ಗುರುವಾರ , ಫೆಬ್ರವರಿ 9, 2023
30 °C
ಜಿ–20 ದೇಶಗಳ ಶೃಂಗ ಸಭೆ

ಇಂದಿನ ರಸಗೊಬ್ಬರ ಸಮಸ್ಯೆ, ಮುಂದಿನ ಆಹಾರ ಭದ್ರತೆಯ ಸವಾಲು: ಮೋದಿ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಬಾಲಿ: ಇಂದು ಜಗತ್ತನ್ನು ಕಾಡುತ್ತಿರುವ ರಸಗೊಬ್ಬರ ಕೊರತೆಯು ನಾಳೆ ಆಹಾರ ಬಿಕ್ಕಟ್ಟಾಗಿ ಪರಿವರ್ತನೆ ಆಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಎಚ್ಚರಿಸಿದ್ದಾರೆ.

ಈ ಸಮಸ್ಯೆ ಪರಿಹಾರಕ್ಕಾಗಿ ರಸ ಗೊಬ್ಬರ ಮತ್ತು ಆಹಾರ ಧಾನ್ಯ ಪೂರೈಕೆಯು ಸುಲಲಿತವಾಗಿ ನಡೆಯು ವಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ಕೊಟ್ಟಿದ್ದಾರೆ.

ಇಂಡೊನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ–20 ದೇಶಗಳ ಶೃಂಗ ಸಭೆಯನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಿದರು. 

‘ರಸಗೊಬ್ಬರ ಕೊರತೆಯು ಆಹಾರ ಸಮಸ್ಯೆಯಾಗಿ ಪರಿವರ್ತನೆ ಆದರೆ, ಈ ಸಮಸ್ಯೆಗೆ ಜಗತ್ತಿನ ಬಳಿ ಪರಿಹಾರವೇ ಇಲ್ಲ ಎಂದು ಮೋದಿ ಹೇಳಿದ್ದಾರೆ. ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆ ಸರಪ‍ಣಿಯು ಸುಗಮವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ನಾವು ಪರಸ್ಪರ ಒಪ್ಪಂದಗಳನ್ನು ಮಾಡಿ ಕೊಳ್ಳಬೇಕು. ಭಾರತವು ಆಹಾರ ಭದ್ರತೆಯ ಸುಸ್ಥಿರತೆಗಾಗಿ ಸಹಜ ಕೃಷಿ ಮತ್ತು ಸಾಂಪ್ರದಾಯಿಕವಾದ ಸಿರಿಧಾನ್ಯ ಬಳಕೆಯನ್ನು ಉತ್ತೇಜಿಸುತ್ತಿದೆ’ ಎಂದು ಮೋದಿ ವಿವರಿಸಿದ್ದಾರೆ. 

ರಷ್ಯಾ–ಉಕ್ರೇನ್‌ ಯುದ್ಧದಿಂದಾಗಿ ಜಗತ್ತಿನ ಹಲವು ದೇಶಗಳು ಈಗಾಗಲೇ ಆಹಾರದ ಕೊರತೆ ಎದುರಿಸುತ್ತಿವೆ. ಉಕ್ರೇನ್‌ ಗೋಧಿ ಉತ್ಪಾದಿಸುವ ಪ್ರಮುಖ ದೇಶವಾಗಿದೆ. ಆದರೆ, ಯುದ್ಧದ ಕಾರಣದಿಂದಾಗಿ ಆ ದೇಶವು ಗೋಧಿ ರಫ್ತನ್ನು ನಿಲ್ಲಿಸಿದೆ. 

ಯುದ್ಧ ಮತ್ತು ಇತರ ಕಾರಣಗಳಿಂದಾಗಿ ರಸಗೊಬ್ಬರ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಯುದ್ಧದಿಂದಾಗಿ ನೈಸರ್ಗಿಕ ಅನಿಲದ ದರದಲ್ಲಿ ಭಾರಿ ಏರಿಕೆ ಆಗಿದೆ.  ಪೂರೈಕೆಯಲ್ಲಿಯೂ ವ್ಯತ್ಯಯ ಆಗಿದೆ. ಹಾಗಾಗಿ ಯುರೋಪ್‌ನ ರಸಗೊಬ್ಬರ ಉತ್ಪಾದಿಸುವ ಹಲವು ಕಾರ್ಖಾನೆಗಳು ನೈಟ್ರೋಜನ್ ಆಧಾರಿತವಾದ ರಸಗೊಬ್ಬರ ತಯಾರಿಕೆಯನ್ನು ನಿಲ್ಲಿಸಿವೆ. ರಸಗೊಬ್ಬರ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಪೂರೈಕೆಯೂ ಸುಲಲಿತವಾಗಿ ಆಗುತ್ತಿಲ್ಲ. ಹಲವು ಕಾರ್ಖಾನೆಗಳು ತಯಾರಿಕೆ ನಿಲ್ಲಿಸಲು ಇದು ಕಾರಣವಾಗಿದೆ.

ಜಗತ್ತಿನಲ್ಲಿಯೇ ಅತಿ ಹೆಚ್ಚು ರಸಗೊಬ್ಬರ ರಫ್ತು ಮಾಡುವ ದೇಶ ರಷ್ಯಾ. ಆದರೆ, ರಷ್ಯಾದಿಂದ ರಸಗೊಬ್ಬರ ಸರಾಗವಾಗಿ ಪೂರೈಕೆ ಆಗುತ್ತಿಲ್ಲ. 

ಯುದ್ಧವಿರೋಧಿ ಘೋಷಣೆ ಸಾಧ್ಯತೆ: ‘ಈಗಿನದ್ದು ಯುದ್ಧದ ಯುಗ ಆಗಬಾರದು’ ಎಂಬ ಘೋಷಣೆ ಹೊರಡಿಸಲು ಜಿ–20 ನಾಯಕರು ಸಜ್ಜಾಗಿದ್ದಾರೆ ಎಂದು ಬ್ರಿಟನ್‌ನ ಪ‍ತ್ರಿಕೆ ಫೈನಾನ್ಶಿಯಲ್‌ ಟೈಮ್ಸ್ ವರದಿ ಮಾಡಿದೆ. ಈ ಕುರಿತ ಕರಡು ಹೇಳಿಕೆ ಸಿದ್ಧವಾಗಿದೆ. ಅದನ್ನು ಅಂತಿಮಗೊಳಿಸಲು ಮಾತುಕತೆ ನಡೆಯುತ್ತಿದೆ ಎಂದು ವರದಿಯಲ್ಲಿ ಇದೆ. 

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರಿಗೆ ಇದೇ ಅರ್ಥ ಬರುವ ಮಾತನ್ನು ಸೆಪ್ಟೆಂಬರ್‌ನಲ್ಲಿ ಹೇಳಿದ್ದರು. 

ಮೋದಿ ಮತ್ತು ಪುಟಿನ್‌ ಅವರು ಉಜ್ಬೆಕಿಸ್ತಾನದಲ್ಲಿ ಸೆಪ್ಟೆಂಬರ್‌ನಲ್ಲಿ ಭೇಟಿಯಾಗಿದ್ದರು. ಸಂಘರ್ಷ ಕೊನೆಗೊಳಿಸುವಂತೆ ಮೋದಿ ಅವರು ಪುಟಿನ್‌ ಅವರನ್ನು ಆಗ ಒತ್ತಾಯಿಸಿದ್ದರು. 

‘ಇದು ಯುದ್ಧದ ಯುಗವಲ್ಲ’ ಎಂಬ ಘೋಷಣೆ ಸಿದ್ಧಪಡಿಸುವ ವಿಚಾರದಲ್ಲಿಯೂ ಭಾರತದ ನಿಯೋಗವು ಮಹತ್ವದ ಪಾತ್ರ ವಹಿಸಿದೆ ಎಂದು ಫೈನಾನ್ಶಿಯಲ್‌ ಟೈಮ್ಸ್ ವರದಿ ಹೇಳಿದೆ. 

ತೊಡಕು ನಿವಾರಿಸಿ: ವಿಶ್ವಸಂಸ್ಥೆ ಪತ್ರ
ರಷ್ಯಾದ ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ರಫ್ತಿಗೆ ಇರುವ ತೊಡಕುಗಳನ್ನು ನಿವಾರಿಸಬೇಕು ಎಂದು ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಕ್ಕೆ ಪತ್ರ ಬರೆದಿರುವುದಾಗಿ ವಿಶ್ವಸಂಸ್ಥೆಯು ತಮಗೆ ತಿಳಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗೈ ಲಾವ್ರೋವ್‌ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರೆಸ್‌ ಅವರು ಈ ಕುರಿತು ತಮಗೆ ಭರವಸೆ ನೀಡಿದ್ದಾರೆ ಎಂದೂ ಲಾವ್ರೋವ್‌ ತಿಳಿಸಿದ್ದಾರೆ. 

ರಷ್ಯಾದ ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಮೇಲೆ ಪಶ್ಚಿಮದ ದೇಶಗಳು ನೇರ ನಿರ್ಬಂಧ ಹೇರಿಲ್ಲ. ಆದರೆ, ಬಂದರುಗಳ ಸಂಪರ್ಕ, ಹಣಕಾಸು ಮತ್ತು ವಿಮಾ ನಿರ್ಬಂಧದ ಕಾರಣಕ್ಕೆ ಧಾನ್ಯಗಳು ಮತ್ತು ರಸಗೊಬ್ಬರಗಳ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ರಷ್ಯಾ ದೂರಿದೆ. ರಷ್ಯಾದ ಧಾನ್ಯಗಳ ವ್ಯಾಪಾರ ನಡೆಸುತ್ತಿರುವವರ ಮೇಲೆ ನಿರ್ಬಂಧ ಹೇರುವುದಿಲ್ಲ ಎಂಬ ಭರವಸೆಯನ್ನು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ಲಿಖಿತವಾಗಿ ನೀಡಿವೆ ಎಂದೂ ಗುಟೆರೆಸ್ ಹೇಳಿದ್ದಾಗಿ ಲಾವ್ರೋವ್‌ ತಿಳಿಸಿದ್ದಾರೆ.

ಈ ಭರವಸೆ ಈಡೇರಿಕೆಯಾದರೆ ರಸಗೊಬ್ಬರ ಮತ್ತು ಧಾನ್ಯ ಪೂರೈಕೆಗೆ ಇರುವ ಎಲ್ಲ ತೊಡಕುಗಳು ನಿವಾರಣೆ ಆಗಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು