ಅರುಣಾಚಲದ ವಿವಾದಿತ ಪ್ರದೇಶದಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಅಮೆರಿಕದ ವರದಿ
ನವದೆಹಲಿ: ಟಿಬೆಟ್ ಸ್ವಾಯತ್ತ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ನಡುವಣ ವಿವಾದಿತ ಪ್ರದೇಶದಲ್ಲಿ ಚೀನಾವು 100 ಮನೆಗಳನ್ನು ಒಳಗೊಂಡ ಗ್ರಾಮ ನಿರ್ಮಾಣ ಮಾಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಾರ್ಷಿಕ ವರದಿ ತಿಳಿಸಿದೆ. ಚೀನಾದ ಸೇನಾ ಮತ್ತು ಭದ್ರತೆಗೆ ಸಂಬಂಧಿಸಿದ ಅಭಿವೃದ್ಧಿ ಕುರಿತ ವರದಿ ಇದಾಗಿದೆ.
ಚೀನಾದ ಈ ನಡೆ ಮತ್ತು ಗಡಿಯಲ್ಲಿ ಇತರ ಮೂಲಸೌಕರ್ಯ ಅಭಿವೃದ್ಧಿ ವಿಚಾರ ಭಾರತದ ಮಾಧ್ಯಮಗಳು ಹಾಗೂ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗಾಗಿ ಚೀನಾವು ಭಾರತವನ್ನು ದೂರಲು ಯತ್ನಿಸಿದೆ ಎಂದೂ ವರದಿ ಹೇಳಿದೆ.
ಓದಿ: ಗಡಿ ವಿವಾದ: ಹೊಸ ಭೂ ಗಡಿ ಕಾನೂನು ಅಂಗೀಕರಿಸಿದ ಚೀನಾ
ಎಲ್‌ಎಸಿ ಬಳಿ ಸೇನಾ ನಿಯೋಜನೆಗೆ ಭಾರತದ ಪ್ರಚೋದನೆಯೇ ಕಾರಣ ಎನ್ನುತ್ತಿರುವ ಚೀನಾ ಗಡಿ ಪ್ರದೇಶಗಳಲ್ಲಿ ಭಾರತವು ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸದ ಹೊರತು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದೂ ಹೇಳುತ್ತಿದೆ. ಭಾರತವು ಪ್ರತಿಪಾದಿಸುತ್ತಿರುವ ಗಡಿಯನ್ನು ಒಪ್ಪಿಕೊಳ್ಳಲು ಚೀನಾ ಸಿದ್ಧವಿಲ್ಲ ಎಂದು ಅಲ್ಲಿನ ಸರ್ಕಾರಿ ನಿಯಂತ್ರಿತ ಮಾಧ್ಯಮ ಹೇಳುತ್ತಿದೆ. ಗಡಿಯಲ್ಲಿ ಯೋಧರ ಮುಖಾಮುಖಿ ಸಂದರ್ಭದಲ್ಲಿ ಭಾರತವು ಅಮೆರಿಕದ ಜತೆಗೆ ಬಾಂಧವ್ಯ ವೃದ್ಧಿಸಿಕೊಳ್ಳುವುದೂ ಚೀನಾಕ್ಕೆ ಬೇಕಿರಲಿಲ್ಲ. ಭಾರತವು ಅಮೆರಿಕದ ನೀತಿಯನ್ನು ಗಡಿಯಲ್ಲಿ ಉಪಯೋಗಿಸುತ್ತಿದೆ ಎಂಬುದಾಗಿ ಚೀನಾ ಮಾಧ್ಯಮ ದೂರಿತ್ತು ಎಂದೂ ವರದಿ ಹೇಳಿದೆ.
ಭಾರತದ ಜತೆಗಿನ ಬಾಂಧವ್ಯದ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಡಿ ಎಂದು ಅಮೆರಿಕದ ಅಧಿಕಾರಿಗಳಿಗೆ ಚೀನಾದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು ಎಂದೂ ವರದಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.