ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಪೂರ್ವ ಮುಂಗಾರು ಕಣ್ಣಾಮುಚ್ಚಾಲೆ: ಬಿತ್ತನೆಗೆ ಹಿನ್ನಡೆ

ತಾಲ್ಲೂಕುಗಳಿಗೆ ಸಮಾನವಾಗಿ ಹಂಚಿಕೆಯಾಗದ ಮುಂಗಾರು ಪೂರ್ವ ಮಳೆ, ಹಲವೆಡೆ ಬಿತ್ತನೆಗೆ ಹಿನ್ನಡೆ
Last Updated 13 ಮೇ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಎಲ್ಲೆಡೆ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಮೇ ಮೊದಲ ವಾರದಲ್ಲಿ ಬಹುತೇಕ ಕಡೆ ಮಳೆ ಬಿದ್ದಿಲ್ಲ. ಇದರಿಂದ ರೈತರು ಬಿತ್ತನೆಗಾಗಿ ಮಳೆಗಾಗಿ ಕಾದು ಕುಳಿತ್ತಿದ್ದಾರೆ.

ಜಿಲ್ಲೆಯಲ್ಲಿ 29,940 ಹೆಕ್ಟೇರ್ ಪ್ರದೇಶಗಳಲ್ಲಿ ಇನ್ನೂ ಬಿತ್ತನೆಯೇ ಆಗಿಲ್ಲ. ಒಟ್ಟು 56,035 ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಇರಿಸಿಕೊಂಡಿತ್ತು. ಇದರಲ್ಲಿ ಬಿತ್ತನೆಯಾಗಿರುವುದು ಕೇವಲ 26,095 ಮಾತ್ರ.

ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ 67.4 ಮಿಲಿ ಮೀಟರ್‌ನಷ್ಟು ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, 70.4 ಮಿಲಿಮೀಟರ್‌ (ಕಳೆದ ವರ್ಷ 78.4 ಮಿ.ಮೀ) ಮಳೆಯಾಗಿದೆ. ಇದು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಸಮರ್ಪಕವಾಗಿ ಹಂಚಿಕೆಯಾಗದಿರುವುದು ಸಮಸ್ಯೆಯಾಗಿದೆ.

ಹಲವು ಭಾಗಗಳಲ್ಲಿ ಮಳೆಯಾಗದಿರುವುದರಿಂದ ರೈತರು ಬಿತ್ತನೆಗೆ ಮುಂದಾಗಿಲ್ಲ. ಕೆಲವೆಡೆ ಸ್ಥಳೀಯ ಜೋಳವನ್ನು ಬಿತ್ತನೆ ಮಾಡಿದ್ದಾರೆ. ಆದರೆ, ಇವುಗಳ ಪೈರುಗಳಿಗೆ ಮತ್ತೆ ಮಳೆ ಬೀಳದೇ ಒಣಗುತ್ತಿವೆ.

ಕೃತ್ತಿಕಾ ಮಳೆಯಾದರೂ ಸಮರ್ಪಕವಾಗಿ ಬರುವುದೋ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಒಂದು ವೇಳೆ ಈಗ ಮಳೆಯಾದರೂ ಬಿತ್ತನೆ ಮಾಡಲು ಅವಕಾಶ ಇದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ಅತ್ಯಂತ ಕಡಿಮೆ ಬಿತ್ತನೆ ಚಾಮರಾಜನಗರ ತಾಲ್ಲೂಕಿನಲ್ಲಾಗಿದೆ. 14,455 ಹೆಕ್ಟೇರ್‌ ಪ್ರದೇಶದ ಪೈಕಿ ಬಿತ್ತನೆಯಾಗಿರುವುದು ಕೇವಲ 480 ಹೆಕ್ಟೇರ್‌ ಪ್ರದೇಶ ಮಾತ್ರ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 3,720 ಹೆಕ್ಟೇರ್ ಪ್ರದೇಶದ ಪೈಕಿ, 881 ಹೆಕ್ಟೇರ್‌ನಲ್ಲಿ ಮಾತ್ರವೇ ಬಿತ್ತನೆಯಾಗಿದೆ. ಹನೂರು ತಾಲ್ಲೂಕಿನಲ್ಲಿ 1,485 ಹೆಕ್ಟೇರ್‌ ಪೈಕಿ 612 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಗುಂಡ್ಲುಪೇಟೆ ಮತ್ತು ಯಳಂದೂರು ಭಾಗಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವ ಕಾರಣದಿಂದ ಬೇರೆ ತಾಲ್ಲೂಕಿಗೆ ಹೋಲಿಸಿದರೆ ಇಲ್ಲಿ ಹೆಚ್ಚಿನ ಮಳೆ ಬಿದ್ದಿದೆ. ಹೀಗಾಗಿ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 32,745 ಹೆಕ್ಟೇರ್‌ ಪ್ರದೇಶದಲ್ಲಿ 20,562 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ, ಯಳಂದೂರು ತಾಲ್ಲೂಕಿನಲ್ಲಿ 3,630 ಹೆಕ್ಟೇರ್ ಪ್ರದೇಶದ ಪೈಕಿ 3,560 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.

ಮಳೆ ದಿನಗಳು ಇವೆ; ನಿರಾಶೆಗೆ ಅವಕಾಶ ಇಲ್ಲ

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಕಲಾ, ‘ಮೇ ತಿಂಗಳಿನಲ್ಲಿ ಮೊದಲ ವಾರ ಕಡಿಮೆ ಮಳೆಯಾಗಿದ್ದರೂ ಇನ್ನುಳಿದ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಹಾಗಾಗಿ, ರೈತರು ನಿರಾಶರಾಗಬೇಕಿಲ್ಲ. ಮುಂಗಾರಿಗೂ ಪೂರ್ವದಲ್ಲಿ ಮಳೆಯಾಗಲಿದೆ’ ಎಂದು ಹೇಳಿದರು.

ಮೇ ಮೊದಲ ವಾರದಲ್ಲಿ ಬಿದ್ದ ಮಳೆ 11 ಮಿ.ಮೀಟರ್

ತಾಲ್ಲೂಕು; ಬಿತ್ತನೆ ಗುರಿ; ಬಿತ್ತನೆಯಾಗಿರುವ ಪ್ರಮಾಣ (ಹೆಕ್ಟೇರ್‌ಗಳಲ್ಲಿ)

ಚಾಮರಾಜನಗರ; 14,455; 480

ಕೊಳ್ಳೇಗಾಲ; 3,720; 881

ಹನೂರು; 1,485; 612

ಗುಂಡ್ಲುಪೇಟೆ; 32,745; 20,562

ಯಳಂದೂರು; 3,630; 3,560

ಒಟ್ಟು; 56,035; 26,095

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT