ವಿಶ್ವದ ಹಸಿವಿನ ಪ್ರಮಾಣ: ಗ್ರಾಮೀಣ ಪ್ರದೇಶದ ನೆರವಿಗೆ ಧಾವಿಸಲು ವಿಶ್ವಸಂಸ್ಥೆ ಕರೆ

ರೋಮ್: ಕಳೆದ ವರ್ಷ ವಿಶ್ವದಾದ್ಯಂತ ಆವರಿಸಿಕೊಂಡ ಕೊರೊನಾ ವೈರಸ್ ಮತ್ತು ಹವಾಮಾನ ವೈಪರೀತ್ಯದ ಪರಿಣಾಮ ವಿಶ್ವದ 53 ದೇಶಗಳ 19.3 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದರು ಎಂದು ವಿಶ್ವಸಂಸ್ಥೆ ಹೇಳಿದೆ.
2021ರಲ್ಲಿ ವಿಶ್ವದಲ್ಲಿ ದಿನನಿತ್ಯ ಅಗತ್ಯವಿರುವಷ್ಟು ಆಹಾರ ಪಡೆಯಲಾಗದವರ ಸಂಖ್ಯೆ 4 ಕೋಟಿಯಷ್ಟು ಏರಿಕೆಯಾಗಿದ್ದು, ಆಹಾರದ ಅಭದ್ರತೆ ಎದುರಿಸುತ್ತಿರುವ ಜನಸಂಖ್ಯೆ ಕಳೆದ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಏರಿಕೆಯಾಗಿದೆ.
ಅಲ್ಲದೆ ಉಕ್ರೇನ್-ರಷ್ಯಾದ ಯುದ್ಧವು ಜಾಗತಿಕ ಆಹಾರ ಉತ್ಪಾದನೆ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ಹೇಳಿದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಆಹಾರ ಬಿಕ್ಕಟ್ಟು ಕುರಿತು ರೂಪಿಸಿದ ಜಾಗತಿಕ ವರದಿಯಲ್ಲಿ ಈ ಅಂಶಗಳಿವೆ. ಅಫ್ಗಾನಿಸ್ತಾನ, ಕಾಂಗೊ, ನೈಜೀರಿಯಾ, ದಕ್ಷಿಣ ಸುಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳಲ್ಲಿ ಅತಿಹೆಚ್ಚು ಜನರು ಆಹಾರದ ಅಭದ್ರತೆ ಎದುರಿಸುತ್ತಿದ್ದಾರೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಓದಿ... ಡೆಲ್ಟಾ ರೂಪಾಂತರ ತಳಿಯಿಂದ ಮತ್ತೊಂದು ಕೋವಿಡ್ ಅಲೆ?
ಅಲ್ಲದೆ ಹಿಂಸಾಚಾರ, ದೀರ್ಘಕಾಲೀನ ಬರಗಾಲದ ಕಾರಣಗಳಿಂದಾಗಿ 2022ರ ಅವಧಿಯಲ್ಲಿ ಸೊಮಾಲಿಯಾ ದೇಶದಲ್ಲಿ ಆಹಾರ ಅಭದ್ರತೆಗೆ ಹೆಚ್ಚಿಗೆ ಗೋಚರಿಸಲಿದೆ. ಹಲವು ಕಾರಣಗಳಿಂದ ಸೊಮಾಲಿಯಾದ 60 ಲಕ್ಷ ಜನರು ಆಹಾರದ ಬಿಕ್ಕಟ್ಟು ಎದುರಿಸಲಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಯುದ್ಧವು ಸೊಮಾಲಿಯಾ ದೇಶದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲಿದೆ ಎಂದು ಈ ವರದಿ ಎಚ್ಚರಿಕೆ ನೀಡಿದೆ.
ಗ್ರಾಮೀಣ ಪ್ರದೇಶಗಳಿಗೆ ನೆರವು ನೀಡದಿದ್ದರೆ, ಹಸಿವು ಮತ್ತು ಸಾಮಾನ್ಯರ ಜನರ ಸಾವುಗಳು ಹೆಚ್ಚಲಿವೆ. ಇದು ಆಗಬಾರದು ಎಂದಾದರೆ, ತ್ವರಿತಗತಿಯಲ್ಲಿ ಮಾನವೀಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.
ಓದಿ... ಓಮೈಕ್ರಾನ್ ಹೆಚ್ಚಳ: ಚೀನಾ ರಾಜಧಾನಿ ಬೀಜಿಂಗ್ನಲ್ಲಿ ಸೆಮಿ ಲಾಕ್ಡೌನ್ ಜಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.