇಸ್‌ ಶೀಲ್ಡ್‌ ಧರಿಸಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳೂ ಕಂಡುಬಂದವು. ಅಧಿಕಾರಿಗಳು ಮತ ಗಟ್ಟೆಗೆ ಬಂದವರ ದೇಹದ ಉಷ್ಣಾಂಶ ಪರೀಕ್ಷಿಸುವುದರ ಜೊತೆಗೆ ಎಲ್ಲರ ಕೈಗಳಿಗೂ ಸ್ಯಾನಿಟೈಸರ್‌ ಹಾಕುವುದರಲ್ಲಿ ನಿರತರಾಗಿರುವುದೂ ಕಂಡುಬಂತು.

75  ವರ್ಷ ವಯಸ್ಸಿನ ಸೂಕಿ ಹೋದ ತಿಂಗಳ ಅಂತ್ಯದಲ್ಲೇ ಮತ ಚಲಾಯಿಸಿದ್ದರು. ಸೋಮವಾರ ಬೆಳಿಗ್ಗೆ ಯಿಂದ ಚುನಾವಣಾ ಫಲಿತಾಂಶ ಪ್ರಕಟಿ ಸಲು ಆರಂಭಿಸುವುದಾಗಿ ಚುನಾವಣಾ ಆಯೋಗ ಹೇಳಿದೆ.

‘ಸೂಕಿ ಅವರ ಎನ್‌ಎಲ್‌ಡಿ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡುವಂತಹ ಪಕ್ಷವು ಚುನಾವಣಾ ಕಣದಲ್ಲಿಲ್ಲ. ಮಯನ್ಮಾರ್‌ನ ಹಲವು ಭಾಗಗಳಲ್ಲಿ  ಸೂಕಿ ಅವರನ್ನು ಆರಾಧಿಸುವ ಜನರಿದ್ದಾರೆ. ಅವರೆಲ್ಲಾ ಎನ್‌ಎಲ್‌ಡಿ ಬೆನ್ನಿಗೆ ನಿಲ್ಲುವುದು ಖಚಿತ. ಹೀಗಾಗಿ ಸೂಕಿ ಅವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ’ ಎಂದು ಯಾಂಗೂನ್‌ ಮೂಲದ ರಾಜಕೀಯ ವಿಶ್ಲೇಷಕ ರಿಚರ್ಡ್‌ ಹಾರ್ಸಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು