ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ 13 ಡ್ರೋನ್‌ ಹೊಡೆದುರುಳಿಸಿದ ಉಕ್ರೇನ್‌

Last Updated 6 ಮಾರ್ಚ್ 2023, 13:10 IST
ಅಕ್ಷರ ಗಾತ್ರ

ಕೀವ್‌/ಕ್ರೀವಿ ರಿಹ್‌: ರಷ್ಯಾ ದಕ್ಷಿಣ ಭಾಗದಿಂದ ಹಾರಿಸಿರುವ ಸ್ಫೋಟಕಗಳಿದ್ದ ಇರಾನ್‌ ನಿರ್ಮಿತ 13 ಶಾಹಿದ್‌ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ವಾಯುಪಡೆ ಸೋಮವಾರ ತಿಳಿಸಿದೆ.

ಕೀವ್‌ ನಗರದ ನೈರುತ್ಯದಲ್ಲಿರುವ ಬ್ರಿಯಾನ್‌ಸ್ಕ್‌ ಪ್ರದೇಶದಿಂದ 15 ಶಾಹಿದ್‌ ಡ್ರೋನ್‌ಗಳನ್ನು ರಷ್ಯಾ ಸೇನೆ ಭಾನುವಾರ ತಡರಾತ್ರಿ ಉಡಾಯಿಸಿತು. ಇದರಲ್ಲಿ 13 ಡ್ರೋನ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಲಾಯಿತು ಎಂದು ವಾಯುಪಡೆ ಹೇಳಿದೆ.

ಉಕ್ರೇನಿನ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕಳೆದ ಅಕ್ಟೋಬರ್‌ನಿಂದ ರಷ್ಯಾ ಸೇನೆ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ತೀವ್ರಗೊಳಿಸಿದೆ. ಉಕ್ರೇನ್‌ ತನ್ನ ಮಿತ್ರ ರಾಷ್ಟ್ರಗಳಿಂದ ಪಡೆದಿರುವ ವಾಯು ರಕ್ಷಣಾ ವ್ಯವಸ್ಥೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸ್ವರಕ್ಷಣೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳುತ್ತಿದೆ. ಉಕ್ರೇನ್‌ ಸೈನಿಕರು, ರಷ್ಯಾ ಆಕ್ರಮಿತ ಪ್ರದೇಶಗಳನ್ನು ಮರಳಿ ಪಡೆಯಲು ರಷ್ಯಾ ಸೈನಿಕರಿಗೆ ತೀವ್ರ ಪ್ರತಿರೋಧವೊಡ್ಡಿದ್ದಾರೆ.

ಡ್ರೋನ್‌ಗಳು ಕೀವ್‌ ಗುರಿಯಾಗಿಸಿಕೊಂಡು ಬರುತ್ತಿವೆ. ಆದರೆ, ಉಕ್ರೇನ್ ವಾಯು ರಕ್ಷಣಾ ಪಡೆಗಳು ಅವುಗಳನ್ನು ಹೊಡೆದುರುಳಿಸುತ್ತಿವೆ. ಯಾವುದೇ ಸಾವು–ನೋವು ಸಂಭವಿಸಿಲ್ಲ, ಮೂಲಸೌಕರ್ಯಗಳಿಗೆ ಹಾನಿಯಾಗಿಲ್ಲ ಎಂದು ನಗರದ ಸೇನಾಡಳಿತ ಮುಖ್ಯಸ್ಥ ಸೆರ್ಗಿ ಪಾಪ್ಕೊ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಬಂಕರ್‌ ನಿರ್ಮಾಣ:

ಗಣಿಗಾರಿಕೆಗೆ ಬೇಕಾದ ಸಾಧನ–ಸಲಕರಣೆಗಳನ್ನು ಉತ್ಪಾದಿಸುವ ಮತ್ತು ದುರಸ್ತಿ ಮಾಡುವ ಕಾರ್ಮಿಕರಲ್ಲಿ ಕೆಲವರು ತಮ್ಮ ದೈನಂದಿನ ಕೆಲಸ ಬದಿಗಿರಿಸಿ, ಮುಂಚೂಣಿ ಸೈನಿಕರಿಗೆ ಲೋಹದ ಬಂಕರ್‌ಗಳನ್ನು ನಿರ್ಮಿಸಿಕೊಡುತ್ತಿದ್ದಾರೆ.

ಸೋವಿಯತ್‌ ಯುಗದ ಬಂಕರ್‌ಗಳನ್ನು ಮಾದರಿಯಾಗಿರಿಸಿಕೊಂಡು, ಒಂದೊಂದು ಬಂಕರ್‌ನಲ್ಲಿ ಕನಿಷ್ಠ ಆರು ಸೈನಿಕರು ವಿಶ್ರಮಿಸುವ ವ್ಯವಸ್ಥೆಗಳನ್ನು ಒಳಗೊಂಡ ಸುರಕ್ಷಿತ ಭೂಗತ ಬಂಕರ್‌ಗಳ ನಿರ್ಮಾಣ ಯೋಜನೆ ದೇಶದ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರ ತವರು ನಗರ ಕ್ರೀವಿ ರಿಹ್‌ನಲ್ಲಿ ಭರದಿಂದ ನಡೆಯುತ್ತಿದೆ.

ಉಕ್ರೇನ್‌ನ ಗಣಿಗಾರಿಕೆ ಮತ್ತು ಲೋಹಗಳ ಕಂಪನಿ ಮೆಟ್‌ಇನ್ವೆಸ್ಟ್‌ ಈ ಯೋಜನೆ ಪ್ರಾರಂಭಿಸಿದೆ. ಇಂತಹ 123 ಬಂಕರ್‌ಗಳನ್ನು ಈಗಾಗಲೇ ಡೊನೆಟ್‌ಸ್ಕ್‌ ಪ್ರಾಂತ್ಯ, ಝಪೊರಿಝಿಯಾದಲ್ಲಿರುವ ಮುಂಚೂಣಿ ಸೈನಿಕರಿಗೆ ಒದಗಿಸಲಾಗಿದೆ ಎನ್ನುತ್ತಾರೆ ಮೆಟ್‌ಇನ್‌ವೆಸ್ಟ್‌ ಸಿಇಒ ಯೂರಿ ರಿಝೆನ್ಕೊವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT