ಶನಿವಾರ, ಜೂನ್ 25, 2022
21 °C

ಎರಡು ಎಕರೆಯ ಹಲಸಿನ ತೋಟ

ನಾ. ಕಾರಂತ ಪೆರಾಜೆ Updated:

ಅಕ್ಷರ ಗಾತ್ರ : | |

Prajavani

ತೋಟದ ಬದಿಯಲ್ಲಿ ಹಲಸಿನ ಮರ ಬೆಳೆಸುವುದು ಸಹಜ. ಹಣ್ಣಿನ ತೋಟವೇ ಆಗಿದ್ದರೆ, ಬೇರೆ ಹಣ್ಣಿನ ಗಿಡಗಳ ಜತೆಗೆ ನಡು ನಡುವೆ ಒಂದೊಂದು ಮರ ಬೆಳೆಸುವ ಸಂಪ್ರದಾಯವಿದೆ. ಆದರೆ, ಇಲ್ಲೊಬ್ಬ ರೈತರು ತಮ್ಮ ತೋಟದ ಎರಡು ಎಕರೆ ಜಾಗವನ್ನು ಹಲಸು ಬೆಳೆಗಾಗಿಯೇ ಮೀಸಲಿಟಿದ್ದಾರೆ. ಅಷ್ಟೇ ಅಲ್ಲ. ಅಲ್ಲಿ ವಿಧವಿಧವಾದ ಸ್ಥಳೀಯ ಹಲಸಿನ ತಳಿಗಳನ್ನು ಬೆಳೆದಿದ್ದಾರೆ!

ಅವರೇ ವರ್ಮುಡಿ ಶಿವಪ್ರಸಾದ್. ಕಾಸರಗೋಡು ಜಿಲ್ಲೆಯ ಪೆರ್ಲದ ವರ್ಮುಡಿ ಅವರ ಊರು.

ಅಡಿಕೆ, ಕೊಕೊ, ತೆಂಗು, ಕಾಳುಮೆಣಸು ತೋಟಗಳನ್ನು ಮಾಡಿದ ಹಾಗೆ ವರ್ಮುಡಿಯವರು ಹಲಸಿನ ತೋಟವನ್ನು ಎಬ್ಬಿಸಿದ್ದಾರೆ! ಎರಡು ಎಕರೆಯಲ್ಲಿ ಒಟ್ಟು 160 ಮರಗಳು ಬೆಳೆಯುತ್ತಿವೆ. ಕೇರಳ, ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬೆಳೆದಿರುವ ಆಯ್ದ 124 ತಳಿಗಳ ಸಂಗ್ರಹ ಇಲ್ಲಿದೆ. ಈಗ ನಾಲ್ಕನೇ ವರುಷದಲ್ಲಿ ಸುಮಾರು ಐವತ್ತು ಮರಗಳಲ್ಲಿ ಫಸಲು ಶುರುವಾಗಿವೆ. ದಲ್ಲಾಳಿಗಳು ಹಲಸು ಖರೀದಿಗೆ ಮುಂದಾಗಿದ್ದಾರೆ. ಅಂದರೆ, ತೋಟದ ಬಳಿಗೆ ಮಾರುಕಟ್ಟೆ ಬಂದಿದೆ. ‘ಕಾಯಿಗಳು ಇನ್ನೂ ಎಳಸು. ಈಗಲೇ ಬೇಡ’ ಎಂದು ಶಿವಪ್ರಸಾದ್ ಮಾರಾಟಗಾರರನ್ನು ವಾಪಸ್ ಕಳಿಸಿದ್ದಾರೆ.

ಅಡಿಕೆ ಮರಗಳಿಗೆ ಆರೈಕೆ ಮಾಡಿದಂತೆ ಗೊಬ್ಬರ, ನೀರು ಕೊಟ್ಟು ಸಲಹಿದ್ದಾರೆ. ಹೀಗೆ ಮಾಡುವ ಇವರನ್ನು ಅಂದು ‘ನಿಮಗೆ ಹುಚ್ಚು. ಹಲಸು ಬೆಳೆದರೆ ಏನು ಪ್ರಯೋಜನ. ರಬ್ಬರ್ ಮಾಡಬಹುದಲ್ಲಾ’ ಎಂದು ಹಲವರು ಗೇಲಿ ಮಾಡಿದ್ದರು. ಈಗ ಅಂಥವರೇ ಇವರ ತೋಟದ ಹಲಸಿನ ಹಣ್ಣನ್ನು ತಿಂದು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರಂತೆ!

‘1985ನೇ ಇಸವಿ. ಕೊಯಮತ್ತೂರಿಗೆ ಪ್ರವಾಸ ಹೋಗಿದ್ದೆ. ಮಾರ್ಗದ ಬದಿಗಳಲ್ಲಿ ಮಾರಾಟಕ್ಕಾಗಿ ರಾಶಿ ಮಾಡಿಟ್ಟ ಹಲಸಿನ ಹಣ್ಣುಗಳನ್ನು ನೋಡಿ ಬೆರಗಾಗಿದ್ದೆ. ಸೊಳೆಗೆ ಐವತ್ತು ಪೈಸೆಯಂತೆ ಒಂದಷ್ಟು ಸೊಳೆಗಳನ್ನು ಖರೀದಿಸಿದೆ. ಬೀಜವನ್ನು ಮೊಳಕೆ ಬರಿಸಿ ತೋಟದಲ್ಲಿ ನೆಟ್ಟೆ. ಈಗದು ಫಲ ಕೊಡುತ್ತಾ ಇದೆ. ತಾಯಿಮರದ ಗುಣ ಪೂರ್ತಿಯಾಗಿ ಬಾರದಿದ್ದರೂ ಹಣ್ಣುಗಳು ಉತ್ಕೃಷ್ಟವಾಗಿವೆ’ - ಶಿವಪ್ರಸಾದ್ ಹಲಸಿನ ಗುಂಗು ಅಂಟಿದ ಆ ದಿವಸಗಳನ್ನು ನೆನಪು ಮಾಡಿಕೊಂಡರು. ‘ನಂತರ ಒಂದಷ್ಟು ಕಾಲ ತಟಸ್ಥನಾಗಿದ್ದ ನನ್ನನ್ನು ಹಲಸಿನ ಹುಚ್ಚಿಗೆ ಮತ್ತೆ ಎಳೆದು ತಂದವರು ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮರು’- ಹಲಸಿನ ಕೃಷಿ ಮುಂದುವರಿಸಿದ್ದನ್ನು ಅವರು ವಿವರಿಸಿದರು.

ಹಲಸು ಬೆಳೆದಿದ್ದು ಹೀಗೆ

ಇಳಿಜಾರು ಜಾಗದಲ್ಲಿ ತಟ್ಟು(ಟೆರೇಸ್)ಗಳನ್ನು ಮಾಡಿ ಭೂಮಿಯನ್ನು ಸಿದ್ಧ ಮಾಡುವುದು ಮೊದಲ ಕೆಲಸ. ಜೆಸಿಬಿಯ ಆರು ಬಕೆಟ್ ಮಣ್ಣು ಬರುವಷ್ಟು ಹೊಂಡ ಮಾಡಿ ಅದಕ್ಕೆ ಪುನಃ ಮಣ್ಣನ್ನು ತುಂಬಿದ್ದಾರೆ. ಎಂಟೆಂಟು ಕೆ.ಜಿ ಕೋಳಿ ಗೊಬ್ಬರ ಮತ್ತು ಕುರಿಗೊಬ್ಬರವನ್ನು ಮಣ್ಣಿಗೆ ಮಿಕ್ಸ್ ಮಾಡಿದ್ದಾರೆ. ಇಪ್ಪತ್ತು ದಿವಸ ಕಳಿಯಲು ಬಿಟ್ಟು ನಂತರ ಕಸಿ ಕಟ್ಟಿ ಅಭಿವೃದ್ಧಿಪಡಿಸಿದ ಸಸಿಗಳನ್ನು ನೆಟ್ಟಿದ್ದಾರೆ. ಗಿಡದಿಂದ ಗಿಡಕ್ಕೆ ಹದಿನೆಂಟು ಅಡಿ ಅಂತರವಿದೆ. ಹೀಗಾಗಿ ಗಿಡಗಳಿಗೆ ಯಥೇಚ್ಛವಾಗಿ ಬಿಸಿಲಿನ ಸ್ನಾನ. ಮೂರರಿಂದ ನಾಲ್ಕು ವರ್ಷ ಗೊಬ್ಬರ, ನೀರಾವರಿ ಕೊಟ್ಟು ಆರೈಕೆ ಮಾಡಿದ್ದಾರೆ. ಕರಾವಳಿ ಭಾಗವಾದುದರಿಂದ ಮಳೆ ನೀರು ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿದ್ದಾರೆ.

‘ಅಡಿಕೆ ಕೃಷಿಗೆ ಏನೆಲ್ಲಾ ಜಾಗ್ರತೆ ಬೇಕೋ ಅಷ್ಟು ನಿಗಾ ಹಲಸಿನ ಕೃಷಿಗೂ ಬೇಕು. ವರ್ಷಕ್ಕೊಮ್ಮೆ ಗೊಬ್ಬರ ಉಣಿಸಬೇಕು. ಅಡಿಕೆ, ತೆಂಗಿನಂತೆ ಬುಡ ಬಿಡಿಸಿದರೆ ಬೇರಿಗೆ ಏಟಾಗಿ ಸೋಂಕು ರೋಗ ಅಂಟಿ ಬಿಡುವ ಸಂಭವ ಹೆಚ್ಚು. ಗಿಡದ ಸುತ್ತ ವೃತ್ತಾಕಾರದಲ್ಲಿ ಚಿಕ್ಕ ಕಾಲುವೆ ಮಾಡಿ ಅರ್ಧ ಬುಟ್ಟಿಯಷ್ಟು ಕುರಿ-ಕೋಳಿ ಗೊಬ್ಬರವನ್ನು ಹರಡಿ. ಹದಿನೈದು ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು. ಒಂದು ಗಿಡಕ್ಕೆ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಲೀಟರ್ ನೀರು ಧಾರಾಳ ಸಾಕು. ನಾನು ಶುರುವಿನ ವರ್ಷ ಅನುಭವದ ಕೊರತೆಯಿಂದ ಬುಡ ಬಿಡಿಸಿದ್ದೆ. ಹೀಗಾಗಿ ಕೆಲವು ಗಿಡಗಳನ್ನು ಕಳೆದುಕೊಳ್ಳಬೇಕಾಯಿತು’ ಎನ್ನುತ್ತಾ ಹಲಸು ಕೃಷಿಯ ‘ಏಳು-ಬೀಳು’ಗಳನ್ನು ತೆರೆದಿಡುತ್ತಾರೆ ಶಿವಪ್ರಸಾಸ್.

ಪ್ರಾಯೋಗಿಕವಾಗಿ ಗಿಡದಿಂದ ಗಿಡಕ್ಕೆ ಹತ್ತು ಅಡಿ ಅಂತರ ಕೊಟ್ಟು ಹದಿನೆಂಟು ಗಿಡಗಳನ್ನು ಬೆಳೆಸಿದ್ದಾರೆ. ಚೆನ್ನಾಗಿ ಬಿಸಿಲು ಬಿದ್ದಿರುವುದರಿಂದ ನಾಲ್ಕೇ ವರ್ಷದಲ್ಲಿ ಗಿಡಗಳು 25-28 ಅಡಿ ಎತ್ತರಕ್ಕೆ ಬೆಳೆದಿವೆ. ಗಿಡಗಳ ಮಧ್ಯದ ಅಂತರಗಳನ್ನು ಹೆಚ್ಚು ಮಾಡಿದರೆ ಅಡ್ಡಕ್ಕೆ ಕೊಂಬೆಗಳು ಬಿಡುವ ಸಂಭವವೇ ಹೆಚ್ಚು. ಭವಿಷ್ಯದಲ್ಲಿ ಮೋಪಿ(ಟಿಂಬರ್ ಅಥವಾ ನಾಟ)ನ ಗುರಿ ಇಟ್ಟುಕೊಂಡಿದ್ದವರು ಅಂತರವನ್ನು ಕಡಿಮೆ ಮಾಡಿ ಬೆಳೆಯಿರಿ. ಇನ್ನೊಂದು ಅಂಶ ಗಮನಿಸಬೇಕು - ಗುಡ್ಡದ ಇಳಿಜಾರಿನ ಪ್ರಮಾಣವು ಕಡಿಮೆ ಇದ್ದಾಗ ಗಿಡದ ಅಂತರವನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಅವುಗಳು ಬೆಳೆದಾಗ ಕೆಳಗಿನದ್ದು ಮೇಲಿನದಕ್ಕೆ ನೆರಳಾಗುತ್ತದೆ.

ತಳಿಗಳ ಆಯ್ಕೆ ಹೇಗೆ?

‘ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಕರಾವಳಿ ಭೂಭಾಗಕ್ಕೆ ಹೊಂದುವಂತಹ ಸ್ಥಳೀಯ ತಳಿಗಳನ್ನು ಅಭಿವೃದ್ಧಿ ಪಡಿಸಿ. ಇಲ್ಲಿನ ಮಣ್ಣು, ಹವಾಮಾನಕ್ಕೆ ತಾಳಿಕೊಳ್ಳುತ್ತದೆ. ಸ್ವಲ್ಪ ಶ್ರಮವಹಿಸಿ ಹುಡುಕಾಡಿದರೆ ನಮ್ಮ ಸುತ್ತಮುತ್ತ ಉತ್ಕೃಷ್ಟ ತಳಿಗಳಿವೆ. ದೂರದೂರಿಂದ ತಂದ ಗಿಡಗಳು ಬಹುತೇಕ ಮಳೆಗಾಲದಲ್ಲಿ ಒದ್ದಾಡುತ್ತವೆ. ಅಲ್ಲಲ್ಲಿನ ತಳಿಗಳನ್ನು ಹುಡುಕಿ, ಅಭಿವೃದ್ಧಿ ಮಾಡಿ ತಳಿಗಳನ್ನು ಆಯ್ದುಕೊಳ್ಳುವುದು ಸೂಕ್ತ’ – ಹಲಸಿನ ತಳಿ ಆಯ್ಕೆ ಕುರಿತು ತಮ್ಮ ಕಾರ್ಯವನ್ನೇ ಉದಾಹರಿಸುತ್ತಾ ಸಲಹೆ ನೀಡುತ್ತಾರೆ ಶಿವಪ್ರಸಾದ್. ‘ತುಂಬಾ ಎಚ್ಚರವಹಿಸಿ ಮಗುವಿನಂತೆ ಆರೈಕೆ ಮಾಡಿದರೆ ಉತ್ತಮ ರುಚಿಯ ‘ರಾಮಚಂದ್ರ ಹಲಸು’ ಕರಾವಳಿ ಭಾಗಕ್ಕೆ ಹೊಂದಿಕೊಳ್ಳುತ್ತದೆ’- ಇದು ಅವರ ಸ್ವಅನುಭವ.

ವರ್ಮುಡಿಯವರು ನೂರಕ್ಕೂ ಹೆಚ್ಚು ತಳಿಗಳನ್ನು ಬೆಳೆಸಿದ್ದಾರೆ. ಇವು ನರ್ಸರಿಯಿಂದ ತಂದವುಗಳಲ್ಲ. ಒಂದು ತಳಿ ಪತ್ತೆಯಾದರೆ ಅದರ ಹಣ್ಣನ್ನು ತಿಂದು, ತಮ್ಮಲ್ಲಿಗೆ ಹೊಂದಿಕೆಯಾಗುವುದೋ ಎಂದು ಪರಿಶೀಲಿಸಿ, ತೃಪ್ತಿಯಾದ ಬಳಿಕವೇ ಆಯ್ಕೆ. ಹೀಗೆ ಅವರ ಅನೇಕ ತಳಿಗಳ ಆಯ್ಕೆಯ ಹಿಂದೆ ಹದಿನಾರು ವರ್ಷಗಳ ಪರಿಶ್ರಮವಿದೆ. ಮುಖ್ಯವಾಗಿ ‘ಬಸ್ರೂರು ಬಿಳಿ ಜೇನುಬಕ್ಕೆ, ಮುತ್ತೂರು ಹಳದಿ, ಸಾರಡ್ಕ ಮಾಯಿಲ ಬರಿಕ, ಉಬರು ರಾಜರುದ್ರಾಕ್ಷಿ, ಕಡಂಬಿಲ ಗೋಲ್ಡನ್ ಪಲ್ಪ್ ಮತ್ತು ಪರಮ, ಹಪ್ಪಳಕ್ಕಾಗುವ ವರ್ಮುಡಿ ಚೆಂಡೆ..’ ತಳಿಗಳು ಹಲಸು ತಿಜೋರಿಯನ್ನು ಭದ್ರಪಡಿಸಿವೆ. (ಇವೆಲ್ಲಾ ಕೃಷಿಕರೇ ಅಭಿವೃದ್ಧಿಪಡಿಸಿರುವ ಸ್ಥಳೀಯ ತಳಿಗಳು. ಆಯಾಯ ಸ್ಥಳದ ಹೆಸರನ್ನೇ ನಾಮಕರಣ ಮಾಡಿರುವುದನ್ನು ಗಮನಿಸಬಹುದು)

ಖರ್ಚು-ವೆಚ್ಚವೂ ಪಕ್ಕ

ಓಡಾಟದ ಪರಿಶ್ರಮ, ಸಮಯ, ನಿರ್ವಹಣೆ, ಆರೈಕೆ.. ಇವೆಲ್ಲವನ್ನು ನಗದೀಕರಿಸಿದರೆ ಒಂದು ಗಿಡ ನೆಟ್ಟು ಸಾಕುವ ಹೊತ್ತಿಗೆ ₹2800 ವೆಚ್ಚವಾಗಿದೆ! ತಳಿ ಆಯ್ಕೆಗಾಗಿ ಹತ್ತಾರು ಹಲಸು ಮೇಳಗಳಿಗೆ ಓಡಾಡಿದ್ದಾರೆ. ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ. ಕೃಷಿಕರನ್ನು ಮಾತನಾಡಿಸಿದ್ದಾರೆ. ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ‘ಮೌಲ್ಯವರ್ಧನೆ ಮಾಡುವ ಉತ್ಸಾಹಿಗಳು ಒಂದೋ ಎರಡೋ ತಳಿಗಳನ್ನು ಮಾತ್ರ ಅಭಿವೃದ್ಧಿಪಡಿಸಿ. ತಳಿಹುಚ್ಚನ್ನು ಅಂಟಿಸಿಕೊಳ್ಳಬೇಡಿ’ – ಇದು ವರ್ಮುಡಿಯವರ ಕಿವಿಮಾತು.

‘ಶತಮಾನದೀಚೆಗಿನ ಹಲಸಿನ ಮರಗಳು ರಸ್ತೆ ಅಗಲೀಕರಣದ ಕಾರಣಕ್ಕಾಗಿ ಧರಾಶಾಯಿಯಾಗುತ್ತಿವೆ. ಒಂದು ಮರ ಕಡಿದಾಗ ಇನ್ನೆರಡು ನೆಟ್ಟು ಆರೈಕೆ ಮಾಡುವ ಮನಸ್ಥಿತಿಗಳು ಇಲ್ಲ. ಉತ್ತಮ ತಳಿಗಳು ನಾಶವಾಗಿವೆ. ಈ ನಿಟ್ಟಿನಲ್ಲಿ ಹಲಸನ್ನು ನೆಟ್ಟು ಬೆಳೆಸಬೇಕಾದ ಅಗತ್ಯವಿದೆ’ ಎಂದು ವರ್ತಮಾನದತ್ತ ಬೆರಳು ತೋರುತ್ತಾರೆ ಶಿವಪ್ರಸಾದ್. ಹಲಸು ಕೃಷಿ ಕುರಿತ ಮಾಹಿತಿ ಕೇಳಲು ವರ್ಮುಡಿ ಶಿವಪ್ರಸಾದರ ಸಂಪರ್ಕಕ್ಕಾಗಿ - 094951 80307 (ಸಂಜೆ 6 ರಿಂದ 8 ಗಂಟೆವರೆಗೆ ಮಾತ್ರ)

ಕಸಿ ಗಿಡ ಅಗತ್ಯ

ಕಸಿಗಿಡಗಳಾದರೂ ಅದರ ತಾಯಿಯ ಗುಣ ನೂರಕ್ಕೆ ನೂರು ಬಾರದು. ಇದಕ್ಕಾಗಿ ಬೀಜದ ಗಿಡವನ್ನು ಆಯ್ಕೆ ಮಾಡಲು ಒಂದು ‘ಕೆಣಿ’ (ಉಪಾಯ) ಸೂಚಿಸುತ್ತಾರೆ – ಒಂದು ಹಣ್ಣಿನಲ್ಲಿ ನೂರು ಬೀಜ ಇದೆ ಎಂದಿಟ್ಟುಕೊಳ್ಳೋಣ. ಅವೆಲ್ಲವನ್ನೂ ಮೊಳಕೆಗೆ ಹಾಕಿ. ಎಂಭತ್ತೋ ತೊಂಭತ್ತೋ ಮೊಳಕೆ ಬರಬಹುದು. ಒಂದು ವಾರ, ಹತ್ತು ದಿವಸದಲ್ಲಿ ಎಲ್ಲಕ್ಕಿಂತ ಎತ್ತರಕ್ಕೆ ಬೆಳೆದ ಐದಾರು ಸಸಿಗಳನ್ನು ಗುರುತಿಸಿ ವೀಕ್ಷಿಸುತ್ತಾ ಬನ್ನಿ. ತಿಂಗಳೊಳಗೆ ದಪ್ಪವಾಗಿ, ಆರೋಗ್ಯವಾಗಿ ಬೆಳೆದ ಎರಡು, ಮೂರು ಸಸಿಗಳನ್ನು ಕಿತ್ತು ಪಾಲಿಥಿನ್ ಬ್ಯಾಗ್ ಯಾ ಗ್ರೋ ಬ್ಯಾಗಿನಲ್ಲಿಟ್ಟು ಸಲಹಿ. ಹೀಗೆ ಆಯ್ಕೆ ಮಾಡಿದ ಸಸಿಗಳು ತಾಯಿಗುಣವನ್ನಿಟ್ಟುಕೊಂಡು ಸದೃಢವಾಗಿ ಬೆಳೆಯುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು