ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್ ಟ್ರಂಪ್‌ಗೆ ಆಂಟಿ ವೈರಲ್ ಡ್ರಗ್‌: ಆಸ್ಪತ್ರೆಯಿಂದಲೇ ಕೆಲಸ

ಕೊರೊನಾ ಸೋಂಕು: ವೈದ್ಯಾಧಿಕಾರಿಗಳು ಮತ್ತು ತಜ್ಞರ ಸಲಹೆ
Last Updated 3 ಅಕ್ಟೋಬರ್ 2020, 8:23 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೊರೊನಾ ಸೋಂಕು ದೃಢಪಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ತೀವ್ರ ಅನಾರೋಗ್ಯಕ್ಕೀಡಾಗುವುದನ್ನು ನಿಗ್ರಹಿಸುವುದಕ್ಕಾಗಿ ಪ್ರಾಯೋಗಿಕ ವೈರಾಣು ನಿಗ್ರಹ ಔಷಧವನ್ನು (ಆಂಟಿ ವೈರಲ್ ಡ್ರಗ್‌) ನೀಡಲಾಗುತ್ತಿದೆ.

ಶಸ್ತ್ರಚಿಕಿತ್ಸಕರ ಮನವಿಯಂತೆ ‘ಸಹಾನುಭೂತಿ ಉಪಯೋಗ‘ದ ಅಡಿಯಲ್ಲಿ ಟ್ರಂಪ್ ಅವರಿಗೆ ಐವಿ ಮೂಲಕ ನೀಡುವುದಕ್ಕಾಗಿ ಒಂದು ಡೋಸೇಜ್‌ ಔಷಧವನ್ನು ಪೂರೈಸುತ್ತಿದ್ದೇವೆ ಎಂದು ಔಷಧ ತಯಾರಕ ಕಂಪನಿ ರಿಜೆನರೋನ್‌ ಫಾರ್ಮಾಸ್ಯುಟಿಕಲ್ಸ್ ಹೇಳಿದೆ. ಸಾಮಾನ್ಯವಾಗಿ ಇಂಥ ಪ್ರಾಯೋಗಿಕ ಔಷಧಗಳನ್ನು ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ನೀಡಲಾಗುತ್ತದೆ. ನಂತರ ಔಷಧ ತೆಗೆದುಕೊಂಡವರ ಮೇಲೆ ಅಧ್ಯಯನ ಮುಂದುವರಿಯುತ್ತದೆ.

ಈ ಹೊಸ ಔಷಧ ಕೊನೆಯ ಹಂತದ ಪರೀಕ್ಷೆಯಲ್ಲಿದೆ. ಅದರ ಸುರಕ್ಷತೆ ಮತ್ತು ಪರಿಣಾಮಕಾರಿ ಅಂಶಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಕೊರೊನಾ ಸೋಂಕಿನಿಂದ ಉಂಟಾಗಬಹುದಾದ ಗಂಭೀರ ಅನಾರೋಗ್ಯ ನಿಯಂತ್ರಣಕ್ಕೆ ಇನ್ನೂ ಯಾವುದೇ ಚಿಕಿತ್ಸೆ ಲಭ್ಯವಾಗಿಲ್ಲ.

ಸೋಂಕು ದೃಢಪಟ್ಟ ನಂತರ ಟ್ರಂಪ್ ಅವರನ್ನು ವಾಲ್ಟರ್‌ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯುವ ಮುನ್ನ ಶ್ವೇತಭವನದಲ್ಲಿ ಅವರಿಗೆ ಈ ಪ್ರಾಯೋಗಿಕ ಔಷಧ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ,ಟ್ರಂಪ್ ಅವರಿಗೆ ಸ್ವಲ್ಪ ಆಯಾಸದ ಜತೆಗೆ, ಸೋಂಕಿನ ಸೌಮ್ಯ ಲಕ್ಷಣಗಳಿವೆ.

ವಾಲ್ಟರ್‌ ರೀಡ್‌ನಿಂದಲೇ ಕಾರ್ಯನಿರ್ವಹಣೆ
ಕೊರೊನಾ ಸೋಂಕು ದೃಢಪಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಇಲ್ಲಿನ ವಾಲ್ಟರ್‌ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರದಲ್ಲಿ ದಾಖಲಾಗಿದ್ದು, ಈ ಆಸ್ಪತ್ರೆಯಿಂದಲೇ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಆಸ್ಪತ್ರೆಯ ವೈದ್ಯರು ಮತ್ತು ತಜ್ಞರ ಸಲಹೆ ಮತ್ತು ಸೂಚನೆಯಂತೆ ಅಧ್ಯಕ್ಷ ಟ್ರಂಪ್ ಅವರು ಕೆಲವು ದಿನಗಳ ಕಾಲ ವಾಲ್ಟರ್‌ ರೀಡ್‌ ಸೇನಾ ಆಸ್ಪತ್ರೆಯಲ್ಲಿರುವ ಅಧ್ಯಕ್ಷೀಯ ಕಚೇರಿಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ‘ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕಾಯ್‌ಲೇಹ್ ಮೆಕೆನನೈ ತಿಳಿಸಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟನಂತರ ಟ್ರಂಪ್ ಅವರು, ವಾಷಿಂಗ್ಟನ್‌ನ ಮೇರಿಲ್ಯಾಂಡ್‌ನ ಉಪನಗರ ಬೆಥೆಸ್ಡಾದಲ್ಲಿರುವ ವಾಲ್ಟರ್‌ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರಕ್ಕೆ ದಾಖಲಾಗಿದ್ದರು.

ಗಂಭೀರತೆ ಅರಿಯಿರಿ: ಟ್ರಂಪ್‌ ಅವರಿಗೆ ಸೋಂಕು ತಗುಲಿದೆ ಎಂದರೆ ಅದರ ಗಂಭೀರತೆಯನ್ನು ಅರಿತುಕೊಳ್ಳಬೇಕು ಎಂದು ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್‌ ಹೇಳಿದ್ದಾರೆ.

ಮುಖಗವುಸು ಧರಿಸಿ, ಆಗಾಗ್ಗೆ ಕೈ ತೊಳೆಯಿರಿ ಮತ್ತು ಅಂತರ ಕಾಯ್ದುಕೊಳ್ಳಿ ಎಂದು ಅವರು ಜನರಿಗೆ ಒತ್ತಾಯಿಸಿದ್ದಾರೆ ಅಲ್ಲದೆ ಟ್ರಂಪ್‌ ಬೇಗ ಗುಣಮುಖರಾಗಲಿ ಎಂದೂ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT