ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ವರ್ಣೀಯ ಯುವಕನ ಹತ್ಯೆ: ಭುಗಿಲೆದ್ದ ಆಕ್ರೋಶ

ಪ್ರತಿಭಟನಕಾರರನ್ನು ಚದುರಿಸಲು ಅಶ್ರುವಾಯು
Last Updated 12 ಏಪ್ರಿಲ್ 2021, 6:09 IST
ಅಕ್ಷರ ಗಾತ್ರ

ಮಿನ್ನೆಪೊಲೀಸ್‌: ಕಪ್ಪು ವರ್ಣೀಯ ಯುವಕನೊಬ್ಬನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಮಿನ್ನೆಪೊಲೀಸ್‌ನ ಉಪನಗರದಲ್ಲಿ ವ್ಯಾಪಕ ಪ್ರತಿಭಟನೆ ಆರಂಭವಾಗಿದೆ.

ಬ್ರೂಕ್ಲಿನ್‌ ಕೇಂದ್ರದ ಬಳಿಯ ಠಾಣೆಯ ಹೊರಗೆ ಸೇರಿದ್ದ ನೂರಾರು ಮಂದಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು.

20 ವರ್ಷದ ಡೌಂಟೆ ರೈಟ್‌ ಸಾವಿಗೀಡಾದ ಯುವಕ. ತನ್ನನ್ನು ಪೊಲೀಸರು ಎಳೆದೊಯ್ಯುತ್ತಿದ್ದಾರೆ ಎಂದು ಡೌಂಟೆ ತಿಳಿಸಿದ್ದ ಎಂದು ಯುವಕನ ತಾಯಿ ಕಾಟಿ ರೈಟ್‌ ತಿಳಿಸಿದ್ದಾರೆ.

‘ಮೊಬೈಲ್‌ ದೂರವಾಣಿ ಕೆಳಗಿಡು ಎಂದು ತನ್ನ ಮಗನಿಗೆ ಪೊಲೀಸರು ಸೂಚನೆ ನೀಡುತ್ತಿರುವುದನ್ನು ದೂರವಾಣಿಯಲ್ಲಿ ಕೇಳಿಸಿಕೊಂಡೆ. ಬಳಿಕ, ಒಬ್ಬ ಪೊಲೀಸ್‌ ಅಧಿಕಾರಿ ಕರೆಯನ್ನು ಕಡಿತಗೊಳಿಸಿದರು. ನಂತರ ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಮಗನ ಸ್ನೇಹಿತೆ ತಿಳಿಸಿದರು’ ಎಂದು ಕಾಟಿ ರೈಟ್‌ ಮಗನ ಕೊನೆಯ ಕ್ಷಣದ ಘಟನೆಗಳನ್ನು ವಿವರಿಸಿದ್ದಾರೆ.

ನಗರದ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ನಾಗರಿಕರು, ‘ಡೌಂಟೆ ರೈಟ್‌ಗೆ ನ್ಯಾಯ ಒದಗಿಸಿ’ ಎನ್ನುವ ಫಲಕಗಳನ್ನು ಪ್ರದರ್ಶಿಸಿದರು.

‘ಇದೊಂದು ದುರಂತ. ಪ್ರತಿಭಟನಕಾರರು ಶಾಂತಿ ಕಾಪಾಡಬೇಕು’ ಎಂದು ಬ್ರೂಕ್ಲಿನ್‌ ನಗರ ಮೇಯರ್‌ ಮನವಿ ಮಾಡಿದ್ದಾರೆ.

ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸಂಚಾರದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನನ್ನು ಕಾರಿನಿಂದ ಅಧಿಕಾರಿಯೊಬ್ಬ ಹೊರಗೆ ಎಳೆದಿದ್ದಾರೆ. ಆತನ ವಿರುದ್ಧ ಈಗಾಗಲೇ ವಾರಂಟ್‌ ಹೊರಡಿಸಿದ್ದರಿಂದ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆದರೆ, ಚಾಲಕ ಕಾರಿನಲ್ಲಿ ತೆರಳಲು ಮುಂದಾಗಿದ್ದಾರೆ. ಆಗ ಒಬ್ಬ ಅಧಿಕಾರಿಯು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ತಗುಲಿ ಚಾಲಕ ಸಾವಿಗೀಡಾಗಿದ್ದಾರೆ’ ಎಂದು ಬ್ರ್ಯೂಕ್ಲಿನ್‌ ಕೇಂದ್ರದ ಪೊಲೀಸ್‌ ಇಲಾಖೆಯ ಪ್ರಕಟಣೆ ತಿಳಿಸಿದೆ.

2019ರ ಜೂನ್‌ನಲ್ಲಿ ಆಫ್ರಿಕಾ ಮೂಲದ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಹತ್ಯೆ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಅಮೆರಿಕದಲ್ಲಿ ಮತ್ತೊಮ್ಮೆ ಜನಾಂಗೀಯ ಹಿಂಸಾಚಾರ ನಡೆದಿತ್ತು. ಜನಾಂಗೀಯ ನಿಂದನೆ ಮತ್ತು ಪೊಲೀಸರ ಕ್ರೌರ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT