ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆ; ರೈತರಿಗೆಷ್ಟು ಪ್ರಯೋಜನ?

Last Updated 15 ಜುಲೈ 2019, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದಿಂದ 2019-20ನೇ ಸಾಲಿನಲ್ಲಿ ಮುಂಗಾರು ಬೆಳೆಗಳಿಗೆ ಬೆಂಬಲ ಘೋಷಣೆಯಾಗಿದೆ.‘ಪ್ರತಿ ಬೆಳೆಯ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟಿನಷ್ಟು ಮೊತ್ತವನ್ನು ಬೆಂಬಲ ಬೆಲೆಯಾಗಿ ನಿಗದಿಪಡಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂದರೆ ಬೆಂಬಲ ಬೆಲೆ ಕಳೆದ ಸಲಕ್ಕಿಂತ ಹೆಚ್ಚಿದ್ದು, ಶೇಕಡಾ 86ರಷ್ಟು ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಈ ಬೆಂಬಲ ಬೆಲೆಯಿಂದ ನಿಜಕ್ಕೂ ರೈತರಿಗೆ ಅನುಕೂಲ ಆಗುತ್ತದೆಯೆ? ಇದರ ನೇರ ಲಾಭ ರೈತರಿಗೆ ಸಿಗುತ್ತದೆಯೆ? ಈ ಪ್ರಶ್ನೆಗಳಿಗೆ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಇಲ್ಲಿ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿಪ್ರಮುಖ 26 ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಲ್ಲಿ ಮಹತ್ವದ ಕೆಲಸ ಮಾಡಿರುವ ಪ್ರಕಾಶ್ ಅವರು, ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ಮೂಡಿರುವ ಗೊಂದಲಗಳ ಕಡೆಗೆ ಬೊಟ್ಟು ಮಾಡಿದ್ದಾರೆ.

***

ಕೃಷಿ ಬೆಲೆ ಆಯೋಗದ 2017–18ರ ವರದಿ ಪ್ರಕಾರ, ಕಳೆದ ವರ್ಷದ ಬೆಂಬಲ ಬೆಲೆಯು, ಬೆಳೆಗಳ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭ ತರುವುದರ ಬದಲು ಶೇ 14 ನಷ್ಟ ತಂದಿತ್ತು. ಏಕೆ ಹೀಗೆ?

ಎಂ.ಎಸ್. ಸ್ವಾಮಿನಾಥನ್ ಅವರ ವರದಿಯ ಶಿಫಾರಸ್ಸಿನ ಅಸಮರ್ಪಕ ಅನುಷ್ಟಾನದಿಂದಾಗಿ ಹೀಗಾಗುತ್ತಿದೆ. ಏಕೆಂದರೆ, ಇಲ್ಲಿ ಉತ್ಪಾದನಾ ವೆಚ್ಚದಲ್ಲಿ ರೈತನ ಎಲ್ಲಾ ಖರ್ಚನ್ನೂ ಸೇರಿಸಿಲ್ಲ. ರೈತ ನೇರವಾಗಿ ಭರಿಸುವ ವೆಚ್ಚ ಮತ್ತು ಕುಟುಂಬದ ಶ್ರಮದ ಬಾಬ್ತಿನ ವೆಚ್ಚಗಳನ್ನು ಮಾತ್ರ ಪರಿಗಣಿಸಿ, ಇದರ ಮೇಲೆ ಶೇ 50 ಲಾಭದ ಲೆಕ್ಕ ಮಾಡಿದ್ದಾರೆ. ಹಾಗಾಗಿ ಇದು ವೈಜ್ಞಾನಿಕವಾಗಿಲ್ಲ. ಅಲ್ಲದೆ ಹಣದುಬ್ಬರ ಶೇ 7 ಇದ್ದಾಗ ರೈತರ ಬೆಳೆಗಳಿಗೆ ಪ್ರತಿ ವರ್ಷ ಕನಿಷ್ಟ ಶೇ 10 ಆದರೂ ಬೆಲೆ ಹೆಚ್ಚಾಗಬೇಕು. ಆದರೆ ಅದು ಶೇ 1 ರಿಂದ ಶೇ 5ರಷ್ಟು ಮಾತ್ರ ಇದೆ (ಸೋಯಾ, ಅವರೆ ಹೊರತುಪಡಿಸಿ). ಅದೇನೆ ಇರಲಿ, ಈ ಸಾಲಿನ ಬೆಂಬಲ ಬೆಲೆ ರೈತರಿಗೆ ಸರಿಯಾಗಿ ತಲುಪಿದರೆ ಎಷ್ಟೋ ಸಹಾಯವಾಗುತ್ತದೆ.

* ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಬೋನಸ್ ಸೇರಿಸುವುದು ವಾಡಿಕೆ. ಈ ಸಾಲಿನಲ್ಲಿಯೂ ಬೋನಸ್ ಸಾಧ್ಯತೆ ಇದೆಯೇ?

ಕೇಂದ್ರ ಘೋಷಣೆ ಮಾಡಿದ ಬೆಂಬಲ ಬೆಲೆಯನ್ನು ನಾವು ಅಂದಾಜು ಮಾಡಿರುವ ಉತ್ಪಾದನಾ ವೆಚ್ಚಕ್ಕೆ ಹೋಲಿಕೆ ಮಾಡಿ, ರೈತರಿಗೆ ಲಾಭದಾಯಕ ಅನ್ನಿಸದಿದ್ದಾಗ ರಾಜ್ಯ ಸರ್ಕಾರ ಬೋನಸ್ ಸೇರಿಸಿ ಅದನ್ನು ತೂಗಿಸುತ್ತದೆ. ಮಾರುಕಟ್ಟೆಯ ಧಾರಣೆಯ ಮೇಲೆ ಅಹಿತಕರ ಪರಿಣಾಮ ಆಗಬಹುದು ಎಂಬ ಕಾರಣಕ್ಕೆ ಭತ್ತ, ಗೋಧಿಗಳಿಗೆ ರಾಜ್ಯ ಸರ್ಕಾರ ಬೋನಸ್ ಕೊಡುವ ವಿಚಾರದಲ್ಲಿ ಕೇಂದ್ರಕ್ಕೆ ಸಮ್ಮತಿ ಇಲ್ಲ. ತೊಗರಿಗೆ ಕಳೆದ ವರ್ಷಕ್ಕಿಂತ (ಬೋನಸ್ ಸೇರಿಸಿ ಕ್ವಿಂಟಲಿಗೆ ₹6,100) ಈ ವರ್ಷ ಬೆಂಬಲ ಬೆಲೆ ಕಡಿಮೆ ಇರುವುದರಿಂದ (ಕ್ವಿಂಟಲಿಗೆ 5800 ರೂ.) ಬೋನಸ್ ಸೇರಿಸಬೇಕಾಗುತ್ತದೆ. ಉಳಿದಂತೆ ರಾಗಿಗೆ ಕ್ವಿಂಟಲಿಗೆ ₹3,150, ಜೋಳಕ್ಕೆ ₹2,550ರೂ ಇರುವುದರಿಂದ ರಾಜ್ಯ ಸರ್ಕಾರ ಬೋನಸ್ ಸೇರಿಸುವ ಸಾಧ್ಯತೆ ಕಡಿಮೆ ಇದೆ.

* ಕಳೆದ ವರ್ಷ ಮುಕ್ತ ಮಾರುಕಟ್ಟೆ ಬೆಲೆ ಹೆಚ್ಚಾಗಿದ್ದರಿಂದ ರೈತರ ಉತ್ಪನ್ನದ ಶೇ 10 ಕೂಡ ಬೆಂಬಲ ಬೆಲೆಯಲ್ಲಿ ಖರೀದಿಯಾಗಿಲ್ಲ. ಈ ವರ್ಷ ರೈತರ ಒಟ್ಟು ಉತ್ಪಾದನೆಯ ಶೇ 25 ಬೆಂಬಲ ಬೆಲೆಯಲ್ಲಿ ಖರೀದಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಇದು ಅನುಷ್ಟಾನ ಸಾಧ್ಯವೇ?

ಖಂಡಿತಾ ಸಾಧ್ಯ. ಬೆಂಬಲ ಬೆಲೆ ಘೋಷಿಸಿರುವ 13 ಬೆಳೆಗಳಲ್ಲಿ ರೈತರ ಉತ್ಪಾದನೆಯ ಶೇ 25ರಷ್ಟು ಖರೀದಿಸಲು ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ರೈತರಿಗೆ ತಮ್ಮ ಉತ್ಪನ್ನಗಳನ್ನು ಖರೀದಿ ಕೇಂದ್ರಗಳಿಗೆ ಸಾಗಿಸಲು ಸರ್ಕಾರವೇ ವ್ಯವಸ್ಥೆ ಕಲ್ಪಿಸುತ್ತಿದೆ. ರೈತರ ಮನೆಬಾಗಿಲಿಗೇ ಸಾರಿಗೆ ವ್ಯವಸ್ಥೆಯಾಗುವಂತೆ ಬಾಡಿಗೆ ಟ್ಯಾಕ್ಸಿಗಳನ್ನು ಬುಕಿಂಗ್‌ ರೀತಿಯಲ್ಲಿ ಒಂದು ಮೊಬೈಲ್ ಅಪ್ಲಿಕೇಷನ್ (ಆ್ಯಪ್) ಸಿದ್ಧಪಡಿಸಲಾಗುತ್ತಿದೆ. ಗ್ರಾಮದಲ್ಲಿನ ರೈತರೊಬ್ಬರು ಟ್ರಾಕ್ಟರ್/ ಎತ್ತಿನ ಬಂಡಿಗಳಲ್ಲಿ ಉಳಿದ ರೈತರ ಉತ್ಪನ್ನಗಳನ್ನು ಸಾಗಣೆ ಮಾಡಲು ಕೂಡ ಅವಕಾಶವಿದೆ. ಎರಡನೆಯದಾಗಿ, ರೈತರು ಮಾರಾಟಕ್ಕೆ ಮುನ್ನ ತಮ್ಮ ಉತ್ಪನ್ನಗಳನ್ನು ದಾಸ್ತಾನು ಮಾಡಬೇಕಾದ ಸನ್ನಿವೇಶ ಇದ್ದರೆ, ಅವರಿಗೆ ಗೋದಾಮುಗಳಲ್ಲಿ ಉಚಿತವಾಗಿ ದಾಸ್ತಾನು ವ್ಯವಸ್ಥೆ ಕಲ್ಪಿಸಲಾಗಿದೆ. ಆದಾಗ್ಯೂ, ರೈತರು ವೃಥಾ ಕಾಯದಂತೆ ಮಾಡಲು ಕಟಾವಿನ ಸಮಯಕ್ಕೇ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸ್ವತಃ ಸಚಿವರೇ ಗಮನ ಕೊಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಈ ವರ್ಷ ಬಜೆಟ್‍ನಲ್ಲಿ ₹ 200 ಕೋಟಿ ತೆಗೆದಿರಿಸಿದೆ.

* ಈ ಬಾರಿ ರಾಜ್ಯದಲ್ಲಿ ಬಹುಪಾಲು ಜೋಳ ಬಿತ್ತನೆಯಾಗಿಲ್ಲ. ರೈತರು ಸಜ್ಜೆ, ರಾಗಿ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ಇವುಗಳನ್ನು ಬೆಳೆದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಿಂದಲೂ ಬೆಂಬಲ ಬೆಲೆ ನೀಡಿ ಖರೀದಿಸಲು ಸಾಧ್ಯವೇ?

ಖಂಡಿತಾ ಸಾಧ್ಯ. ಇಂಥ ಬೆಳೆಗಳನ್ನು ಇಂಥದ್ದೇ ಜಿಲ್ಲೆಯಲ್ಲಿ ಕೊಳ್ಳಬೇಕು ಎನ್ನುವ ಯಾವ ನಿಯಮವೂ ಇಲ್ಲ. ರಾಜ್ಯದ ಯಾವುದೇ ಜಿಲ್ಲೆ, ತಾಲೂಕಿನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇವುಗಳನ್ನು ಬೆಳೆದಿರುವ ಬಗ್ಗೆ ಜಿಲ್ಲಾ ಆಡಳಿತದಿಂದ ಸರ್ಕಾರಕ್ಕೆ ವರದಿ ಬಂದ ತಕ್ಷಣ ಖರೀದಿ ಮಾಡುವ ಅವಕಾಶವಿದೆ. ಎರಡನೆಯದಾಗಿ, ಎಪಿಎಂಸಿಗಳಲ್ಲಿ ಸರ್ಕಾರದ ಬೆಂಬಲ ಬೆಲೆಗಿಂತ ಈ ಪದಾರ್ಥಗಳನ್ನು ಕಡಿಮೆ ದರದಲ್ಲಿ ಕೊಳ್ಳುತ್ತಿದ್ದರೆ ತಕ್ಷಣ ಜಿಲ್ಲಾಡಳಿತದ ಮೂಲಕ ಸರ್ಕಾರದ ಗಮನಕ್ಕೆ ತಂದರೆ, ಆಗ ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರ ಮುಂದಾಗುತ್ತದೆ.

* ಸರ್ಕಾರದ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ವರ್ತಕರು ಕೊಳ್ಳುವುದಕ್ಕೆ ತಡೆಯೊಡ್ಡಲು ಸೂಕ್ತ ಕಾನೂನು ರಚಿಸುವ ವಿಚಾರ ಏನಾಯಿತು?

ಈ ಕೆಲಸ ಪ್ರಗತಿಯಲ್ಲಿದೆ. ಇಲ್ಲಿರುವ ತೊಡಕು ಏನೆಂದರೆ, ಇಂಥ ಒಂದು ಕಾನೂನನ್ನು ಒಂದು ರಾಜ್ಯ ತಂದುಬಿಟ್ಟರೆ, ವರ್ತಕರು ಬೇರೆ ರಾಜ್ಯಗಳಿಂದ ಖರೀದಿಸಲು ಪ್ರಾರಂಭಿಸುತ್ತಾರೆ. ರೈತರಿಗೆ ಇನ್ನೂ ಹೆಚ್ಚು ಹೊಡೆತ ಬೀಳುತ್ತದೆ. ಈ ಕಾನೂನು ರಾಷ್ಟ್ರ ಮಟ್ಟದಲ್ಲಿ ಬಂದರೆ ಮಾತ್ರ ರೈತರಿಗೆ ಉಪಯೋಗ. ಈ ವಿಚಾರದ ಖಾಸಗಿ ಮಸೂದೆಯೊಂದು ಪಾರ್ಲಿಮೆಂಟಿನ ಮುಂದಿದ್ದು ಕೇಂದ್ರ ಸರ್ಕಾರ ಇನ್ನಷ್ಟೆ ಪರಿಶೀಲಿಸಬೇಕಾಗಿದೆ.

* ಸಣ್ಣ ರೈತರ ಪಹಣಿಯನ್ನು ಪಡೆದು ’ಬೇರೆಯವರು’ ಬೆಂಬಲ ಬೆಲೆಗೆ ಮಾರಾಟ ಮಾಡುತ್ತಿರುವುದು ವ್ಯಾಪಕವಾಗಿದೆ. ಇದನ್ನು ತಡೆಯಲು ಏನು ಮಾಡಬಹುದು?

ಇದೊಂದು ಗಂಭೀರ ಸಮಸ್ಯೆ. ಇದನ್ನು ತಡೆಯಲು ಅಂತರ್ಜಾಲದ ಮೂಲಕ ಪ್ರತಿ ರೈತನ, ಪ್ರತಿ ಬೆಳೆಯ ಫೋಟೊ ದಾಖಲೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. ‘ಕೃಷಿ ದರ್ಶಕ’ ಎನ್ನುವ ವೆಬ್‍ಸೈಟ್ ಇದ್ದು ಪ್ರತಿಯೊಂದನ್ನೂ ಡಿಜಿಟಲೈಜ್ ಮಾಡಲಾಗಿದೆ. ಇದರಿಂದ ಒಬ್ಬರು ಇನ್ನೊಬ್ಬರ ಪಹಣಿ ತಂದರೂ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಮೊದಲು ರೈತರು ತಮ್ಮ ಪಹಣಿಯನ್ನು ಇತರರಿಗೆ ಕೊಡುವುದನ್ನು ನಿಲ್ಲಿಸಬೇಕು.

* ಸಿರಿಧಾನ್ಯಗಳಿಗೆ ರಾಜ್ಯ ಸರ್ಕಾರ ಹೆಕ್ಟೇರಿಗೆ ₹10 ಸಾವಿರ ಪ್ರೋತ್ಸಾಹ ಧನ ಘೋಷಿಸಿದ್ದು ಅದರ ಖರೀದಿಗೂ ಅವಕಾಶವಿದೆಯೇ?

ಖಂಡಿತಾ ಇದೆ. ರೈತರು ಬೆಳೆದ ಸಿರಿಧಾನ್ಯಗಳ ಖರೀದಿಗೆ ಸರ್ಕಾರ ₹10 ಕೋಟಿ ತೆಗೆದಿಟ್ಟಿದೆ. ಆರು ಬಗೆಯ ಸಿರಿಧಾನ್ಯಗಳಿಗೆ ಬೆಲೆ ನಿಗದಿ ಪಡಿಸಿ, ಬ್ರಾಂಡ್ ಮಾಡಿ, ಹಾಪ್‌ಕಾಮ್ಸ್, ನಂದಿನಿ ಮಳಿಗೆಗಳಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಸಿರಿಧಾನ್ಯಗಳಿಗೆ ಕೃಷಿ ಬೆಲೆ ಆಯೋಗ ವೈಜ್ಞಾನಿಕ ಬೆಲೆಯನ್ನು ಗೊತ್ತುಪಡಿಸಿದ್ದು ರೈತರಿಗೆ ಖಂಡಿತವಾಗಿಯೂ ಲಾಭದಾಯಕವಾಗಿದೆ. ಈ ಪ್ರಯತ್ನ ದೇಶದಲ್ಲೇ ಪ್ರಥಮ.

* ಬೆಂಬಲ ಬೆಲೆಯ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿದಾಗ ಬ್ಯಾಂಕ್‍ಗಳು ರೈತ ಪಡೆದ ಸಾಲಕ್ಕೆ ಅದನ್ನು ವಜಾ ಮಾಡುತ್ತಿವೆ. ಹೀಗೆ ಮಾಡದಂತೆ ಸರ್ಕಾರ ಬ್ಯಾಂಕ್‍ಗಳಿಗೆ ಆದೇಶ ಕೊಡಬಾರದೇಕೆ?

ರೈತರಿಗೆ ಸರ್ಕಾರದಿಂದ ಯಾವುದೇ ರೂಪದಲ್ಲಿ ಬರುವ ಸಹಾಯಧನವನ್ನು ಬ್ಯಾಂಕ್‍ಗಳು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೆ ಇದು ರಾಜ್ಯದ ಕೈಯಲ್ಲಿಲ್ಲ. ನಬಾರ್ಡ್ ಮತ್ತು ಕೆಂದ್ರದ ಹಣಕಾಸು ಸಚಿವಾಲಯದ ಕೈಲಿದೆ. ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲು ಸರ್ಕಾರ ಅವರ ಮೇಲೆ ಒತ್ತಡ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಕೃಷಿ ಬೆಲೆ ಆಯೋಗದ ಕಚೇರಿಸಂಖ್ಯೆ 080–22115496 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT