ಬುಧವಾರ, ನವೆಂಬರ್ 25, 2020
24 °C

ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಬೈಡನ್ ಗೆಲುವು‌: ನಿಚ್ಚಳ ಬಹುಮತ ಸಾಧ್ಯತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಿರ್ಣಾಯಕ ಹಂತ ತಲುಪಿದ್ದು, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ ಅವರು 264 ಎಲೆಕ್ಟೋರಲ್‌ ಮತಗಳ ಮುನ್ನೆಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿರುವ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ 214 ಮತಗಳ ಮುನ್ನೆಡೆ ಹೊಂದಿದ್ದಾರೆ.

ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿರುವ ಮಿಷಿಗನ್‌ ಮತ್ತು ವಿಸ್‌ಕಾನ್ಸಿಸ್‌ ರಾಜ್ಯಗಳಲ್ಲಿ ಬೈಡನ್‌ ಗೆಲುವು ಸಾಧಿಸಿದ್ದಾರೆ. ಈ ಎರಡೂ ರಾಜ್ಯಗಳಲ್ಲಿನ ಸೋಲು ಡೊನಾಲ್ಡ್‌ ಟ್ರಂಪ್‌ ಅವರಿಗೆ ಭಾರೀ ಹಿನ್ನೆಡೆ ಉಂಟು ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಡೊನಾಲ್ಡ್‌ ಟ್ರಂಪ್‌, ಇದು 'ಸಾಮೂಹಿಕ ವಂಚನೆ' ಎಂದು ಆರೋಪಿಸಿದ್ದಾರೆ. ಈ ಕೂಡಲೇ ಮತ ಎಣಿಕೆ ಪ್ರಕ್ರಿಯೆಯನ್ನು ನಿಲ್ಲಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿರುವ ಡೆಮಾಕ್ರಟಿಕ್‌ ಪಕ್ಷದ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌, 'ಬೈಡನ್‌ ಅವರು ತಮ್ಮ ಗೆಲುವಿನ ಬಗ್ಗೆ ಇನ್ನೂ ಘೋಷಿಸುತ್ತಿಲ್ಲ. ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ನಂತರವೇ ನಾವು ಜಯ ಸಾಧಿಸಿದ್ದೇವೆ ಎಂಬುದಾಗಿ ನಂಬುತ್ತೇವೆ' ಎಂದು ತಿಳಿಸಿದ್ದಾರೆ.

ನವೆಡಾ ರಾಜ್ಯದಲ್ಲಿ ಮತ ಎಣಿಕೆ ಮುಂದುವರೆದದ್ದು ಬೈಡೆನ್‌ ಅವರು 6 ಮತಗಳ ಮುನ್ನೆಡೆ ಸಾಧಿಸಿದ್ದಾರೆ. ಅವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರಲು 270 ಎಲೆಕ್ಟೋರಲ್‌ ಮತಗಳ ಮ್ಯಾಜಿಕ್‌ ಸಂಖ್ಯೆಯನ್ನು ಹೊಂದಬೇಕಿದೆ.

ಟ್ರಂಪ್‌ ಅವರ ವಂಚನೆಯ ಆರೋಪಗಳಿಗೆ ಸಂಯಮದಿಂದಲೇ ಪ್ರತಿಕ್ರಿಯಿಸಿರುವ ಬೈಡನ್‌, 'ನಮ್ಮ ದೇಶದಲ್ಲಿ ಎದುರಾಳಿಗಳ ಅಭಿಪ್ರಾಯಗಳನ್ನು ವಿರೋಧಿಸುವುದು ಎಷ್ಟು ಕಠಿಣವಾಗಿದೆ ಎಂಬುದು ನನಗೆ ತಿಳಿದಿದೆ' ಎಂದು ಹೇಳಿದ್ದಾರೆ.

'ಪ್ರಗತಿ ಸಾಧಿಸಲು ನಾವು ನಮ್ಮ ಎದುರಾಳಿಗಳನ್ನು ಶತ್ರುಗಳಂತೆ ಕಾಣುವುದನ್ನು ನಿಲ್ಲಿಸಬೇಕು. ನಾವು ಶತ್ರುಗಳಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ದ್ವೇಷದಿಂದ ಕೂಡಿದ ಯಾವುದೇ ಸಂಗತಿಗಳಿಗಿಂತ ಒಟ್ಟುಗೂಡಿಸುವ ಸಂಗತಿಗಳು ಅಮೆರಿಕನ್ನರನ್ನು ಬಲಶಾಲಿಯಾಗಿಸುತ್ತವೆ' ಎಂದು ಬೈಡನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವೆಡಾ, ನಾರ್ಥ್‌ ಕೊರೊಲಿನಾ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರೆದದ್ದು, ಬೈಡನ್‌ ಮತ್ತು ಟ್ರಂಪ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಮತ ಎಣಿಕೆ ಬಗ್ಗೆ ಟ್ರಂಪ್‌ ಅಸಮಾಧಾನ

‘ಚುನಾವಣಾ ಅವಧಿ ಮೀರಿದ ನಂತರ ಬಂದ ಇ-ಮೇಲ್ ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಮತಗಳ ಎಣಿಕೆ ಆರಂಭವಾಗಿದೆ. ಇದನ್ನು ತಡೆಯಲು ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಜಯಗಳಿಸಿರುವುದಾಗಿ ಹಾಲಿ ಅಧ್ಯಕ್ಷ ಟ್ರಂಪ್ ಅವರು, ಮತ ಎಣಿಕೆ ಮುಗಿಯುವ ಮುನ್ನವೇ ಘೋಷಿಸಿದ್ದರು. ಇದು ಗೊಂದಲಕ್ಕೆ ಕಾರಣವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಬೈಡನ್‌, 'ಟ್ರಂಪ್ ಅವರ ಹೇಳಿಕೆ ಅತಿರೇಕ ಮತ್ತು ಅಸಾಧಾರಣ. ಅವರು ಮತ ಎಣಿಕೆ ನಿಲ್ಲಿಸಲು ಸುಪ್ರೀಂ ಕೋರ್ಟ್‌ಗೆ ಹೋಗುವಾದರೆ, ಅದನ್ನು ಎದುರಿಸಲು ನಮ್ಮ ಕಾನೂನು ತಂಡ ಸಿದ್ಧವಿದೆ. ಆದರೆ ಯಾವ ಕಾರಣಕ್ಕೂ ಮತ ಎಣಿಕೆಯನ್ನು ನಿಲ್ಲಿಸಲು ಬಿಡುವುದಿಲ್ಲ. ಚಲಾವಣೆಯಾಗಿರುವ ಪ್ರತಿಯೊಂದು ಮತವೂ ಎಣಿಕೆಯಾಗಬೇಕು' ಎಂದು ಹೇಳಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು