ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದ ಕಮಲಾ ಹ್ಯಾರಿಸ್

Last Updated 27 ಜನವರಿ 2021, 6:04 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಕೋವಿಡ್-19 ಲಸಿಕೆಯ ಎರಡನೇ ಡೋಸ್ ಚುಚ್ಚುಮದ್ದನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕನ್ನರು ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಲ್ಲಿ (ಎನ್‌ಐಎಚ್) ಕಮಲಾ ಹ್ಯಾರಿಸ್ ಲಸಿಕೆಯನ್ನು ಪಡೆದರು. ನಿಮ್ಮ ಸರದಿ ಬಂದಾಗ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಮನವಿ ಮಾಡುತ್ತೇನೆ. ಇದು ಪ್ರಾಣವನ್ನು ರಕ್ಷಿಸಲಿದೆ ಎಂದು ಕಮಲಾ ಹ್ಯಾರಿಸ್ ತಿಳಿಸಿದರು.

ಅಮೆರಿಕ ಉಪಾಧ್ಯಕ್ಷೆಯಾಗಿ ನೇಮಕವಾಗುವ ಮುನ್ನವೇ ಕಳೆದ ವರ್ಷಾಂತ್ಯದಲ್ಲಿ ಡಿಸೆಂಬರ್ 29ರಂದು ಕಮಲಾ ಹ್ಯಾರಿಸ್, ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದಿದ್ದರು.

ಅಮೆರಿಕದಲ್ಲಿ ಡಿಸೆಂಬರ್ ತಿಂಗಳಲ್ಲಿ ಫೈಜರ್ ಹಾಗೂ ಮಾಡರ್ನಾಗಳೆಂಬ ಎರಡು ಕೋವಿಡ್-19 ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿತ್ತು. ಅಲ್ಲದೆ ಕಳೆದೊಂದು ವಾರದಿಂದ ದಿನಕ್ಕೆ 10ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗುತ್ತಿದೆ.

ತಾವು ಅಧಿಕಾರಕ್ಕೇರಿದ ಮೊದಲ 100 ದಿನಗಳಲ್ಲಿ 10 ಕೋಟಿ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿರುವುದಾಗಿ ನೂತನ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದರು.

ಏತನ್ಮಧ್ಯೆ ಈ ಬೇಸಿಗೆಯಲ್ಲಿ 30 ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡುವ ಸಲುವಾಗಿ 60 ಕೋಟಿ ಡೋಸ್‌ಗಳ ಗುರಿ ತಲುಪಲು ಮತ್ತಷ್ಟು 20 ಕೋಟಿ ಕೋವಿಡ್-19 ಲಸಿಕೆ ಡೋಸ್‌ಗಳನ್ನು ಖರೀದಿಸಲು ಅಮೆರಿಕ ನಿರ್ಧರಿಸಿದೆ.

ಜನವರಿ 20ರಂದು ಭಾರತೀಯ ಸಂಜಾತೆ 56 ವರ್ಷದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕಮಲಾ ಹ್ಯಾರಿಸ್ 'ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ'ಯಾಗುವ ಮೂಲಕ ಇತಿಹಾಸ ರಚಿಸಿದ್ದರು. ಅಷ್ಟೇ ಅಲ್ಲದೆ ಅಮೆರಿಕ ಉಪಾಧ್ಯಕ್ಷೆ ಸ್ಥಾನ ವಹಿಸುತ್ತಿರುವ 'ದಕ್ಷಿಣ ಏಷ್ಯಾದ ಮೊದಲ ಮಹಿಳಾ ಉಪಾಧ್ಯಕ್ಷೆ' ಮತ್ತು 'ಮೊದಲ ಕಪ್ಪು ವರ್ಣೀಯ' ಎಂಬ ಹಿರಿಮೆಗೂ ಪಾತ್ರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT