ಮಂಗಳವಾರ, ಅಕ್ಟೋಬರ್ 20, 2020
21 °C

ಕೋವಿಡ್-19 ಲಸಿಕೆ ಪ್ರಯೋಗ: ಲಸಿಕೆ ಓಟದಲ್ಲಿ ನಾವು ಎಲ್ಲಿದ್ದೇವೆ?

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ವಿಶ್ವದಾದ್ಯಂತ ಔಷಧ ತಯಾರಕರು ಮತ್ತು ಸಂಶೋಧನಾ ಕೇಂದ್ರಗಳು ಕೋವಿಡ್ -19 ಲಸಿಕೆಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಹತ್ತಾರು ಸಹಭಾಗಿಗಳನ್ನು ಒಳಗೊಂಡ ಹಲವು ಕಂಪನಿಗಳ ದೊಡ್ಡ ಜಾಗತಿಕ ಪ್ರಯೋಗಗಳು ಉತ್ತಮವಾಗಿಯೇ ನಡೆಯುತ್ತಿವೆ.

ಕೆಲವು ಕಂಪನಿಗಳು ತಮ್ಮ ಆರಂಭಿಕ ಸಂಶೋಧನೆಗಳನ್ನು ಅನಾವರಣಗೊಳಿಸುತ್ತಿವೆ - ಕೆನಡಾ ಮತ್ತು ಐರೋಪ್ಯ ದೇಶಗಳ ಮೇಲ್ವಿಚಾರಕರು ಈಗಾಗಲೇ ಕೆಲವು ಲಸಿಕೆಗಳ ಆರಂಭಿಕ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. 

ಜರ್ಮನ್ ಪಾಲುದಾರ ಬಯೋಟೆಕ್ ಎಸ್ಇಯೊಂದಿಗೆ ಅಮೆರಿಕದ ಔಷಧ ತಯಾರಕ ಸಂಸ್ಥೆಯಾದ ಫಿಜರ್ ಐಎನ್‌ಸಿ, ಅಮೆರಿಕದ ಫಾರ್ಮಾ ಕಂಪನಿ ಮಾಡೆರ್ನಾ ಮತ್ತು ಬ್ರಿಟನ್ ಮೂಲದ ಅಸ್ಟ್ರಾಜೆನೆಕಾ ಪಿಎಲ್‌ಸಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರೊಂದಿಗೆ ಮುಂದಿನ ಎರಡು ತಿಂಗಳಲ್ಲಿ ತಮ್ಮ ವಿವಿಧ ದೊಡ್ಡ ಪ್ರಯೋಗಗಳಿಂದ ದತ್ತಾಂಶದ ಆರಂಭಿಕ ವಿಶ್ಲೇಷಣೆಯನ್ನು ಒದಗಿಸಬಹುದು. ಈ ಪೈಕಿ ಜಾನ್ಸನ್ ಅಂಡ್ ಜಾನ್ಸನ್ ಕೂಡ ಹಿಂದುಳಿದಿಲ್ಲ.

ಲಸಿಕೆ ಪಡೆದವರಲ್ಲಿ ಕೋವಿಡ್ -19 ಸೋಂಕಿನ ಪ್ರಮಾಣವು ಕಡಿಮೆಯಾಗಿದೆಯೇ ಎಂಬುದನ್ನು ನೋಡಲು ಆರೋಗ್ಯವಂತ ಸ್ವಯಂಸೇವಕರನ್ನು ಪರೀಕ್ಷಿಸುತ್ತಿವೆ. ಅಧ್ಯಯನಗಳು ಸ್ವಾಭಾವಿಕವಾಗಿ ಕೋವಿಡ್ -19 ಸೋಂಕಿಗೆ ಒಳಗಾಗುವವರ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ಫಲಿತಾಂಶಗಳನ್ನು ಪಡೆಯಲು ಎಷ್ಟು ಸಮಯ  ತೆಗೆದುಕೊಳ್ಳುತ್ತದೆ ಎಂಬುದು ಪ್ರಯೋಗಗಳನ್ನು ನಡೆಸುವ ಸ್ಥಳದಲ್ಲಿ ವೈರಸ್ ಎಷ್ಟು ವ್ಯಾಪಕವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 

ಲಸಿಕೆ ಕಾರ್ಯನಿರ್ವಹಿಸುತ್ತದೆಯೇ ಎಂದು ನಮಗೆ ಹೇಗೆ ತಿಳಿಯುತ್ತದೆ?

ಅಮೆರಿಕ, ಐರೋಪ್ಯ ಒಕ್ಕೂಟ, ಬ್ರಿಟನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಪರಿಣಾಮಕಾರಿ ಫಲಿತಾಂಶಕ್ಕಾಗಿ ಒಂದೇ ರೀತಿಯ ಕನಿಷ್ಠ ಮಾನದಂಡಗಳನ್ನು ನಿಗದಿಪಡಿಸಿದೆ. ಲಸಿಕೆಗಳು ಕನಿಷ್ಠ ಶೇ 50 ರಷ್ಟು ಪರಿಣಾಮಕಾರಿ ಎಂದು ಫಲಿತಾಂಶವನ್ನು ನೀಡಬೇಕು. 

ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆಯೇ ಎನ್ನುವುದನ್ನು ಮೇಲ್ವಿಚಾರಣೆ ಮಾಡಲು ಸ್ವತಂತ್ರ ಘಟಕಗಳು ಪ್ರಯೋಗಗಳನ್ನು ನೋಡಿಕೊಳ್ಳುತ್ತವೆ. ನಿರ್ದಿಷ್ಟ ಸಂಖ್ಯೆಯ ಜನರು ಸೋಂಕಿಗೆ ಒಳಗಾದ ನಂತರ ಈ ಮಾಹಿತಿ ಸುರಕ್ಷತಾ ಮೇಲ್ವಿಚಾರಣಾ ಮಂಡಳಿಗಳು ಪೂರ್ವ ನಿರ್ಧಾರಿತ ಮೈಲಿಗಲ್ಲುಗಳಲ್ಲಿ ಮಧ್ಯಂತರ ಫಲಿತಾಂಶಗಳನ್ನು ನೋಡುತ್ತವೆ. 

ಪ್ಲೇಸ್‌ಬೊಗಿಂತ ಲಸಿಕೆಯು ಗಮನಾರ್ಹವಾಗಿ ಉತ್ತಮ ಎನಿಸಿದರೆ ಕಂಪನಿಗಳು ತುರ್ತು ಬಳಕೆಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ಅಧ್ಯಯನವನ್ನು ನಿಲ್ಲಿಸಬಹುದು ಅಥವಾ ಅದರ ಉದ್ದೇಶಿತ ತೀರ್ಮಾನಕ್ಕೆ ಮುಂದುವರಿಯಬಹುದು. ಲಸಿಕೆಯು ಅಸುರಕ್ಷಿತ ಎನಿಸಿದರೆ ಅದರ ಪ್ರಯೋಗವನ್ನು ನಿಲ್ಲಿಸಬಹುದಾಗಿದೆ.

ಏನಿದು ಪ್ಲೇಸ್‌ಬೊ?

ಪ್ಲೇಸ್‌ಬೊ (ಮೂಲ ಔಷಧದ ಅಂಶಗಳನ್ನು ಒಳಗೊಂಡ ಜೀವರಾಸಾಯನಿಕ ಸಂಯುಕ್ತ)  ಎನ್ನುವುದು ಯಾವುದೇ ಚಿಕಿತ್ಸಕ ಮೌಲ್ಯವನ್ನು ಹೊಂದಿರದಂತೆ ವಿನ್ಯಾಸಗೊಳಿಸಲಾದ ಒಂದು ವಸ್ತು ಅಥವಾ ಚಿಕಿತ್ಸೆಯಾಗಿದೆ. ಸಾಮಾನ್ಯ ಪ್ಲೇಸ್‌ಬೊಗಳಲ್ಲಿ ಜಡ ಮಾತ್ರೆಗಳು, ಜಡ ಚುಚ್ಚುಮದ್ದು, ಶಾಮ್ ಶಸ್ತ್ರಚಿಕಿತ್ಸೆ (ಮಧ್ಯಸ್ಥಿಕೆ ವಹಿಸುವ ವೈಜ್ಞಾನಿಕ ನಿಯಂತ್ರಣ) ಮತ್ತು ಇತರ ಕಾರ್ಯವಿಧಾನಗಳು ಸೇರಿವೆ.

ಇದು ಯಾವುದೇ ಚಿಕಿತ್ಸಕ ಪರಿಣಾಮವನ್ನು ಹೊಂದಿರದ ವಸ್ತುವಾಗಿದ್ದು, ಹೊಸ ಔಷಧಗಳನ್ನು ಪರೀಕ್ಷಿಸುವಲ್ಲಿ ನಿಯಂತ್ರಣವಾಗಿ ಬಳಸಲಾಗುತ್ತದೆ.

ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗುವ ಮೊದಲು ಅದು ಸುರಕ್ಷಿತವೆಂದು ಖಚಿತಪಡಿಸಿಕೊಳ್ಳಲಾಗುತ್ತದೆಯೇ?

ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಫಲಿತಾಂಶ ಲಭ್ಯವಾಗದ ಹೊರತು ಅದನ್ನು ಅನುಮೋದಿಸುವುದಿಲ್ಲ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತಾಲಯ (ಎಫ್‌ಡಿಎ) ಹೇಳಿದೆ. ಮಂಗಳವಾರವಷ್ಟೇ ಅಮೆರಿಕದ ಲಸಿಕೆಗಳಿಗೆ ಇನ್ನಷ್ಟು ಹೆಚ್ಚಿನ ಕಠಿಣ ಸುರಕ್ಷತಾ ಮಾರ್ಗಸೂಚಿಗಳನ್ನು ಸೇರಿಸಿದೆ. ಲಸಿಕೆ ತಯಾರಕರು ತಮ್ಮ ಅಂತಿಮ ಹಂತದ ಲಸಿಕೆಯನ್ನು ಸ್ವೀಕರಿಸಿದ ನಂತರ ಕನಿಷ್ಠ ಎರಡು ತಿಂಗಳವರೆಗೆ ಯಾವುದೇ ಅಡ್ಡಪರಿಣಾಮಗಳು ಉಂಟಾಗಬಹುದೇ ಎಂಬುದನ್ನು ಅರಿಯಲು ಪ್ರಾಯೋಗಿಕ ವಿಷಯಗಳನ್ನು ಅನುಸರಿಸಬೇಕು ಎಂದು ಎಫ್‌ಡಿಎ ಹೇಳುತ್ತದೆ. 

ಪ್ರಯೋಗದಲ್ಲಿ ಭಾಗವಹಿಸುವವರಲ್ಲಿ ಅರ್ಧದಷ್ಟು ಮಂದಿಯಿಂದ ಮಾಹಿತಿಯನ್ನು ಸಂಗ್ರಹಿಸಿದ ನಂತರವೇ ಏಜೆನ್ಸಿ, ತುರ್ತು ಬಳಕೆಯ ದೃಢೀಕರಣವನ್ನು (ಇಯುಎ) ಪರಿಗಣಿಸುತ್ತದೆ. ಯುಕೆ ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಉತ್ಪನ್ನಗಳ ನಿಯಂತ್ರಣ ಸಂಸ್ಥೆಯು ಇಂಗ್ಲೆಂಡ್‌ಗೆ ಅಗತ್ಯವಿರುವ ಲಸಿಕೆಗಳನ್ನು ಪರಿಶೀಲಿಸುತ್ತದೆ ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯು ಯುರೋಪಿಯನ್ ಒಕ್ಕೂಟದಲ್ಲಿನ ಬಳಕೆಗಾಗಿ ಲಸಿಕೆಗಳನ್ನು ಪರಿಶೀಲಿಸುತ್ತದೆ.

ಇವು ಮೊದಲ ಅನುಮೋದಿತ ಕೊರೊನಾ ವೈರಸ್ ಲಸಿಕೆಗಳಾಗಬಹುದೇ?

ಹೌದು, ಚೀನಾ ಮತ್ತು ರಷ್ಯಾ ಒಂದೇ ಹಂತದಲ್ಲಿದ್ದರೂ, ಜುಲೈನಲ್ಲಿ ಚೀನಾ ತುರ್ತು ಬಳಕೆಯ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿರುವ ಅಗತ್ಯ ಕಾರ್ಮಿಕರು ಮತ್ತು ಇತರರನ್ನು ಗುರಿಯಾಗಿಟ್ಟುಕೊಂಡು ಲಕ್ಷಾಂತರ ಜನರಿಗೆ ಲಸಿಕೆಯನ್ನು ನೀಡಿದೆ.

ಚೀನಾ ನ್ಯಾಷನಲ್ ಬಯೋಟೆಕ್ ಗ್ರೂಪ್ (ಸಿಎನ್‌ಬಿಜಿ), ಕ್ಯಾನ್‌ಸಿನೊ ಬಯೋಲಾಜಿಕ್ಸ್ ಮತ್ತು ಸಿನೋವಾಕ್ ಸೇರಿದಂತೆ ಕನಿಷ್ಠ ನಾಲ್ಕು ಲಸಿಕೆಗಳು ಚಿಕಿತ್ಸೆಗೆ ಲಭ್ಯವಾಗುವ ಸನಿಹದಲ್ಲಿವೆ. ಸಿನೋವಾಕ್ ಮತ್ತು ಸಿಎನ್‌ಬಿಜಿ ನವೆಂಬರ್‌ಗೂ ಮುಂಚಿನ ಪ್ರಾಯೋಗಿಕ ದತ್ತಾಂಶವನ್ನು ನಿರೀಕ್ಷಿಸುತ್ತಿವೆ ಎಂದು ಹೇಳಿವೆ.

ರಷ್ಯಾದ ಗಮಲೇಯ ಇನ್‌ಸ್ಟಿಟ್ಯೂಟ್ 40,000 ವ್ಯಕ್ತಿಗಳ ಮೇಲಿನ ಕೊನೆಯ ಹಂತದ ಪ್ರಯೋಗವನ್ನು ಪ್ರಾರಂಭಿಸಿದೆ ಮತ್ತು ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ಈ ಕುರಿತಾದ ಆರಂಭಿಕ ಮಾಹಿತಿಯನ್ನು ಹೊಂದುವ ನಿರೀಕ್ಷೆಯಿದೆ. ರಷ್ಯಾ ಸಾಮಾನ್ಯ ಜನಸಂಖ್ಯೆಯ ಹೆಚ್ಚಿನ ಅಪಾಯ ಹೊಂದಿರುವ ಕನಿಷ್ಠ ನೂರಾರು ಜನರಿಗೆ ಲಸಿಕೆಯನ್ನು ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು