ಶುಕ್ರವಾರ, ಸೆಪ್ಟೆಂಬರ್ 24, 2021
24 °C

ತಾಲಿಬಾನ್‌ ಸರ್ಕಾರ ಇಂದಿನಿಂದ? ಧಾರ್ಮಿಕ ಮುಖಂಡ ಹೈಬತ್‌ಉಲ್ಲಾ ಸರ್ವೋಚ್ಚ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್‌, ಪೆಶಾವರ (ರಾಯಿಟರ್ಸ್‌/ಪಿಟಿಐ): ಅಫ್ಗಾನಿಸ್ತಾನದ ತಾಲಿಬಾನ್‌ ನೇತೃತ್ವದ ಸರ್ಕಾರ ರಚನೆಯ ಸಿದ್ಧತೆಯ ಬಹುತೇಕ ಪೂರ್ಣಗೊಂಡಿದೆ. ಇರಾನ್‌ ನಾಯಕತ್ವದ ಮಾದರಿಯನ್ನು ತಾಲಿಬಾನ್‌ ಕೂಡ ಅನುಸರಿಸಲಿದೆ ಎಂದು ತಿಳಿದು ಬಂದಿದೆ.

ತಾಲಿಬಾನ್‌ನ ಅತ್ಯುನ್ನತ ಧಾರ್ಮಿಕ ನಾಯಕ ಹೈಬತ್‌ಉಲ್ಲಾ ಅಖುಂಜಾದಾ, ಅಫ್ಗಾನಿಸ್ತಾನದ ಸರ್ವೋಚ್ಚ ನಾಯಕ ಎನಿಸಿಕೊಳ್ಳಲಿದ್ದಾರೆ ಎಂದು ತಾಲಿಬಾನ್‌ ಮುಖಂಡರೊಬ್ಬರು ತಿಳಿಸಿದ್ಧಾರೆ. 

ಹೈಬತ್‌ಉಲ್ಲಾ ಕೈಕೆಳಗೆ ಮೂವರು ನಾಯಕರು ಇರಲಿದ್ಧಾರೆ. ಅವರೆಂದರೆ, ಮೌಲವಿ ಯಾಕೂಬ್‌ (ತಾಲಿಬಾನ್‌ನ ಸ್ಥಾಪಕ ಮುಲ್ಲಾ ಒಮರ್‌ನ ಮಗ), ಸಿರಾಜುದ್ದೀನ್‌ ಹಖ್ಖಾನಿ (ಪ್ರಭಾವಿ ಹಖ್ಖಾನಿ ಗುಂಪಿನ ನಾಯಕ) ಮತ್ತು ಅಬ್ದುಲ್‌ ಘನಿ ಬರದರ್‌ (ತಾಲಿಬಾನ್‌ನ ಸ್ಥಾಪಕ ಸದಸ್ಯ).

‘ಸಮಾಲೋಚನೆಗಳು ಬಹುತೇಕ ಪೂರ್ಣಗೊಂಡಿವೆ. ಸಚಿವ ಸಂಪುಟದ ಬಗೆಗಿನ ಚರ್ಚೆಯೂ ಮುಗಿದಿದೆ’ ಎಂದು ತಾಲಿಬಾನ್‌ನ ವಾರ್ತಾ ಮತ್ತು ಸಂಸ್ಕೃತಿ ಆಯೋಗದ ಹಿರಿಯ ಅಧಿಕಾರಿ ಮುಫ್ತಿ ಇನಾಮುಲ್ಲಾ ಸಮಂಗನಿ ಹೇಳಿದ್ದಾರೆ. 

ಹೊಸ ಸರ್ಕಾರ ರಚನೆಯ ಬಗ್ಗೆ ಮೂರು ದಿನಗಳಲ್ಲಿ ಕಾಬೂಲ್‌ನಲ್ಲಿ ಘೋಷಣೆ ಪ್ರಕಟವಾಗಲಿದೆ. ಶುಕ್ರವಾರ ಮಧ್ಯಾಹ್ನ ನಂತರವೇ ಪ್ರಕಟವಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. 

 ಏನಿದು ಇರಾನ್ ಮಾದರಿ?
ಸರ್ವೋಚ್ಚ ನಾಯಕ ಎಂದು ಪರಿಗಣಿಸಲಾಗುವ ವ್ಯಕ್ತಿಯು ದೇಶದ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದ ಅತ್ಯುನ್ನತ ನಾಯಕ ಆಗಿರುತ್ತಾನೆ. ದೇಶದ ಅಧ್ಯಕ್ಷರಿಗಿಂತಲೂ ಈತನಿಗೆ ಮೇಲಿನ ಸ್ಥಾನ ಇರುತ್ತದೆ. ಸೇನೆ, ಸರ್ಕಾರ, ನ್ಯಾಯಾಂಗ ಎಲ್ಲದರ ಮುಖ್ಯಸ್ಥರನ್ನು ಈತ ನೇಮಿಸುತ್ತಾನೆ. ರಾಜಕೀಯ, ಧಾರ್ಮಿಕ, ಸೇನೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳಲ್ಲಿ ಸರ್ವೋಚ್ಚ ನಾಯಕನ ಮಾತೇ ಅಂತಿಮ. 

ಆಡಳಿತ ವ್ಯವಸ್ಥೆ ಹೇಗೆ?
ಪ್ರಾಂತ್ಯಗಳ ಆಳ್ವಿಕೆಯನ್ನು ಗವರ್ನರ್‌ಗಳು ನೋಡಿಕೊಳ್ಳಲಿದ್ದಾರೆ. ಜಿಲ್ಲೆಗಳಿಗೆ ಜಿಲ್ಲಾ ಗವರ್ನರ್‌ಗಳು ಆಡಳಿತಾಧಿಕಾರಿಗಳಾಗಿರುತ್ತಾರೆ. ಬಹುತೇಕ ಪ್ರಾಂತ್ಯಗಳ ಗವರ್ನರ್‌ಗಳ ನೇಮಕವನ್ನು ತಾಲಿಬಾನ್‌ ಪೂರ್ಣಗೊಳಿಸಿದೆ. ಪ್ರಾಂತ್ಯ ಮತ್ತು ಜಿಲ್ಲೆಗಳ ಪೊಲೀಸ್‌ ಮುಖ್ಯಸ್ಥ ಹುದ್ದೆಗಳ ನೇಮಕವೂ ಆಗಿದೆ. 

ಹೊಸ ಆಡಳಿತ ವ್ಯವಸ್ಥೆಯ ಹೆಸರು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಇನ್ನಷ್ಟೇ ಅಂತಿಮ ಆಗಬೇಕಿದೆ. 

 ಭಾರತದ ಜತೆ ಗೆಳೆತನ

* ಭಾರತ, ಐರೋಪ್ಯ ಒಕ್ಕೂಟ ಮತ್ತು ಅಮೆರಿಕದ ಜತೆಗೆ ಗೆಳೆತನ ಹೊಂದಲಾಗುವುದು ಎಂದು ಉಪನಾಯಕ ಶೇರ್‌ ಮೊಹಮ್ಮದ್‌ ಹೇಳಿದ್ದಾರೆ

* ತಾಲಿಬಾನ್‌ ದೋಹಾದಲ್ಲಿ ಹೊಂದಿರುವ ರಾಜಕೀಯ ಕಚೇರಿಯು ಭಾರತ ಸೇರಿ ವಿವಿಧ ದೇಶಗಳ ಜತೆಗೆ ಸಂಪರ್ಕದಲ್ಲಿದೆ

* ಸರ್ವೋಚ್ಚ ನಾಯಕ ಹೈಬತ್‌ಉಲ್ಲಾ ಅವರು ತಾಲಿಬಾನ್‌ನ ಭದ್ರಕೋಟೆ ಕಂದಹಾರ್‌ನಿಂದಲೇ ಕಾರ್ಯಾಚರಣೆ ನಡೆಸಲಿದ್ದಾರೆ

* ಕಾಬೂಲ್‌ನಲ್ಲಿರುವ ಅಧ್ಯಕ್ಷರ ಅರಮನೆಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ತಾಲಿಬಾನ್‌ ಪದಾಧಿಕಾರಿ ಅಹ್ಮದುಲ್ಲಾ ಮುತ್ತಕಿ ಹೇಳಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು