ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪ ಬಂದಾಗ ಸಿಟ್ಟಾಗಬೇಡಿ

Last Updated 7 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

‘ಕೋಪದ ಬಗ್ಗೆಯೇ ಸಿಟ್ಟು’ ಎಂಬುದು ವಿಚಿತ್ರವಾದರೂ ಸತ್ಯ. ನಮ್ಮ ಸಮಾಜ, ಸಂಸ್ಕೃತಿ, ಜನಜೀವನದಲ್ಲಿ ಕೋಪದ ಕುರಿತಾದ ಭಯ, ಅಪನಂಬಿಕೆ, ಅಸಹನೆ ಹಾಸುಹೊಕ್ಕಾಗಿದೆ. ಇದಕ್ಕೆ ಕಾರಣವಿಷ್ಟೇ. ಕೋಪ ಬಂದಾಗ ನಮ್ಮ ಬುದ್ಧಿ ನಮ್ಮ ಕೈಲಿರೋದಿಲ್ಲ, ಎಲುಬಿಲ್ಲದ ನಾಲಗೆ ಎಗ್ಗೆ ಇಲ್ಲದೆ ಬಡಬಡಾಯಿಸುತ್ತದೆ; ಕೊನೆಗೆ ಮಾನ, ಪ್ರಾಣ, ಆಸ್ತಿ ಪಾಸ್ತಿ, ಸಂಬಂಧ, ಮನಃಶಾಂತಿ ಎಲ್ಲವೂ ಹಾಳಾಗುತ್ತದೆ ಎಂಬುದು. ಅಷ್ಟೇ ಅಲ್ಲದೆ ಕೋಪವು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಕೂಡ ಸಾಮಾನ್ಯ ನಂಬಿಕೆ. ‘ಸಿಟ್ಟಿಗೆ ಕೊಯ್ದ ಮೂಗು ಸಿಂಗಾರಕ್ಕೆ ಬರೋದಿಲ್ಲ’ ಎಂಬಂತಹ ಹೇಳಿಕೆಗಳೂ, ಕ್ರೋಧವನ್ನು ಅರಿಷಡ್ವರ್ಗಗಳ ಪಟ್ಟಿಯಲ್ಲಿ ಸೇರಿಸಿರುವುದೂ ಎಲ್ಲವೂ ಕೋಪದ ಬಗ್ಗೆ ಭಯ ಹುಟ್ಟುವಂತೆಯೇ ಮಾಡಿವೆ. ಕೋಪದ ಬಗ್ಗೆ ಈ ರೀತಿ ಭಯ ಹುಟ್ಟಿಸುವುದೂ ಕೋಪವನ್ನು ಅಂಕೆಯಲ್ಲಿಟ್ಟುಕೊಳ್ಳಲು ಹುಟ್ಟು ಹಾಕಿದ ತಂತ್ರವೇ. ನಾವು ತುಂಬ ಭಯಭೀತರಾದಾಗ ಎಲ್ಲಿಂದಾದರೂ ಸ್ವಲ್ಪ ಕೋಪ ಕೊಂಡು ತಂದರೆ, ಆ ಸನ್ನಿವೇಶದಲ್ಲಿ ನಮ್ಮ ಭಯ ಕಡಿಮೆಯಾಗುತ್ತದೆ. ಉದಾ: ತಂದೆಯೊಡನೆ ಮಾತನಾಡಲು ಹೆದರುವ ಮಗನಿಗೆ, ತಂದೆ ತನಗೆ ಮಾಡುತ್ತಿರುವ ಅನ್ಯಾಯದ ಕುರಿತಾಗಿ ತಿಳಿದಾಗ ಭಯ ಮಾಯವಾಗಿ, ಎಲ್ಲಿಂದಲೋ ಹೋರಾಟದ ಶಕ್ತಿ, ಕಿಚ್ಚು ಬಂದುಬಿಡುತ್ತದೆ! ಹಾಗೇ ಕ್ರೋಧದಿಂದ ನಖಶಿಖಾಂತ ಉರಿಯುತ್ತಾ, ಕಟಕಟನೆ ಹಲ್ಲು ಮಸೆಯುತ್ತಾ, ಬಿರುಗಣ್ಣಿನಿಂದ ಎದುರಾಳಿಯನ್ನು ದುರುಗುಟ್ಟಿ ನೋಡುತ್ತಿರುವಾಗೊಮ್ಮೆ ‘ಈ ಜಗಳದಿಂದ ಏನೇನು ಕಳೆದುಕೊಳ್ಳುವೆ’ ಎಂಬ ಆಲೋಚನೆ ‘ಇಷ್ಟೆಲ್ಲಾ ಕಳೆದುಕೊಂಡುಬಿಡುತ್ತೀನಾ’ ಎಂಬ ಸಣ್ಣ ಭಯ ಮನಸ್ಸಿನಲ್ಲಿ ಹಾದುಹೋದರೂ ಸಾಕು ಕ್ರೋಧಾವೇಶ ಇಳಿದು ಹೋಗುತ್ತದೆ.

‘ಏನು ಕಳೆದುಕೊಳ್ತೀನಿ’ ಎನ್ನುವ ವಿವೇಚನೆಯಿಲ್ಲದೆ ಮುನ್ನುಗ್ಗಲು ಪ್ರೇರೇಪಿಸುವ ಕೋಪ, ‘ಎಲ್ಲ ಕಳೆದುಹೋಗತ್ತೆ’ ಎಂಬ ಭಯದಲ್ಲಿ ಹುಟ್ಟಿದ ನಿಷ್ಕ್ರಿಯತೆ – ಎರಡೂ ವಿನಾಶಕಾರಿ. ಕೋಪ ಮತ್ತು ಭಯಗಳು ಒಂದಕ್ಕೊಂದು ಪೂರಕವಾಗಿದ್ದಾಗಲಷ್ಟೇ ವಿವೇಕಯುತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಇಷ್ಟಕ್ಕೂ ಕೋಪ ಖಂಡಿತ ಕೆಟ್ಟದ್ದಲ್ಲ.

ಕೋಪ ಒಂದು ಚಿಹ್ನೆ, ಒಂದು ಸಿಗ್ನಲ್ ಅಷ್ಟೇ. ಕೆಲವೊಮ್ಮೆ ಕೋಪ ಒಂದು ಮುಖವಾಡವೂ ಹೌದು. ಎಲ್ಲಿ ‘ನನಗೆ ಅನ್ಯಾಯವಾಗಿದೆ’, ‘ನನ್ನನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ’, ‘ನನ್ನದಲ್ಲದ ತಪ್ಪಿಗೆ ನಾನು ದಂಡ ತೆರಬೇಕಾಗಿದೆ’, ‘ನನಗೆ ಇಷ್ಟವಿಲ್ಲದ ಕೆಲಸವನ್ನು ಬಲವಂತವಾಗಿ ಮಾಡಿಸಲಾಗುತ್ತಿದೆ’,‘ಬೇರೆಯವರಿಗಾಗಿ ನನ್ನನ್ನು ನಾನು ಬಿಟ್ಟುಕೊಡಬೇಕಾಗಿದೆ’, ‘ನನಗೆ ನನ್ನ ಮಾತಿಗೆ ಬೆಲೆಯಿಲ್ಲ‘, ‘ನನ್ನನ್ನು ನಾನಾಗಿರಲು ಬಿಡುತ್ತಿಲ್ಲ’ ಎಂಬ ಭಾವವಿರುತ್ತದೋ ಅಲ್ಲಿ ಕೋಪ ಇರುವುದು ಸಾಮಾನ್ಯ. ಮುಖ್ಯವಾಗಿ ಕೋಪ ಎಂಬುದು ಹುಟ್ಟುವುದೇ ‘ನಾನು’ ಭಾವಕ್ಕೆ ಘಾಸಿಯಾದಾಗ. ಆದರೆ ವಾಸ್ತವವಾಗಿ ‘ನಾನು’ ಎಂಬ ಭಾವಕ್ಕೆ ಘಾಸಿಯಾದಾಗ ನಮಗೆ ನೋವಾಗಿರುತ್ತದೆ. ಆದರೆ ಹಾಗೆ ‘ನನಗೆ ನೋವಾಗಿದೆ’ ಎಂದು ಹೇಳಿಕೊಳ್ಳುವುದು ನಮ್ಮನ್ನು ಇನ್ನಷ್ಟು ಬಲಹೀನರಂತೆ ಕಾಣಿಸುತ್ತದೆ. ಹಾಗೆಯೇ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿಯೂ ನಶಿಸಿಹೋಗುತ್ತದೆ. ಹಾಗಾಗಿಯೇ ನಾವು ‘ನಾನು’ ಭಾವಕ್ಕೆ ಘಾಸಿಯಾಗಿ ನೋವಾದಾಗ ಒಳಗೊಳಗೇ ದುಃಖವಾದರೂ ಹೊರಗೆ ಕೋಪ ತೋರಿಸುತ್ತೇವೆ.

ಉದಾ: ಮನೆಯಲ್ಲಿ ಎಲ್ಲರಿಂದಲೂ ಕಡೆಗಣಿಸಲ್ಪಟ್ಟು, ಗಂಡು ಹುಡುಗನಾಗಿರುವ ಕಾರಣಕ್ಕೇ ಚಿಕ್ಕವಯಸ್ಸಿನಿಂದಲೂ ‘ಜವಾಬ್ದಾರಿ’ ಎಂಬ ಪಾಠ ಕೇಳಿಸಿಕೊಂಡೇ ಬೆಳೆದಿರುವ ಹುಡುಗ ಮುಂದೆ ಕೋಪಿಷ್ಠ ಬಾಸೋ, ಸಿಡುಕು ಜಗಳಗಂಟ ಗಂಡನೋ ಆದರೆ ಆಶ್ಚರ್ಯವಿಲ್ಲ.

‘ನನಗೆ ನೋವಾಗಿದೆ’ ಎಂದು ಹೇಳಿಕೊಂಡು ಗಂಡುಮಕ್ಕಳು ಅಳುವುದನ್ನು ನಮ್ಮ ಸಮಾಜ ಯಾವತ್ತೂ ಲೇವಡಿ ಮಾಡುತ್ತದಲ್ಲವೆ? ಹಾಗಾಗಿಯೇ ಕ್ರೋಧ ಎಂಬ ‘ಕವಚ’ ಧರಿಸಿ ಒಳಗೊಳಗೇ ಬೇಯುವ ದುಃಖಿತರಾಗಿರುವ ಅನಿವಾರ್ಯತೆ ಉಂಟಾಗುತ್ತದೆ. ನಿಜವಾಗಲೂ ಕೋಪ ಬಲಹೀನತೆಯ ಲಕ್ಷಣವೇ? ಏನು ಮಾಡಿದರೆ ಸರಿ, ಏನು ಮಾಡಬೇಕು ಎಂಬ ಗೊಂದಲ, ತಪ್ಪಾದರೆ, ಸೋತರೆ ಅವಮಾನವಾಗುತ್ತದೆ. ನಮ್ಮನ್ನು ನಾವು ಆ ಅವಮಾನದಿಂದ ರಕ್ಷಿಸಿಕೊಳ್ಳಲು ಸಿಟ್ಟಾಗಿ ಕಿರುಚಾಡಲು ತೊಡಗುತ್ತೇವೆ. ಹಾಗಾದರೆ ಕೋಪದ ಹೂರಣ ದುಃಖವೇ ಆಗಿರುವಾಗ ‘ಕೋಪವನ್ನು ನಿಗ್ರಹಿಸುವುದು’ ಎಂಬುದಕ್ಕೆ ಏನಾದರೂ ಅರ್ಥವಿದೆಯೇ? ಕೋಪವನ್ನು ನಿಗ್ರಹಿಸುವುದು ಎಂದರೆ ಕೋಪಗೊಂಡಾಗಿನ ನಮ್ಮ ಪ್ರತಿಕ್ರಿಯೆಯಲ್ಲಿ ಬದಲಾವಣೆಗಳನ್ನು ತರುವುದು. ಹಾಗಾದರೆ ಕೋಪ ಬಂದಾಗ ಏನು ಮಾಡಬಹುದು?

1 ಮೊಟ್ಟಮೊದಲನೆಯದಾಗಿ ನಮ್ಮ ಕೋಪ ಸಕಾರಣವಾದ್ದೇ, ನ್ಯಾಯವಾದ್ದೇ. ಏಕೆಂದರೆ ಅದರ ಹಿಂದಿರುವುದು ನಮಗಾದ ದುಃಖ. ನಮ್ಮ ದುಃಖವನ್ನು ಯಾರೂ ಅಲ್ಲಗೆಳೆಯಲಾರರು. ಆದ್ದರಿಂದ ಬೇರೆಯವರಿಗೆ ದುಃಖವಾದಾಗ ಹೇಗೆ ಸಾಂತ್ವನದ ಮಾತುಗಳನ್ನಾಡಿ ಸಹಾನುಭೂತಿಯಿಂದ ನಡೆದುಕೊಳ್ಳುವೆವೋ ಅದೇ ರೀತಿ ನಮಗೇ ಕೋಪ ಬಂದಾಗ ಅದರಾಳದ ನೋವಿಗೆ ಸ್ವ-ಸಾಂತ್ವನ ಒದಗಿಸಿಕೊಳ್ಳುವುದು ಲೇಸು. ಆಗ ಮಾತ್ರ ಕೋಪದ ‘ಅತಿ’ಯಾದ ಆಕ್ರಮಣಶೀಲತೆಯ ತಾಪ ತಗ್ಗಿಸಿಕೊಳ್ಳಲು ಸಾಧ್ಯ. ತನ್ನನ್ನು ಮೆಚ್ಚುವ, ಗೌರವಿಸುವ, ಸ್ವೀಕರಿಸುವವರಿದ್ದಾರೆಂದು ನಂಬುವ ವ್ಯಕ್ತಿಗಳು ಕೋಪವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುತ್ತಾರೆ.

2 ಯಾರ ಮೇಲೆ, ಎಲ್ಲಿ, ಯಾವಾಗ, ಹೇಗೆ ಕೋಪ ತೋರಿಸಬೇಕು, ಎಲ್ಲಿ ಕೋಪಗೊಳ್ಳುವುದು ಸುರಕ್ಷಿತ ಎಂಬುದು ನಮ್ಮದೇ ನಿರ್ಧಾರವಾಗಿರುತ್ತದೆ. ಸುಮ್ಮಸುಮ್ಮನೆ ಹಾದಿ ಬೀದಿಯಲ್ಲಿ, ನೆರೆಹೊರೆಯವರಲ್ಲಿ, ಟ್ರಾಫಿಕ್‌ನಲ್ಲಿ ಸಿಡಿ ಸಿಡಿ ಅನ್ನುತ್ತೇವಾದರೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು – ಈ ಸಿಡಿಮಿಡಿಯ ಹಿಂದೆ ಏನಿದೆ ಎಂದು. ನಮ್ಮ ತೀರ ಹತ್ತಿರದ ಸಂಬಂಧಗಳಾದ ತಂದೆ, ತಾಯಿ, ಜೀವನಸಂಗಾತಿ – ಇವರಿಂದ, ಇವರೊಡನೆಯ ಸಾಂಗತ್ಯದಿಂದ ಎಲ್ಲೋ ‘ನಾನು’ ಭಾವಕ್ಕೆ ಘಾಸಿಯಾಗಿದ್ದರೆ ಅದನ್ನು ಯಾರಯಾರೊಡನೆಯೋ ಜಗಳವಾಡಿ ತೀರಿಸಿಕೊಳ್ಳದೆ ಕಷ್ಟವಾದರೂ ಧೈರ್ಯವಾಗಿ ಸಂಬಂಧಪಟ್ಟವರೊಡನೆ ನೇರವಾಗಿ ಮಾತನಾಡುವುದು ವಾಸಿ.

3 ಕ್ರೋಧದ ನಿರ್ವಹಣೆಯಲ್ಲಿ ಸಂವಹನದ ಪಾತ್ರವೂ ದೊಡ್ಡದು. ನಮ್ಮ ಮೇಲಿನ ನಂಬಿಕೆ ಸ್ಥಿರವಾದಮೇಲೆ, ಸರಿಯಾದ ಸಮಯದಲ್ಲಿ, ಸರಿಯಾದ ವ್ಯಕ್ತಿಯೊಡನೆ, ದೃಢವಾದ ಮಾತುಗಳನ್ನಾಡಿ ನಮ್ಮ ಅಂತರಂಗವನ್ನು ತೆರೆದಿಡಬಹುದು. ಭಿನ್ನಾಭಿಪ್ರಾಯಗಳನ್ನು, ಸಂಘರ್ಷಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಂಯಮಭರಿತ ಸಂವಾದದ ಪ್ರಾಮುಖ್ಯ ಸಾಕಷ್ಟಿದೆ. ಹಾಗಾದಾಗ ಮಾತ್ರವೇ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ದಿನದಿನವೂ ಅದದೇ ವಿಷಯಗಳಿಗೆ ಎಷ್ಟು ಸಿಡುಕಿದರೂ ಒಂದಿಷ್ಟೂ ಬದಲಾಗುವುದಿಲ್ಲ.

ಕೊನೆಯ ಮಾತು

ಕೋಪದ ವಿಷಯದಲ್ಲಿಯೂ ನಮ್ಮ ಸಮಾಜದಲ್ಲಿ ಲಿಂಗ ತಾರತಮ್ಯವಿರುವುದನ್ನು ಅಲ್ಲಗೆಳೆಯಲಾಗದು. ಗಂಡಿಗೆ ಕೋಪ, ಆಕ್ರಮಣಶೀಲತೆ ಸಹಜವೆಂದು, ಅದನ್ನು ಪೌರುಷದ ಗುರುತೆಂದು ತಿಳಿಯುವ ಸಮಾಜ ಹೆಣ್ಣಿನ ಸಿಟ್ಟನ್ನು, ಆಕ್ರೋಶವನ್ನು ಕಟ್ಟಿಡುವ ಬೇಲಿಗಳನ್ನು ನಿರ್ಮಿಸುತ್ತದೆ. ಆನೇಕ ವರ್ಷಗಳು ಕೆಂಡದಂತಹ ಕೋಪವನ್ನು ಒಡಲಲ್ಲಿ ಬಚ್ಚಿಟ್ಟುಕೊಳ್ಳುವ ಅನಿವಾರ್ಯತೆಯಿರುವ ಹೆಣ್ಣಿನ ಮಾತಿನಲ್ಲಿ ಆಗಾಗ ಸರಿದಾಡುವ ವ್ಯಂಗ್ಯ, ವಿಷಾದ, ವಿಷ, ಕಹಿಯ ರೂಪದಲ್ಲಿ ನಾವಿದನ್ನು ನೋಡಬಹುದು. ಸಿಟ್ಟನ್ನು ತೋರ್ಪಡಿಸುವ ಅವಕಾಶವಿಲ್ಲದ ಎಲ್ಲರಲ್ಲೂ ಇದು ಉಂಟಾಗಬಹುದಾದರೂ ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಹೆಂಗಸರಲ್ಲೇ ಹೆಚ್ಚಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT