ಬುಧವಾರ, ನವೆಂಬರ್ 25, 2020
18 °C

PV Web Exclusive: ಚಾಮರಾಜನಗರ; ವಿಷಮುಕ್ತ ಜಿಲ್ಲೆಯತ್ತ ದೃಢ ಸಂಕಲ್ಪದ ಹೆಜ್ಜೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

2020 ಫೆಬ್ರುವರಿ 13. ರೈತ ನಾಯಕ ದಿವಂಗತ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 84ನೇ ಜನ್ಮ ದಿನಾಚರಣೆಯಂದು ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿರುವ ಅವರ ಸಮಾಧಿ ಮುಂದೆ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಒಂದೇ ವಾಕ್ಯದ ಪ್ರತಿಜ್ಞೆ ಮಾಡಿದ್ದರು.

‘ಚಾಮರಾಜನಗರವನ್ನು ವಿಷಮುಕ್ತ ಜಿಲ್ಲೆಯನ್ನಾಗಿ ಮಾಡುತ್ತೇವೆ’ 

– ಜಿಲ್ಲೆಯ ರೈತರನ್ನು ರಾಸಾಯನಿಕ ಕೃಷಿಯಿಂದ ನೈಸರ್ಗಿಕ ಕೃಷಿಯತ್ತ ಸೆಳೆಯುವುದು ಮತ್ತು ಸಾವಯವ ಕೃಷಿಯೂ ಲಾಭದಾಯಕ ಎಂಬುದನ್ನು ತೋರಿಸುವುದು ಈ ಪ್ರತಿಜ್ಞೆಯ ಹಿಂದಿರುವ ಸಂಕಲ್ಪ.

ಒಂಬತ್ತು ತಿಂಗಳ ಅವಧಿಯಲ್ಲಿ, ಸಹಜ ಕೃಷಿಯಲ್ಲಿ ತೊಡಗಿರುವ ವಿವಿಧ ಸಂಘಗಳು, ರೈತರು ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಕಣ್ಣಿಗೆ ಕಾಣಿಸುವಂತಹ ಕೆಲವು ಪ್ರಯತ್ನಗಳು ಗಡಿ ಜಿಲ್ಲೆಯಲ್ಲಿ ನಡೆದಿವೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಚುಕ್ಕಿ ನಂಜುಂಡಸ್ವಾಮಿ ನೇತೃತ್ವದ ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ, ಮೈಸೂರಿನ ನಿಸರ್ಗ ಟ್ರಸ್ಟ್‌, ಯಳಂದೂರು ತಾಲ್ಲೂಕಿನ ಹೊನ್ನೂರಿನ ನಿಸರ್ಗ ನೈಸರ್ಗಿಕ ಸಾವಯವ ಕೃಷಿಕರ ಸಂಘ, ಮೇಲಾಜಿಪುರದ ಗುರುಮಲ್ಲೇಶ್ವರ ಸಾವಯವ ಕೃಷಿಕರ ಸಂಘ, ಹನೂರು ತಾಲ್ಲೂಕಿನ ವಡಕೆಹಳ್ಳದ ಮಹದೇಶ್ವರ ಜಿಲ್ಲಾ ಸಾವಯವ ಕೃಷಿಕರ ಸಂಘಗಳು ಹಾಗೂ ನೈಸರ್ಗಿಕ ಕೃಷಿ ಮಾಡುತ್ತಿರುವ ರೈತರ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ‘ವಿಷಮುಕ್ತ ಚಾಮರಾಜನಗರ’ ಅಭಿಯಾನ ಆರಂಭವಾಗಿದೆ.  

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಸ್ವತಃ ಸಾವಯವ ಕೃಷಿಕರಾಗಿರುವ ಹೊನ್ನೂರು ಪ್ರಕಾಶ್‌, ಚುಕ್ಕಿ ನಂಜುಂಡಸ್ವಾಮಿ ಹಾಗೂ ಇತರರ ಉಮೇದುವಾರಿಕೆಯಲ್ಲಿ ಅಭಿಯಾನ ನಡೆಯುತ್ತಿದೆ. 


ಹೊನ್ನೂರು ಪ್ರಕಾಶ್

ಹೊನ್ನೂರು ಪ್ರಕಾಶ್‌ ಅವರು ಯಳಂದೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ತಮಗಿರುವ ಜಮೀನಿನಲ್ಲಿ ಗರಿಷ್ಠ ಅರ್ಧದಿಂದ ಒಂದು ಎಕರೆಯಷ್ಟು ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಮಾಡುವ ವಾಗ್ದಾನವನ್ನು ರೈತರಿಂದ ಪಡೆಯುತ್ತಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಅಂಬಳೆ ಹಾಗೂ ಕೆಸ್ತೂರು ಗ್ರಾಮಗಳ ತಲಾ 25 ಮಂದಿ ಹಿಡುವಳಿಗಾರರು ನೈಸರ್ಗಿಕ ಕೃಷಿಯ ಪ್ರಯೋಗಕ್ಕೆ ತೆರೆದುಕೊಳ್ಳಲು ಒಪ್ಪಿದ್ದಾರೆ. 

ವರ್ಷಕ್ಕೆ 5,000ದ ಗುರಿ: ವರ್ಷಕ್ಕೆ ಜಿಲ್ಲೆಯ 5,000 ರೈತರನ್ನು ಸಾವಯವ ರೈತರನ್ನಾಗಿ ಮಾಡುವುದು ಅಭಿಯಾನದ ಮುಖ್ಯ ಉದ್ದೇಶ. ಈ ರೈತರಿಂದ ನಿರ್ದಿಷ್ಟ ಷೇರು ಹಣ ಪಡೆದು, ಒಂದು ಸಂಘ ಅಥವಾ ಕಂಪನಿ ಸ್ಥಾಪಿಸಿ, ಸಂಗ್ರಹವಾಗುವ ಬಂಡವಾಳದಲ್ಲಿ ಸಾವಯವ ಬೆಳೆ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಯೋಜನೆಯನ್ನು ಸಂಘಟಕರು ಹಾಕಿಕೊಂಡಿದ್ದಾರೆ. ಉತ್ಪನ್ನಗಳನ್ನು ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ರೈತರಿಗೆ ಆರ್ಥಿಕ ಲಾಭವಾಗುವಂತೆ ಮಾಡಬೇಕು ಎಂಬುದು ಅವರ ಯೋಚನೆ.

ಪ್ರತಿ ವರ್ಷ 5,000 ರೈತರನ್ನು ಸಂಘಟಿಸುತ್ತಾ ಈ ಅಭಿಯಾನವನ್ನು ನಿರಂತರವಾಗಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವಂತೆ ನೋಡಿಕೊಂಡು, ಎಲ್ಲ ರೈತರೂ ರಾಸಾಯನಿಕ ಮುಕ್ತ ಕೃಷಿಯಲ್ಲಿ ತೊಡಗುವಂತೆ ಮಾಡುವ ಯೋಜನೆ ಸಂಘಟಕರದ್ದು.  

'ಕೃಷಿಯ ಭವಿಷ್ಯ ಇರುವುದೇ ನೈಸರ್ಗಿಕ ವಿಧಾನದ ಬೇಸಾಯದಲ್ಲಿ. ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ರಾಸಾಯನಿಕ ಬಳಸಿ ಮಾಡುವ ಕೃಷಿಯಿಂದ ಭೂಮಿ ಹಾಳಾಗುತ್ತಿದೆ. ನಾವು ಮುಂದಿನ ಪೀಳಿಗೆಗೆ ಬಂಜೆ ಭೂಮಿಯನ್ನು ಕೊಡಬೇಕಾಗುತ್ತದೆ. ಹಾಗಾಗಿ, ರೈತರು ಎಚ್ಚೆತ್ತುಕೊಳ್ಳಬೇಕು. ಅವರಿಗೆ ಸಹಜ ಕೃಷಿಯ ಬಗ್ಗೆ ಮನವರಿಕೆಯಾಗಬೇಕು. ಇದು ಒಬ್ಬರು ಇಬ್ಬರಿಂದ ಆಗುವ ಕೆಲಸ ಅಲ್ಲ. ಸಾಮೂಹಿಕವಾಗಿ‌ ಆಗಬೇಕು. ಈ ನಿಟ್ಟಿನಲ್ಲಿ ಅಮೃತಭೂಮಿ, ವಿವಿಧ ಸಾವಯವ ಕೃಷಿಕರ ಸಂಘಗಳು, ರೈತರು ಕೈ ಜೋಡಿಸಿ ಅಭಿಯಾನ ಹುಟ್ಟುಹಾಕಿದ್ದೇವೆ' ಎಂದು ಹೇಳುತ್ತಾರೆ ಹೊನ್ನೂರು ಪ್ರಕಾಶ್. 

 

'35 ವರ್ಷಗಳಿಂದ ರೈತರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಚಳವಳಿಗಳಿಂದ ಮಾತ್ರ ರೈತರು ಸಬಲರಾಗಲು ಸಾಧ್ಯವಿಲ್ಲ. ಸ್ವತಃ ಪ್ರಯತ್ನ ಮಾಡಬೇಕು. ಇತ್ತೀಚೆಗೆ ಸರ್ಕಾರಗಳು ತರುತ್ತಿರುವ ಕಾನೂನುಗಳು ರೈತ ವಿರೋಧಿಯಾಗಿದ್ದು, ಕಾರ್ಪೊರೇಟ್ ಸಂಸ್ಥೆಗಳ ಪರವಾಗಿವೆ. ಭೂಮಿ ಉಳಿಸುವುದಕ್ಕೆ ರೈತರು ಸಂಘಟಿತರಾಗಲೇ ಬೇಕು. ಅಭಿಯಾನದ ಹಿಂದೆ ಈ ಪ್ರಯತ್ನವೂ ಇದೆ' ಎಂದು ವಿವರಿಸುತ್ತಾರೆ ಅವರು.

'2021ರ ಫೆಬ್ರವರಿ 13ರ ಒಳಗಾಗಿ 5,000 ರೈತರನ್ನು ಸಂಘಟಿಸುವ ಉದ್ದೇಶ ಇದೆ. ನಂತರ ಒಟ್ಟಾಗಿ ಸಭೆ ಸೇರುತ್ತೇವೆ. ಯೋಜನೆಯ ಸಂಪೂರ್ಣ ರೂಪು ರೇಷೆಯನ್ನು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಕಡಿಮೆ ಜಮೀನು ಇರುವವರು ಅರ್ಧ ಎಕರೆ, ಹೆಚ್ಚು ಜಮೀನು ಇರುವವರು ಗರಿಷ್ಠ ಒಂದು ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದೇವೆ’ ಎಂದು ಪ್ರಕಾಶ್‌ ಹೇಳುತ್ತಾರೆ.


ಸಾವಯವ ಸೊಪ್ಪು ತರಕಾರಿ

ಹಿಂಜರಿಕೆ: ಆಧುನಿಕ ಕೃಷಿ ಪದ್ಧತಿಗೆ ಹೊಂದಿರುವ ಬೇಸಾಯಗಾರರಲ್ಲಿ ಸಾವಯವ ಕೃಷಿ ಕಷ್ಟ, ಲಾಭ ಬರುವುದಿಲ್ಲ ಎಂಬ ಅಭಿಪ್ರಾಯ ಇದೆ. ಒಂದು ವೇಳೆ, ಬೆಳೆ ಬೆಳೆದರೂ ಅದಕ್ಕೆ ಮಾರುಕಟ್ಟೆ ಕಲ್ಪಿಸುವುದು ಹೇಗೆ ಎಂಬ ಗೊಂದಲ ಇದೆ. ಇದನ್ನು ಪರಿಹರಿಸುವುದಕ್ಕಾಗಿ ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ ಪ್ರಯೋಗಗಳನ್ನು ರೈತರಿಗೆ ಉದಾಹರಣೆಯಾಗಿ ನೀಡಲಾಗುತ್ತಿದೆ. ಪ್ರಯೋಗಾತ್ಮಕವಾಗಿ ಸಣ್ಣ ಜಾಗದಲ್ಲಿ ಸಹಜ ಕೃಷಿ ಆರಂಭಿಸಿ, ನಂತರ ಕೃಷಿಯ ವ್ಯಾಪ್ತಿಯನ್ನು ವಿಸ್ತರಿಸಿ ಎಂಬ ಸಲಹೆ ಕೊಡಲಾಗುತ್ತಿದೆ.  

‘ಬೆಳೆಗಳನ್ನು ಮಾತ್ರ ಮಾರಾಟ ಮಾಡಿದರೆ ರೈತರಿಗೆ ದೊಡ್ಡ ಲಾಭ ಆಗುವುದಿಲ್ಲ ಎಂಬುದು ನಿಜ. ಅದಕ್ಕಾಗಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಬೇಕು. ಉದ್ದಿಮೆಗಳು ಲಾಭ ಮಾಡುವುದು ಇದೇ ರೀತಿ. ಅವುಗಳು ಮಾಡುವುದನ್ನು ರೈತರೇ ಮಾಡಬೇಕು. ಸಹಕಾರ ಸಂಘಗಳು ಅಥವಾ ಸಣ್ಣ ಕಂಪನಿ ಸ್ಥಾಪಿಸಿ ಆಹಾರ ಉತ್ಪನ್ನಗಳನ್ನು ತಯಾರಿಸಬೇಕು. ನಂತರ ನೇರವಾಗಿ ಮಾರಾಟ ಮಾಡಬೇಕು. ಆಗ ಖಂಡಿತ ಲಾಭ ಸಾಧ್ಯ. ಎಲ್ಲರೂ ಒಗ್ಗಟ್ಟಾದರೆ ಇದು ಕಷ್ಟವಲ್ಲ’ ಎಂಬುದು ಪ್ರಕಾಶ್‌ ಪ್ರತಿಪಾದನೆ.

ನಡೆದಿವೆ ಉತ್ತಮ ಪ್ರಯೋಗಗಳು

ವಿಷಮುಕ್ತ ಕೃಷಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೂರ್ನಾಲ್ಕು ಉತ್ತಮ ಪ್ರಯೋಗಗಳು ನಡೆಯುತ್ತಿವೆ. 

ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಅಮೃತಭೂಮಿ ಸುಸ್ಥಿರ ಕೃಷಿ ಅಭಿವೃದ್ಧಿ ಕೇಂದ್ರವು ನೈಸರ್ಗಿಕ ಕೃಷಿ, ದೇಸಿ ಬೀಜಗಳ ಸಂರಕ್ಷಣೆ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಸಹಜ ಕೃಷಿಗೆ ಬರಲು ಇಚ್ಛಿಸುವವರಿಗೆ ತರಬೇತಿಯನ್ನೂ ನೀಡುತ್ತಿದೆ. 


ನಮ್ದು’ ಬ್ರ್ಯಾಂಡ್‌ ಉತ್ಪ‍ನ್ನಗಳ ಲೋಕಾರ್ಪಣೆ ಸಂದರ್ಭ

ಯಳಂದೂರು ತಾಲ್ಲೂಕಿನಲ್ಲಿರುವ ಹೊನ್ನೂರಿನಲ್ಲಿರುವ ನಿಸರ್ಗ ಸಾವಯವ ಕೃಷಿಕರ ಸಂಘವು ಐದು ಎಕರೆ ಜಮೀನಿನಲ್ಲಿ ಸಾಮೂಹಿಕ ಕೃಷಿಯಲ್ಲಿ ತೊಡಗಿಕೊಂಡಿದೆ. 15 ರೈತರು ಒಂದೂವರೆ ವರ್ಷದಿಂದ ಭೋಗ್ಯಕ್ಕೆ ಪಡೆದ ಐದು ಎಕರೆ ಜಮೀನಿನಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆದು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಹನೂರು ತಾಲ್ಲೂಕಿನ ವಡಕೆಹಳ್ಳದ ಸಾವಯವ ಕೃಷಿಕರ ಸಂಘವು ಸಿರಿಧಾನ್ಯಗಳ ಸಂಸ್ಕರಣ ಘಟಕವೊಂದನ್ನು ನಿರ್ವಹಿಸುತ್ತಿದೆ. ಮಹದೇಶ್ವರ ಬೆಟ್ಟದ ತುಳಸಿಕೆರೆಯಲ್ಲಿ 10 ರೈತ ಕುಟುಂಬಗಳು 10 ಎಕರೆ ಪ್ರದೇಶದಲ್ಲಿ ಸಾಮೂಹಿಕ ಬೇಸಾಯವನ್ನು ಆರಂಭಿಸಿವೆ. 

ವಿಷಮುಕ್ತ ಜಿಲ್ಲೆ ಅಭಿಯಾನ ಆರಂಭಿಸಿರುವ ಎಲ್ಲ ಸಂಘಗಳು ಒಟ್ಟಾಗಿ ಚಾಮರಾಜನಗರದಲ್ಲಿ ‘ನಮ್ದು’ ‌ಎಂದು ವಿಷಮುಕ್ತ ಆಹಾರಗಳ ಬ್ರ್ಯಾಂಡ್‌ ಆರಂಭಿಸಿದ್ದು, ಸ್ವಂತ ಮಾರಾಟ ಮಳಿಗೆಯನ್ನು ತೆರೆದು ಸೊಪ್ಪು, ತರಕಾರಿ, ಸಿರಿ ಧಾನ್ಯಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ನೀಡುತ್ತಿದೆ. ಕಾಯಂ ಗ್ರಾಹಕರ ವಾಟ್ಸ್‌ ಗ್ರೂಪ್‌ ಆರಂಭಿಸಿದೆ. ಆನ್‌ಲೈನ್‌ ಮಾರಾಟ ಸೌಲಭ್ಯವನ್ನೂ ಕಲ್ಪಿಸಿದೆ. ಅಮೃತಭೂಮಿಯ ಮೇಲ್ವಿಚಾರಣೆಯಲ್ಲಿ ಈ ಕೆಲಸ ನಡೆಯುತ್ತಿದೆ. 

‘ಜಿಲ್ಲೆಯಲ್ಲಿ ನೈಸರ್ಗಿಕ ಕೃಷಿಯ ಹಲವು ಪ್ರಯತ್ನಗಳು ನಡೆಯುತ್ತಿವೆ. ನಾನು 15 ವರ್ಷಗಳಿಂದ ಇದೇ ವಿಧಾನದಲ್ಲಿ ವ್ಯವಸಾಯ ಮಾಡುತ್ತಿದ್ದೇನೆ. ಹಲವರು ಈಗ ಆಸಕ್ತಿ ತೋರುತ್ತಿದ್ದಾರೆ. ನಮ್ಮ ಹಾಗೂ ಮುಂದಿನ ಪೀಳಿಗೆಯ ಆರೋಗ್ಯದ ದೃಷ್ಟಿಯಿಂದ ನಾವು ಸೇವಿಸುವ ಆಹಾರವನ್ನು ವಿಷಮುಕ್ತಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸಂಕಲ್ಪತೊಟ್ಟು ದೃಢವಾದ ಹೆಜ್ಜೆ ಇಟ್ಟಿದ್ದೇವೆ. ಯಶಸ್ವಿಯಾಗುವ ವಿಶ್ವಾಸ ಇದೆ’ ಎಂಬುದು ಹೇಳುತ್ತಾರೆ ಹೊನ್ನೂರು ಪ್ರಕಾಶ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು