ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝಪೊರಿಝಿಯಾ ಅಣುಸ್ಥಾವರಕ್ಕೆ ವಿದ್ಯುತ್‌ ಪೂರೈಕೆ ಸ್ಥಗಿತ

Last Updated 12 ಅಕ್ಟೋಬರ್ 2022, 13:29 IST
ಅಕ್ಷರ ಗಾತ್ರ

ಕೀವ್‌: ರಷ್ಯಾ ಪಡೆಗಳು ಮುತ್ತಿಗೆ ಹಾಕಿರುವ ಉಕ್ರೇನ್‌ನ ಝಪೊರಿಝಿಯಾದಲ್ಲಿರುವಯುರೋಪಿನ ಅತ್ಯಂತ ದೊಡ್ಡ ಅಣುವಿದ್ಯುತ್‌ ಸ್ಥಾವರವುಪ್ರಮುಖ ಸುರಕ್ಷತಾ ವ್ಯವಸ್ಥೆಗಳಿಗೆ ಅಗತ್ಯವಾದಬಾಹ್ಯ ವಿದ್ಯುತ್‌ ಸಂಪರ್ಕವನ್ನು ವಾರದಲ್ಲಿ ಎರಡನೇ ಬಾರಿಗೆ ಕಳೆದುಕೊಂಡಿದೆ. ಇದು ತೀವ್ರ ಆತಂಕಕಾರಿ ಬೆಳವಣಿಗೆ ಎಂದುಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ (ಐಎಇಎ) ಕಳವಳ ವ್ಯಕ್ತಪಡಿಸಿದೆ.

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧದ ಉಲ್ಬಣದ ಮಧ್ಯೆಐಎಇಎ ಮಹಾನಿರ್ದೇಶಕ ರಾಫೆಲ್ ಗ್ರಾಸ್ಸಿ ಈ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ರಷ್ಯಾ ಅಧ್ಯಕ್ಷ ಪುಟಿನ್‌ ಅವರನ್ನು ಭೇಟಿ ಮಾಡಿರುವ ಐಎಇಎ ಮುಖ್ಯಸ್ಥರು, ಅಣುಸ್ಥಾವರವನ್ನು ಗಮನಿಸಲಾಗುತ್ತಿದೆ. ಬಾಹ್ಯ ವಿದ್ಯುತ್‌ ಸಂಪರ್ಕ ಕಳೆದುಕೊಂಡಿರುವುದು ಕಂಡುಬಂದಿದೆ.ಅಣು ಸುರಕ್ಷತೆ ಮತ್ತು ಭದ್ರತಾ ಉಪಕರಣಗಳ ಕಾರ್ಯನಿರ್ವಹಣೆಯನ್ನು ಡೀಸೆಲ್‌ ಜನರೇಟರ್‌ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಕ್ರಿಮಿಯಾ ಸಂಪರ್ಕಿಸುವ ಪ್ರಮುಖ ಸೇತುವೆ ಸ್ಫೋಟಿಸಿದ ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಐವರು ರಷ್ಯಾ ಪ್ರಜೆಗಳು ಮತ್ತು ಮೂವರು ಉಕ್ರೇನಿಯರು ಇದ್ದಾರೆ ಎಂದು ರಷ್ಯಾದ ಭದ್ರತಾ ಸಂಸ್ಥೆ (ಎಫ್‌ಎಸ್‌ಬಿ) ತಿಳಿಸಿದೆ.

ಕೆರ್ಚ್‌ ಸೇತುವೆ ಸ್ಫೋಟದ ಹಿಂದೆ ಉಕ್ರೇನ್‌ನ ಸ್ಪೆಷಲ್‌ ಸರ್ವಿಸ್‌ನ (ಉಕ್ರೇನ್‌ ಗುಪ್ತಚರ ಸಂಸ್ಥೆ) ಕೈವಾಡವಿದೆ. ಇದೊಂದು ಭಯೋತ್ಪಾದನಾ ಕೃತ್ಯ ಎಂದು ರಷ್ಯಾ ಅಧ್ಯಕ್ಷ ಪುಟಿನ್‌ಬುಧವಾರ ಹೇಳಿದ್ದಾರೆ.

ಐದು ಹಳ್ಳಿಗಳನ್ನು ಮರು ವಶಕ್ಕೆ ಪಡೆದ ಉಕ್ರೇನ್‌ ಸೇನೆ:

ಇದೇ ವೇಳೆ ರಷ್ಯಾ ನಿಯಂತ್ರಣದಲ್ಲಿದ್ದ ದಕ್ಷಿಣ ಕೆರ್ಸಾನ್‌ನ ಐದು ಜನವಸತಿ ಪ್ರದೇಶಗಳನ್ನು ಮರು ವಶಪಡಿಸಿಕೊಂಡಿರುವುದಾಗಿ ಉಕ್ರೇನ್‌ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಬೆರಿಸ್ಲಾವ್‌ ಜಿಲ್ಲೆಯ ನೋವೊವ್ಯಾಸಿಲಿವ್ಕಾ, ನೊವೊಹ್ರಿಹಾರಿವ್ಕಾ, ನೊವಾ ಕಮಿಯಾಂಕ, ಟ್ರೈಫೊನಿವ್ಕಾ ಮತ್ತು ಚೆರ್ವೊನ್‌ ಹಳ್ಳಿಗಳನ್ನು ಮಂಗಳವಾರ ಮರುವಶಕ್ಕೆ ಪಡೆಯಲಾಗಿದೆ ಎಂದು ಉಕ್ರೇನ್‌ ಸೇನೆಯ ದಕ್ಷಿಣದ ಕಮಾಂಡರ್‌ ವ್ಲಾಡಿಸ್ಲಾವ್‌ ನಜರೊವ್‌ ತಿಳಿಸಿದ್ದಾರೆ.

ರಷ್ಯಾ ವಾಯು ದಾಳಿ: 7 ನಾಗರಿಕರ ಸಾವು

ಕೀವ್ (ರಾಯಿಟರ್ಸ್‌): ಉಕ್ರೇನಿನ ಪೂರ್ವದ ಡೊನೆಟ್‌ಸ್ಕ್‌ ಪ್ರಾಂತ್ಯದ ಅವ್ದೀವ್ಕಾ ಪಟ್ಟಣದ ಜನದಟ್ಟಣೆಯ ಮಾರುಕಟ್ಟೆ ಮೇಲೆ ರಷ್ಯಾ ವಾಯುಪಡೆ ಬುಧವಾರ ನಡೆಸಿದ ವಾಯು ದಾಳಿಯಲ್ಲಿ ಏಳು ಮಂದಿ ನಾಗರಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಕೇಂದ್ರ ಮಾರುಕಟ್ಟೆಯಲ್ಲಿ ಜನರು ಕಿಕ್ಕಿರಿದ ಸಂಖ್ಯೆಯಲ್ಲಿ ಸೇರಿದ್ದ ವೇಳೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ ಎಂದು ಗವರ್ನರ್‌ ಪಾವ್ಲೊ ಕಿರಿಲೆಂಕೊ ತಿಳಿಸಿದ್ದಾರೆ.

ಪ್ರಮುಖ ಅಂಶಗಳು

*ಉಕ್ರೇನ್‌ ಆಕ್ರಮಣ ಮಾಡುವ ರಷ್ಯಾ ಅಧ್ಯಕ್ಷ ಪುಟಿನ್‌ ಅವರ ಆಲೋಚನೆ ಕೆಟ್ಟ ನಿರ್ಣಯದ್ದಾಗಿದೆ. ಆ ರಾಷ್ಟ್ರದ ಸಾಮರ್ಥ್ಯದ ಬಗ್ಗೆಯೂ ಪುಟಿನ್‌ ತಪ್ಪು ಲೆಕ್ಕಾಚಾರ ಹೊಂದಿದ್ದಾರೆ –ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಿಡಿ

* ರಷ್ಯಾ ಕ್ಷಿಪಣಿ, ಆತ್ಮಾಹುತಿ ಡ್ರೋನ್‌ ಹಾಗೂ ಬಾಂಬ್‌ಗಳ ಸುರಿಮಳೆಗರೆಯುತ್ತಿರುವಾಗ ಉಕ್ರೇನ್‌ನ ವಾಯು ರಕ್ಷಣೆಗೆ ಮೊದಲ ಆದ್ಯತೆ ಮತ್ತು ಉಕ್ರೇನಿಯರ ರಕ್ಷಣೆಗೆ ಹೆಚ್ಚು ಬೆಂಬಲ ನೀಡಲು ಎದುರು ನೋಡುತ್ತಿದ್ದೇವೆ– ನ್ಯಾಟೊಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್ ಬರ್ಗ್

* ಉಕ್ರೇನ್‌ ಆಕ್ರಮಣದಲ್ಲಿ ರಷ್ಯಾ ನೆರವಿಗೆ ನಿಂತಿರುವ ಬೆಲರೂಸ್‌ ರಷ್ಯಾ ಪಡೆಗೆ 20 ಟಿ–72 ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸಿಕೊಟ್ಟಿದೆ. ಯುದ್ಧದಲ್ಲಿ ಹಾನಿಗೀಡಾಗಿರುವ ರಷ್ಯಾದ ಯುದ್ಧೋಪಕರಣಗಳ ದುರಸ್ತಿಯಲ್ಲಿ ಬೆಲರೂಸ್‌ ರಕ್ಷಣಾ ಉದ್ಯಮ ತೊಡಗಿಕೊಂಡಿದೆ

* ಉಕ್ರೇನ್‌ ಸೇನೆಯ ಮರು ದಾಳಿ ಮತ್ತು ನ್ಯಾಟೊದ ದೂರ ವ್ಯಾಪ್ತಿ ಶಸ್ತ್ರಾಸ್ತ್ರಗಳ ಪೂರೈಕೆ ಸಾಧ್ಯತೆಯ ಸುಳಿವು ಆಧರಿಸಿ ರಷ್ಯಾ ಸೇನೆ, ಬೆಲರೂಸ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಬೇರೆಡಗೆ ಸ್ಥಳಾಂತರಿಸುತ್ತಿದೆ

* ರಷ್ಯಾ ಸೇನೆ ಏಳು ಎಸ್‌–300 ಕ್ಷಿಪಣಿಗಳನ್ನು ಝಪೊರಿಝಿಯಾ ಪ್ರಾಂತ್ಯದ ಮೇಲೆ ಉಡಾಯಿಸಿದೆ. ಫುಟ್‌ಬಾಲ್‌ ಕ್ರೀಡಾಂಗಣ, ವಸತಿ ಕಟ್ಟಡಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT