ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಮಾರಿ ₹ 70 ಲಕ್ಷ ಹೂಡಿದ್ದ ಅಲೆಮಾರಿ

* ‘ಐಎಂಎ’ ಕಂಪನಿ ಕಚೇರಿ ಎದುರು ಆಕ್ರೋಶ * ದೇಶ– ವಿದೇಶಗಳ ಜನರಿಂದಲೂ ದೂರು ದಾಖಲು
Last Updated 12 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಜೇನು ಕೀಳುವ ಕಾಯಕ ನಂಬಿ ಬದುಕು ಕಟ್ಟಿಕೊಂಡಿದ್ದ ಒಡಿಶಾದ ಅಲೆಮಾರಿಗಳು, ತಮ್ಮೂರಿನಲ್ಲಿದ್ದ ಜಮೀನು ಮಾರಿ ₹ 70 ಲಕ್ಷ ಹಣದ ಸಮೇತ ಬೆಂಗಳೂರಿಗೆ ಬಂದು ಸ್ವಂತ ಸೂರಿನ ಕನಸು ಕಂಡಿದ್ದರು. ಹಣ ದುಪ್ಪಟ್ಟುಗೊಳಿಸುವ ಆಮಿಷವೊಡ್ಡಿದ್ದ‘ಐಎಂಎ’ ಕಂಪನಿ, ₹ 70 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಿ ಅವರನ್ನೆಲ್ಲ ಬೀದಿಗೆ ತಳ್ಳಿದೆ.

ಕಂಪನಿಯ ವಂಚನೆಯಿಂದ ಕಂಗಾಲಾಗಿರುವ ಅಲೆಮಾರಿಗಳು, ಶಿವಾಜಿನಗರದ ಎ.ಎಸ್. ಕಲ್ಯಾಣ ಮಂಟಪದಲ್ಲಿ ಪೊಲೀಸರು ತೆರೆದಿರುವ ಕೌಂಟರ್‌ಗೆ ಬಂದು ಬುಧವಾರ ದೂರು ನೀಡಿದರು.

ಸಾದಾ ಬಟ್ಟೆಗಳನ್ನು ತೊಟ್ಟು ಮಕ್ಕಳನ್ನು ಎತ್ತಿಕೊಂಡು ಬಂದಿದ್ದ 10ಕ್ಕೂ ಹೆಚ್ಚು ಮಂದಿ, ಕಂಪನಿ ಎದುರು ನಿಂತು ಕಣ್ಣೀರಿಟ್ಟರು. ‘ಹಮಾರ್ ಲೈಫ್ ಬರ್ಬಾದ್ ಹೋಗಯಾ’ ಎಂದು ಕೂಗಾಡಿದರು. ಸ್ಥಳದಲ್ಲಿದ್ದ ಕೆಲ ಹೂಡಿಕೆದಾರರು ಅವರನ್ನು ಮಾತನಾಡಿಸಿ, ‘ಎಷ್ಟು ಹಣ ಹೂಡಿಕೆ ಮಾಡಿದ್ದಿರಾ’ ಎಂದು ಪ್ರಶ್ನಿಸಿದರು.

‘₹ 70 ಲಕ್ಷ’ ಎಂಬ ಉತ್ತರ ಬರುತ್ತಿದ್ದಂತೆ ಹೂಡಿಕೆದಾರರು ನಂಬಲಿಲ್ಲ. ಕಂಪನಿಯೂ ತಮಗೆ ಕೊಟ್ಟಿದ್ದ ದಾಖಲೆಗಳನ್ನು ತೋರಿಸಿದ ಅಲೆಮಾರಿಗಳು, ತಮಗಾದ ವಂಚನೆಯನ್ನು ಬಿಚ್ಚಿಟ್ಟರು.

‘ಒಡಿಶಾದಲ್ಲಿ ನೆರೆಹಾವಳಿಗೆ ಮನೆ ಹಾಗೂ ಬೆಳೆಯೆಲ್ಲ ನಾಶ ಆಯಿತು. ಅಲ್ಲಿಯ ಜಮೀನು ಮಾರಿ ನಗರಕ್ಕೆ ಬಂದೆವು. ಚಿಕ್ಕಮಗಳೂರು, ಚಾಮರಾಜಪೇಟೆ, ಮಡಿಕೇರಿ... ಹೀಗೆ ಕಾಡು ಇರುವ ಪ್ರದೇಶಗಳಲ್ಲಿ ಸುತ್ತಾಡಿ ಜೇನು ಬಿಡಿಸಿ ಜೀವನ ಸಾಗಿಸುತ್ತಿದ್ದೆವು. ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಆಸೆಯಿಂದ ನಮ್ಮ ಬಳಿಯ ₹ 70 ಲಕ್ಷವನ್ನು 2014ರಲ್ಲಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದೆವು’ ಎಂದು ಅಲೆಮಾರಿಯೊಬ್ಬರು ಹೇಳಿದರು.

’ಪ್ರತಿ ತಿಂಗಳ ಬದಲು ಐದು ವರ್ಷದ ನಂತರ ಹಣ ವಾಪಸ್ ಪಡೆದರೆ ₹ 1.40 ಕೋಟಿ ಬರುತ್ತದೆ ಎಂದು ಕಂಪನಿಯ ಪ್ರತಿನಿಧಿಗಳು ಹೇಳಿದ್ದರು. ಅದನ್ನು ನಂಬಿ 5 ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಪ್ರಮಾಣ ಪತ್ರವನ್ನೂ ನೀಡಿದ್ದರು. ಇದೇ ಜೂನ್ 15ರಂದು ಹಣ ನಮಗೆ ಬರಬೇಕಿತ್ತು. ಅಷ್ಟರಲ್ಲೇ ಕಂಪನಿಯ ಬಾಗಿಲು ಮುಚ್ಚಿದ್ದು, ನಮಗೆ ದಿಕ್ಕು ತೋಚದಂತಾಗಿದೆ’ ಎಂದು ಕಣ್ಣೀರಿಟ್ಟರು.

ಮನೆ ಪಾತ್ರೆ ತೊಳೆದು ಕಟ್ಟಿದ್ದ ಹಣ: ’ಅವರಿವರ ಮನೆ ಪಾತ್ರೆ ತೊಳೆದು ₹ 1 ಲಕ್ಷ ಸಂಪಾದನೆ ಮಾಡಿದ್ದೆ. ಕಷ್ಟ ಕಾಲದಲ್ಲಿ ಹಣ ಬೇಕೆಂದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದೆ’ ಎಂದು ಮನೆಗೆಲಸದ ಮಹಿಳೆ ನಜ್ಮಾ ಹೇಳಿದರು.

‘ವರ್ಷಪೂರ್ತಿ ದುಡಿದ ಹಣವನ್ನು ಈ ವಂಚಕ, ಒಂದೇ ನಿಮಿಷದಲ್ಲೇ ದೋಚಿಕೊಂಡು ಹೋಗಿದ್ದಾನೆ. ಅಷ್ಟು ಹಣ ದುಡಿಯಲು ನಾನು ಎಷ್ಟು ಕಷ್ಟ ಪಟ್ಟಿದೆ ಎಂಬುದು ನನಗೆ ಗೊತ್ತು’ ಎಂದು ಕಣ್ಣೀರಿಟ್ಟರು.

ಮನೆ ಲೀಸ್‌ ಹಣ ಹೂಡಿಕೆ: ‘ಮಕ್ಕಳ ಶಿಕ್ಷಣ ಹಾಗೂ ಮದುವೆಗೆ ಹಣ ಬೇಕಿದ್ದರಿಂದ, ಮನೆ ಲೀಸ್‌ಗೆ ನೀಡಿದ್ದೆ. ಅದರಿಂದ ಬಂದ ₹ 8 ಲಕ್ಷವನ್ನು ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದೆ’ ಎಂದು ಕೊಳ್ಳೆಗಾಲದ ಇಸಾಕ್ ಹೇಳಿದರು.

‘ನಾವೀಗ ಬಾಡಿಗೆ ಮನೆಯಲ್ಲಿದ್ದೇವೆ. ಲೀಸ್ ಹಣವನ್ನು ವಾಪಸ್ ಕೊಟ್ಟು ಸ್ವಂತ ಮನೆಯನ್ನೂ ನಮ್ಮದಾಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಕಣ್ಣೀರಿಟ್ಟರು.

₹ 32 ಲಕ್ಷ ಹೂಡಿಕೆ: ಮೈಸೂರಿನ ನಿವಾಸಿಯೊಬ್ಬರು, ‘ಆರಂಭದಲ್ಲಿ ನನ್ನ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದ್ದೆ. ಅದಕ್ಕೆ ಪ್ರತಿ ತಿಂಗಳು ಶೇ 3ರಷ್ಟು ಹಣ ವಾಪಸ್ ಕೊಡುತ್ತಿದ್ದರು. ಅದನ್ನು ನಂಬಿ ತಂದೆ– ತಾಯಿ, ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲೂ 32 ಲಕ್ಷ ಹೂಡಿಕೆ ಮಾಡಿದ್ದೆ. ಈಗ ಪೂರ್ತಿ ಹಣ ಹೋಗಿದೆ’ ಎಂದು ಹೇಳಿದರು.

₹45 ಲಕ್ಷ ಹೂಡಿದ್ದ ಟೆಕಿ; ದುಮ್ಮಲೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್, ‘2016ರಲ್ಲಿ ₹ 45 ಲಕ್ಷ ಹೂಡಿಕೆ ಮಾಡಿದ್ದೆ. ಕೆಲ ತಿಂಗಳು ಲಾಭಾಂಶ ಬಂತು. ನಂತರ ಬಂದ್ ಆಯಿತು’ ಎಂದರು.

ಬ್ಯಾಂಕ್‌ ಸಾಲ ಮಾಡಿ ಹೂಡಿಕೆ: ‘ಕಂಪನಿಯವರು ಉತ್ತಮ ಲಾಭಾಂಶ ಕೊಡುತ್ತಾರೆಂದು ನಂಬಿ ಆಸ್ತಿಯನ್ನು ಅಡವಿಟ್ಟು ₹ 35 ಲಕ್ಷ ಸಾಲ ಪಡೆದು ಹೂಡಿಕೆ ಮಾಡಿದ್ದೆ’ ಎಂದು ಮೈಸೂರಿನ ನಿವಾಸಿಯೊಬ್ಬರು ಹೇಳಿದರು.

‘ಪ್ರತಿ ತಿಂಗಳು ಲಾಭಾಂಶ ನೀಡಲಾಗುವುದು ಹಾಗೂ ಅಸಲನ್ನು ಯಾವಾಗ ಬೇಕಾದರೂ ವಾಪಸ್ ಪಡೆಯಬಹುದೆಂದು ಹೇಳಿದ್ದರು. ಈಗ ಎಲ್ಲ ಹಣ ಹೋಯಿತು. ಬ್ಯಾಂಕ್‌ಗೆ ಸಾಲದ ಕಂತು ತುಂಬಲೂ ನನ್ನ ಬಳಿ ಹಣವಿಲ್ಲ’ ಎಂದು ಹೇಳಿದರು.

ಅಡಿಕೆ ಮಾರಿದ್ದ ಹಣ:ದಾವಣಗೆರೆಯ ರೈತರೊಬ್ಬರು,‘ತೋಟದಲ್ಲಿ ಅಡಿಕೆ ಬೆಳೆದಿದ್ದೆ. ಅದರ ಮಾರಾಟದಿಂದ ₹ 12 ಲಕ್ಷ ಬಂದಿತ್ತು. ಅದನ್ನು ಕಂಪನಿಯಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು ಬರುವ ಲಾಭಾಂಶವನ್ನು ಕೃಷಿಗೆ ಬಳಸುವ ಉದ್ದೇಶವಿತ್ತು’ ಎಂದು ತಿಳಿಸಿದರು.

‘ನನ್ನಂತೆ 20ಕ್ಕೂ ಹೆಚ್ಚು ರೈತರು ಸಹ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಹಣ ಕಟ್ಟಿಸಿಕೊಂಡಿದ್ದರು. ಈಗ ದೇವರೇ ಅವರಿಗೆ ಒಂದು ಗತಿ ಕಾಣಿಸಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT