ಭಾನುವಾರ, ಅಕ್ಟೋಬರ್ 24, 2021
23 °C

ಬಾಂಬ್‌, ಬುಲೆಟ್‌ಗಳಿಂದ ಕೋವಿಡ್‌ ತಡೆಗಟ್ಟಲಾಗದು: ಜೋ ಬೈಡನ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮಂಗಳವಾರ ಮಾಡಿರುವ ಮೊದಲ ಭಾಷಣದಲ್ಲಿ ಎಲ್ಲ ರಾಷ್ಟ್ರಗಳು ಜಾಗತಿಕ ಸಮಸ್ಯೆಗಳ ಕುರಿತು ಪ್ರಸ್ತಾಪಿಸುವಂತೆ ಕರೆ ನೀಡಿದ್ದಾರೆ. ಕೋವಿಡ್‌–19 ಸಾಂಕ್ರಾಮಿ, ಹವಾಮಾನ ವೈಪರೀತ್ಯ ಹಾಗೂ ಮಾನವ ಹಕ್ಕುಗಳ ಕುರಿತು ಮಾತನಾಡುವಂತೆ ಕೇಳಿದ್ದಾರೆ.

ಚೀನಾದೊಂದಿಗೆ ಅಮೆರಿಕವು 'ಹೊಸ ಶೀತಲ ಸಮರ' ನಡೆಸಲು ಬಯಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಫ್ಗಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿರುವ ಕುರಿತು ಎದುರಿಸಿರುವ ಟೀಕೆಗಳು ಹಾಗೂ ಫ್ರಾನ್ಸ್‌ನೊಂದಿಗೆ ಎದ್ದಿರುವ ರಾಜತಾಂತ್ರಿಕ ಹೋಯ್ದಾಟಗಳ ಕುರಿತು ಬೈಡನ್‌ ಪ್ರಸ್ತಾಪಿಸಲಿಲ್ಲ. ಎಲ್ಲರೂ ಜೊತೆಯಾಗಿ ಕಾರ್ಯನಿರ್ವಹಿಸುವ ಅಗತ್ಯತೆಯನ್ನು ವಿಶ್ವದ ಮುಖಂಡರ ಮುಂದಿಟ್ಟರು.

ಅಮೆರಿಕವು ವಿಶ್ವಾಸಾರ್ಹ ಅಂತರರಾಷ್ಟ್ರೀಯ ಪಾಲುದಾರ ರಾಷ್ಟ್ರವಾಗಿ ಮುಂದುವರಿಯಲಿದೆ ಎಂದಿರುವ ಬೈಡನ್‌, 'ಬಿಗಿಯಾದ ರಾಜತಾಂತ್ರಿಕತೆಯ ಹೊಸ ಯುಗಾರಂಭ ಮಾಡುತ್ತಿದ್ದೇವೆ. ಜಗತ್ತಿನಾದ್ಯಂತ ಜನರ ಉನ್ನತಿಗಾಗಿ ಹೊಸ ರೀತಿಯಲ್ಲಿ ನಮ್ಮ ಹೂಡಿಕೆ ನಡೆಯಲಿದೆ' ಎಂದು ಹೇಳಿದರು.

ಇದನ್ನೂ ಓದಿ– ಅಮೆರಿಕಕ್ಕೆ ಪ್ರಧಾನಿ ಮೋದಿ: ಬೈಡನ್‌ ಜೊತೆ ಶ್ವೇತ ಭವನದಲ್ಲಿ ನಡೆಯಲಿದೆ ಚರ್ಚೆ

 

'ಬಾಂಬ್‌ಗಳು ಮತ್ತು ಬುಲೆಟ್‌ಗಳು ಕೋವಿಡ್‌–19 ಅನ್ನು ತಡೆಗಟ್ಟಲು ಸಾಧ್ಯವಿಲ್ಲ ಅಥವಾ ಮುಂಬರುವ ಹೊಸ ಸ್ವರೂಪದ ವೈರಸ್‌ಗಳನ್ನೂ ತಡೆಯಲಾಗದು. ಶಸ್ತ್ರಾಸ್ತ್ರ ಬಲಗಳಿಂದ ಇಂದು ನಮ್ಮ ಅತಿ ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ' ಎಂದರು.

 

ಕಠಿಣ ಪರಿಸ್ಥಿತಿಯಲ್ಲಿ ವಿಶ್ವಸಂಸ್ಥೆಯ ಪಾತ್ರ ಮತ್ತು ಅದರ ಕಾರ್ಯದ ಕುರಿತು ಮಾತನಾಡಿದ ಬೈಡನ್‌, ಅಮೆರಿಕದ ಸಹಕಾರದ ಭರವಸೆಯನ್ನು ಒತ್ತಿ ಹೇಳಿದರು. ಪರಿಸರ ಸ್ನೇಹಿ ಇಂಧನ ಬಳಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಬಡ ರಾಷ್ಟ್ರಗಳಿಗೆ ಒದಗಿಸುವ ಹಣಕಾಸು ಸಹಕಾರವನ್ನು ದುಪ್ಪಟ್ಟುಗೊಳಿಸುವ ಪ್ರತಿಜ್ಞೆ ಮಾಡಿದ್ದಾರೆ. 'ವರ್ಷಕ್ಕೆ ಹಣಕಾಸು ಸಹಕಾರವನ್ನು 11.4 ಬಿಲಿಯನ್‌ ಡಾಲರ್‌ಗಳಿಗೆ ಹೆಚ್ಚಿಸಲಾಗುತ್ತಿದೆ' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು