ಬುಧವಾರ, ಆಗಸ್ಟ್ 17, 2022
25 °C
ಉಳುಮೆಯಲ್ಲಿ ಖುಷಿ ಕಂಡ ಕೃಷಿಕ ರಮೇಶ ಹೆಗಡೆ

PV Web Exclusive| ರೈತನ ಹೊಲ ವಿಜ್ಞಾನಿಗಳ ಪ್ರಯೋಗ ಶಾಲೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕ ಹಿಡುವಳಿಯಲ್ಲಿ ಸಂತೃಪ್ತಿಯಿಂದ ರೈತಾಪಿ ಮಾಡುತ್ತಿರುವ ರಮೇಶಣ್ಣನ ಕೃಷಿ ಭೂಮಿ ವಿಜ್ಞಾನಿಗಳ ಪ್ರಯೋಗ ಶಾಲೆ. ತೋಟಗಾರಿಕಾ ಕಾಲೇಜು, ಅರಣ್ಯ ಕಾಲೇಜಿನ ವಿಜ್ಞಾನಿಗಳು ಇಲ್ಲಿ ಹೊಸ ಪ್ರಯೋಗ ನಡೆಸುತ್ತಾರೆ. ಅವರಿಂದ ವೈಜ್ಞಾನಿಕ ಜ್ಞಾನ ಪ‍ಡೆಯುವ ರಮೇಶಣ್ಣ, ಪ್ರತಿಯಾಗಿ ಪ್ರಾಯೋಗಿಕ ಕೃಷಿ ಅನುಭವವನ್ನು ಹಂಚುತ್ತಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಕಾನಗೋಡು ಎಂಬ ಪುಟ್ಟ ಹಳ್ಳಿಯಲ್ಲಿ ವೈವಿಧ್ಯ ಕೃಷಿ ಮಾಡಿ, ರಾಜ್ಯದ ಹಲವು ಭಾಗಗಳ ರೈತರ ಗಮನ ಸೆಳೆದವರು ಪ್ರಗತಿಪರ ಕೃಷಿಕ ರಮೇಶ ಹೆಗಡೆ. ನಮ್ಮೂರಿನಿಂದ ಕೂಗಳತೆ ದೂರದಲ್ಲಿ ರಮೇಶಣ್ಣನ ಮನೆಯಿದೆ. ಆರೆಂಟು ವರ್ಷಗಳ ಹಿಂದೆ ‘ಪ್ರಜಾವಾಣಿ’ಯ ‘ಕರ್ನಾಟಕ ದರ್ಶನ’ ಪುರವಣಿಯಲ್ಲಿ ಅವರ ಕೃಷಿ ಸಾಧನೆ ಬಗ್ಗೆ ಬರೆದಿದ್ದೆ. ಇದನ್ನು ಓದಿದ ವಿವಿಧ ಜಿಲ್ಲೆಗಳ ರೈತರು ರಮೇಶ ಹೆಗಡೆ ಅವರ ತೋಟಕ್ಕೆ ಭೇಟಿ ನೀಡಿದ್ದರು. ಆಗಿನಿಂದ ಹೊಸ ಬೆಳೆ, ಉತ್ತಮ ಫಸಲು ಬಂದಾಗಲೆಲ್ಲ, ಆ ಖುಷಿಯನ್ನು ಹಂಚಿಕೊಳ್ಳದಿದ್ದರೆ ರಮೇಶಣ್ಣನಿಗೆ ಸಮಾಧಾನವಿಲ್ಲ.

ವಾರದ ಹಿಂದೆ ಮಾತಿಗೆ ಸಿಕ್ಕ ರಮೇಶಣ್ಣ, ಈ ಬಾರಿ ಸಣ್ಣಕ್ಕಿ ಜಾತಿಯ ಕೆಎಂಎಲ್‌ಟಿ 4 ತಳಿಯ ಭತ್ತ ಬೆಳೆದು, ಗರಿಷ್ಠ ಇಳುವರಿ ಪಡೆದ ಕತೆ ಹೇಳಿದರು. ಒಂದೂವರೆ ದಶಕದಿಂದ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯ ಬಿಡುಗಡೆಗೊಳಿಸುವ ಸುಧಾರಿತ ತಳಿಯ ಭತ್ತದ ಬೀಜ ನಾಟಿ ಮಾಡುತ್ತ ಬಂದಿದ್ದಾರೆ. ಕಳೆದ ವರ್ಷ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಪರಿಚಯಿಸಿದ ಕೆಂಪಕ್ಕಿ (ಜ್ಯೋತಿ) ಬೆಳೆದು ಎಕರೆಯೊಂದಕ್ಕೆ 23 ಕ್ವಿಂಟಲ್ ಇಳುವರಿ ಪಡೆದಿದ್ದರು. ಈ ಬಾರಿ ಕೆಎಂಎಲ್‌ಟಿ ಎಕರೆಗೆ 25 ಕ್ವಿಂಟಲ್ ಇಳುವರಿ ದೊರೆತಿದೆಯಂತೆ.

ರಮೇಶ ಹೆಗಡೆ ಅವರದ್ದು 1.20 ಎಕರೆ ಅಡಿಕೆ ತೋಟ, ತುಸು ಭತ್ತದ ಗದ್ದೆ ಜೊತೆಗೆ ಎರಡು ಎಕರೆ ಬೆಟ್ಟ ಭೂಮಿ. ಇವನ್ನೇ ಅವರು ಕೃಷಿ ವೈವಿಧ್ಯದ ಖಜಾನೆಯನ್ನಾಗಿ ಮಾಡಿದ್ದಾರೆ. ಅಡಿಕೆ ತೋಟದಲ್ಲಿ ಅಂತರ್ ಬೆಳೆಯಾಗಿ ಬಾಳೆ, ಏಲಕ್ಕಿ, ಕಾಳುಮೆಣಸು, ಕೋಕೊ, ಕಾಫಿ, ಲವಂಗ, ಜಾಯಿಕಾಯಿ, ಶುಂಠಿ, ಅರಿಸಿನ, ಲಿಂಬು, ಕಂಚಿ, ವೀಳ್ಯದೆಲೆ ಬೆಳೆದಿದ್ದಾರೆ.

‘ಇನ್ನೇನು ಹೊಸ ಪ್ರಯೋಗ ನಡೆದಿದೆ’ ಎಂದು ಪ್ರಶ್ನಿಸಿದೆ. ‘ಜ್ಞಾಪಕಕ್ಕೆ ಬಂದಷ್ಟು ಹೇಳ್ತೇನೆ’ ಎನ್ನುತ್ತ ಕೃಷಿ ಕಣಜದ ಪುಟ ತೆರೆಯುತ್ತ ಹೋದರು. 

‘ತೋಟಗಾರಿಕಾ ಕಾಲೇಜು, ಅರಣ್ಯ ಕಾಲೇಜಿನ ವಿಜ್ಞಾನಿಗಳಿಗೆ ನಮ್ಮ ಭೂಮಿ ಪ್ರಯೋಗ ಶಾಲೆ ಎನ್ನಲು ಹೆಮ್ಮೆಯಾಗುತ್ತದೆ. ಸಂಶೋಧನೆ ನಡೆಸುತ್ತಿರುವ ಪ್ರಾಧ್ಯಾಪಕರೊಬ್ಬರು ಎರಡು ತಿಂಗಳ ಹಿಂದೆ ದಾಲ್ಚಿನಿಯಲ್ಲೇ 20 ಜಾತಿಯ ಸುಮಾರು 160 ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ಇನ್ನೊಬ್ಬರು ವಿಜ್ಞಾನಿ ಔಷಧ ಸಸ್ಯಗಳನ್ನು ಬೆಳೆಸಿದ್ದಾರೆ. ಮತ್ತೊಬ್ಬರು ಕೀಟಗಳ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ. ಅಗ್ರಿ ಟ್ರ್ಯಾಪ್ ಇಟ್ಟು ಕೀಟ ಸಂಗ್ರಹಿಸುತ್ತಾರೆ. 10 ವರ್ಷಗಳಿಂದ ಒಬ್ಬರಲ್ಲ ಒಬ್ಬರು ವಿಜ್ಞಾನಿ ಇಲ್ಲಿ ಅಧ್ಯಯನ ಮಾಡುವುದರಿಂದ ನನ್ನ ಕೃಷಿ ಜ್ಞಾನವೂ ಪಕ್ವಗೊಂಡಿದೆ. ಸಾಂಪ್ರದಾಯಿಕ ಜ್ಞಾನದ ಜೊತೆಗೆ ವೈಜ್ಞಾನಿಕವಾಗಿ ಯೋಚಿಸುವುದನ್ನು ಕಲಿಸಿದೆ’ ಎಂದರು.

ಬೆಟ್ಟದ ಬೆಳೆಯಾಗಿರುವ ಮುರುಗಲ(ಕೋಕಂ, ಪುನರ್ಪುಳಿ, ಕೊಂಕಣಿಯಲ್ಲಿ ಬಿರಿಂಡೆ)ವನ್ನು ಕೃಷಿ ಬೆಳೆಯಾಗಿ ಬೆಳೆಯುತ್ತಿರುವ ರಮೇಶಣ್ಣ, ಈ ಬಾರಿ ಉತ್ತಮ ಫಸಲು ಪಡೆದಿದ್ದಾರೆ. ಹಣ್ಣಿನ ಕೊಯ್ಲಿನ ಹೊತ್ತಿಗೆ, ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಅವರಿಗೆ, ಕೂಲಿ ಖರ್ಚು ಉಳಿತಾಯವಾಗಿದೆ. ಓದುತ್ತಿರುವ ಮಕ್ಕಳು ಮನೆಯಲ್ಲೇ ಇದ್ದರು. ಮನೆಯ ಸದಸ್ಯರೇ ಸೇರಿ ಹಣ್ಣಿನ ಸಂಸ್ಕರಣೆ ಮಾಡಿದರು. ಗದ್ದೆಯ ಅಂಚಿನಲ್ಲಿ ಸುಮಾರು 150 ಮುರುಗಲು ಮರಗಳಿವೆ. ಇವುಗಳಲ್ಲಿ 10 ಮರಗಳು ಅಪರೂಪದ ಬಿಳಿ ಮುರುಗಲು ಜಾತಿಗೆ ಸೇರಿದವು.

ಬೆಟ್ಟದಲ್ಲಿ 250 ಗೇರು ಮರಗಳಿವೆ. ಹೂ ನಿಲ್ಲಿಸಲು ಯಾವುದೇ ರಾಸಾಯನಿಕ ಸಿಂಪರಣೆ ಮಾಡುವುದಿಲ್ಲ. ಸಿಕ್ಕಷ್ಟು ಬೆಳೆ ತೆಗೆದರೂ ನಷ್ಟ ಅನುಭವಿಸಿಲ್ಲ. ಹಾಗೆ ನೋಡಿದರೆ, ನಾನು ರಾಸಾಯನಿಕರಹಿತ ಸ್ವಾಭಾವಿಕ ಕೃಷಿಯಲ್ಲಿ ಖುಷಿ ಕಂಡಿರುವವನು. 34 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದೇನೆ. ಯಾವತ್ತೂ ರಾಸಾಯನಿಕ ಸಿಂಪರಣೆ ಮಾಡಿಲ್ಲ. ಆರಿದ್ರಾ ಮಳೆಯ ವೇಳೆ ಗದ್ದೆ ನಾಟಿ ಮಾಡಿದರೆ, ರಭಸದ ಮಳೆಗೆ ರೋಗಗಳು ನಾಶವಾಗುತ್ತವೆ. ಏಕಜಾತಿ ಬೆಳೆ ಬೆಳೆಯುವುದಕ್ಕಿಂತ ಬಹುವಿಧದ ಕೃಷಿ ಮಾಡಿದರೆ, ವರ್ಷವಿಡೀ ಉಪ ಆದಾಯಕ್ಕೆ ಕೊರತೆಯಾಗದು’ ಎಂಬುದು ರಮೇಶಣ್ಣನ ಅನುಭವ.

ಬೆಟ್ಟದಲ್ಲಿ ಜೀವವೈವಿಧ್ಯ:

‘2016ರ ಬೇಸಿಗೆಯಲ್ಲಿ ಮನೆಯ ಬಾವಿ ಸಂಪೂರ್ಣ ಬತ್ತಿ ಹೋಯಿತು. ಬೆಟ್ಟದಲ್ಲಿ ಇಂಗುಗುಂಡಿ ಮಾಡಲು ಯೋಚಿಸಿದೆ. 15 ಅಡಿ ಉದ್ದ 1X1 ಆಳ–ಅಗಲದ ಸುಮಾರು 180 ಇಂಗುಗುಂಡಿಗಳನ್ನು ನಿರ್ಮಿಸಿದ್ದೇನೆ. 2017ರ ಬೇಸಿಗೆಯಲ್ಲಿ ಬಾವಿಯಲ್ಲಿ ಐದು ಅಡಿ ನೀರು ಇತ್ತು. ನಂತರ ನೀರಿಗೆ ಬರವೇ ಬರಲಿಲ್ಲ. ಈ ಇಂಗುಗುಂಡಿಗಳ ಸುತ್ತಲಿನ ಬೆಟ್ಟ ಪ್ರದೇಶದಲ್ಲಿ ಜೈವಿಕ ಇಂಧನ, ಔಷಧ ಗಿಡಗಳು, ಮಾವು, ಹಲಸು, ಸಾಗವಾನಿ, ರಕ್ತಚಂದನ ಸೇರಿ ಸುಮಾರು 250 ಜಾತಿಯ 3000 ಗಿಡಗಳು ಸೊಂಪಾಗಿ ಬೆಳದಿವೆ. ಅರಣ್ಯ ಇಲಾಖೆಯಲ್ಲಿ ಸಿಗುವ ಬಹುತೇಕ ಎಲ್ಲ ಜಾತಿಯ ಗಿಡಗಳನ್ನು ನಾಟಿ ಮಾಡಿದ್ದೇನೆ. ನೀರಿದ್ದರೆ ಮಾತ್ರ ಬೆಟ್ಟದಲ್ಲಿ ಗಿಡ ಬೆಳೆಸಬಹುದೆಂಬ ಭಾವನೆ ಇದೆ. ಜೂನ್‌ನಲ್ಲಿ ನಾಟಿ ಮಾಡಿ, ಗಿಡದ ಮುಂಭಾಗದಲ್ಲಿ ಟ್ರೆಂಚ್ ಹೊಡೆದರೆ ಗಿಡಗಳು ಇರುವ ನೀರನ್ನೇ ಹೀರಿಕೊಂಡು ಬದುಕುತ್ತವೆ. ನಾಲ್ಕು ವರ್ಷಗಳಿಂದ ನಾಟಿ ಮಾಡಿರುವ ಯಾವ ಗಿಡವೂ ಸತ್ತಿಲ್ಲ. ಯಾವ ಗಿಡಕ್ಕೂ ಹೆಚ್ಚುವರಿ ನೀರು ಹಾಕಿಲ್ಲ. ಅರಣ್ಯಾಧಾರಿತ ಗಿಡಗಳಿಗೆ ನೀರಿನ ಅಗತ್ಯವಿಲ್ಲ’ ಎಂದು ವಿವರಿಸಿದರು.

’ಚಿಕ್ಕು, ಪೇರಲೆ, ಪುನ್ನೇರಲೆ, ವಾಟೆ, ಅಂಟುವಾಳ ಮೊದಲಾದ ಗಿಡಗಳು ಮನೆ ಸುತ್ತಲು ಇವೆ. ಹವ್ಯಾಸಕ್ಕಾಗಿ ಔಷಧ ಗಿಡಗಳನ್ನು ಬೆಳೆಸಿದ್ದೇನೆ’ ಎನ್ನುವ ರಮೇಶಣ್ಣ, ‘ಕೃಷಿಕರು ಹೈನುಗಾರಿಕೆ ಬಿಡಬಾರದು. ಅದು ಕೃಷಿಯ ಅವಿಭಾಜ್ಯ ಅಂಗ. ನಾಲ್ಕು ಹಸುಗಳನ್ನು ಸಾಕಿ, 10–15 ಗುಂಟೆಯಲ್ಲಿ ಹಸಿರು ಮೇವು ಬೆಳೆಸಿದರೆ, ಗೊಬ್ಬರ, ಬಯೊಗ್ಯಾಸ್ ಜತೆಗೆ ಶುದ್ಧ ಹಾಲು, ಮೊಸರು ಸಿಗುತ್ತದೆ. ಡೇರಿಗೂ ಹಾಲು ಪೂರೈಕೆ ಮಾಡಬಹುದು’ ಎಂದು ಸಲಹೆ ಮಾಡುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು