ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ 1.5 ಕೋಟಿ ಸಾವು: ಡಬ್ಲ್ಯೂಎಚ್‌ಒ

Last Updated 5 ಮೇ 2022, 14:54 IST
ಅಕ್ಷರ ಗಾತ್ರ

ಲಂಡನ್‌: ಎರಡು ವರ್ಷಗಳಲ್ಲಿ ಕೋವಿಡ್‌ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸುಮಾರು 1.5 ಕೋಟಿ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಗುರುವಾರ ಬಿಡುಗಡೆ ಮಾಡಿರುವ ವರದಿ ಹೇಳಿದೆ.

ಸುಮಾರು 60 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಡಬ್ಲ್ಯೂಎಚ್‌ಒ ವರದಿ ಉಲ್ಲೇಖಿಸಿರುವುದು ಇದಕ್ಕಿಂತಲೂ ಬಹುತೇಕ ದುಪ್ಪಟ್ಟಾಗಿದೆ. ಹೆಚ್ಚಿನ ಸಾವುಗಳು ಆಗ್ನೆಯ ಏಷ್ಯಾ, ಯುರೋಪ್ ಮತ್ತು ಅಮೆರಿಕದಲ್ಲಿ ಸಂಭವಿಸಿವೆ ಎಂದು ವರದಿ ಉಲ್ಲೇಖಿಸಿದೆ.

ಡಬ್ಲ್ಯೂಎಚ್‌ಒ ಮುಖ್ಯಸ್ಥ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌ ಈ ವರದಿ ಬಿಡುಗಡೆಗೊಳಿಸಿದ್ದು, ‘ಅಂಕಿ ಅಂಶಗಳು ಸಮಚಿತ್ತದಿಂದ ಕೂಡಿವೆ’ ಎಂದು ಪ್ರತಿಪಾದಿಸಿದರು. ಭವಿಷ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಉತ್ತಮಪಡಿಸಲು ದೇಶಗಳು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

2020ರ ಜನವರಿಯಿಂದ 2021ರ ಅಂತ್ಯದವರೆಗೆ 1.33 ಕೋಟಿಯಿಂದ 1.66 ಕೋಟಿ ಜನರು ಸತ್ತಿದ್ದು, ಕೋವಿಡ್‌ ಸ್ಥಿತಿ ಇದಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಕಾರಣವಾಗಿದೆ ಎಂದು ಡಬ್ಲ್ಯೂಎಚ್‌ಒ ನಿಯೋಜಿಸಿದ್ದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಆಕ್ಷೇಪ:ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತವು, ‘ಸಾವಿನ ಪ್ರಮಾಣ ಅಂದಾಜಿಸಲು ಡಬ್ಲ್ಯೂಎಚ್ಒ ಅನುಸರಿಸಿರುವ ಮಾದರಿ ಹಾಗೂ ಅಂಕಿ– ಅಂಶಗಳ ಸಂಗ್ರಹದ ಕ್ರಮ ಪ್ರಶ್ನಾರ್ಹವಾಗಿದೆ’ ಎಂದು ಕಟುವಾಗಿ ಪ್ರತಿಕ್ರಿಯಿಸಿದೆ.

ಸಾವಿನ ಪ್ರಮಾಣ ಅಂದಾಜಿಸುವ ಡಬ್ಲ್ಯೂಎಚ್ಒ ಮಾದರಿಯನ್ನು ಭಾರತ ನಿರಂತರವಾಗಿ ಆಕ್ಷೇಪಿಸುತ್ತಿದೆ. ತೀವ್ರ ಆಕ್ಷೇಪದ ನಂತರವು ಸಂಬಂಧಿತ ಅಂದಾಜು ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದೆ ಎಂದುಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಡಬ್ಲ್ಯೂಎಚ್ಒ ಸಾಮಾನ್ಯ ಸಭೆ ಹಾಗೂ ಇತರೆ ಪ್ರಮುಖ ವೇದಿಕೆಗಳಲ್ಲೂ ಈ ವಿಷಯವನ್ನು ಭಾರತ ಪ್ರಸ್ತಾಪಿಸುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT