ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: 9.96 ಕೋಟಿ ಮುಂಚಿತ ಮತ

Last Updated 3 ನವೆಂಬರ್ 2020, 17:31 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ, ಒಟ್ಟು ಮತದಾರರಲ್ಲಿ ಮೂರನೇ ಒಂದರಷ್ಟು ಮಂದಿ ಮುಂಚಿತ ಮತದಾನದ ಮೊರೆ ಹೋಗಿದ್ದಾರೆ. ಸುಮಾರು 10 ಕೋಟಿಯಷ್ಟು ಜನರು ಮುಂಚಿತ ಮತದಾನದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಈ ಬಾರಿ 25.76 ಕೋಟಿ ಜನರು ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 23.9 ಕೋಟಿ ಜನರಿಗಷ್ಟೇ ಮತದಾನಕ್ಕೆ ಅರ್ಹತೆ ದೊರೆತಿದೆ.2016ರ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಒಟ್ಟು ಮತಗಳ ಸಂಖ್ಯೆ 13.9 ಕೋಟಿ. ಆದರೆ, ಈ ಬಾರಿ 9.96 ಕೋಟಿ ಜನರು ಈಗಾಗಲೇ ಮುಂಚಿತ ಮತದಾನದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಹೀಗಾಗಿ ಒಟ್ಟು ಮತದಾನದ ಪ್ರಮಾಣ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಮತಗಟ್ಟೆಗೆ ಬಂದು ಮತ ಚಲಾಯಿಸುವುದರಿಂದ ಕೊರೊನಾ ಸೋಂಕು ತಗಲುವ ಅಪಾಯವಿದೆ. ಹೀಗಾಗಿ ಬಹಳಷ್ಟು ಜನರು ಮುಂಚಿತ ಮತದಾನದ ಮೊರೆ ಹೋಗಿದ್ದಾರೆ ಎಂದು ಫ್ಲಾರಿಡಾ ವಿಶ್ವವಿದ್ಯಾಲಯದ ‘ಯು.ಎಸ್‌ ಎಲೆಕ್ಷನ್ ಪ್ರಾಜೆಕ್ಟ್‌’ ಜಾಲತಾಣವು ವರದಿ ಮಾಡಿದೆ.

ಮುಂಚಿತ ಮತದಾನ ಮಾಡಿದವರಲ್ಲಿ 6.39 ಕೋಟಿ ಜನರು ಮಾತ್ರ ಇ-ಮೇಲ್ ಮೂಲಕ ಮತ ಚಲಾಯಿಸಿದ್ದಾರೆ. 3.57 ಕೋಟಿ ಜನರು ಮತಗಟ್ಟೆಗೆ ಬಂದು ಮತಚಲಾಯಿಸಿದ್ದಾರೆ. ಮುಂಚಿತ ಮತದಾನ ಮಾಡಿದವರಲ್ಲಿ ಮೂರನೇ ಎರಡರಷ್ಟು ಜನರು ಇ-ಮೇಲ್
ಮೂಲಕ ಮತ ಚಲಾಯಿಸಿದ್ದಾರೆ. ಈ ಹಿಂದೆ ಇ-ಮೇಲ್ ಮೂಲಕ ಚಲಾಯಿಸಿದ್ದ ಮತಗಳಿಗಿಂತ ಇದು ಹೆಚ್ಚು. ಹೀಗಾಗಿ ಕೋವಿಡ್‌ ಭಯವಿರುವ ಕಾರಣ, ಜನರು ಇ-ಮೇಲ್ ಮೊರೆ ಹೋಗಿದ್ದಾರೆ ಎಂದು ಅರ್ಥೈಸಬಹುದು ಎಂದು ಜಾಲತಾಣದಲ್ಲಿ ವಿಶ್ಲೇಷಿಸಲಾಗಿದೆ.

ಆದರೆ, 3.55 ಕೋಟಿ ಜನರು ಸ್ವತಃ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದು ಸಹ ಹಿಂದಿನ ಚುನಾವಣೆಗಳಲ್ಲಿನ ಮುಂಚಿತ ಮತದಾನಕ್ಕಿಂತ ಅಧಿಕ. ಇದು ಜನರಲ್ಲಿ ಈ ಚುನಾವಣೆಯ ಮೇಲೆ ಇರುವ ನಿರೀಕ್ಷೆಯನ್ನು ತೋರಿಸುತ್ತದೆ. ಈ ಸ್ವರೂಪದ ಬೆಳವಣಿಗೆಯು ಒಟ್ಟು ಮತದಾನದ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಜಾಲತಾಣದಲ್ಲಿ ವಿಶ್ಲೇಷಿಸಲಾಗಿದೆ.

ಆಧಾರ: ಯು.ಎಸ್ ಎಲೆಕ್ಷನ್ ಪ್ರಾಜೆಕ್ಟ್, ನ್ಯೂಯಾರ್ಕ್ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT