ಮಂಗಳವಾರ, ಸೆಪ್ಟೆಂಬರ್ 28, 2021
21 °C

ವಿರೋಧಿಗಳ ಆಡಳಿತವಿದ್ದಾಗಲೂ ಕಾಬೂಲ್‌ನಲ್ಲೇ ಭೂಗತವಾಗಿದ್ದೆ: ತಾಲಿಬಾನ್‌ ವಕ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್:‌ ಅಫ್ಗಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮದವರೆದುರು ಕಾಣಿಸಿಕೊಂಡಿರುವ ತಾಲಿಬಾನ್‌ ವಕ್ತಾರ ಜಬೀವುಲ್ಲಾ ಮುಜಾಹಿದ್‌, ವಿರೋಧಿಗಳ ಆಡಳಿತವಿದ್ದಾಗಲೂ ದೇಶದಲ್ಲೇ ಭೂಗತವಾಗಿದ್ದೆ ಎಂದು ಹೇಳಿಕೊಂಡಿದ್ದಾನೆ.

ʼಅವರು (ಯುಎಸ್‌ ಮತ್ತು ಅಫ್ಗಾನಿಸ್ತಾನ ರಾಷ್ಟ್ರೀಯ ಪಡೆಗಳು) ನನ್ನನ್ನು ಹಿಡಿಯಲು ನಡೆಸಿದ ಸಾಕಷ್ಟು ದಾಳಿ ವೇಳೆ ತಪ್ಪಿಸಿಕೊಂಡಿದ್ದೆ. ನಾನು ನಿಜವಾಗಿಯೂ ಬದುಕಿಲ್ಲ ಎಂದು ಅವರು ಭಾವಿಸಿದ್ದರುʼ ಎಂದು ಮುಜಾಹಿದ್ ಸಂದರ್ಶನದಲ್ಲಿ ಹೇಳಿರುವುದಾಗಿ‌ ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಪತ್ರಿಕೆ ವರದಿ ಮಾಡಿದೆ.

ಮುಂದುವರಿದು, ವಿರೋಧಿಗಳ ಕಣ್ಗಾವಲಿದ್ದರೂ ತಾನು ಅಫ್ಗಾನಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ಯಶಸ್ವಿಯಾಗಿದ್ದೆ ಎಂದು 43 ವರ್ಷದ ಮುಜಾಹಿದ್‌‌ ಹೇಳಿದ್ದಾನೆ.

ʼಬಹಳ ಕಾಲ ಕಾಬೂಲ್‌ನಲ್ಲೇ ಇದ್ದೆ. ವೈರಿಗಳ ಕಣ್ಗಾವಲಿದ್ದರೂ ದೇಶದ ಉದ್ದಗಲಕ್ಕೂ ಸಂಚರಿಸುತ್ತಿದ್ದೆ. ತಾಲಿಬಾನ್‌ ಚಟುವಟಿಕೆಗಳ ಪ್ರತಿಯೊಂದು ಮಾಹಿತಿಯನ್ನೂ ಪಡೆದುಕೊಳ್ಳುತ್ತಿದ್ದೆ. ಇದು ನಮ್ಮ ವಿರೋಧಿಗಳಿಗೆ ಗೊಂದಲ ಉಂಟುಮಾಡಿತ್ತುʼ ಎಂದೂ  ವಿವರಿಸಿದ್ದಾನೆ.

ʼನನ್ನ ಬಗ್ಗೆ ಮಾಹಿತಿ ಪಡೆಯಲು ಯುಎಸ್‌ ಪಡೆಗಳು ಸ್ಥಳೀಯರಿಗೆ ಹಣ ನೀಡುತ್ತಿದ್ದವು. ನಾನು ಮೊದಲೇ ಹೇಳಿದಂತೆ ನನ್ನನ್ನು ಹಿಡಿಯಲು ಗುಪ್ತಚರ ಮಾಹಿತಿ ಆಧರಿಸಿ ಸಾಕಷ್ಟು ಸಲ ದಾಳಿ ನಡೆಸಲಾಗಿತ್ತುʼ ಎಂದಿದ್ದಾನೆ. ಮುಂದುವರಿದು, ʼಆದಾಗ್ಯೂ, ನಾನು ಅಫ್ಗಾನಿಸ್ತಾನದಿಂದ ಪಲಾಯನ ಅಥವಾ ಪಲಾಯನ ಮಾಡುವ ಪ್ರಯತ್ನವನ್ನೂ ಮಾಡಲಿಲ್ಲ. ಆ ರೀತಿಯ ಆಲೋಚನೆಯನ್ನೂ ಮಾಡಲಿಲ್ಲʼ ಎಂದು ಹೇಳಿಕೊಂಡಿದ್ದಾನೆ.

ಪಕ್ತಿಯಾ ಪ್ರಾಂತ್ಯದ ಗಾರ್ದೆಜ್‌ ಜಿಲ್ಲೆಯಲ್ಲಿ 1978ರಲ್ಲಿ ಜನಿಸಿದ ಮುಜಾಹಿದ್‌, ಈಶಾನ್ಯ ಪಾಕಿಸ್ತಾನದಲ್ಲಿರುವ ಹಕ್ಕಾನಿಯಾ ಸೆಮಿನರಿಯಲ್ಲಿ ಇಸ್ಲಾಮಿಕ್‌ ನ್ಯಾಯಶಾಸ್ತ್ರ ಓದಿಕೊಂಡಿರುವುದಾಗಿಯೂ ಹೇಳಿದ್ದಾನೆ.

ಇವನ್ನೂ ಓದಿ​* 

​* 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು