ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಸೂರುಕಸುಬು ಮೂರು!

Last Updated 29 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

‘ಈ ಬಾರಿಯೂ ಹಾಲು ಉತ್ಪಾದನೆಯಲ್ಲಿ ಮಂಡ್ಯ ಜಿಲ್ಲೆಗೆ ನಾನೇ ಫಸ್ಟ್‌ ಸರ್‌’ ಎಂದು ಅರಕೆರೆ ಗ್ರಾಮದ ರಮೇಶ್‌ ಹೇಳಿದ್ದು ನನ್ನಲ್ಲಿ ಕುತೂಹಲ ಮೂಡಿಸಿತು. ‘ಹಾಗಾದರೆ ಎರಡು, ಮೂರು, ನಾಲ್ಕನೇ ಸ್ಥಾನದಲ್ಲಿ ಯಾರಿದ್ದಾರೆ?’ ಎಂದು ಕೇಳಿದೆ. ‘ಕೊತ್ತತ್ತಿ ಮೋಹನ್‌, ಹುಲ್ಕೆರೆಕೊಪ್ಪಲು ರವಿ– ಹೀಗೆ ಯಾರ್‌ ಯಾರೊ ಇದಾರೆ’ ಅಂದ್ರು. ಮಂಡ್ಯ ಹಾಲು ಒಕ್ಕೂಟ (ಮನ್‌ಮುಲ್‌)ದ ನಿರ್ದೇಶಕ ಬಿ. ಬೋರೇಗೌಡ ಅವರ ಪರಿಚಯ ಇದ್ದದ್ದರಿಂದ ಈ ವಿಷಯವನ್ನು ಮತ್ತಷ್ಟು ಕೆದಕಿದೆ.

‘ಹಸುಗಳನ್ನು ಸಾಕಣೆ ಮಾಡುವವರು ಸಾಕಷ್ಟು ಜನ ಇದ್ದಾರೆ. ಆದರೆ ಹಸುಗಳ ಜತೆಗೆ ಮೇಕೆ, ಕೋಳಿ, ನಾಟಿ ತಳಿಯ ಕಡಸು(ಕರು)– ಈ ಎಲ್ಲವನ್ನೂ ಜತೆ ಜತೆಗೇ ಸಾಕಣೆ ಮಾಡಿ ಪ್ರತಿ ದಿನ ಸಾವಿರಾರು ರೂಪಾಯಿ ಆದಾಯ ಪಡೆಯುತ್ತಿರುವ ಹುಲ್ಲುಕೆರೆಕೊಪ್ಪಲು ರವಿ ಗೊತ್ತಾ?’ ಅಂದ್ರು ಬೋರೇಗೌಡ. ಅವರ ಮಾತು, ನನ್ನಲ್ಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು. ಮರು ಚಿಂತನೆ ಮಾಡದೇ, ನಸುಕಿನಲ್ಲೇ ಎದ್ದು ಹುಲ್ಲುಕೆರೆಕೊಪ್ಪಲು ಹಾದಿ ಹಿಡಿದೆ. ನಮ್ಮೂರಿನಿಂದ ಸುಮಾರು 25 ಕಿ.ಮೀ. ದೂರದ ಆ ಊರಿಗೆ ಹಳ್ಳ, ದಿಣ್ಣೆ, ನೀರಿನ ಝರಿಗಳನ್ನು ದಾಟಿಕೊಂಡು ತಲುಪಲು ಒಂದೂವರೆ ತಾಸು ಬೇಕಾಯಿತು.

‘ಆಂಜುಣಯ್ಯನ ಗುಡಿ ತಾವೇ ಕನ ಹೋಗಿ ರವಿ ಮನೆ’ ಅಂದ್ರು ಎದುರು ಸಿಕ್ಕವರು. ಅವರು ಹೇಳಿದ ಮಾರ್ಗ ತಲುಪುತ್ತಿದ್ದಂತೆ, ಸುಮಾರು ಒಂದು ಎಕರೆ ಜಾಗದಲ್ಲಿ ಒಂದೆಡೆ ಹಸುಗಳ ಕೊಟ್ಟಿಗೆ, ಎಡಕ್ಕೆ ಮೇಕೆಗಳ ಗೊಂತು. ಈ ಗೊಂತುಗಳಿಗೆ ಹೊಂದಿಕೊಂಡಂತೆ ಹಳ್ಳಿಕಾರ್‌ ತಳಿಯ ಕಡಸುಗಳ ಮತ್ತೊಂದು ಕೊಟ್ಟಿಗೆ. ಅದರ ಹಿಂದೆಯೇ ನಾಟಿಕೋಳಿಗಳಿಗೊಂದು ಶೆಡ್‌. ಈ ಶೆಡ್‌ನ ಮೇಲೆ ಪಾರಿವಾಳಗಳ ನಾಲ್ಕಾರು ಗೂಡುಗಳು. ತುಸು ಬಲಕ್ಕೆ ಬಾತುಕೋಳಿಗಳ ಪುಟ್ಟ ಕೊಳ. ಅದು ಹುಲ್ಲುಕೆರೆಕೊಪ್ಪಲು ರವಿ ಅವರ ಫಾರಂ ಹೌಸ್‌.

ಆಗ ತಾನೆ ಕೊಯ್ದು ತಂದಿದ್ದ ಮುಸುಕಿನ ಜೋಳದ ಸಿಪ್ಪೆಯನ್ನು ಯಂತ್ರಕ್ಕೆ ಕೊಟ್ಟು ಕತ್ತರಿಸುವುದರಲ್ಲಿ ತಲ್ಲೀನರಾಗಿದ್ದ ರವಿ ಅವರನ್ನು ನಾನೇ ಮಾತಿಗೆಳೆದೆ. ‘15 ವರ್ಷಗಳಿಂದ ಹಸುಗಳನ್ನು ಸಾಕ್ತಾ ಇದ್ದೀನಿ. ಪ್ರಾರಂಭದಲ್ಲಿ ಎರಡು ಹಸುಗಳಿದ್ದವು. ಹುಟ್ಟುವಳಿ ಬೆಳೆದು ಈಗ 30 ರಾಸುಗಳಾಗಿವೆ. ಈಗ 12 ಹಸುಗಳು ಹಾಲು ಕೊಡುತ್ತಿವೆ. ದಿನಕ್ಕೆ 157 ಲೀಟರ್‌ ಹಾಲು ಸಿಗುತ್ತಿದೆ. ನಮ್ಮೂರಿನ ಡೇರಿ ಮೂಲಕ ಮಂಡ್ಯ ಹಾಲು ಒಕ್ಕೂಟಕ್ಕೆ ಹಾಲು ಮಾರಾಟ ಮಾಡುತ್ತಿದ್ದೇನೆ. ದಿನಕ್ಕೆ ಸುಮಾರು ₹3 ಸಾವಿರ ತನಕ ಹಣ ಸಿಕ್ತಾಯಿದೆ’ ಎನ್ನುತ್ತಾ ಹೈನುಗಾರಿಕೆಯ ಹೆಜ್ಜೆಗಳನ್ನು ವಿವರಿಸುತ್ತಾ ಸಾಗಿದರು ರವಿ.

ಮಾತುಕತೆ ಸಾಗುತ್ತಿದ್ದಾಗ ಪಕ್ಕದಲ್ಲಿ ಮೇಕೆಗಳು ಗೊಂತಿನಲ್ಲಿ ಮೇವು ತಿನ್ನುತ್ತಿದ್ದನ್ನು ಗಮನಿಸಿದೆ. ‘ಕುರಿ, ಆಡುಗಳು ಬಯಲಿನಲ್ಲಿ ಸೊಪ್ಪು, ಹುಲ್ಲು ಮೇಯ್ದರೆ ತಾನೆ ದಪ್ಪ ಆಗೋದು’ ಅಂತ ಕೇಳಿದೆ. ‘ಹಂಗೇನಿಲ್ಲ. ಮೂರು ವರ್ಷಗಳಿಂದ ಗೊಂತಿನಲ್ಲೇ ಆಡುಗಳನ್ನು ಸಾಕ್ತಾ ಇದ್ದೀನಿ. ಹೆಂಗೂ ನಾಕು ಎಕರೆಯಲ್ಲಿ ಸೀಮೆಹುಲ್ಲು ಬೆಳೆಸೀವ್ನಿ. ಹಸುಗಳಿಗೆ ಹಾಕುವ ಹುಲ್ಲು, ಮುಸುಕಿನ ಜೋಳ, ತೆವರಿ ಹುಲ್ಲನ್ನೇ ಮೇಯಿಸ್ತೇನೆ. ಆಗಾಗ ಗಸಗಸೆ, ಬೇವು, ಬಸರಿ, ಆಲದ ಮರದ ಸೊಪ್ಪು ತಂದು ಹಾಕುವುದೂ ಉಂಟು. ಆಡು, ಕುರಿ ಇವೆಯಲ್ಲ; ಇವು ಎಟಿಎಂ ಇದ್ದಂಗೆ. ದುಡ್ಡು ಬೇಕಾದಾಗ ಮಾರಾಟ ಮಾಡಬಹುದು’ ಎಂದು ರವಿ ಹಸನ್ಮುಖರಾಗಿ ಉತ್ತರಿಸಿದರು.

ಅಷ್ಟು ಹೊತ್ತಿಗೆ, ಕೊಕ್ಕೊಕ್ಕೋ ಅಂತ ಕೋಳಿಗಳ ಶಬ್ದ ಕೇಳಿಸಿತು. ಮೂರು ತಿಂಗಳ ಹ್ಯಾಟೆಯಿಂದ ಮೂರು ವರ್ಷ ಪ್ರಾಯದ ಹುಂಜದ ವರೆಗೆ ನೂರಾರು ನಾಟಿ ಕೋಳಿಗಳ ಗುಂಪೇ ಕಂಡಿತು. ಕೆಂಪು, ಕಂದು, ಕಪ್ಪು ಮತ್ತು ಕೆಂಪು, ಬೂದು ಬಣ್ಣ– ಹೀಗೆ ಕೋಳಿಗಳು ಬಾಗಿಲು ತೆಗೆದೊಡನೆ ದುಡು ದುಡನೆ, ಕೆಲವು ಪುರ‍್ರೆಂದು ತಾ ಮುಂದು ನಾ ಮುಂದು ಎಂದು ಈಚೆ ನುಗ್ಗಿದವು. ರವಿ ಅವರ ಚಿಕ್ಕಮ್ಮ ಗೌರಮ್ಮ ಮೊರದ ತಂಬ ಭತ್ತ ತಂದು ಬಯಲಲ್ಲಿ ಹರಡಿದರು. ‘ನಾಟಿ ಕೋಳಿಯ ಒಂದ್‌ ಮೊಟ್ಟೆ 10 ರೂಪಾಯಿ. ಮಂಡೇದೋರು ಇಲ್ಗೇ ಬಂದು ತಕ್ಕಂಡ್‌ ಹೋಯ್ತಾರೆ. ದಿನಕ್ಕೆ 30 ಮಟ್ಟೆಗಂಟ ಸಿಗ್ತವೆ. ಕೇಳ್ದೋರಿಗೆ ಕೇಜಿಗೆ ಇನ್ನೂರ್‌ ಐವತ್ತು ರೂಪಾಯಿಯಂಗೆ ಕೋಳಿನೂ ಮಾರ್ತೀವಿ’ ಅಂದ್ರು.

ಮೇಕೆ, ಕುರಿ ಸಾಕಾಣಿಕೆ
ಮೇಕೆ, ಕುರಿ ಸಾಕಾಣಿಕೆ

ಅಷ್ಟರಲ್ಲಿ ಸೀಮೆ ಹಸುಗಳ ಕೊಟ್ಟಿಗೆ ಸ್ವಚ್ಛಗೊಳಿಸಿ, ಚರ್ಣಿಗೆ ಮೇವು ತುಂಬಿ ಇತ್ತ ಬಂದ ರವಿ ತಮ್ಮ ಹಳ್ಳಿಕಾರ್‌ ಕಡಸುಗಳ ಹಾರೈಕೆಗೆ ತೊಡಗಿದರು. ‘ಒಂದ್‌ ಲಕ್ಷಕ್ಕೆ ಕೇಳವ್ರೆ ಸರ್‌; ಕೊಟ್ಟಿಲ್ಲ. ಇನ್ನೂ ಎರಡಲ್ಲು ಕಡಸು. ಉಳುಮೆ, ಗಾಡಿ ಎಲ್ಲಕ್ಕೂ ಸೈ. ಇನ್ನಾರು ತಿಂಗ್ಳು ನೋಡ್ಕಂಡ್ರೆ ಇವುಗಳ ಬೆಲೆನೇ ಬೇರೆ..’ ಎಂದು ಹಾಲು ಬಿಳುಪು ಬಣ್ಣದ ಕಡಸುಗಳ ಮೈದಡವುತ್ತಾ ಹೇಳಿದರು.

ನೂರಿಪ್ಪತ್ತು ಮನೆಗಳ ಸಣ್ಣ ಹಳ್ಳಿಯಲ್ಲಿ ಇದ್ದುಕೊಂಡು, ಪರಂಪರಾಗತ ಕಸುಬಿನಿಂದಲೇ ಲಾಭ ಪಡೆಯುತ್ತಿದ್ದಾರೆ ರವಿ. ಹಣ ಸಂಪಾದನೆಗೆ ನಗರಗಳಿಗೇ ಹೋಗಬೇಕು ಎನ್ನುವವರಿಗೆ ಇವರ ಬದುಕು ಉತ್ತರವಾಗಿ ಕಂಡಿತು. ಅಷ್ಟೊತ್ತು ಕುಳಿತಿದ್ದ ಮರದ ಗಾಡಿಯಿಂದ ಇಳಿದು ರವಿ ಅವರ ಫಾರ್ಮ್‌ನಿಂದ ಈಚೆ ಬರುವಾಗ ಸೂರಿನಿಂದ ಸೂರಿಗೆ ಹಾರಾಡುತ್ತಿದ್ದ ಪಾರಿವಾಳಗಳ ಚಿನ್ನಾಟ, ಮೇಕೆ ಮರಿಗಳ ನೆಗೆದಾಟ, ಕೊಳದಲ್ಲಿ ಮೀಯುತ್ತಿದ್ದ ಬಾತುಗಳ ಈಜಾಟ ‘ಮತ್ತೆ ಮತ್ತೆ ಬನ್ನಿ’ ಎಂದು ಕರೆದಂತಿತ್ತು.

ಹೈನುಗಾರಿಕೆ ಕುರಿತ ಹೆಚ್ಚಿನ ಮಾಹಿತಿಗಾಗಿ ರವಿ ಅವರ ಸಂಪರ್ಕಕ್ಕೆ ಮೊ:7338514073.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT