ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನಿಗೆ ಅವಮಾನ: ಮಹಿಳೆಗೆ 43 ವರ್ಷ ಜೈಲು ಶಿಕ್ಷೆ

Last Updated 19 ಜನವರಿ 2021, 12:09 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ರಾಜನಿಗೆ ಅವಮಾನ ಮಾಡಿದ ಕಾರಣಕ್ಕಾಗಿ ನಾಗರಿಕ ಸೇವೆಯಮಾಜಿ ಅಧಿಕಾರಿಯೊಬ್ಬರಿಗೆ ಥಾಯ್ಲೆಂಡ್‌ನ ನ್ಯಾಯಾಲಯವೊಂದು ಮಂಗಳವಾರ 43 ವರ್ಷ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ರಾಜಪ್ರಭುತ್ವದ ವಿರುದ್ಧ ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ನಲ್ಲಿ ಆಡಿಯೊ ಕ್ಲಿಪ್‌ ಒಂದನ್ನು ಪೋಸ್ಟ್‌ ಮಾಡಿದ ಪ್ರಕರಣದಲ್ಲಿ ಮಹಿಳೆಯೊಬ್ಬರು ಅಪರಾಧಿ ಎಂದು ಬ್ಯಾಂಕಾಕ್‌ ಅಪರಾಧ ನ್ಯಾಯಾಲಯವು ತೀರ್ಪು ನೀಡಿದೆ ಎಂದು ಮಾನವ ಹಕ್ಕುಗಳ ಪರ ವಕೀಲರು ಹೇಳಿದರು.

‘ನ್ಯಾಯಾಲಯದ ತೀರ್ಮಾನವು ಆಘಾತಕಾರಿಯಾಗಿದೆ ಹಾಗೂ ರಾಜಪ್ರಭುತ್ವದ ವಿರುದ್ಧ ಟೀಕಿಸುವವರನ್ನು ಸಹಿಸಲು ಸಾಧ್ಯವಿಲ್ಲ ಹಾಗೂ ಅವರಿಗೆ ಕಠಿಣ ಶಿಕ್ಷೆಯೂ ಆಗಲಿದೆ ಎನ್ನುವ ಸಂದೇಶವನ್ನು ಇದು ರವಾನಿಸಿದೆ’ ಎಂದು ಹ್ಯೂಮನ್‌ ರೈಟ್ಸ್‌ ವಾಚ್‌ ತಂಡದ ಹಿರಿಯ ಸಂಶೋಧಕ ಸುನೈ ಫಸುಕ್‌ ಹೇಳಿದರು.

ವಿಧಿ 112 ರಂದು ಗುರುತಿಸಲ್ಪಡುವ ಈ ಕಾನೂನನ್ನು ಉಲ್ಲಂಘಿಸಿದರೆ ಪ್ರತಿ ಆಪಾದನೆಗೂ 3 ರಿಂದ 15 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಕೇವಲ ಫೇಸ್‌ಬುಕ್‌ ಪೋಸ್ಟ್‌ ಒಂದನ್ನು ಲೈಕ್‌ ಮಾಡಿದರೂ ಅವರು ಶಿಕ್ಷೆಗೊಳಪಡುವ ಸಾಧ್ಯತೆ ಇರುವುದರಿಂದ ಸಾಕಷ್ಟು ವಿವಾದಾತ್ಮಕ ಕಾನೂನು ಇದಾಗಿದೆ.

ಜೊತೆಗೆ ಯಾವುದಾದರೂ ವ್ಯಕ್ತಿಯ ವಿರುದ್ಧ ಈ ಕಾನೂನಿನಡಿ ದೂರು ದಾಖಲಾದರೆ ಹಲವು ವರ್ಷ ಆ ವ್ಯಕ್ತಿ ಕಾನೂನು ವಿಚಾರಣೆಗೊಳಪಡಬೇಕಾಗುತ್ತದೆ. ಥಾಯ್ಲೆಂಡ್‌ನ 15 ವರ್ಷಗಳ ರಾಜಕೀಯ ಅಶಾಂತಿಯ ಸಂದರ್ಭದಲ್ಲಿ ಈ ಕಾನೂನನ್ನು ರಾಜಕೀಯ ಅಸ್ತ್ರವಾಗಿ ಹಾಗೂ ವೈಯಕ್ತಿಕ ಸೇಡು ತೀರಿಸಿಕೊಳ್ಳಲೂ ಬಳಸಲಾಗಿದೆ.

ಹೀಗಿದ್ದರೂ, ರಾಜಪ್ರಭುತ್ವವನ್ನು ಸಾರ್ವಜನಿಕವಾಗಿ ಟೀಕಿಸುವುದು ಇಲ್ಲಿಯವರೆಗೂ ಬಹಳ ವಿರಳವಾಗಿತ್ತು. ಕಳೆದ ವರ್ಷದಿಂದ ಯುವ ಪ್ರತಿಭಟನಕಾರರು ಪ್ರಜಾಪ್ರಭುತ್ವ ಸುಧಾರಣೆ ಹಾಗೂ ರಾಜಪ್ರಭುತ್ವ ಸುಧಾರಣೆಗೆ ಆಗ್ರಹಿಸಿದ ಬಳಿಕ ರಾಜಪ್ರಭುತ್ವವನ್ನು ಟೀಕಿಸುವ ಪ್ರಕರಣಗಳು ಹೆಚ್ಚಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT