ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಬೀಜ ಕಾಯ್ದೆಗೆ ಕಾಯಕಲ್ಪ, ರೈತರ ಹಿತ ಕಾಯಲಿದೆಯೇ ಸರ್ಕಾರ?

Last Updated 14 ಡಿಸೆಂಬರ್ 2019, 1:26 IST
ಅಕ್ಷರ ಗಾತ್ರ

ರೈತರಿಗೆ ಉತ್ತಮ ಬಿತ್ತನೆ ಬೀಜ ಒದಗಿಸಲು ಸರ್ಕಾರವು ಹಾಲಿ ಅಸ್ತಿತ್ವದಲ್ಲಿರುವ ಬೀಜ ಕಾಯ್ದೆಗೆ (1966) ತಿದ್ದುಪಡಿ ಮಸೂದೆ ಮೂಲಕ ಬದಲಾವಣೆ ತರಲು ಮುಂದಾಗಿದೆ. ಉದ್ದೇಶಿತ ಕಾಯ್ದೆಯಿಂದ ಬೀಜೋದ್ಯಮದನಿಯಂತ್ರಣ, ಮಾರಾಟ, ಆಮದು ಮತ್ತು ರಫ್ತು ವಹಿವಾಟಿನ ಮೇಲೆ ನಿಯಂತ್ರಣ ತರಲು ಸಾಧ್ಯವೇ?

ದೇಶದಲ್ಲಿ ಈಗಾಗಲೇ ಬೀಜ ಕಾಯ್ದೆ ಅಸ್ತಿತ್ವದಲ್ಲಿದೆ. ಹೊಸ ಮಸೂದೆ ಪ್ರಸ್ತಾಪಿಸುವ ಬದಲಾವಣೆಗಳೇನು?

ಪ್ರಸ್ತುತ ಅಸ್ತಿತ್ವದಲ್ಲಿರುವ ಕಾಯ್ದೆಯು ಕೆಲವೇ ಕೆಲವು ವಿಧದ ಬಿತ್ತನೆ ಬೀಜಗಳನ್ನು ತನ್ನ ವ್ಯಾಪ್ತಿಯಲ್ಲಿ ಇರಿಸಿಕೊಂಡಿದೆ. ನೋಂದಾಯಿತಬೀಜಗಳ ಗುಣಮಟ್ಟವನ್ನು ಮಾತ್ರ ಈ ಕಾಯ್ದೆ ನಿಯಂತ್ರಿಸಬಲ್ಲದು.

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು ವಿವಿಧ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳು ಬಿಡುಗಡೆ ಮಾಡುವ ತಳಿಗಳು ಮಾತ್ರವೇ ಈ ಅನುಸೂಚಿಯಲ್ಲಿವೆ. ಇಂಥ ತಳಿಗಳನ್ನು ಸಾಮಾನ್ಯವಾಗಿ ಕನಿಷ್ಠ ಮೂರು ವರ್ಷಗಳ ಅವಧಿಗೆ ವಿವಿಧ ಹವಾಮಾನಗಳಲ್ಲಿ ಪರಿಶೀಲನೆಗೆ ಒಳಪಡಿಸಲಾಗಿರುತ್ತದೆ. ಕೀಟ ಬಾಧೆ, ಬರ ಸಹಿಷ್ಣುತೆ, ನೆರೆ ಸಹಿಸುವ ಶಕ್ತಿ ಮತ್ತು ಇಳುವರಿಯ ಪ್ರಮಾಣವನ್ನು ದಾಖಲಿಸಿಕೊಂಡ ನಂತರವೇ ರೈತರಿಗೆ ಇಂಥ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಒಂದು ಹೊಸ ತಳಿಯನ್ನು ರೈತರಿಗೆ ಬಿಡುಗಡೆ ಮಾಡುವುದೇ ಅಧಿಸೂಚಿತ ತಳಿಯಾಗಲು ಅರ್ಹತೆ ಎನಿಸಿಕೊಳ್ಳುತ್ತದೆ. ಇದಾದ ನಂತರ ವಿವಿಧ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಹಾಯ್ದು ಬರುವ ತಳಿಯನ್ನು ಮಾತ್ರವೇ ಅಧಿಸೂಚಿತ ಎಂದು ಘೋಷಿಸಲಾಗುತ್ತದೆ.1966ರ ಬೀಜ ಕಾಯ್ದೆಯು ಕೇವಲ ಪ್ರಮಾಣೀಕೃತ ತಳಿಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಅಧಿಸೂಚಿತ ತಳಿಗಳಿಗೆ ಅನ್ವಯಿಸುವುದಿಲ್ಲ. ಆದರೆ ಈಗ ಪ್ರಸ್ತಾಪಿಸಿರುವ ‘ಬೀಜ ಕಾಯ್ದೆ 2019’ ಯಾವುದೇ ತಳಿಯ ಬೀಜವನ್ನು ಮಾರಾಟ ಮಾಡುವ ಮುನ್ನ ನೋಂದಣಿ ಮಾಡುವುದು ಕಡ್ಡಾಯ ಎಂದು ಹೇಳುತ್ತದೆ. ಮಸೂದೆ ಕರಡಿನ 14ನೇ ವಿಧಿಯ ಪ್ರಕಾರ ‘ನೋಂದಣಿ ಮಾಡದ ಯಾವುದೇ ತಳಿಯನ್ನು ಬಿತ್ತುವಂತೆ ಅಥವಾ ನಾಟಿನೆಡುವಂತೆ ಇಲ್ಲ’.

ಈ ಮಾತಿನ ಇನ್ನೊಂದು ಅರ್ಥವೆಂದರೆ ಖಾಸಗಿ ಕಂಪನಿಗಳು ಬಿಡುಗಡೆ ಮಾಡುವ ಯಾವುದೇ ಹೈಬ್ರೀಡ್ ಅಥವಾ ಹೊಸ ತಳಿಗಳನ್ನು ಇನ್ನು ಮುಂದೆ ಕಡ್ಡಾಯವಾಗಿ ನೋಂದಾಯಿಸಬೇಕು. ಅಂಥ ತಳಿಗಳ ಮೊಳಕೆ ಸಾಮರ್ಥ್ಯ, ಭೌತಿಕ ಮತ್ತು ಜೈವಿಕ ಪ್ರತ್ಯೇಕತೆಗೆ ಸಂಬಂಧಿಸಿದಂತೆ ಪೂರ್ವ ನಿರ್ಧಾರಿತ ಗುಣಮಟ್ಟವನ್ನು ಖಾತ್ರಿಪಡಿಸಬೇಕಾಗುತ್ತದೆ. ಹವಾಮಾನ ಮತ್ತು ಇತರ ಸಂದರ್ಭಗಳನ್ನು ಆಧರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ತಳಿ ಎಷ್ಟು ಇಳುವರಿ ಕೊಡುತ್ತದೆ ಎನ್ನುವುದನ್ನೂ ತಳಿ ಅಭಿವೃದ್ಧಿಪಡಿಸಿರುವ ಕಂಪನಿಗಳು ತಿಳಿಸಬೇಕಾಗುತ್ತದೆ.

ಬೀಜ ಮಾರಾಟ ಕಂಪೆನಿಯು ಘೋಷಿಸಿರುವ ಹವಾಮಾನ ಮತ್ತು ಬೆಳೆ ಪದ್ಧತಿ ಅನುಸರಿಸಿದ ನಂತರವೂ ಒಂದು ನಿರ್ದಿಷ್ಟ ತಳಿಯ ಬೀಜವು ಘೋಷಿತ ಇಳುವರಿ ನೀಡದೆ ಹೋದರೆ ರೈತರು ಅಂಥ ಬೀಜಗಳ ಉತ್ಪಾದಕರು, ಡೀಲರ್‌ಗಳು, ಹಂಚಿಕೆದಾರರು ಅಥವಾ ಮಾರಾಟಗಾರರಿಂದ ಗ್ರಾಹಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1986ರ ಅಡಿ ಪರಿಹಾರ ಕೋರಬಹುದಾಗಿದೆ.

ಈಗ ಈ ಮಸೂದೆ ಜಾರಿಯ ಔಚಿತ್ಯವಾದರೂ ಏನು?

ಮಸೂದೆಯ ಕರಡನ್ನು ಮಾತ್ರವೇ ಕೇಂದ್ರ ಸರ್ಕಾರ ಸಿದ್ಧಪಡಿಸಿ, ಸದನಕ್ಕೆ ತಂದಿದೆ. ಆದರೆ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಚರ್ಚೆಗೆ ಎತ್ತಿಕೊಂಡಿಲ್ಲ.(ಮಸೂದೆಯ ಕರಡನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)

1966ರಲ್ಲಿ ಸರ್ಕಾರ ಬೀಜ ನಿಯಂತ್ರಣ ಕಾಯ್ದೆ ಜಾರಿ ಮಾಡಿದಾಗ ದೇಶದಲ್ಲಿ ಹಸಿರು ಕ್ರಾಂತಿಯ ಉತ್ಸಾಹ ಇತ್ತು. ಬೀಜೋತ್ಪಾದನೆಯಲ್ಲಿ ತೊಡಗಿದ್ದ ಖಾಸಗಿ ಕಂಪನಿಗಳು ಕೇವಲಬೆರಳೆಣಿಕೆಯಷ್ಟಿದ್ದವು. 1980ರ ವೇಳೆಗೆ ಭಾರತವನ್ನು ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಗಿಸಿದ ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಭತ್ತದ ತಳಿಗಳನ್ನು ಕೃಷಿ ಸಂಶೋಧನಾ ಸಂಸ್ಥೆ ಅಥವಾ ಕೃಷಿ ವಿವಿಗಳು ಬಿಡುಗಡೆ ಮಾಡಿದ್ದವು.

ಈ ಸಾರ್ವಜನಿಕ ಸಂಸ್ಥೆಗಳು ಭತ್ತ (ಬಾಸುಮತಿಯೂ ಸೇರಿ), ಗೋಧಿ, ಕಬ್ಬು, ಧಾನ್ಯಗಳು, ಸೋಯಾಬೀನ್, ಕಡ್ಲೆಕಾಯಿ, ಸಾಸಿವೆ, ಆಲೂಗಡ್ಡೆ, ಈರುಳ್ಳಿ ಮತ್ತು ಇತರ ಬೆಳೆಗಳನ್ನೇ ತಮ್ಮ ದೃಷ್ಟಿಯಲ್ಲಿರಿಸಿಕೊಂಡಿದ್ದವು. ತಳಿ ಸಂವರ್ಧನೆ ಮುಕ್ತವಾಗಿರುವ ಬೆಳೆಗಳಿಗೇ ಆಗಿನ ರೈತರು ಹೆಚ್ಚು ಆದ್ಯತೆ ಕೊಡುತ್ತಿದ್ದರು. ಇಂಥ ತಳಿಗಳ ಬಿತ್ತನೆ ಬೀಜಗಳನ್ನು ಯಾರ ಹಂಗೂ ಇಲ್ಲದೆ ಮುಂದಿನ ಹಂಗಾಮಿಗೆ ರೈತರು ಇರಿಸಿಕೊಳ್ಳಬಹುದಾಗಿತ್ತು.

ಕಳೆದ ಮೂರು ದಶಕಗಳಿಂದೀಚೆಗೆ ಖಾಸಗಿ ಕಂಪನಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ದೇಶದ ಬೀಜ ಮಾರುಕಟ್ಟೆಯನ್ನು ದೊಡ್ಡಮಟ್ಟದಲ್ಲಿ ಪ್ರವೇಶಿಸಿವೆ.ಹೈಬ್ರೀಡ್ ತಳಿಗಳನ್ನು ಸುಲಭವಾಗಿ ರೂಪಿಸಲು ಸಾಧ್ಯವಿರುವ ಬೆಳೆಗಳತ್ತ ಇಂಥ ಕಂಪನಿಗಳ ದೃಷ್ಟಿ ಕೇಂದ್ರೀಕರಿಸಿದೆ. ಎರಡು ಪ್ರತ್ಯೇಕ ಗುಣಲಕ್ಷಣಗಳುಳ್ಳ ತಳಿಗಳ ಸಂಯೋಗದಿಂದ ರೂಪಿಸಿದ ಹೊಸ ಹೈಬ್ರೀಡ್ ತಳಿಯ ಇಳುವರಿ ಸಹಜವಾಗಿಯೇ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿರುತ್ತೆ. ಆದರೆ ಇದೇ ತಳಿಗಳ ಗಿಡಗಳಿಂದರೈತರೇ ಬಿತ್ತನೆ ಬೀಜಗಳನ್ನು ಕಾಯ್ದಿರಿಸಿಕೊಂಡು, ಮರುಬಳಕೆ ಮಾಡಿದರೆ ಅದು ಮಾತೃ ಬೆಳೆಯಷ್ಟು ಇಳುವರಿಯನ್ನು ಕೊಡುವುದಿಲ್ಲ.

ಭಾರತದಲ್ಲಿ ಬಿತ್ತನೆ ಬೀಜದ ಮಾರುಕಟ್ಟೆ ಎಷ್ಟು?

ಇಂದು ಭಾರತದಲ್ಲಿ ಖಾಸಗಿ ಹೈಬ್ರೀಡ್ ಬೀಜಗಳ ಮಾರುಕಟ್ಟೆ ₹ 15 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಹತ್ತಿ ( ₹ 4000 ಕೋಟಿ), ತರಕಾರಿ (₹ 3,500 ಕೋಟಿ), ಮೆಕ್ಕೆಜೋಳ (₹ 1,500 ಕೋಟಿ), ಭತ್ತ (₹ 1000 ಕೋಟಿ), ಸಜ್ಜೆ ಮತ್ತು ಇತರ ಧಾನ್ಯಗಳು (₹ 300 ಕೋಟಿ), ಮುತ್ತಿನಜೋಳ (₹ 200 ಕೋಟಿ) ಮುಖ್ಯವಾದವು.

ಭತ್ತದಲ್ಲಿ ಹೈಬ್ರೀಡ್ ಬೀಜಗಳ ಬಳಕೆ ಶೇ 7–8, ಮೆಕ್ಕೆಜೋಳದಲ್ಲಿ ಶೇ 60–70, ಮುತ್ತಿನಜೋಳದಲ್ಲಿ ಶೇ 90 ಮತ್ತು ಹತ್ತಿಯಲ್ಲಿ ಶೇ 95, ಕ್ಯಾಪ್ಸಿಕಂ, ಟೊಮೆಟೊದಂಥ ಬಹುಬಳಕೆ ತರಕಾರಿಗಳಲ್ಲಿ ಶೇ 80ಕ್ಕೂ ಹೆಚ್ಚಿನ ಪ್ರಮಾಣದಲ್ಲಿದೆ. ಬಾಳೆಹಣ್ಣಿನಲ್ಲಿಯೂ 1990ರ ನಂತರ ಇಳುವರಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಯಿತು. ಇದಕ್ಕೆ ಮುಖ್ಯ ಕಾರಣ ಜೈನ್‌ ಇರಿಗೇಶನ್‌ನಂಥ ಖಾಸಗಿ ಸಂಸ್ಥೆಗಳು ಪರಿಚಯಿಸಿದ ಅಂಗಾಂಶ ಬಾಳೆ ಮತ್ತು ಸಾಂದ್ರ ಪದ್ಧತಿಯ ತಳಿಗಳು.

ಈವರೆಗೆ ಖಾಸಗಿಯವರು ಉತ್ಪಾದಿಸಿದ ಹೈಬ್ರೀಡ್ ಬೀಜಗಳ ನಿಯಂತ್ರಣಕ್ಕೆ ಯಾವುದೇ ಕಾಯ್ದೆ ಇರಲಿಲ್ಲವೇ?

ಈ ಹಿಂದೆಯೇ ಹೇಳಿರುವಂತೆ ಈಗ ಅಸ್ತಿತ್ವದಲ್ಲಿರುವ ಬೀಜ ಕಾಯ್ದೆಯು ಕೇವಲ ಅಧಿಸೂಚಿತ ತಳಿಗಳಿಗೆ ಮಾತ್ರ ಅನ್ವಯಿಸುತ್ತದೆ. ಯಾವುದೇ ತಳಿಯನ್ನು ನೋಂದಾಯಿಸದೆ ಅದನ್ನು ಪ್ರಮಾಣೀಕರಿಸಲು ಸಾಧ್ಯವಿಲ್ಲ. ಈಗ ನಮ್ಮ ರೈತರು ಬಳಸುತ್ತಿರುವ ಬಹುತೇಕ ಖಾಸಗಿ ಸಂಸ್ಥೆಗಳು ಬೀಜದ ತಳಿಗಳು ಪ್ರಮಾಣೀಕೃತ ಅಲ್ಲ. ಇವುಗಳನ್ನು ಅಧಿಕೃತವಾಗಿ ಬಿಡುಗಡೆಯೂ ಮಾಡಿಲ್ಲ. ಅಧಿಸೂಚಿತವೂ ಅಲ್ಲ.

ಅದರ ಬದಲಿಗೆ ಈ ಬೀಜಗಳನ್ನು ಅವು ಉತ್ಪಾದಿಸುವ ಸಂಸ್ಥೆಗಳು ಈ ಪೊಟ್ಟಣದಲ್ಲಿರುವ ಬೀಜಗಳು ಗರಿಷ್ಠ ಮಟ್ಟದ ಮೊಳಕೆ ಸಾಮರ್ಥ್ಯ ಹೊಂದಿವೆ (ಉದಾಹರಣೆಗೆ 100 ಬೀಜ ಬಿತ್ತಿದರೆ ಕನಿಷ್ಠ 80 ಮೊಳಕೆ ಒಡೆಯುತ್ತವೆ), ವಂಶವಾಹಿ ಶುದ್ಧತೆ ಕಾಪಾಡಿಕೊಂಡಿದೆ (ಮೂಲ ಧಾನ್ಯ ಅಥವಾ ತರಕಾರಿಯ ಗರಿಷ್ಠ ಗುಣಗಳನ್ನು ಅಳವಡಿಸಿಕೊಂಡಿವೆ ಮತ್ತುಇತರ ತಳಿ ಅಥವಾ ಜೀವಿಗಳ ಗುಣಸ್ವಭಾವಗಳ ಬೆರಕೆಯಾಗಿಲ್ಲ) ಮತ್ತು ಭೌತಿಕ ಶುದ್ಧತೆಗೆ (ಬಿತ್ತನೆ ಬೀಜದ ಜೊತೆಗೆ ಕಳೆಗಿಡಗಳು ಅಥವಾ ಕಲಬೆರಕೆ ವಸ್ತುಗಳು ಸೇರಿಲ್ಲ) ಗಮನ ಕೊಡಲಾಗಿದೆ ಎಂದು ಸ್ವಯಂ ಪ್ರಮಾಣೀಕರಿಸಬೇಕು ಎನ್ನುವ ನಿಯಮವಿದೆ. ಈ ಪ್ರಮಾಣೀಕರಣವನ್ನು ಖಾತ್ರಿಪಡಿಸುವ ಯಾವುದೇ ವ್ಯವಸ್ಥೆ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ.

ಪ್ರಸ್ತಾಪಿತ ತಿದ್ದುಪಡಿಯುಮೇಲಿನ ಲೋಪಗಳನ್ನು ಹೇಗೆ ನಿವಾರಿಸುತ್ತದೆ?

ಅಧಿಸೂಚಿತ ತಳಿಗಳನ್ನು ಮಾತ್ರ ಬಿಡುಗಡೆ ಮಾಡಬೇಕು ಎನ್ನುವ ನಿಯಮದಿಂದ ಬಹುತೇಕ ಸಮಸ್ಯೆಗಳು ನಿವಾರಣೆಯಾಗಬಹುದು ಎಂಬ ನಿರೀಕ್ಷೆ ಕೃಷಿ ವಲಯದಲ್ಲಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಯಾವುದೇ ತಳಿಯ ನೋಂದಣಿ ಕಡ್ಡಾಯ ಎನ್ನುವ ನಿಯಮ ಜಾರಿಯಾಗುತ್ತದೆ. ಹೀಗಾಗಿ ಖಾಸಗಿ ಬೀಜೋತ್ಪಾದಕ ಕಂಪನಿಗಳು ಅಧಿಕೃತವಾಗಿ ಬೀಜಗಳನ್ನು ಬಿಡುಗಡೆ ಮಾಡಿದ್ದರೂ ಅಥವಾ ನೈಜ ಪ್ಯಾಕಿಂಗ್ ಎಂದು ಘೋಷಿಸಿಕೊಂಡಿದ್ದರೂ ಶಾಸನಾತ್ಮಕ (ಸರ್ಕಾರಿ) ಸಂಸ್ಥೆಗಳ ಪರಿಶೀಲನೆಗೆ ಒಳಪಡಲಿದೆ.

ಅತ್ಯಗತ್ಯ ಸರಕುಗಳ ಕಾಯ್ದೆಯಡಿ 2006ರಲ್ಲಿ ಜಾರಿಯಾದ ಬೀಜಗಳ (ನಿಯಂತ್ರಣ) ತಿದ್ದುಪಡಿ ಆದೇಶದ ಪ್ರಕಾರ ಬಿತ್ತನೆ ಬೀಜಗಳ ಮಾರಾಟಗಾರರು ಕನಿಷ್ಠ ಗುಣಮಟ್ಟ ನಿಯಂತ್ರಣವನ್ನು ಖಾತ್ರಿಪಡಿಸಬೇಕಾಗುತ್ತದೆ. ತಳಿಯ ಮೊಳಕೆಯೊಡುವ ಸಾಮರ್ಥ್ಯ, ಶುದ್ಧತೆ ಮತ್ತು ಇತರ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಹೊಸ ಬೀಜ ಕಾಯ್ದೆಯ ಪ್ರಕಾರ ಎಲ್ಲ ತಳಿ ಮತ್ತು ಹೈಬ್ರೀಡ್‌ ಬೀಜಗಳ ನೋಂದಣಿ ಕಡ್ಡಾಯವಾಗಲಿದೆ. ಇದು ಬೀಜೋತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಹೆಚ್ಚಿನ ಮಟ್ಟದ ವಿಶ್ವಾಸಾರ್ಹತೆಯನ್ನು ತಂದುಕೊಡುವ ನಿರೀಕ್ಷೆಗಳಿವೆ.

ಪ್ರಸ್ತಾಪಿತ ಮಸೂದೆಗೆ ಖಾಸಗಿ ಬೀಜೋತ್ಪಾದನಾ ಕಂಪನಿಗಳು ಹೇಗೆ ಸ್ಪಂದಿಸಿವೆ?

ಬೀಜ ನಿಯಂತ್ರಣ ತಿದ್ದುಪಡಿ ಮಸೂದೆಯ ಕರಡಿಗೆಖಾಸಗಿ ಬೀಜೋತ್ಪಾದನಾ ಕಂಪನಿಗಳು ಕೆಲ ಬದಲಾವಣೆ ಸೂಚಿಸಿವೆಯಾದರೂ, ಬಹುತೇಕ ನಿಯಮಗಳನ್ನು ಮುಕ್ತವಾಗಿ ಸ್ವಾಗತಿಸಿವೆ. ನೋಂದಣಿ ಪ್ರಕ್ರಿಯೆಗೆ ಕಾಲಮಿತಿ ಇರಬೇಕು ಎನ್ನುವುದು ಬೀಜೋತ್ಪಾದನಾ ಕಂಪನಿಗಳ ಪ್ರಮುಖ ಒತ್ತಾಯ.

ಸರ್ಕಾರಿ ವ್ಯವಸ್ಥೆಯಲ್ಲಿ ನೌಕರರು ಮತ್ತು ಮೂಲಸೌಕರ್ಯ ಕೊರತೆಯ ಕಾರಣದಿಂದಾಗಿ ಸಕಾಲದಲ್ಲಿ ಪ್ರಮಾಣೀಕರಣ ಮತ್ತು ನೋಂದಣಿ ಅಸಾಧ್ಯವಾಗಬಹುದು ಎಂಬ ಆತಂಕವನ್ನು ಬೀಜೋತ್ಪಾದನಾ ಸಂಸ್ಥೆಗಳು ವ್ಯಕ್ತಪಡಿಸಿವೆ. ಕೆಲಬೀಜೋತ್ಪಾದಕರ ಪ್ರಯೋಗಾಲಯಗಳನ್ನೇ ಸರ್ಕಾರದ ಪ್ರತಿಷ್ಠಿತ ಸಂಸ್ಥೆಗಳು ಪರಿಶೀಲಿಸಿ ಪ್ರಮಾಣೀಕರಿಸಬೇಕು.ಅವು ನಡೆಸುವಪ್ರಾಯೋಗಿಕ ಪರೀಕ್ಷೆಗಳನ್ನು ಆಧರಿಸಿಯೇ ನೋಂದಣಿ ಮತ್ತು ಪ್ರಮಾಣೀಕರಣಗಳನ್ನು ಅಧಿಕಾರಿಗಳು ಒಪ್ಪಿಕೊಳ್ಳಲು ಅಥವಾ ತಿರಸ್ಕರಿಸಲು ಆಧಾರವಾಗಿ ಇಟ್ಟುಕೊಳ್ಳಬೇಕು ಎಂದು ಬೀಜೋತ್ಪಾದಕ ಕಂಪನಿಗಳು ಸಲಹೆ ಮಾಡಿವೆ.

ರೈತರಿಗೆ ಅನುಕೂಲವಾಗಲಿದೆಯೇ?

ಮಾರುಕಟ್ಟೆಗೆ ತರುವ ಮೊದಲುಎಲ್ಲ ಬಗೆಯ ತಳಿ ಮತ್ತು ಹೈಬ್ರೀಡ್‌ ವಿಧಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎನ್ನುವ ನಿಯಮದಿಂದ ಒಳಿತಾಗಲಿದೆ ಎನ್ನುವುದು ಬೀಜೋತ್ಪಾದನಾ ಕಂಪನಿಗಳ ಅಭಿಪ್ರಾಯ. ವಿವಿಧ ಪ್ರದೇಶಗಳಲ್ಲಿ ಮತ್ತು ವಿವಿಧ ಹವಾಮಾನಗಳಲ್ಲಿ ಬೀಜಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ನಂತರವೇ ಬೀಜೋತ್ಪಾದಕರು ಮಾರುಕಟ್ಟೆಗೆ ಬೀಜಗಳನ್ನು ಬಿಡುಗಡೆ ಮಾಡಬೇಕು ಎನ್ನುವ ನಿಯಮದಿಂದ ಉದ್ಯಮದಲ್ಲಿ ಬದ್ಧತೆ ಬರುತ್ತದೆ. ಕಳಪೆ ಗುಣಮಟ್ಟದ ಬೀಜ ಬಿತ್ತನೆಯಿಂದ ರೈತರು ನಷ್ಟ ಅನುಭವಿಸುವುದು ತಪ್ಪುತ್ತದೆ. ಸ್ವಯಂ ಪ್ರಮಾಣೀಕರಣ ಮತ್ತು ನೈಜ ಲೇಬಲಿಂಗ್ ಪ್ರಕ್ರಿಯೆಯ ದುರ್ಲಾಭ ಪಡೆಯುವುದಕ್ಕೆ ಕಡಿವಾಣ ಬೀಳುತ್ತದೆ ಎನ್ನುವುದು ರೈತರ ನಿರೀಕ್ಷೆಯಾಗಿದೆ.

ಕಂಪನಿಗಳ ಲಾಭಕೋರತನಕ್ಕೆ ಕಡಿವಾಣ ಬೀಳುತ್ತದೆಯೇ?

ಪ್ರಸ್ತುತ ಬಿತ್ತನೆ ಬೀಜಗಳ ಮಾರಾಟ ದರ ನಿಗದಿಯ ಮೇಲೆ ಕಂಪನಿಗಳ ಏಕಸ್ವಾಮ್ಯವಿದೆ. ಇದೇ ಕಾರಣಕ್ಕೆ ಕೆಲವೊಮ್ಮೆ ಬಿತ್ತನೆ ಬೀಜಗಳ ಕೊರತೆ, ಬೆಲೆ ಏರಿಕೆ, ಮಾರುಕಟ್ಟೆ ಏಕಸ್ವಾಮ್ಯ, ಲಾಭಕೋರತನಗಳು ಕಂಡುಬರುತ್ತಿವೆ. ತಿದ್ದುಪಡಿ ಕಾಯ್ದೆ ಜಾರಿಯಾದರೆಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿತ್ತನೆ ಬೀಜಗಳ ಬೆಲೆ ನಿಗದಿ ಮಾಡಬಹುದು ಎನ್ನುವ ವಿಚಾರ ಬೀಜೋತ್ಪಾದನಾ ಕಂಪನಿಗಳಲ್ಲಿಅಕ್ಷರಶಃ ಸಂಚಲನ ಮೂಡಿಸಿದೆ.

ಈ ಮಸೂದೆ ಎಂದು ಕಾನೂನು ಆಗಬಹುದು?

ಇದೇ ಅಧಿವೇಶದನದಲ್ಲಿ ಈ ಮಸೂದೆ ಮಂಡಿಸಬಹುದು ಎನ್ನುವ ಮಾತುಗಳೇನೋ ಕೇಳಿ ಬರುತ್ತಿದೆ. ಆದರೆ ಸಂಸದೀಯ ವ್ಯವಹಾರಗಳ ಪಟ್ಟಿಯಲ್ಲಿ ಈ ಮಸೂದೆ ಸೇರಿಲ್ಲ. ಈ ಮಸೂದೆಯ ಈ ಹಿಂದಿನ ಆವೃತ್ತಿ 2004ರಲ್ಲಿ ಮಂಡನೆಯಾಗಿ ಅನೂರ್ಜಿತಗೊಂಡಿತ್ತು. ಕರಡು ಮಸೂದೆಯನ್ನು ಸರ್ಕಾರ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಕೃಷಿ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT