ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೊರಡಿಸಿದ ಗೊತ್ತುವಳಿಯಿಂದ ಹೊರಗುಳಿದ ಭಾರತ

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಹೇರಿರುವ ನಿರ್ಬಂಧದ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸಂಘಟನೆಗಳಿಗೆ ಮಾನವೀಯತೆ ಆಧಾರದಲ್ಲಿ ನಿರ್ಬಂಧ ಹಿಂಪಡೆಯಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಗೊತ್ತುವಳಿ ಹೊರಡಿಸಿದೆ. ಇದರಿಂದ ದೂರ ಇರಲು ಭಾರತ ನಿರ್ಧರಿಸಿದೆ.
ವಿಶ್ವಸಂಸ್ಥೆಯ 15 ರಾಷ್ಟ್ರಗಳ ಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಭಾರತ ಹೊರತುಪಡಿಸಿ ಬಾಕಿ 14 ರಾಷ್ಟ್ರಗಳು ಗೊತ್ತುವಳಿ ಪರವಾಗಿ ಮತ ನೀಡಿದವು. ಮಾನವಪರವಾಗಿ ಕೆಲಸ ಮಾಡುವ ಸಂಘಟನೆಗಳಿಗೆ ಹಣಕಾಸು, ಸರಕು ಮತ್ತು ಸೇವೆಗೆ ಸಂಬಂಧಿಸಿದ ನೆರವು ನೀಡುವ ಉದ್ದೇಶವನ್ನು ಈ ಗೊತ್ತುವಳಿ ಹೊಂದಿದೆ.
ಈ ರೀತಿ ನಿರ್ಬಂಧ ಹಿಂಪಡೆಯುವುದರ ಸಂಪೂರ್ಣ ಅನುಕೂಲವನ್ನು ತಮ್ಮ ನೆರೆ ದೇಶದಲ್ಲಿರುವ ನಿಷೇಧಿತ ಉಗ್ರ ಸಂಘಟನೆಗಳೂ ಸೇರಿ ಹಲವು ಉಗ್ರ ಸಂಘಟನೆಗಳು ಪಡೆಯುತ್ತವೆ. ಅಲ್ಲದೇ, ಉಗ್ರರನ್ನು ನೇಮಿಸಿಕೊಳ್ಳಲು ಹಣಕಾಸು ನೆರವನ್ನೂ ಅವು ಪಡೆಯುತ್ತವೆ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಭಾರತವು ಈ ಗೊತ್ತುವಳಿಯಿಂದ ಹಿಂದೆಸರಿದ ಕುರಿತು ಮಂಡಳಿಯ ಅಧ್ಯಕ್ಷೆ ಮತ್ತು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ರೀತಿಯ ನಿರ್ಬಂಧ ಸಡಿಲಿಕೆಗಳನ್ನು ಉಗ್ರ ಸಂಘಟನೆಗಳು ದುರುಪಯೋಗ ಮಾಡಿಕೊಂಡಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. 1267 ನಿರ್ಬಂಧ ಸಮಿತಿಯ ನಿರ್ಬಂಧ ಕಾನೂನು ಅಪಹಾಸ್ಯಕ್ಕೊಳಗಾಗಿದ್ದನ್ನೂ ನಾವು ನೋಡಿದ್ದೇವೆ ಎಂದರು.
ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾತನಾಡಿದ ಅವರು, ‘ಭದ್ರತಾ ಮಂಡಳಿ ಪಟ್ಟಿ ಮಾಡಿರುವ ಉಗ್ರ ಸಂಘಟನೆಯೂ ಸೇರಿ ಹಲವಾರು ಉಗ್ರ ಸಂಘಟನೆಗಳು ಹೆಸರು ಬದಲಿಸಿಕೊಂಡು, ಮಾನವೀಯ ನೆರವು ನೀಡುವ ಸಂಸ್ಥೆಗಳ ರೀತಿ ಸೋಗು ಹಾಕಿಕೊಂಡು ನಿರ್ಬಂಧಗಳಿಂದ ಮುಕ್ತರಾಗಿರುವುದನ್ನು ನಾವು ನೋಡಿದ್ದೇವೆ. ಜಮಾತ್–ಉದ್–ದಾವ (ಜೆಯುಡಿ) ತನ್ನನ್ನು ದತ್ತಿ ಸಂಸ್ಥೆ ಎಂದು ಬಿಂಬಿಸಿಕೊಳ್ಳುತ್ತದೆ. ಆದರೆ ಅದು ಲಷ್ಕರ್–ಎ–ತೈಯಬಾದ ಮಾತೃ ಸಂಸ್ಥೆ ಎಂದೇ ಪರಿಗಣಿಸಲ್ಪಡುತ್ತದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.