ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರಾರು ಜನರ ಹತ್ಯೆಯನ್ನು ರಷ್ಯಾ ಮರೆಮಾಚುತ್ತಿದೆ: ಝೆಲೆನ್‌ಸ್ಕಿ

Last Updated 7 ಏಪ್ರಿಲ್ 2022, 4:14 IST
ಅಕ್ಷರ ಗಾತ್ರ

ಕೀವ್: ರಷ್ಯಾ ಸೇನೆ ಮುತ್ತಿಗೆ ಹಾಕಿದ್ದ ಬಂದರು ನಗರವಾದ ಮರಿಯುಪೋಲ್‌ಗೆ ಪ್ರವೇಶವನ್ನು ರಷ್ಯಾ ನಿರ್ಬಂಧಿಸುತ್ತಿದೆ. ಏಕೆಂದರೆ, ಅದು ಅಲ್ಲಿ ‘ಸಾವಿರಾರು’ ಜನರನ್ನು ಅದು ಕೊಂದಿದೆ. ಅದರ ಪುರಾವೆಗಳನ್ನು ಮರೆಮಾಡಲು ಈ ರೀತಿ ಮಾಡುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಬುಧವಾರ ಆರೋಪಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

‘ಅವರ ಕ್ರೂರ ಕೃತ್ಯ ಜಗತ್ತಿನ ಮುಂದೆ ಎಲ್ಲಿ ಬಯಲಾಗುತ್ತದೆಯೊ ಎಂಬ ಭಯದಲ್ಲಿರುವ ರಷ್ಯಾ, ನಮಗೆ ಮರಿಯುಪೋಲ್‌ಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ’ ಎಂದು ಝೆಲೆನ್‌ಸ್ಕಿ ಟರ್ಕಿಯ ಹ್ಯಾಬರ್‌ಟರ್ಕ್ ಟಿವಿಗೆ ತಿಳಿಸಿದ್ದಾರೆ.

‘ಅದೊಂದು ದೊಡ್ಡ ದುರಂತ ಎಂದು ನಾನು ಭಾವಿಸುತ್ತೇನೆ, ಆ ಪ್ರದೇಶ ನರಕವಾಗಿದೆ. ಹತ್ತಾರು ಅಲ್ಲ ಸಾವಿರಾರು ಜನರು ಅಲ್ಲಿ ಕೊಲ್ಲಲ್ಪಟ್ಟಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ’ಎಂದು ಅವರು ಹೇಳಿದರು.

ಆದರೆ, ಎಲ್ಲ ಸಾಕ್ಷ್ಯಗಳನ್ನು ಮರೆಮಾಚುವಲ್ಲಿ ರಷ್ಯಾ ಯಶಸ್ವಿಯಾಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮೃತಪಟ್ಟ ಎಲ್ಲ ಉಕ್ರೇನಿಯನ್ನರ ಮೃತದೇಹಗಳನ್ನು ಹೂಳಲು ಅವರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಅದು ಅಷ್ಟು ದೊಡ್ಡ ಸಂಖ್ಯೆಯಾಗಿದೆ. ಸತ್ತಿರುವುದು ಸಾವಿರಾರು ಜನರು, ಅದನ್ನು ಮರೆಮಾಚಲು ಸಾಧ್ಯವೇ ಇಲ್ಲ’ಎಂದು ಅವರು ಹೇಳಿದ್ದಾರೆ.

ಕೀವ್‌ ನಗರದ ಹೊರಗಿನ ಬುಕಾ ಪಟ್ಟಣದಲ್ಲಿ ಅಪರಾಧಗಳ ಪುರಾವೆಗಳನ್ನು ಮರೆಮಾಚಲು ರಷ್ಯಾ ಈಗಾಗಲೇ ಪ್ರಯತ್ನಿಸಿದೆ. ಹತ್ತಿರದ ಹಲವಾರು ಸಮುದಾಯಗಳು ಮತ್ತು ಉಕ್ರೇನಿಯನ್ ಅಧಿಕಾರಿಗಳು ರಷ್ಯಾ ನಡೆಸಿರುವ ನಾಗರಿಕರ ವ್ಯಾಪಕ ಹತ್ಯೆಗಳ ಪುರಾವೆಗಳನ್ನು ಪತ್ತೆ ಮಾಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ.

‘ನಿನ್ನೆ ತಂದೆ, ತಾಯಿ, ಇಬ್ಬರು ಮಕ್ಕಳು ಸೇರಿದಂತೆ ಕುಟುಂಬವನ್ನೇ ಸುಟ್ಟು ಹಾಕಲಾಗಿರುವ ದೃಶ್ಯವನ್ನು ಕಂಡಿದ್ದೇವೆ. ಅದಕ್ಕಾಗಿಯೇ ನಾನು ಅವರನ್ನು ’ನಾಜಿಗಳು’ ಎಂಬುದಾಗಿ ಕರೆದೆ’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

ರಷ್ಯಾದೊಂದಿಗೆ ಶಾಂತಿ ಮಾತುಕತೆಯನ್ನು ಮುಂದುವರೆಸುವ ಬಗ್ಗೆ ಕೇಳಿದಾಗ, ಮಾತುಕತೆ ನಡೆಯಲೇಬೇಕು. ಇಲ್ಲದಿದ್ದರೆ, ಯುದ್ಧ ನಿಲ್ಲಿಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT