ಬುಧವಾರ, ಆಗಸ್ಟ್ 4, 2021
27 °C

Valentine Day | ವಾರ್ಷಿಕೋತ್ಸವ ವೇದಿಕೆಯಲ್ಲಿ ಪ್ರೇಮ ನಿವೇದನೆ

ವಾಲೆಂಟೈನ್‌ ಡೇ ಸ್ಪೆಷಲ್‌ Updated:

ಅಕ್ಷರ ಗಾತ್ರ : | |

ಪ್ರೇಮ ಸಾಗರದಲ್ಲಿ ಈಜುವನಿಗೆ ಆಳದ ಯೋಚನೆ ಇರುವುದಿಲ್ಲ. ಅವಳು ನನ್ನವಳಾಗುವಳೋ-ಇಲ್ಲವೋ ಎಂದು ಚೂರೂ ಯೋಚಿಸದೆ ಸಾಗರಕ್ಕೆ ಇಳಿಯುತ್ತೇವೆ. ನನ್ನದೂ ಅದೇ ಪರಿಸ್ಥಿತಿ. ಅವಳನ್ನು ಪ್ರೀತಿಸಿ ಮೂರು ವರ್ಷವಾದರೂ ಪ್ರೇಮ ಮಂಡನೆ ಮಾಡಿರಲಿಲ್ಲ. ಅವಳು ಕಾಣುತ್ತಿದ್ದಂತೆ ಎಲ್ಲಿಲ್ಲದ ನಡುಕ ಶುರುವಾಗುತ್ತಿತ್ತು. ಆದರೆ, ಡಿಗ್ರಿಯ ಕೊನೆಯ ವರ್ಷ ಆದ್ದರಿಂದ ಹೇಳದೇ ಉಳಿಯುವಂತಿರಲಿಲ್ಲ. ಈಗ ಹೇಳದಿದ್ದರೆ ಎಂದೂ ಹೇಳಲಾಗದು ಎಂದು ಮನಗಂಡು ಒಂದು ಉಪಾಯ ಹೂಡಿದೆ. ಕಾಲೇಜು ವಾರ್ಷಿಕೋತ್ಸವವೇ ಕೊನೆಯ ಸಮಾರಂಭ. ಅದರಲ್ಲಿ ನಾಟಕ ಮಾಡಲು ಕ್ಲಾಸಿನವರನ್ನೆಲ್ಲಾ ಒಪ್ಪಿಸಿದೆ. ನಟನೆಯಲ್ಲಿ ಆಸಕ್ತಿ ಹೊಂದಿದ್ದರಿಂದ ಅವಳೂ ಒಪ್ಪಿದಳು.

ಆ ಕಥೆ ಏನೆಂದರೆ, ಜನಗಳ ನಂಬಿಕೆಯಂತೆ 'ಪಾರ್ವತಿ ದೇವಿಯು ಶಿವನಿಗೆ ಅವಮಾನವಾದ ಸಂದರ್ಭವೊಂದರಲ್ಲಿ ಅಗ್ನಿಗೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಮುಂದಿನ ಜನ್ಮ ಪಡೆದು, ಶಿವನನ್ನು ವರಿಸಲು ಇಚ್ಚಿಸುತ್ತಾಳೆ. ತನ್ನ ಪ್ರಯತ್ನ ಸಫಲವಾಗದೇ ದೃಢಚಿತ್ತದಿಂದ ಗೌರಿಕುಂಡ ಎಂಬಲ್ಲಿ ಅತಿ ಕಠಿಣವಾದ ತಪಸ್ಸು ಮಾಡಿ, ಶಿವನ ಮನಗೆಲ್ಲುತ್ತಾಳೆ. ಆ ಪ್ರೀತಿ ಪೂರ್ವಕ ಭಕ್ತಿಗೆ ಮನಸೋತ ಶಿವನು ಪ್ರೇಮ ನಿವೇದನೆಯನ್ನು ಸಲ್ಲಿಸುತ್ತಾನೆ. ಆ ಸ್ಥಳವೇ ಕೇದಾರನಾಥ ಮಾರ್ಗದಲ್ಲಿರುವ ಗುಪ್ತಕಾಶಿ' ಈ ನಾಟಕದ ಪ್ರಸಂಗಕ್ಕೆ ಪ್ರೇಯಸಿ ಲತಾಳು ಪಾರ್ವತಿ ಪಾತ್ರಕ್ಕೆ ಒಪ್ಪಿದಳು. ನಾನು ಶಿವನಾದೆ.

ವಿಶ್ವವಿದ್ಯಾಲಯದ ಸಮಾರಂಭವಾದ್ದರಿಂದ ದೊಡ್ಡ ಸ್ಟೇಜ್, ಸಾವಿರಾರು ಜನ ಸೇರಿದ್ದರು. ನಾಟಕ ಶುರುವಾಯಿತು. ಆ ಕಥೆಯ ಪ್ರೇಮ ನಿವೇದನೆಯ ಸಂದರ್ಭ ಬರುತ್ತಿದ್ದಂತೆ, ಎದೆ ಬಡಿತ ಹೆಚ್ಚಾಯಿತು. ಮುಂದೆ ಕೂತ ಸಾವಿರ ಜನಗಳ ಕಂಡು ಭಯವಾಗದಿದ್ದರೂ ಥೇಟ್ ಪಾರ್ವತಿಯ ರೂಪಹೊತ್ತ ಅವಳನ್ನು ಕಂಡು ಚಕಿತನಾದೆ. ಆದರೆ ನಿವೇದನೆಗೆ ಇದೇ ಕೊನೆಯ ಅವಕಾಶ. ಈ ಅವಕಾಶ ಕೈ ತಪ್ಪಿದರೆ, ಮುಂದೆ ಅವಳನ್ನು ಪಡೆಯಲು ಕಷ್ಟವಾಗಬಹುದು ಎಂದು ತಿಳಿದು, ಶಿವನ ಪ್ರೇಮನಿವೇದನೆ ಪ್ರಸಂಗದಲ್ಲಿ ಪರಕಾಯ ಪ್ರವೇಶಿಸಿದೆ.

'ಹೇ ತ್ರಿಭುವನ ಸುಂದರಿ. ಏನೀ ನಿನ್ನ ಸೊಬಗು. ಕಗ್ಗತ್ತಲೆಯ ಗಗನದಲಿ ತಾರೆಯಂತೆ ಮಿಣುಗುತ್ತಿಹೆಯಲ್ಲ. ನಿನ್ನೀ ನೋಟವು ನನ್ನನ್ನು ಮತ್ತೇ ಮತ್ತೇ ಸೋಲಿಸುತ್ತಿದೆ. ನಿನ್ನ ಕಂಡಾಗಿನಿಂದ ಬದುಕೇ ನೀನಾಗಿಹೆ. ನನ್ನ ಒಲವನ್ನು ಸ್ವೀಕರಿಸಿ, ನನ್ನುಸಿರಿನೊಳಗೊಂದಾಗು'  ಎಂದು ಹೇಳುವಾಗ ಕಂಬನಿ ಧುಮುಕಿತ್ತು. ನನ್ನ ನಿವೇದನೆಯನ್ನು ಪಾರ್ವತಿಯಾಗಿ ಅವಳು-ಪ್ರೇಕ್ಷಕರಾಗಿ ಜನರು ಒಪ್ಪಿದರು. ಆದರೆ, ನನ್ನ ಪ್ರೇಯಸಿಯಾಗಿ ಲತಾ ಒಪ್ಪಿದ್ದಾಳೆಯೋ-ಇಲ್ಲವೋ ಎಂಬ ಕುತೂಹಲ ಮೂಡಿತ್ತು. ಹೇಗೋ ನನ್ನ ನಿವೇದನೆಯನ್ನು ಮಂಡಿಸಿದ್ದೇನೆ. ನನ್ನ ಪ್ರೀತಿ ನಿಜವಾದರೆ ಉತ್ತರ ತಿಳಿಸುತ್ತಾಳೆ. ಇದ್ದಷ್ಟು ದಿನ ಕಾಯುವುದೇ ಲೇಸು ಎಂದುಕೊಂಡು ಸುಮ್ಮನಾದೆ.

ಮರುದಿನ ಕ್ಲಾಸಿನಲ್ಲಿ ಅವಳು ನನ್ನತ್ತಲೇ ನೋಡುತ್ತಿರುವ ಭಾಸ. ನಾನು ಅವಳನ್ನು ನೋಡಿದಾಗ ಮತ್ತೆಲ್ಲೋ ನೋಡುವಳಂತೆ ನಟನೆ. ಸಂಜೆ ಕ್ಲಾಸ್ ಬಿಟ್ಟು ಎಲ್ಲರೂ ಹೊರಟೆವು. ಕಾರಿಡಾರಲ್ಲಿ ಒಬ್ಬಳೆ ನಿಂತಿದ್ದಳು. ಅವಳ ಸ್ನೇಹಿತೆಯರಿಗಾಗಿ ಕಾಯುತ್ತಿರಬಹುದು ಎಂದುಕೊಂಡು ಅವಳ ಮುಂದೆಯಿಂದ ಸಾಗುತ್ತಿದ್ದಂತೆ ನನ್ನ ಕೈ ಹಿಡಿದು ನಿಲ್ಲಿಸಿದಳು.

‘ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ ಅಲ್ವಾ? ನಿನ್ನೆಯ ನಾಟಕದಲ್ಲಿ ಹೇಳಿದ ಮಾತುಗಳು ಶಿವನದ್ದಲ್ಲ. ಅವು ನಿನ್ನವೆಂದು ನಿನ್ನ ಕಣ್ಣುಗಳು ಹೇಳುತ್ತಿದ್ದವು. ನಿನ್ನನ್ನು ಮೊದಲ ಬಾರಿ ಕಂಡಾಗ ನನ್ನದೆಯಲ್ಲಿಯೂ ಪ್ರೀತಿ ಚಿಗುರಿತ್ತು. ಆದರೆ ನಿನ್ನಿಂದಲೇ ಪ್ರೇಮ ನಿವೇದನೆಗಾಗಿ ಕಾಯುತ್ತಿದ್ದೆ. ನೀನು ಶಿವನಾಗಿದ್ದಕ್ಕೆ ನಾನು ಪಾರ್ವತಿಯ ಪಾತ್ರಕ್ಕೆ ಒಪ್ಪಿದ್ದು. ಇನ್ನು ನಾನು ಕಾಯಲಾರೆ. ಐ ಲವ್ ಯೂ ಕಣೋ ಎಂದು ತಬ್ಬಿಕೊಂಡಳು.

- ಉಮೇಶ ರೈತನಗರ

***
ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು