ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ರಷ್ಯಾದ ಕೋವಿಡ್‌ ಲಸಿಕೆ 'ಸ್ಪುಟ್ನಿಕ್‌': ತಜ್ಞರಲ್ಲಿ ಆತಂಕ ಏಕೆ?

Last Updated 11 ಆಗಸ್ಟ್ 2020, 17:52 IST
ಅಕ್ಷರ ಗಾತ್ರ

ರಷ್ಯಾ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ಅನುಮೋದಿಸಿರುವ ಕೋವಿಡ್–19 ಲಸಿಕೆಗೆ 'ಸ್ಪುಟ್ನಿಕ್ V' ಎಂದು ಹೆಸರು ನೀಡಲಾಗಿದೆ. ಬಳಕೆಗೆ ಬರಲಿರುವ ಜಗತ್ತಿನ ಮೊದಲ ಕೋವಿಡ್‌–19 ಲಸಿಕೆ ಇದಾಗಿದ್ದು, 'ಜಗತ್ತಿಗೆ ಇದೊಂದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ' ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.

ಮಾಸ್ಕೊದ ಗಮೆಲಿಯಾ ಇನ್‌ಸ್ಟಿಟ್ಯೂಟ್‌ ಮತ್ತು ರಷ್ಯಾ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯಾಚರಣೆಯಲ್ಲಿ ಕೋವಿಡ್‌ ಲಸಿಕೆ ಅಭಿವೃದ್ದಿ ಪಡಿಸಲಾಗಿದೆ. ಕ್ಲಿನಿಕಲ್‌ ಟ್ರಯಲ್‌ ಪೂರ್ಣಗೊಳಿಸದೆಯೇ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಿರುವುದು ಸುರಕ್ಷತೆಯ ಬಗ್ಗೆ ಅನುಮಾನಗಳಿಗೆ ಕಾರಣವಾಗಿದೆ. ಲಸಿಕೆ ಬಿಡುಗಡೆಗೆ ಆತುರ ವ್ಯಕ್ತಿ ಪಡಿಸುತ್ತಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕಳೆದ ವಾರ ಎಚ್ಚರಿಕೆ ನೀಡಿತ್ತು. ಅಮೆರಿಕದ ಆರೋಗ್ಯ ತಜ್ಞ ಆಂಥೊನಿ ಫೌಸಿ ಸಹ ರಷ್ಯಾ ಮತ್ತು ಚೀನಾ ಲಸಿಕೆಗಳ ಸುರಕ್ಷತೆ ಹಾಗೂ ಪರಿಣಾಮಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು.

ಪುಟಿನ್ ಅವರ ಪುತ್ರಿಯರಲ್ಲಿ ಒಬ್ಬಳಿಗೆ ಲಸಿಕೆ ನೀಡಲಾಗಿದೆ ಹಾಗೂ ಅವಳ ಆರೋಗ್ಯ ಉತ್ತಮವಾಗಿದೆ. ಕೊರೊನಾ ವೈರಸ್‌ ಸೋಂಕಿಗೆ ಲಸಿಕೆ ಪರಿಣಾಮಕಾರಿಯಾಗಿದೆ ಹಾಗೂ ಪ್ರತಿಕಾಯ ಉತ್ಪಾದಿಸುತ್ತಿದೆ ಎಂದು ಪುಟಿನ್‌ ಹೇಳಿದ್ದಾರೆ.

ಬೇಗ ಲಸಿಕೆ ಬಿಡುಗಡೆ...ಆತಂಕ ಏಕೆ?

ಆಕ್ಸ್‌ಫರ್ಡ್‌–ಆಸ್ಟ್ರಾಜೆನೆಕಾ, ಮೊಡರ್ನಾ ಮತ್ತು ಪಿಫೈಜರ್‌ನ ಸಂಶೋಧನಾ ಸಂಸ್ಥೆಗಳನ್ನು ಹಿಂದಿಟ್ಟು ಅತ್ಯಂತ ವೇಗವಾಗಿ ರಷ್ಯಾ ಸಾರ್ವಜನಿಕವಾಗಿ ಲಸಿಕೆ ಬಳಕೆಗೆ ಮುಂದಾಗುತ್ತಿರುವುದೇ ಜಗತ್ತಿನಾದ್ಯಂತ ಆರೋಗ್ಯ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯ ಲಸಿಕೆ ಹೊರತರುವುದಕ್ಕೂ ಮುನ್ನ ನಡೆಸುವ ಕ್ಲಿನಿಕಲ್‌ ಟ್ರಯಲ್‌ಗಳಿಗೆ ಕೆಲವು ವರ್ಷಗಳೇ ಬೇಕಾಗುತ್ತದೆ ಹಾಗೂ ರಷ್ಯಾ ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸಿದೆ. ಲಸಿಕೆ ಅಭಿವೃದ್ಧಿ ಪಡಿಸುವ ಪೈಪೋಟಿಯಲ್ಲಿ ಸರ್ಕಾರ ಜನರನ್ನು ಅಪಾಯಕ್ಕೆ ತಳ್ಳುತ್ತಿದೆಯೇ ಎಂದು ಕಳಕಳಿ ವ್ಯಕ್ತವಾಗುತ್ತಿದೆ.

'ಬಿಡುಗಡೆಯಾಗಲಿರುವ ಲಸಿಕೆ ಪರಿಕಾರಿಯಾಗದಿರಬಹುದು, ಅಷ್ಟೇ ಅಲ್ಲದೆ ಅಸುರಕ್ಷಿತವಾಗಬಹುದು. ಟ್ರಯಲ್‌ಗಳು ಬಹಳ ಮುಖ್ಯವಾಗುತ್ತವೆ...' ಎಂದು ಜಾರ್ಜ್‌ಟೌನ್‌ ಯೂನಿವರ್ಸಿಟಿಯ ಜಾಗತಿಕ ಸಾರ್ವಜನಿಕ ಕಾನೂನು ತಜ್ಞ ಲಾರೆನ್ಸ್‌ ಗಾಸ್ಟಿನ್‌ ಅಭಿಪ್ರಾಯ ಪಟ್ಟಿರುವುದಾಗಿ ವರದಿಯಾಗಿದೆ.

ರಷ್ಯನ್‌ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ (ಆರ್‌ಡಿಐಎಫ್‌) ಮುಖ್ಯಸ್ಥ ಕಿರಿಲ್‌, 'ರಷ್ಯಾದ ಲಸಿಕೆ ತಯಾರಿಸಲು ಬ್ರೆಜಿಲ್‌, ಭಾರತ ಸೇರಿದಂತೆ 20ಕ್ಕೂ ಹೆಚ್ಚು ರಾಷ್ಟ್ರಗಳು ಉತ್ಸುಕರಾಗಿವೆ. ಈಗಾಗಲೇ 5ಕ್ಕೂ ಹೆಚ್ಚು ರಾಷ್ಟ್ರಗಳು ನಮ್ಮೊಂದಿಗೆ ಲಸಿಕೆ ತಯಾರಿಸುವ ಪ್ರಕ್ರಿಯೆಯಲ್ಲಿ ಕಾರ್ಯಾಚರಿಸುತ್ತಿವೆ' ಎಂದು ಹೇಳಿದ್ದಾರೆ.

ಲಸಿಕೆ ಬಿಡುಗಡೆ ಯಾವಾಗ?

ಸೆಪ್ಟೆಂಬರ್‌ನಲ್ಲಿ ಸಾಮೂಹಿಕ ತಯಾರಿಕೆ ಆರಂಭಿಸುವುದಾಗಿ ರಷ್ಯಾ ಸರ್ಕಾರ ಹೇಳಿರುವುದಾಗಿ ವರದಿಯಾಗಿದೆ. ಆದರೆ, ಜನರ ಬಳಕೆಗೆ 2021ರ ಜನವರಿ 1ರಿಂದ ಸಿಗಲಿದೆ ಎಂದೂ ಹೇಳಲಾಗಿದೆ. ಆಗಸ್ಟ್‌ನಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಲಸಿಕೆ ನೀಡಲಾಗುತ್ತದೆ. ಸಾಮೂಹಿಕವಾಗಿ ಲಸಿಕೆ ಪ್ರಯೋಗಿಸುವುದನ್ನು ಅಕ್ಟೋಬರ್‌ನಿಂದ ಆರಂಭಿಸುವುದಾಗಿ ರಷ್ಯಾ ಆರೋಗ್ಯ ಸಚಿವ ತಿಳಿಸಿದ್ದಾರೆ. ಲಸಿಕೆಯ ಬೆಲೆಯ ಕುರಿತು ಇನ್ನೂ ಯಾವುದೇ ಪ್ರಕಟಣೆ ಹೊರ ಬಂದಿಲ್ಲ.

'ಸ್ಪಟ್ನಿಕ್ V' ಲಸಿಕೆ

ಸಾರ್ಸ್‌–ಕೋವ್–2 ಅಡೆನೊವೈರಸ್‌ನ ಡಿಎನ್‌ಎ ಆಧಾರಿತ ಲಸಿಕೆಯನ್ನು ರಷ್ಯಾ ಅಭಿವೃದ್ಧಿ ಪಡಿಸಿದೆ. ಇದು ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ಉತ್ಪಾದನೆಗೆ ಪ್ರಚೋದಿಸುತ್ತದೆ. ಲಸಿಕೆ ದೇಹಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಎಂದು ಗಲೆಮಿಯಾ ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಅಲೆಗ್ಸಾಂಡರ್‌ ಗಿಂಟ್ಸ್‌ಬರ್ಗ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ಮನುಷ್ಯನ ಮೇಲೆ ನಡೆಸಲಾದ ಮೊದಲ ಹಂತದ ಪ್ರಯೋಗಗಳ ಫಲಿತಾಂಶಗಳನ್ನು ಮಾತ್ರ ರಷ್ಯಾ ಬಹಿರಂಗ ಪಡಿಸಿದೆ. ರೋಗ ನಿರೋಧಕ ಪ್ರತಿಕ್ರಿಯೆ ಪರೀಕ್ಷೆ ಯಶಸ್ವಿಯಾಗಿರುವುದಾಗಿ ತಿಳಿಸಲಾಗಿದೆ. ಪ್ರಯೋಗಕ್ಕೆ ಒಳಗಾಗಿರುವ ಯಾವುದೇ ವ್ಯಕ್ತಿಯಲ್ಲಿ ಲಸಿಕೆಯಿಂದಾಗಿ ಅಡ್ಡ ಪರಿಣಾಮಗಳು ಹಾಗೂ ಇತರೆ ಸಮಸ್ಯೆ ಕಂಡು ಬಂದಿಲ್ಲ ಎಂದು ರಷ್ಯಾದ ಟಿಎಎಸ್‌ಎಸ್‌ ಸುದ್ದಿ ಸಂಸ್ಥೆ ಜುಲೈನಲ್ಲಿ ವರದಿ ಮಾಡಿತ್ತು.

ಜೂನ್‌ 17ರಂದು 76 ಜನರ ಮೇಲೆ ಮೊದಲ ಹಂತದ ಪ್ರಯೋಗ ಆರಂಭಿಸಲಾಗಿತ್ತು. ಅದರಲ್ಲಿ ಬಹುತೇಕರು ಸೇನೆಯಲ್ಲಿ ಕಾರ್ಯಾಚರಿಸುವವರು. ವರದಿಗಳ ಪ್ರಕಾರ, ಜುಲೈ 13ರಂದು ಎರಡನೇ ಹಂತದ ಪ್ರಯೋಗಗಳನ್ನು ಆರಂಭಿಸಲಾಯಿತು ಹಾಗೂ ಆಗಸ್ಟ್‌ 3ರಂದು ಪ್ರಯೋಗ ಪೂರ್ಣಗೊಂಡಿರುವುದಾಗಿ ಪ್ರಕಟಿಸಲಾಯಿತು. ಸಾಮಾನ್ಯವಾಗಿ 2ನೇ ಹಂತದ ಪರೀಕ್ಷೆಗೆ ಕೆಲವು ತಿಂಗಳು ಅಗತ್ಯವಿರುತ್ತದೆ ಹಾಗೂ ಕೇವಲ 2ನೇ ಹಂತ ಮಾತ್ರ ಪೂರ್ಣಗೊಂಡಿದೆಯೇ ಅಥವಾ ಮೂರನೇ ಹಂತದ ಪ್ರಯೋಗವೂ ಪೂರ್ಣಗೊಂಡಿಯೇ ಎಂಬುದರ ಬಗ್ಗೆ ಸ್ಪಷ್ಟ ವರದಿಗಳಿಲ್ಲ.

(ಮೂಲ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT