ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ್ಯ ಪಾಠಶಾಲೆಯ ‘ಸ್ಮಾರ್ಟ್’ ಮಾದರಿಗಳು

Last Updated 2 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಆಚಾರ್ಯ ಪಾಠಶಾಲಾ ಸಮೂಹದ ಎಪಿಎಸ್ ಎಂಜಿನಿಯರಿಂಗ್‌ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಈಗಾಗಲೇ ಹಲವು ಆವಿಷ್ಕಾರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಮೂರು ಚಕ್ರದ ಸೈಕಲ್‌ಗೆ ಸೌರವಿದ್ಯುತ್ ಅಳವಡಿಸುವ ಮೂಲಕ, ಅಂಗವಿಕಲರಿಗೆ ಅನುಕೂಲವಾಗುವಂತಹ ವಾಹನ ರೂಪಿಸಿದ್ದರು. ಅದೇ ರೀತಿ ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳು ಸ್ಮಾರ್ಟ್ ಎನಿಸಬಹುದಾದ ಆವಿಷ್ಕಾರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ. ಬಿ.ಆರ್. ಪ್ರಸಾದ್ ಬಾಬು ಮಾರ್ಗದರ್ಶನದಲ್ಲಿ ಟಿಒಐ ತಂತ್ರಜ್ಞಾನ ಬಳಸಿಕೊಂಡು ಸ್ಮಾರ್ಟ್ ಬೀದಿದೀಪ, ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ ವ್ಯವಸ್ಥೆ, ಸ್ಮಾರ್ಟ್ ರೈಲ್ವೆ, ಸ್ಮಾರ್ಟ್ ಫೈರ್ ಮ್ಯಾನೇಜ್‌ಮೆಂಟ್ ಹಾಗೂ ಸ್ಮಾರ್ಟ್‌ಹೌಸ್ ಎಂಬ ಹಲವು ಆವಿಷ್ಕಾರಗಳನ್ನು ಪರಿಚಯಿಸಿದ್ದಾರೆ.

ವಿದ್ಯಾರ್ಥಿಗಳು ತಯಾರಿಸಿರುವ ಮಾದರಿಗಳ ಪರಿಚಯ ಇಲ್ಲಿದೆ.

ಬುದ್ಧಿವಂತ ಬೀದಿದೀಪ: ವಿದ್ಯಾರ್ಥಿಗಳು ಆವಿಷ್ಕರಿಸಿರುವ ಬೀದಿ ದೀಪಗಳು ತುಂಬಾ ಜಾಣ್ಮೆಯಿಂದ ಕೆಲಸ ಮಾಡುತ್ತವೆ. ರಸ್ತೆಯಲ್ಲಿ ವಾಹನಗಳಿದ್ದಾಗ ಮಾತ್ರ ಪೂರ್ಣವಾಗಿ ಪ್ರಜ್ವಲಿಸುತ್ತವೆ. ವಾಹನಗಳಿಲ್ಲದ ವೇಳೆ ಮಂದವಾದ ಬೆಳಕು ನೀಡುತ್ತವೆ. ಇದಕ್ಕಾಗಿ ಲೈಟ್ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ‘ವಿದ್ಯುತ್ ಉಳಿತಾಯಕ್ಕಾಗಿ ಮಾಡಿರುವ ಈ ಉಪಾಯ ಮೆಚ್ಚುಗೆಗೆ ಪಾತ್ರವಾಗಿದೆ’ ಎನ್ನುತ್ತಾರೆ ಪ್ರಸಾದ್.

ಟ್ರಾಫಿಕ್ ನಿರ್ವಹಣೆ: ‘ಯಾವ ರಸ್ತೆಗಳಲ್ಲಿ ವಾಹನ ದಟ್ಟಣೆ ಇದೆ’ ಎಂಬ ಮಾಹಿತಿ ನೀಡುವ ಗೂಗಲ್ ಮ್ಯಾಪ್ ರೀತಿಯಲ್ಲಿಯೇ ಡಿಜಿಟಲ್ ಬೋರ್ಡ್‌ಗಳನ್ನು ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ. ಸ್ಮಾರ್ಟ್ ಎಲ್‍ಇಡಿ ಡಿಸ್‌ಪ್ಲೆ ಮಾನಿಟರ್‌ಗಳನ್ನು ರಸ್ತೆ ಬದಿಯ ಪ್ರಮುಖ ಜಾಗಗಳಲ್ಲಿ ಅಳವಡಿಸಬಹುದು. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪದೇ ಪದೇ ಗೂಗಲ್ ಮ್ಯಾಪ್ ನೋಡಿ ವಾಹನ ದಟ್ಟಣೆಯ ಮಾಹಿತಿ ತಿಳಿಯುವ ಅಗತ್ಯವಿರುವುದಿಲ್ಲ. ರಸ್ತೆಯಲ್ಲಿ ಸಿಗುವ ಡಿಜಿಟಲ್ ಬೋರ್ಡ್‌ಗಳಲ್ಲೇ ಈ ಮಾಹಿತಿ ಲಭ್ಯವಾಗಲಿದೆ.

ಮಾಲ್ ಅಥವಾ ಕಚೇರಿಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಜಾಗವಿದೆಯೇ ಎಂಬ ಬಗ್ಗೆಯೂ ಈ ಡಿಜಿಟಲ್ ಪರದೆಗಳು ಮಾಹಿತಿ ನೀಡುತ್ತವೆ. ಪಾರ್ಕಿಂಗ್‌ಗೆ ಜಾಗ ಇಲ್ಲದಿದ್ದರೆ ಮುಂದೆ ಎಲ್ಲಿ ಸ್ಥಳಾವಕಾಶವಿದೆ ಎಂಬ ಮಾಹಿತಿ ಬಿತ್ತರವಾಗುತ್ತದೆ. ಇದನ್ನು ರಿಯಲ್ ಟೈಮ್‍ನಲ್ಲಿ ಪರೀಕ್ಷೆಗೂ ಒಳಪಡಿಸಲಾಗಿದೆ. ಆಂಬುಲೆನ್ಸ್ ಪ್ರಯಾಣಕ್ಕೆ ದಾರಿ ಮಾಡಿಕೊಡಲು ಬ್ಯಾರಿಕೇಡ್ ರೀತಿಯ ಸ್ವಯಂಚಾಲಿತ ಗೇಟ್‍ಗಳನ್ನು ತಯಾರಿಸಲಾಗಿದೆ. ಆಂಬುಲೆನ್ಸ್ ಸದ್ದು ಕೇಳಿದ ತಕ್ಷಣವೇ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿ, ತುರ್ತು ವಾಹನಕ್ಕೆ ದಾರಿ ಮಾಡಿ ಕೊಡುವ ತಂತ್ರಜ್ಞಾನ ಯಶಸ್ವಿಯಾಗಿದೆ.

ಸುರಕ್ಷಿತ ಸ್ಮಾರ್ಟ್‌ ಮನೆ: ಈಗೇನಿದ್ದರೂ ತಂತ್ರಜ್ಞಾನದ್ದೇ ಕಾಲ. ಮೊಬೈಲ್ ಒಂದಿದ್ದರೆ ಎಲ್ಲವೂ ಸಾಧ್ಯ. ಇದನ್ನು ಮನೆಯ ಸುರಕ್ಷತೆಗೆ ಬಳಸಿಕೊಳ್ಳಲಾಗಿದೆ. ಮನೆಯಲ್ಲಿ ಹೊಗೆ ಕಾಣಿಸಿಕೊಂಡರೆ ತಕ್ಷಣ ಮನೆ ಮಾಲೀಕ ಹಾಗೂ ಅಗ್ನಿಶಾಮಕದಳ ಕಚೇರಿಗೆ ಮೊಬೈಲ್ ಸಂದೇಶ ರವಾನೆಯಾಗುತ್ತದೆ. ತಕ್ಷಣ ಸ್ವಯಂಚಾಲಿತವಾಗಿ ಮನೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುತ್ತದೆ. ಮನೆಯಲ್ಲಿ ಏನೇನು ದಿನಸಿ ಸಾಮಾನು ಖಾಲಿಯಾಗಿದೆ ಎಂಬ ಮಾಹಿತಿಯನ್ನೂ ಮೊಬೈಲ್‍ಗೆ ಕಳುಹಿಸುವ ತಂತ್ರಜ್ಞಾನವನ್ನು ಈ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ್ದಾರೆ.
ರೈಲ್ವೆ ಕ್ರಾಸಿಂಗ್ ವೇಳೆ ರೈಲು ಬರುವ ಸಮಯ, ರೈಲು ನಿಲುಗಡೆ ಮೊದಲಾದ ಮಾಹಿತಿಗಳನ್ನು ನೀಡುವ ಸ್ಮಾರ್ಟ್ ಡಿಸ್‌ಪ್ಲೆ ವ್ಯವಸ್ಥೆಯನ್ನೂ ರೂಪಿಸಿದ್ದಾರೆ. ರೈಲು ಬಂದು ಹೋದ ಮೇಲೆ ತನ್ನಿಂತಾನೇ ರೈಲ್ವೆ ಗೇಟ್ ತೆರೆದುಕೊಳ್ಳುತ್ತದೆ. ವಿದ್ಯಾರ್ಥಿಗಳಾದ ಅಮೃತಾ ನಾರಾಯಣ್, ನಾಯಕ್ ದೀಪ್ತಿ, ಹಿಮಾಂಶು ಕುಮಾರ್ ಹಾಗೂ ಸಚಿನ್ ಸಿಂಗ್ ತಂತ್ರಜ್ಞಾನದ ರೂವಾರಿಗಳು.

ಸೇತುವೆ ಸಾಮರ್ಥ್ಯ ತಿಳಿಸುವ ಸೆನ್ಸರ್

ನೀವು ಹೋಗುತ್ತಿರುವ ರಸ್ತೆಯಲ್ಲಿ ಸೇತುವೆಯೊಂದನ್ನು ದಾಟಬೇಕಿರುತ್ತದೆ. ಅದು ಹಳೆಯ ಕಾಲದ್ದಾಗಿರುವ ಕಾರಣ ಅದರ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಕಾಡುತ್ತದೆ. ಅದು ಸಮರ್ಥವಾಗಿದೆಯೇ, ಇಲ್ಲವೇ ಎಂದು ಮಾಹಿತಿ ನೀಡುವಂತಹ ಹೊಸ ತಂತ್ರಜ್ಞಾನವನ್ನು ಇದೇ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.

ಸೇತುವೆಯ ಮೇಲೆ ವಾಹನಗಳು ಎಷ್ಟಿವೆ, ಸೇತುವೆಯ ಗಟ್ಟಿತನ ಎಷ್ಟಿದೆ, ಒಮ್ಮೆಗೆ ಎಷ್ಟು ವಾಹನಗಳು ಅದರ ಮೇಲೆ ಚಲಿಸಬಹುದು ಎಂಬ ಮಾಹಿತಿಗಳನ್ನು ಡಿಜಿಟಲ್ ಮಾನಿಟರ್ ಮೂಲಕ ನೀಡಲಾಗುತ್ತದೆ. ವೈಬ್ರೇಷನ್ ಆಧಾರದಲ್ಲಿ ಸೆನ್ಸರ್‌ಗಳು ಈ ಮಾಹಿತಿಯನ್ನು ಕರಾರುವಕ್ಕಾಗಿ ನೀಡುತ್ತವೆ.

ಮಳೆ ಬಂದಾಗ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ದೋಣಿಗಳು ನದಿಯಲ್ಲಿ ಸಾಗಲು ಸಾಧ್ಯವೇ ಎಂದು ಖಚಿತವಾಗಿ ಹೇಳುವುದಕ್ಕೂ ಈ ತಂತ್ರಜ್ಞಾನ ನೆರವಾಗುತ್ತದೆ ಎನ್ನುತ್ತಾರೆ ವಿಭಾಗದ ಮುಖ್ಯಸ್ಥೆ ಅರುಣಾ ರಶ್ಮಿ. ವಿದ್ಯಾರ್ಥಿಗಳಾದ ಅಪೂರ್ವ ಆರ್., ಜ್ಯೋತ್ಸ್ನಾ ಬಿ., ಮನೋಜ್ ಬಿ. ಹಾಗೂ ಪ್ರವೀಣ್ ಆರ್. ಈ ಉಪಕರಣ ವಿನ್ಯಾಸ ಮಾಡಿದ್ದಾರೆ. ಕೇವಲ ₹12,250 ವೆಚ್ಚದಲ್ಲಿ ಇದು ರೂಪುಗೊಂಡಿದೆ.

ಎಪಿಎಸ್ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳ ತಂಡ
ಎಪಿಎಸ್ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳ ತಂಡ

ವಿದ್ಯಾರ್ಥಿಗಳ ಸರಿಸುಮಾರು 6 ತಿಂಗಳ ಅಧ್ಯಯನ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಸುಮನಾ ಆಚಾರ್ ಅವರ ಮಾರ್ಗದರ್ಶನದಿಂದ ಹೊಸ ತಂತ್ರಜ್ಞಾನ ಆವಿಷ್ಕಾರ ಸಾಧ್ಯವಾಗಿದೆ. ಪ್ರತಿ ವರ್ಷ ಹೊಸದನ್ನು ಶೋಧಿಸುವ, ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಕಾಲೇಜು ಸದಾ ಮುಂಚೂಣಿಯಲ್ಲಿದೆ ಎಂದು ಪ್ರಾಂಶುಪಾಲಡಾ. ಬಿ.ಎಂ. ಸತೀಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT