ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ತೊರೆದ ಪುಟಿನ್‌ ಸಲಹೆಗಾರ; ಉಕ್ರೇನ್‌ ಮೇಲಿನ ರಷ್ಯಾ ದಾಳಿಗೆ ವಿರೋಧ

Last Updated 24 ಮಾರ್ಚ್ 2022, 5:12 IST
ಅಕ್ಷರ ಗಾತ್ರ

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯನ್ನು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಸಲಹೆಗಾರ ವಿರೋಧಿಸಿದ್ದಾರೆ. ಸ್ಥಾನದಿಂದ ಕೆಳಗಿಳಿದಿರುವ ಅವರು ರಷ್ಯಾ ತೊರೆದು ಹೋಗಿರುವುದಾಗಿ ವರದಿಯಾಗಿದೆ.

1990ರ ದಶಕದ ಆರ್ಥಿಕ ಸುಧಾರಕರ ಪೈಕಿ ಪುಟಿನ್‌ ಅವರ ಸರ್ಕಾರದಲ್ಲಿ ಮುಂದುವರಿದಿರುವ ಕೆಲವೇ ಜನರ ಪೈಕಿ ಆ್ಯನಟೊಲಿ ಚುಬಾಯ್‌ (66) ಸಹ ಒಬ್ಬರಾಗಿದ್ದರು. ಅವರು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಸಾಧಿಸಿದ್ದರು.

ಪ್ರಸ್ತುತ ಬೆಳವಣಿಗೆಯ ಕುರಿತು ರಷ್ಯಾ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.ಆ್ಯನಟೊಲಿ ಅವರು ಪತ್ನಿಯೊಂದಿಗೆ ಟರ್ಕಿಯಲ್ಲಿರುವುದಾಗಿ ವರದಿಯಾಗಿದೆ.

ರಷ್ಯಾದಲ್ಲಿ 1990ರ ಖಾಸಗೀಕರಣದ ನಿರ್ಮಾತೃ ಎಂದೇ ಹೆಸರಾಗಿರುವ ಆ್ಯನಟೊಲಿ ಚುಬಾಯ್‌ ಅವರು ಪುಟಿನ್‌ ಅವರೊಂದಿಗೆ ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದರು. ಪುಟಿನ್‌ ಅಧಿಕಾರಕ್ಕೇರುವುದನ್ನು ಸ್ವಾಗತಿಸಿದ್ದರು ಹಾಗೂ ಪುಟಿನ್‌ ಆಡಳಿತದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಕಳೆದ ವರ್ಷ ಆ್ಯನಟೊಲಿ ಅವರನ್ನು ಹವಾಮಾನಕ್ಕೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿಯ ಪ್ರತಿನಿಧಿಯಾಗಿ ಪುಟಿನ್‌ ಘೋಷಿಸಿದ್ದರು.

ಆ್ಯನಟೊಲಿ ಅವರು ತಮ್ಮ ರಾಜೀನಾಮೆಯ ಕುರಿತು ಸಹೋದ್ಯೋಗಿಗಳು ಮತ್ತು ಸ್ನೇಹಿತರಿಗೆ ಮಂಗಳವಾರವೇ ಪತ್ರ ಮುಖೇನ ತಿಳಿಸಿದ್ದರು. ಸ್ಥಾನದಿಂದ ಹೊರ ಬರುವ ಕುರಿತು ವಾರದ ಹಿಂದೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ಸೂಚನೆ ನೀಡಿದ್ದರು. ಸಹವರ್ತಿ, ಆರ್ಥಿಕ ಸುಧಾರಕ ದಿವಂಗತ ಯೆಗೋರ್‌ ಗೈಡರ್‌ ಅವರ ನೆನಪಿನಲ್ಲಿ ಆ್ಯನಟೊಲಿ, 'ನೀವು ಕಾರ್ಯತಂತ್ರಕ್ಕೆ ಸಂಬಂಧಿಸಿದ ಅಪಾಯಗಳ ಕುರಿತು ನನಗಿಂತಲೂ ಚೆನ್ನಾಗಿ ಅರಿತಿದ್ದಿರಿ ಹಾಗೂ ನಾನು ತಪ್ಪಾಗಿ ಅರ್ಥೈಸಿಕೊಂಡಿದ್ದೆ' ಎಂದು ಪ್ರಕಟಿಸಿದ್ದರು.

ಪುಟಿನ್‌ ಆಡಳಿತದಲ್ಲಿ ಪರಮಾಧಿಕಾರದ ಹಂಬಲ ಬಗ್ಗೆ ಸೋವಿಯತ್‌ ಒಕ್ಕೂಟಕ್ಕೆ ಆಕರ್ಷಣೆ ಮೂಡುತ್ತಿರುವ ಬಗ್ಗೆ ಗೈಡರ್‌ ಅವರು 2006ರಲ್ಲಿ ಪ್ರಕಟಿಸಿದ್ದ 'ಡೆತ್‌ ಆಫ್‌ ಎಂಪೈರ್‌' ಪುಸ್ತಕದಲ್ಲಿ ಎಚ್ಚರಿಸಿದ್ದರು. ‌

ರಹಸ್ಯವಾಗಿ ಅಮೆರಿಕದೊಂದಿಗೆ ಕೈಜೋಡಿಸಿರುವ ರಷ್ಯಾದ ದ್ರೋಹಿಗಳನ್ನು ಕಿತ್ತೊಗೆಯಲಾಗುತ್ತದೆ ಎಂದು ಮಾರ್ಚ್‌ 16ರಂದು ಪುಟಿನ್‌ ಗುಡುಗಿದ್ದರು. ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣದ ವಿರುದ್ಧ ಮಾತನಾಡುವವರ ದನಿಯನ್ನು ಅಡಗಿಸಲು ಸರ್ಕಾರ ಒತ್ತಡ ಹೇರಿದೆ. ರಷ್ಯಾ ಆರ್ಥಿಕ ಸಂಕಷ್ಟ ಎದುರಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಕಾರಣ ಎಂದು ಅಲ್ಲಿನ ಮುಖಂಡರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT