ಸೋಮವಾರ, ಆಗಸ್ಟ್ 8, 2022
21 °C
ಓದಿನಲ್ಲಿ ಚಿನ್ನದ ಪದಕ, ಕುರಿ, ಕೋಳಿ, ಮೇಕೆ, ಹಸು ಸಾಕಾಣಿಕೆಯಲ್ಲಿ ಯಶಸ್ವಿ

ಎಂಎಸ್ಸಿ ಪದವೀಧರನ ಪಶುಸಂಗೋಪನಾ ವೃತ್ತಿ

ಶರತ್‌.ಎಂ.ಆರ್‌. Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ತಾಲ್ಲೂಕಿನ ಎಚ್‌.ಕೋಡಿಹಳ್ಳಿಯ ಡಾ.ಎಚ್‌.ಬಿ.ಮನೋಜ್‌ಕುಮಾರ್‌ ಓದಿರುವುದು ಎಂಎಸ್ಸಿ ಅಗ್ರಿಕಲ್ಚರ್‌, ಪಿಎಚ್‌.ಡಿ (ಚಿನ್ನದ ಪದಕ). ವೃತ್ತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಹ ಸಂಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಧುನಿಕ ಫಾರಂ ಹೌಸ್‌ ಮಾಡುವ ಮೂಲಕ ಕುರಿ, ನಾಟಿ ಕೋಳಿ, ಮೇಕೆ, ಹಸು ಸಾಕಾಣಿಕೆ ಮಾಡುತ್ತಾ ಯಶಸ್ವಿಯಾಗಿ ಸಮಗ್ರ ಪಶುಸಂಗೋಪನೆ ಮಾಡುತ್ತಿದ್ದಾರೆ.

ವಿ.ಸಿ.ಫಾರಂನಲ್ಲಿ ಬಿಎಸ್ಸಿ (ಕೃಷಿ), ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ (ಅಗ್ರಿ), ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಪಿಎಚ್‌.ಡಿ ಪಡೆದಿದ್ದು, ಪ್ರಸ್ತುತ ಮೈಸೂರಿನ ಸಿಎಸ್‌ಆರ್‌ಟಿಐ (ಸೆಂಟ್ರಲ್‌ ಸಿರಿಕಲ್ಚರ್‌ ರೀಸರ್ಚ್‌ ಟ್ರೈನಿಂಗ್‌ ಇನ್ಸ್‌ಟಿಟ್ಯೂಟ್‌) ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಹ ಸಂಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಓದಿರುವುದನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ತಮ್ಮಿಷ್ಟದ ಪಶುಸಂಗೋಪನೆಯಲ್ಲಿ ಪ್ರಾಯೋಗಿಕವಾಗಿ ಕಳೆದ ಎರಡೂವರೆ ವರ್ಷಗಳಿಂದ ತೊಡಗಿಕೊಂಡಿದ್ದಾರೆ.

80X32 ಅಡಿಗಳ ವಿಸ್ತಾರದಲ್ಲಿ ಅಟ್ಟಣಿಗೆ ಮಾದರಿಯಲ್ಲಿ ಆಧುನಿಕ ಶೆಡ್‌, 20X36 ಅಡಿಯಲ್ಲಿ ಹಸುವಿನ ಶೆಡ್ ನಿರ್ಮಿಸಲಾಗಿದೆ. ಅಟ್ಟಣಿಗೆಯ ಒಂದು ಭಾಗದಲ್ಲಿ ಮೇಕೆ, ಮತ್ತೊಂದು ಭಾಗದಲ್ಲಿ ಕುರಿ ಸಾಕುತ್ತಿದ್ದಾರೆ. ಒಂದು ಭಾಗದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ವಯಸ್ಸಿನ, ಬೆಳವಣಿಗೆ ಆಧಾರದ ಮೇಲೆ ವಿಂಗಡಿಸಿ, ಅವುಗಳನ್ನು ಮಾರಲಾಗುತ್ತದೆ.

ಇವುಗಳಿಗೆ ಹಾಕಿದ ಮೇವು, ತಿಂದ ನಂತರ ಕೆಳಗೆ ಬೀಳಲಿದ್ದು, ಅದನ್ನು ಹಸುವಿಗೆ ಹಾಕಲಾಗುತ್ತದೆ. ಇದರಿಂದ ನಿತ್ಯ ಸ್ವಚ್ಛಗೊಳಿಸುವುದನ್ನು ತಪ್ಪಿಸಿದಂತಾಗಿದೆ. ಅಲ್ಲದೆ ಸಂಜೆ ಸಮಯದಲ್ಲಿ ಪೂರಕ ಆಹಾರವಾಗಿ ಜೋಳ, ಹುರುಳಿ, ಭತ್ತ ನೀಡಲಾಗುತ್ತದೆ. ಅಟ್ಟಣಿಗೆ ಕೆಳಗೆ ಬಿದ್ದ ಕಾಳು ಕೋಳಿಗೆ ಆಹಾರವಾಗುತ್ತದೆ.

ಶೆಡ್‌ ನಿರ್ಮಾಣ, ಪಶುಗಳ ಸಾಕಾಣಿಕೆಗಾಗಿ ನಬಾರ್ಡ್‌ನ ಎಸಿಎಡಿಸಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆದಿದ್ದಾರೆ. ಇದಲ್ಲದೆ 4 ಎಕರೆಯಲ್ಲಿ ಪಶುಗಳಿಗೆ ಬೇಕಾದ ಸೀಮೆಹುಲ್ಲು, ಮೆಕ್ಕೆ ಜೋಳ, ಮಲ್ಟಿಕಟರ್‌ ಸೋರಗಂ (ಸಿಒಎಫ್‌ಎಸ್‌–29), ಹಮಟ, ಅಗಸೆ ಮೇವುಗಳನ್ನು ಬೆಳೆದು ಸ್ವಾವಲಂಬನೆ ಸಾಧಿಸಿದ್ದಾರೆ. ಕಡಿಮೆ ಹಣದಲ್ಲಿ ಕರು ತಂದು ಅದನ್ನು ತೆನೆ ಮಾಡಿ ಮಾರಾಟ ಮಾಡುವ ಮನೋಜ್‌ ಒಂದು ಹಸುವಿನಲ್ಲಿ ₹25 ಸಾವಿರದವರೆಗೆ ಲಾಭ ಮಾಡುತ್ತಾರೆ.

ಪ್ರಸ್ತುತ ಫಾರಂನಲ್ಲಿ 10 ಹಸು, ಸುಜೋತ್‌, ಜಮನಾಪುರ, ಬೀತಲ್‌, ಶಿರೋಹಿ, ನಾಟಿ ತಳಿಯ 42 ಮೇಕೆ, ಬಂಡೂರು, ನಾರಿ ಸುವರ್ಣ ಸೇರಿದಂತೆ 60 ನಾಟಿ ಟಗರು, 200ಕ್ಕೂ ಹೆಚ್ಚು ನಾಟಿಕೋಳಿಗಳನ್ನು ಸಾಕಿದ್ದಾರೆ. ಬಕ್ರೀದ್‌, ಪಿತೃಪಕ್ಷ ಮುಂತಾದ ಹಬ್ಬದ ಸಂದರ್ಭದಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ಫಾರಂಗೆ ಬಂದು ಟಗರು, ಕೋಳಿ ಖರೀದಿಸುತ್ತಾರೆ.

ಇದಲ್ಲದೆ ಕುರಿ, ಮೇಕೆ ಪಿಕ್ಕೆ, ಹಸುವಿನ ಸಗಣಿಯನ್ನು ನ್ಯೂಟ್ರಿಯಂಟ್‌ ಎನ್‌ರಿಚ್‌ ಗೊಬ್ಬರವಾಗಿ ಮಾರ್ಪಡಿಸಿ ಬೆಳೆಗಳಿಗೆ ಉಪಯೋಗಿಸಿಕೊಳ್ಳುವುದಲ್ಲದೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಬಾರಿ ಎರೆ ಹುಳುಗೊಬ್ಬರ ತಯಾರಿಸುವ ಉದ್ದೇಶ ಹೊಂದಿದ್ದಾರೆ. ಫಾರಂ ಅನ್ನು ಅದೇ ಊರಿನ ದಂಪತಿ ನಿರ್ವಹಣೆ ಮಾಡುತ್ತಿದ್ದು, ಅವರಿಗೆ ಮಾಸಿಕ ₹15 ಸಾವಿರ ವೇತನ ನೀಡುತ್ತಿದ್ದಾರೆ. ಮನೋಜ್‌ ಸಂಪರ್ಕ ಸಂಖ್ಯೆ; 9964663850.

ನಷ್ಟ ತಪ್ಪಿಸಲು ವಿಮೆ ಇರಲಿ

ಲಕ್ಷಾಂತರ ಬಂಡವಾಳ ಹಾಕಿ ಫಾರಂ ಮಾಡುತ್ತಾರೆ. ಆದರೆ, ಜಾನುವಾರು ಸುರಕ್ಷತೆಗಾಗಿ ವಿಮೆ ಮಾಡಿಸುವುದನ್ನೇ ಮರೆತಿರುತ್ತಾರೆ. ಸಾಕಾಣಿಕೆ ಸಂದರ್ಭದಲ್ಲಿ ರೋಗಕ್ಕೆ ತುತ್ತಾಗಿ ದಿಢೀರನೇ ಮೃತಪಡುವ ಸಾಧ್ಯತೆ ಇರುತ್ತದೆ. ಇದರಿಂದ ನಷ್ಟವಾಗಿ ಕೈಸುಟ್ಟುಕೊಂಡವರಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಮನೋಜ್‌ ಅವರು ₹15 ಲಕ್ಷ ಮೌಲ್ಯದ ವಿಮೆ ಮಾಡಿಸಿದ್ದು, ಪ್ರತಿ ವರ್ಷ ₹30 ಸಾವಿರ ಹಣ ತುಂಬುತ್ತಿದ್ದಾರೆ.

ಫಾರಂನಲ್ಲಿ ರೋಗ ಬಂದು ಸತ್ತರೆ, ಕಳ್ಳತನವಾದರೆ ವಿಮೆ ಹಣ ಬರ ಲಿದ್ದು, ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಫಾರಂ ಮಾಡುವವರು ವಿಮೆ ಮಾಡಿಸಿದರೆ ನಷ್ಟವಾಗುವುದಿಲ್ಲ ಎಂದು ಹೇಳುತ್ತಾರೆ ಮನೋಜ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು