ಶನಿವಾರ, ಡಿಸೆಂಬರ್ 5, 2020
25 °C

ಎಲ್ಲ ಧರ್ಮ, ಜನಾಂಗಗಳ ಜನರು ಹೊಸ ಬದಲಾವಣೆಯನ್ನು ಆರಿಸಿಕೊಂಡಿದ್ದಾರೆ: ಬೈಡನ್

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಮ್ಮ ಗೆಲುವು ಸ್ಪಷ್ಟವಾಗುತ್ತಿದೆ ಎಂದು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ತಿಳಿಸಿದ್ದಾರೆ.

ಈ ಬಗ್ಗೆ ಶನಿವಾರ ಸರಣಿ ಟ್ವೀಟ್‌ ಮಾಡಿರುವ ಅವರು, 'ಫಲಿತಾಂಶದ ಅಂಕಿ-ಸಂಖ್ಯೆಗಳಿಂದ ನಮಗೆ ಸ್ಪಷ್ಟವಾಗಿ ಮನವರಿಕೆಯಾಗಿದೆ. ಈ ಸ್ಪರ್ಧೆಯಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ' ಎಂದು ಹೇಳಿದ್ದಾರೆ.

'ಎಲ್ಲ ಧರ್ಮ, ಜನಾಂಗ ಮತ್ತು ಪ್ರದೇಶಗಳ ಜನರು ಹೊಸ ಬದಲಾವಣೆಯನ್ನು ಆರಿಸಿಕೊಂಡಿದ್ದಾರೆ. ಇದು ಪ್ರತಿ ಗಂಟೆಗೊಮ್ಮೆ ಸ್ಪಷ್ಟವಾಗುತ್ತಲೇ ಸಾಗುತ್ತದೆ. ಸಾಂಕ್ರಾಮಿಕ, ಆರ್ಥಿಕತೆ, ಹವಾಮಾನ ಬದಲಾವಣೆ ಮತ್ತು ವ್ಯವಸ್ಥಿತ ವರ್ಣಭೇದ ನೀತಿಯ ವಿರುದ್ಧ ಕ್ರಮ ಕೈಗೊಳ್ಳಲು ಜನರು ನಮಗೆ ಆದೇಶ ನೀಡಿದ್ದಾರೆ' ಎಂದು ಬೈಡನ್‌ ಟ್ವೀಟಿಸಿದ್ದಾರೆ.

'ಕಳೆದ 24 ವರ್ಷಗಳಲ್ಲಿ ಅರಿಜೋನಾ ರಾಜ್ಯವನ್ನು ಗೆದ್ದ ಮೊದಲ ಡೆಮಾಕ್ರಾಟ್‌ ನಾವಾಗಲಿದ್ದೇವೆ. ಕಳೆದ 28 ವರ್ಷಗಳಲ್ಲಿ ಜಾರ್ಜಿಯಾ ರಾಜ್ಯವನ್ನು ಗೆದ್ದ ಮೊದಲ ಡೆಮಾಕ್ರಟ್‌ ನಾವಾಗಲಿದ್ದೇವೆ. ಕೇವಲ ನಾಲ್ಕು ವರ್ಷಗಳ ಹಿಂದೆ ಕುಸಿದಿದ್ದ ನೀಲಿ(ಡೆಮಾಕ್ರಟಿಕ್‌ ಪಕ್ಷದ ಸಾಂಕೇತಿಕ ಬಣ್ಣ) ಗೋಡೆಯನ್ನು ದೇಶದ ಮಧ್ಯದಲ್ಲಿ ಪುನಃ ನಿರ್ಮಿಸಿದ್ದೇವೆ' ಎಂದು ಬೈಡನ್‌ ಹೇಳಿದ್ದಾರೆ.

ಇದನ್ನೂ ಓದಿ: ಆಳ-ಅಗಲ| ಬೈಡನ್‌ ಗೆದ್ದರೆ ಏನೇನು ಬದಲಾವಣೆ

'ಈ ರೀತಿಯ ಕಠಿಣ ಚುನಾವಣೆಯ ನಂತರ ಉದ್ವಿಗ್ನತೆ ಹೆಚ್ಚಾಗಲಿದೆ ಎಂದು ನನಗೆ ತಿಳಿದಿದೆ. ಆದರೆ ನಾವು ಶಾಂತವಾಗಿರಬೇಕು. ಸಮಾಧಾನವಾಗಿರಬೇಕು. ಎಲ್ಲಾ ಮತಗಳ ಎಣಿಕೆ ಪ್ರಕ್ರಿಯೆ ಮುಗಿಯುವ ಹಾಗೆ ನಾವು ನೋಡಿಕೊಳ್ಳಬೇಕು' ಎಂದು ತಮ್ಮ ಬೆಂಬಲಿಗರಲ್ಲಿ ಬೈಡನ್‌ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ| ಬೈಡನ್‌ಗೆ ಇನ್ನಷ್ಟು ಮುನ್ನಡೆ

'ನಮ್ಮ ರಾಜಕೀಯದ ಉದ್ದೇಶ ಯುದ್ಧವಲ್ಲ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ನಾವು ವಿರೋಧಿಗಳಾಗಿರಬಹುದು. ಆದರೆ, ಶತ್ರುಗಳಲ್ಲ. ನಾವೆಲ್ಲರೂ ಅಮೆರಿಕನ್ನರು' ಎಂದು ಬೈಡನ್‌ ತಿಳಿಸಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು