ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ಪತಂಜಲಿಯ ಎರಡು ಟಿವಿ ಚಾನೆಲ್‌ಗಳಿಗೆ ಚಾಲನೆ: ನೋಂದಣಿ ಬಗ್ಗೆ ವಿವಾದ

Last Updated 21 ನವೆಂಬರ್ 2021, 10:21 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದಲ್ಲಿ ಯೋಗ ಗುರು ರಾಮದೇವ್‌ ಮಾಲೀಕತ್ವದ ಎರಡು ಟಿವಿ ಚಾನೆಲ್‌ಗಳನ್ನು ಆರಂಭಿಸಲಾಗಿದ್ದು, ನೋಂದಣಿ ಮಾಡಿಸದೆಯೇ ಕಾರ್ಯಾಚರಣೆ ಆರಂಭಿಸಿರುವುದು ವಿವಾದಕ್ಕೆ ಕಾರಣವಾಗಿರುವುದಾಗಿ ವರದಿಯಾಗಿದೆ.

'ಆಸ್ಥಾ ನೇಪಾಳ ಟಿವಿ ಮತ್ತು ಪತಂಜಲಿ ನೇಪಾಳ ಟಿವಿ' ಎರಡು ಟಿವಿ ಚಾನೆಲ್‌ಗಳಿಗೆ ಶುಕ್ರವಾರ ನೇಪಾಳದ ಪ್ರಧಾನಿ ಶೇರ್‌ ಬಹದ್ದೂರ್‌ ದೇವುಬಾ ಅವರು ಚಾಲನೆ ನೀಡಿದ್ದರು. ಬಾಬಾ ರಾಮದೇವ್‌, ಆಚಾರ್ಯ ಬಾಲಕೃಷ್ಣ ಹಾಗೂ ಪ್ರಮುಖ ಪಕ್ಷಗಳ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನೇಪಾಳದ ಕಾನೂನಿನ ಪ್ರಕಾರ, ಮಾಧ್ಯಮ ಮತ್ತು ಚಲನಚಿತ್ರ ವಲಯಗಳಲ್ಲಿ ವಿದೇಶಿ ಹೂಡಿಕೆಗೆ ಅವಕಾಶವಿಲ್ಲ. ಈಗ ನೇಪಾಳದಲ್ಲಿ ಆರಂಭಿಸಲಾಗಿರುವ ಎರಡೂ ಹೊಸ ಚಾನೆಲ್‌ಗಳಿಗೆ ಪತಂಜಲಿ ಕಂಪನಿಯು ಹೂಡಿಕೆ ಮಾಡಿದ್ದು, ರಾಮದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ಅವರು ಪ್ರಮುಖ ಪ್ರವರ್ತಕರಾಗಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೊಗಾನ್‌ ಬಹದ್ದೂರ್‌ ಹಮಾಲ್‌ ಈ ಕುರಿತು ಪ್ರತಿಕ್ರಿಯಿಸಿದ್ದು, 'ನೇಪಾಳದ ಕಾನೂನಿನ ಪ್ರಕಾರ ಮಾಧ್ಯಮ ವಲಯದಲ್ಲಿ ವಿದೇಶಿ ಹೂಡಿಕೆಗೆ ಅವಕಾಶವಿಲ್ಲ. ಈ ಎರಡು ಟಿವಿ ಚಾನೆಲ್‌ಗಳನ್ನು ನೋಂದಾಯಿಸುವುದರ ಸಂಬಂಧ ನಮಗೆ ಯಾವುದೇ ಮನವಿ ಸಲ್ಲಿಕೆಯಾಗಿಲ್ಲ. ಟಿವಿ ಚಾನೆಲ್‌ಗಳ ನೋಂದಣಿಗೆ ಸಂಬಂಧಿಸಿದಂತೆ ತನಿಖೆಗಾಗಿ ನಾವು ತಂಡವನ್ನು ರಚಿಸಿದ್ದೇವೆ. ಪೂರ್ವಾನುಮತಿ ಇಲ್ಲದೆಯೇ ಅವರು ಕಾರ್ಯಕ್ರಮ ಪ್ರಸಾರ ಆರಂಭಿಸಿದ್ದರೆ, ಸೂಕ್ತ ಕ್ರಮಕೈಗೊಳ್ಳುತ್ತೇವೆ' ಎಂದಿದ್ದಾರೆ.

ನೇಪಾಳದಿಂದ ಯಾವುದೇ ವಿದೇಶಿ ಟಿವಿ ಚಾನೆಲ್‌ ಕಾರ್ಯಾಚರಿಸಬೇಕಾದರೆ, ಎಲ್ಲ ರೀತಿಯ ಕಾನೂನಾತ್ಮಕ ಹಾಗೂ ಇತರೆ ಪ್ರಕ್ರಿಯೆಗಳನ್ನು ಪೂರೈಸಿರಬೇಕು.

ಕಾರ್ಯಕ್ರಮದಲ್ಲಿ ಪ್ರಧಾನಿ ದೇವುಬಾ ಅವರು ವೈದ್ಯಕೀಯ ಚಟುವಟಿಕೆಗಳಿಗಾಗಿ ಪತಂಜಲಿಗೆ ಜಮೀನು ನೀಡುವುದಾಗಿ ಭರವಸೆ ನೀಡಿದ್ದರು.

2006ರಲ್ಲಿ ಆಚಾರ್ಯ ಬಾಲಕೃಷ್ಣ ಅವರು ಶುರು ಮಾಡಿದ ಪತಂಜಲಿ ಕಂಪನಿಯು ಮೊದಲಿಗೆ ಆಯುರ್ವೇದ ಔಷಧಗಳನ್ನು ತಯಾರಿಸುತ್ತಿತ್ತು. ಅನಂತರದಲ್ಲಿ ಉಡುಪುಗಳು, ಡೈರಿ ಉತ್ಪನ್ನಗಳು, ಆಹಾರ ಪದಾರ್ಥಗಳು ಸೇರಿದಂತೆ ಹಲವು ವಲಯಗಳಿಗೆ ವಿಸ್ತರಿಸಿಕೊಂಡಿದೆ.

ನೇಪಾಳದಲ್ಲಿ ಪತಂಜಲಿ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಇದೇ ವರ್ಷ ಜೂನ್‌ನಲ್ಲಿ ಪತಂಜಲಿ ಕಂಪನಿಯ 'ಕೊರೊನಿಲ್‌ ಕಿಟ್‌' ಅನ್ನು ನೇಪಾಳ ನಿಷೇಧಿಸಿತ್ತು. ನೇಪಾಳ ಸರ್ಕಾರದ ನಿಯಮಗಳ ಅನುಸಾರ ನೋಂದಾಯಿಸುವವರೆಗೂ ಆರೋಗ್ಯ ಇಲಾಖೆಯು ಕೊರೊನಿಲ್‌ ಕಿಟ್ ಮೇಲೆ ನಿರ್ಬಂಧ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT