ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ ಐಸಿಸ್‌ ದಾಳಿ: ಅಮೆರಿಕದ 13 ಯೋಧರ ಸಾವು, ಖಚಿತ ಪಡಿಸಿದ ಪೆಂಟಗನ್‌

Last Updated 27 ಆಗಸ್ಟ್ 2021, 2:23 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ನಡೆಸಿರುವ ಬಾಂಬ್‌ ದಾಳಿಯಲ್ಲಿ ಅಮೆರಿಕದ ಹದಿಮೂರು ಯೋಧರು ಸಾವಿಗೀಡಾಗಿದ್ದು, 18 ಯೋಧರು ಗಾಯಗೊಂಡಿದ್ದಾರೆ. ಐಸಿಸ್ ಉಗ್ರರ ಇತ್ತೀಚಿನ ಭೀಕರ ದಾಳಿ ಇದಾಗಿದೆ ಎಂದು ಪೆಂಟಗನ್‌ ಹೇಳಿದೆ.

ಗುರುವಾರ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಭದ್ರತೆಗೆ ನಿಯೋಜನೆಯಾಗಿದ್ದ ಅಮೆರಿಕದ ಯೋಧರು ಮತ್ತು ನಾಗರಿಕರ ಮೇಲೆ ಐಸಿಸ್‌ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್‌ನ ಕಮಾಂಡರ್‌ ಜನರಲ್‌ ಕೆನೆತ್‌ ಫ್ರಾಂಕ್ಲಿನ್‌ ಮೆಕೆಂಜಿ ವರದಿಗಾರರಿಗೆ ತಿಳಿಸಿದ್ದಾರೆ.

ಉಗ್ರರು ಗುಂಡಿನ ದಾಳಿಯ ಜೊತೆಗೆ ಪ್ರವೇಶ ದ್ವಾರದ ಸಮೀಪ ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಅಫ್ಗಾನಿಸ್ತಾನದ ಹಲವು ನಾಗರಿಕರು ಮೃತಪಟ್ಟಿದ್ದಾರೆ. ಕೆಲವರಿಗೆ ವಿಮಾನ ನಿಲ್ದಾಣದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಅಮೆರಿಕದ 13 ಯೋಧರು ಸಾವಿಗೀಡಾಗಿದ್ದಾರೆ, 18 ಯೋಧರು ಗಾಯಗೊಂಡಿದ್ದಾರೆ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಮಾಹಿತಿ ನೀಡಿದೆ.

ಅಫ್ಗನ್‌ ಅಧಿಕಾರಿಗಳ ಪ್ರಕಾರ, ಕನಿಷ್ಠ 60 ಮಂದಿ ಅಫ್ಗನ್ನರು ಸಾವಿಗೀಡಾಗಿದ್ದಾರೆ ಹಾಗೂ 143 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಹಲವು ಮಂದಿ ಅಫ್ಗನ್‌ ನಾಗರಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ದಾಳಿಯಲ್ಲಿ ಸಾವಿಗೀಡಾಗಿರುವವರ ಖಚಿತ ಸಂಖ್ಯೆ ಇನ್ನಷ್ಟೇ ಸಿಗಬೇಕಿದೆ.

ಗಾಯಗೊಂಡಿರುವ ಯೋಧರನ್ನು ವೈದ್ಯಕೀಯ ವ್ಯವಸ್ಥೆಯನ್ನು ಒಳಗೊಂಡ ವಿಶೇಷ ಸಿ–17 ವಿಮಾನಗಳ ಮೂಲಕ ಅಫ್ಗಾನಿಸ್ತಾನದಿಂದ ಸ್ಥಳಾಂತರಿಸಲಾಗುತ್ತದೆ ಎಂದು ಸೆಂಟ್ರಲ್‌ ಕಮಾಂಡ್‌ನ ವಕ್ತಾರ ಕ್ಯಾಪ್ಟನ್‌ ಬಿಲ್‌ ಅರ್ಬನ್‌ ಹೇಳಿದ್ದಾರೆ.

ಐಸಿಸ್‌ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಮೆಕೆಂಜಿ, 'ಹಲವು ದಿನಗಳಿಂದ ನಾವು ಈ ಬಗ್ಗೆ ಮಾತನಾಡುತ್ತಿದ್ದೇವೆ. ಕೆಲವು ಗಂಟೆಗಳ ಹಿಂದಷ್ಟೇ ಬೆದರಿಕೆಯು ನೈಜ ದಾಳಿಯಾಗಿ ನಡೆದು ಹೋಗಿದೆ. ಅವರು ಇಂಥ ದಾಳಿಗಳನ್ನು ಮುಂದುವರಿಸುವ ಸಾಧ್ಯತೆ ಇದೆ. ದಾಳಿಗಳನ್ನು ಎದುರಿಸಲು ಅಮೆರಿಕ ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತಿದೆ. ವಿಮಾನ ನಿಲ್ದಾಣದ ಹೊರಗೆ ಭದ್ರತೆಯ ಹೊಣೆ ಹೊತ್ತಿರುವ ತಾಲಿಬಾನಿಗಳನ್ನೂ ಸಂಪರ್ಕಿಸುತ್ತಿದ್ದೇವೆ. ದಾಳಿ ಮತ್ತು ಒತ್ತಡಗಳ ನಡುವೆಯೂ ಜನರನ್ನು ಏರ್‌ಲಿಫ್ಟ್‌ ಮಾಡುವ ಕಾರ್ಯಾಚರಣೆ ಮುಂದುವರಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ವಿಮಾನ ನಿಲ್ದಾಣದೊಳಗೆ ಜನರ ಪ್ರವೇಶ ಮುಂದುವರಿಸಲಾಗಿದೆ' ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT