ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ಭೂಮಿಯಲ್ಲಿ ಚಿಗುರಿದ ‘ಸ್ಟ್ರಾಬೆರಿ’

Last Updated 2 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಹುಬ್ಬಳ್ಳಿ ನವನಗರದ ಶಶಿಧರ ಗೊರವರ ಮಹಾರಾಷ್ಟ್ರದ ಮಹಾ ಬಲೇಶ್ವರದಲ್ಲಿ ಸಿವಿಲ್‌ ಗುತ್ತಿಗೆದಾರರು. ಅಲ್ಲಿನ ಪಂಚಗಣಿಯ ಸುತ್ತಮುತ್ತ ಬೆಳೆಯುತ್ತಿದ್ದ ಸ್ಟ್ರಾಬೆರಿ ಬೆಳೆ ಕಂಡು, ತಾನೂ ಸ್ಟ್ರಾಬೆರಿ ಬೆಳೆಯಬೇಕು ಎಂದು ಕನಸು ಕಂಡರು. ಕೃಷಿಯೆಡೆಗಿನ ಸೆಳೆತ ತಡೆಯಲಾಗದೆ ಅಲ್ಲಿಯೇ ಒಂದಷ್ಟು ಜಾಗವನ್ನು ಗೇಣಿ ಪಡೆದು ಸ್ಟ್ರಾಬೆರಿ ಬೆಳೆದರು. ಅದರಿಂದ ಇನ್ನಷ್ಟು ಉತ್ಸುಕರಾದ ಶಶಿಧರಗೆ ತನ್ನೂರಲ್ಲೇ ಈ ಹಣ್ಣಿನ ಕೃಷಿ ಮಾಡಬೇಕೆನಿಸಿತು. ಕೆಲಸ ಮಾಡುತ್ತಲೇ ಹುಬ್ಬಳ್ಳಿಯಲ್ಲಿ ಈ ಹಣ್ಣು ಬೆಳೆಯಲು ಸೂಕ್ತ ಜಾಗಕ್ಕೆ ಹುಡುಕಾಟ ನಡೆಸಿದರು.

ಸ್ಟ್ರಾಬೆರಿ ಬೆಳೆಯಲು ತಂಪು ವಾತಾವರಣ ಬೇಕು.ಅದಕ್ಕಾಗಿ ಒಂದಲ್ಲ; ಎರಡು ವರ್ಷಗಳ ಕಾಲ ಜಮೀನು ಹುಡುಕಿದರು. ಈ ಹುಡುಕಾಟದಲ್ಲಿ ಮನಸ್ಸಿಗೆ ಹಿಡಿಸಿದ್ದು ಕಲಘಟಗಿ ಹತ್ತಿರದ ಹುಲ್ಲಂಬಿ ಎಂಬ ಹಳ್ಳಿಯ ಜಮೀನು. ತಗ್ಗು ದಿಣ್ಣೆಯಂತಿರುವ ಕಲ್ಲುಗಳಿಂದ ತುಂಬಿಕೊಂಡ ಆರು ಎಕರೆಯ ಇಳಿಜಾರು ಪ್ರದೇಶ ಅದು. ಮೊದಲು ಅಲ್ಲಿ ಕೊಳವೆಬಾವಿ ಕೊರೆಸಿದರು. ನಂತರ ಜಾಗ ಸಮತಟ್ಟು ಮಾಡಿಸಿದರು. ಅದರಲ್ಲೇ ಒಂದೆಕರೆಯಲ್ಲಿ ಸ್ಟ್ರಾಬೆರಿ ಕಾಯಕಕ್ಕೆ ಇಳಿದೇ ಬಿಟ್ಟರು ಶಶಿಧರ.

ಸ್ಟ್ರಾಬೆರಿ, ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಬೆಳೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಲ್ಲಿಂದಲೇ 300 ಈ ಹಣ್ಣಿನ ಗೆಡ್ಡೆಗಳನ್ನು ತಂದು ನರ್ಸರಿಯಲ್ಲಿ ಸಸಿ ಮಾಡಿದರು. ನಂತರಮೂರು ಅಡಿ ಅಗಲ 20 ಅಡಿ ಉದ್ದದ ಮಡಿ(ತಾಕು)ಗಳನ್ನು ಮಾಡಿ ಒಂದು ಅಡಿ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದರು. ಎಲ್ಲ ಬೆಡ್‌ಗಳಿಗೂ ಪ್ಲಾಸ್ಟಿಕ್‌ ಮಲ್ಚಿಂಗ್ ಮಾಡಿದರು. ಪರಿಣಾಮವಾಗಿ ಕಳೆ ಬೆಳೆಯಲಿಲ್ಲ. ನೀರು ಆವಿಯಾಗುವುದು ತಪ್ಪಿತು. ನಿರ್ವಹಣೆ ಖರ್ಚು ಉಳಿಯಿತು.

‘ಪ್ರತಿನಿತ್ಯ ಬೆಳಿಗ್ಗೆ ಎಲ್ಲ ಮಡಿಗಳಿಗೂ ಹನಿನೀರಾವರಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದೆ. ನೀರಿನ ಮೂಲಕವೇ ರಸಗೊಬ್ಬರ ಪೂರೈಸುತ್ತಿದ್ದೆ. ಇದರಿಂದ ಹೆಚ್ಚುವರಿ ಕಾರ್ಮಿಕರ ಖರ್ಚು ಮತ್ತು ಸಮಯವೂ ಉಳಿಯುತು‘ ಎನ್ನುತ್ತಾರೆ ಶಶಿಧರ.

300 ರಿಂದ 25000 ಗಿಡಗಳು

ಆರಂಭದಲ್ಲಿ 300 ಗಿಡಗಳನ್ನು ನರ್ಸರಿ ಮಾಡಿದರು. ಆ ಗಿಡಗಳ ಗೆಡ್ಡೆಗಳನ್ನು ಬಳಸಿಕೊಂಡು ನರ್ಸರಿಯಲ್ಲಿ ಸಸಿ ಬೆಳೆಸಿದರು. ‘ಒಂದು ಎಕರೆಯಲ್ಲಿ ಅಂದಾಜು 25000 ಗಿಡಗಳನ್ನು ನಾಟಿ ಮಾಡಬಹುದು. ನಮ್ಮಲ್ಲಿ ಅಷ್ಟೇ ಸಸಿಗಳಿವೆ. ಅವುಗಳಲ್ಲಿ ಕಾಲು ಭಾಗವನ್ನು ಸಾವಯವ ಪದ್ಧತಿಯಲ್ಲಿ, ಉಳಿದವನ್ನು ರಾಸಾಯನಿಕ ಪದ್ಧತಿಯಲ್ಲೇ ಬೆಳೆಯುತ್ತಿದ್ದೇವೆ’ ಎಂದರು ಶಶಿಧರ.

ಮೆಣಸಿನ ಬೆಳೆಗೆ ಬಾಧಿಸುವ ರೋಗಗಳೇ ಸ್ಟ್ರಾಬೆರಿಗೂ ಬಾಧಿಸುತ್ತವೆ. ಮೆಣಸಿನ ಬೆಳೆಗೆ ನೀಡುವ, ಔಷಧೋಪಚಾರವನ್ನೇ ಸ್ಟ್ರಾಬೆರಿಗೂ ನೀಡುತ್ತಿದ್ದಾರೆ. ಪೋಷಕಾಂಶ ಪೂರೈಕೆ ಹಾಗೂ ಔಷಧೋಪಚಾರವನ್ನು ಮಗ ಧೀರಜ್‌ಗೆ ವಹಿಸಿದ್ದಾರೆ.

45ನೇ ದಿನಕ್ಕೆ ಫಸಲು ಬಿಡುತ್ತವೆ

ನಾಟಿ ಮಾಡಿದ 45ನೇ ದಿನಕ್ಕೇ ಗಿಡಗಳು ಹಣ್ಣು ಬಿಡಲು ಆರಂಭಿಸಿದವು. ಆಗ ಶಶಿಧರರಿಗೆ ಖುಷಿಯೋ ಖುಷಿ. ಈ ಗೆಲುವಿ ನಿಂದ ಉತ್ತೇಜಿತಗೊಂಡ ಅವರು, ಅದೇ ಜಾಗದಲ್ಲಿ ಸ್ಟ್ರಾಬೆರಿ ನರ್ಸರಿಯನ್ನೇ ಆರಂಭಿಸಿದರು.ಸದ್ಯ ಅವರ ಜಮೀನಿನಲ್ಲಿ ವಿಂಟರ್‌ ಡೌನ್‌, ನಾಬಿಲಾ, ಸ್ವೀಟ್‌ ಸೆನ್ಸೆಸನ್‌, ಎಸ್ಸೆ ಎಂಬ ನಾಲ್ಕು ತಳಿ ಸೇರಿದಂತೆ 25 ಸಾವಿರ ಸ್ಟ್ರಾಬೆರಿ ಗಿಡಗಳು ಕೆಂಪು ಕೆಂಪು ಸ್ಟ್ರಾಬೆರಿ ಹಣ್ಣು ಬಿಟ್ಟು ಸೆಳೆಯುತ್ತಿವೆ. 11ನೇ ತಿಂಗಳಲ್ಲಿ ಉತ್ತಮ ಆದಾಯವನ್ನು ತಂದುಕೊಟ್ಟಿದೆ.

ಕಳೆದ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮಳೆ ಹೆಚ್ಚಿದ್ದರಿಂದ ಆ ಸಮಯದಲ್ಲಿ ಕೊಂಚ ಹಿನ್ನೆಡೆಯಾಯಿತು. ಮುಂದೆ ದೀಪಾವಳಿ ಸಮಯದಲ್ಲಿ ಬೆಳೆ ಸುಧಾರಿಸಿ, ಉತ್ತಮ ಬೆಲೆಯೂ ಸಿಕ್ಕಿತು. ಮಾಮೂಲಾಗಿ ಪ್ರತಿ ಕೆಜಿಗೆ ₹100 ರಿಂದ ₹150 ದರ ಸಿಗುತ್ತಿದ್ದು, ದೀಪಾವಳಿ ಸಮಯದಲ್ಲಿ ₹300–400ರವರೆಗೂ ದರ ಸಿಕ್ಕಿದ್ದು ಶಶಿಧರ ಅವರನ್ನು ಖುಷಿಪಡಿಸಿತು. ಪ್ರತಿನಿತ್ಯ 100 ರಿಂದ 150 ಕೆಜಿ ಹಣ್ಣು ಕೊಯ್ಯುತ್ತಿದ್ದು, ನಿತ್ಯ ಸರಾಸರಿ ₹8,000 ಗಳಿಕೆಯಾಗುತ್ತಿದೆ. 18 ಮಂದಿ ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ದಿನಗೂಲಿ ಜೊತೆಗೆ ಸ್ಟ್ರಾಬೆರಿ ಪ್ಯಾಕಿಂಗ್‌ ಮೇಲೆ ಬೋನಸ್‌ ಅನ್ನು ಸೇರಿಸಿಕೊಡುತ್ತಿದ್ದಾರೆ.

ಶಶಿಧರ ಸ್ಟ್ರಾಬೆರಿ ಜೊತೆಗೆ ಗೂಸ್‌ಬರಿ, ರಾಸ್ಬೆರಿಯ ಗಿಡಗಳನ್ನು ಬೆಳೆಸಿದ್ದಾರೆ. ಹಣ್ಣಿನ ಗಿಡಗಳ ಜತೆಗೆ, ಸಾವಯವ ಪದ್ಧತಿಯಲ್ಲಿ ತರಕಾರಿಯನ್ನು ಮಿಶ್ರಬೆಳೆಯಾಗಿಬೆಳೆಯುತ್ತಿದ್ದಾರೆ. ಶಶಿಧರ ಅವರ ಪತ್ನಿ ಜ್ಯೋತಿ ಗೊರವರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.

ದಲ್ಲಾಳಿಗಳೊಂದಿಗೆ ಮಾರುಕಟ್ಟೆ

‘ಹುಬ್ಬಳ್ಳಿ–ಧಾರವಾಡದಲ್ಲಿಯೇ ಸ್ಥಳೀಯ ದಲ್ಲಾಳಿಗಳ ಮೂಲಕ ಮಾರುಕಟ್ಟೆ ಕಂಡುಕೊಂಡಿದ್ದೇವೆ. ಬೆಳೆ ಬೆಳೆಯಲು ಆರಂಭಿಸಿ 11 ತಿಂಗಳಾಗಿದ್ದು, ಸದ್ಯಕ್ಕೆ ನಷ್ಟದ ಬಗ್ಗೆ ಗೊತ್ತಾಗಿಲ್ಲ. ನಮ್ಮ ನೆಲದಲ್ಲೂ ಸ್ಟ್ರಾಬೆರಿಯನ್ನು ಉತ್ತಮವಾಗಿ ಬೆಳೆಯಲಿದೆ ಎಂಬ ವಿಷಯ ಗೊತ್ತಾಯಿತು‘ ಎನ್ನುತ್ತಾರೆ ಶಶಿಧರ.

ಸ್ಟ್ರಾಬೆರಿ ಕೃಷಿಯಲ್ಲಿ ಶಶಿಧರ ಜತೆಗೆ, ಕಿರಿಯ ಮಗ ಧೀರಜ್‌ ನೀರು ಪೂರೈಸುವ ಕೆಲಸ ಮಾಡಿದರೆ, ದೊಡ್ಡ ಮಗ ಸೂರಜ್‌ಗೆ ಮಾರುಕಟ್ಟೆಗೆ ಜವಾಬ್ದಾರಿ. ನಿತ್ಯ ಬೆಳಿಗ್ಗೆ 7.30ಕ್ಕೆ ಹಣ್ಣು ಕೊಯ್ಲು ಆರಂಭಿಸುವ ಕಾರ್ಮಿಕರು, ಮಧ್ಯಾಹ್ನದ ನಂತರ ಅವುಗಳ ಪ್ಯಾಕಿಂಗ್‌ ಕೆಲಸವನ್ನು ನಿರ್ವಹಿಸುತ್ತಾರೆ. ಇವುಗಳಿಗೆಲ್ಲ ಮೇಲುಸ್ತುವಾರಿ ಶಶಿಧರ ಹಾಗೂ ಅವರ ಪತ್ನಿ ಜ್ಯೋತಿ ಅವರದ್ದು.

ಜ್ಯೋತಿ ಅವರು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನದಲ್ಲಿ ತರಬೇತಿ ಪಡೆದು ಸ್ಟ್ರಾಬೆರಿ ಜಾಮ್‌, ಸಿರಪ್‌, ಚಾಕೊಲೇಟ್‌ ಅನ್ನು ಪ್ರಾಯೋಗಿಕವಾಗಿ ಮಾಡಿದ್ದು, ಮುಂದೆ ದೊಡ್ಡ ಪ್ರಮಾಣದಲ್ಲಿ ಮಾಡುವ ಯೋಜನೆ ಹೊಂದಿದ್ದಾರೆ.

ಸ್ಟ್ರಾಬೆರಿ ಕೃಷಿ ಬಗ್ಗೆ ಆಸಕ್ತಿ ಇರುವವರಿಗೆ ತರಬೇತಿ ನೀಡಲು ಶಶಿಧರ ಗೊರವರ ಸಿದ್ಧರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕ್ಕೆ ಶಶಿಧರ ಗೊರವರ (8698889944), ಜ್ಯೋತಿ ಗೊರವರ (9823557690).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT